Monday, 28th October 2024

MUDA Case: ಮುಡಾದಲ್ಲಿ 928 ನಿವೇಶನ ಅಕ್ರಮ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು‌

snehamayi krishna

ಮೈಸೂರು: ಮುಡಾದಿಂದ 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ (MUDA Case) ಎಂದು ಮೈಸೂರು ಲೋಕಾಯುಕ್ತ (Lokayukta) ಕಚೇರಿಯಲ್ಲಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಮತ್ತೊಂದು ದೂರು ನೀಡಿದ್ದಾರೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ (MUDA Scam) ಈಗಾಗಲೇ ತನಿಖೆಗೆ ಅನುಮತಿ ದೊರೆತಿದ್ದು, ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

50:50 ಅನುಪಾತದ ಅಡಿಯಲ್ಲಿ 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ. 928 ನಿವೇಶನಗಳ ಹಂಚಿಕೆಯಲ್ಲಿ ಅತಿ ಹೆಚ್ಚು ಅಕ್ರಮ ನಡೆದಿರುವುದು ಹಿಂದೆ ಮುಡಾದ ಆಯುಕ್ತರಾಗಿದ್ದ ಡಿಬಿ ನಟೇಶ್ ಮತ್ತು ದಿನೇಶ್ ಕುಮಾರ್ ಅಧಿಕಾರ ಅವಧಿಯಲ್ಲಿ. ಅಕ್ರಮವಾಗಿ ನಿವೇಶನ ಪಡೆದವರ ಜೊತೆಗೆ ನಟೇಶ್ ಮತ್ತು ದಿನೇಶ್ ಕುಮಾರ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.

928 ನಿವೇಶನಗಳಲ್ಲಿ ಬಿಲ್ಡರ್ ಮಂಜುನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್​​ಸಿ ಮಹದೇವಪ್ಪ ಸಹೋದರನ ಮಗ ನವೀನ್ ಬೋಸ್ ಅವರಿಗೂ ಸೆಟಲ್ಮೆಂಟ್ ಡೀಡ್ ಮಾಡಿಕೊಟ್ಟಿದ್ದಾರೆ. ಅವರ ಮೇಲೂ ಕಾನೂನು ರೀತ್ಯಾ ಕ್ರಮ ಆಗಬೇಕು ಎಂದು ದೂರುದಾರ ಆಗ್ರಹಿಸಿದ್ದಾರೆ.

ಬಿಲ್ಡರ್ ಮಂಜುನಾಥ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು ಸಲ್ಲಿಸಿದ್ದಾರೆ. ಬಿಲ್ಡರ್ ಮಂಜುನಾಥ್ ಸಹಾಯಕ ಹಣ ಎಣಿಸುತ್ತಿರುವ ವಿಡಿಯೋ ಸಹಿತ ಇಡಿಗೆ ದೂರು ನೀಡಿದ್ದಾರೆ. ಸೆಟಲ್​ಮೆಂಟ್ ಡೀಡ್ ಹೆಸರಿನಲ್ಲಿ ಮೈಸೂರಿನ ಶಿವಣ್ಣ ಎಂಬವರಿಂದ 25 ಲಕ್ಷ ನಗದು ಪಡೆದ ಕುರಿತು ದೂರು ಇದಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.

ಇಂದು ಇಡಿ ಅಧಿಕಾರಿಗಳು ಬೆಂಗಳೂರು, ಮಂಡ್ಯ ಸೇರಿ ಹಲವೆಡೆ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಕಡತಗಳ ಪರಿಶೀಲನೆ ಮಾಡಿದ್ದಾರೆ. ಮೈಸೂರಿನಲ್ಲಿ ಬಿಲ್ಡರ್ ಮಂಜುನಾಥ್ ಮನೆ ಮೇಲೆ, ಮಂಜುನಾಥ್ ಕಚೇರಿಯಲ್ಲೂ ತೀವ್ರ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: MUDA Case: ಮುಡಾ ತನಿಖೆ, ಬೆಂಗಳೂರು ಸೇರಿ ರಾಜ್ಯದ 9 ಕಡೆ ಇಡಿ ಅಧಿಕಾರಿಗಳ ದಾಳಿ