Friday, 22nd November 2024

Viral News: ಮೃತ ಆನೆಯ ಅಂತಿಮ ದರ್ಶನ ಪಡೆಯಲು 80 ಕಿ.ಮೀ. ಕ್ರಮಿಸಿದ ಗಜಪಡೆ

Viral News

ಚಿಕ್ಕಮಗಳೂರು: ಮಾನವನರಂತೆ ಸಂವೇದನಾಶೀಲತೆ ಹೊಂದಿರುವ ಪ್ರಾಣಿಗಳಲ್ಲಿ ಆನೆಯೂ ಒಂದು. ಕಾಡು ಪ್ರಾಣಿಯಾದರೂ ಆನೆಗಳು ಸಂಘ ಜೀವಿಗಳು, ಪರಸ್ಪರ ಸಹಕಾರದಿಂದ ಬದುಕು ನಡೆಸುತ್ತವೆ. ಇತರರ ಕಷ್ಟಕ್ಕೆ ಅವುಗಳ ಮನಸ್ಸು ಮಿಡಿಯುತ್ತವೆ. ಇದು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಸಾಬೀತಾಗಿವೆ. ಜತೆಗೆ ತಮ್ಮ ಹಿಂಡಿನಲ್ಲಿ ಯಾವುದಾದರೂ ಒಂದು ಆನೆ ಸತ್ತರೆ ಉಳಿದವುಗಳು ಕಣ್ಣೀರು ಸುರಿಸುವ ಸಂದರ್ಭಕ್ಕೂ ನಾವು ಸಾಕ್ಷಿಯಾಗಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ದೃಶ್ಯ ಸೆರೆಯಾಗಿದ್ದು, ಆನೆಗಳ ಮಾನವೀಯತೆ ಕಂಡು ಅನೇಕರು ಅಚ್ಚರಿಗೊಳಗಾಗಿದ್ದಾರೆ. ಆಕಸ್ಮಿಕವಾಗಿ ಮೃತಪಟ್ಟ ತಮ್ಮ ಸಹವರ್ತಿಯ ಅಂತಿಮ ದರ್ಶನ ಪಡೆದ 17 ಆನೆಗಳ ಗುಂಪಿನ ನಡೆ ಸದ್ಯ ಹಲವರ ಗಮನ ಸೆಳೆದು ವ್ಯಾಪಕ ಚರ್ಚೆಗೆ ಕಾರಣವಾಗಿದೆ (Viral News).

ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶ (Bhadra Wildlife Sanctuary)ದಲ್ಲಿ ಮೃತಪಟ್ಟ ಆನೆಗೆ ಅಂತಿಮ ನಮನ ಸಲ್ಲಿಸಲು 17 ಆನೆಗಳ ಹಿಂಡು ಬರೋಬ್ಬರಿ 80 ಕಿ.ಮೀ. ಕ್ರಮಿಸಿದ ಅಪರೂಪದ ಘಟನೆ ಇದಾಗಿದೆ.

ಘಟನೆಯ ವಿವರ

ಮುತ್ತೋಡಿ ಅಭಯಾರಣ್ಯದ ಹೆಬ್ಬೆ ವಲಯದಲ್ಲಿ ಕೆಲವು ತಿಂಗಳ ಹಿಂದೆ ಕಾಡಾನೆಯೊಂದು ಮೃತಪಟ್ಟಿತ್ತು. ಆ ಆನೆಯ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿತ್ತು. ಅಭಯಾರಣ್ಯದ ನಿಯಮಗಳ ಪ್ರಕಾರ ಆನೆಯ ಕಳೇಬರವನ್ನು ಸುಡುವಂತಿಲ್ಲ ಮತ್ತು ಮಣ್ಣಿನಲ್ಲಿ ಹೂತು ಹಾಕುವಂತಿಲ್ಲ. ಹೀಗಾಗಿ ಭದ್ರಾ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಆನೆಯ ಮೃತದೇಹವನ್ನು ಅಲ್ಲೇ ಬಿಟ್ಟು ಬಂದಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಗಮನಿಸಲು ಯಾವುದಕ್ಕೂ ಇರಲಿ ಎಂದು ಅಧಿಕಾರಿಗಳು ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾದ ಫೋಟೇಜ್‌ ಅನ್ನು ಗಮನಿಸುವ ವೇಳೆ ಅಚ್ಚರಿಯ ವಿಚಾರವೊಂದು ಗಮನ ಸೆಳೆದಿದೆ.

ಹೌದು, ಯಾರೂ ಊಹಿಸದ ಅಪರೂಪದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಆನೆಗೆ ಅಂತಿಮ ಗೌರವ ಸಲ್ಲಿಸಲು ಸುಮಾರು 80 ಕಿ.ಮೀ. ದೂರದಿಂದ 17 ಆನೆಗಳ ಹಿಂಡೊಂದು ಬಂದಿತ್ತು! ಇವು ಮೃತಪಟ್ಟಿರುವ ಆನೆಯ ಮುಂದೆ ಸುಮಾರು ಹೊತ್ತು ನಿಂತು ಅಂತಿಮ ನಮನವನ್ನು ಸಲ್ಲಿಸಿವೆ. ಸದ್ಯ ಆನೆಗಳ ಈ ಅಂತಃಕರಣವನನ್ನು ಕಣ್ಣಾರೆ ಕಂಡು ಅಧಿಕಾರಿಗಳು ಭಾವುಕರಾಗಿದ್ದಾರೆ.

ಗುಂಪಿನಲ್ಲಿ ಯಾವುದಾದರೂ ಸದಸ್ಯ ಮೃತಪಟ್ಟರೆ ಉಳಿದ ಆನೆಗಳು ಗೌರವ ಸಲ್ಲಿಸುತ್ತವೆ ಎನ್ನುವುದನ್ನು ಕೇಳಿದ್ದೆವು. ಆದರೆ ಈ ಬಗ್ಗೆ ಖಾತರಿ ಇರಲಿಲ್ಲ. ಇದೀಗ ಈ ಘಟನೆ ತಿಳಿದ ಮೇಲೆ ನಂಬಿಕೆ ಬಂದಿದೆ. ಪ್ರಾಣಿಗಳಿಗೂ ಭಾವನೆ ಇದೆ, ಇತರರ ಕಷ್ಟಕ್ಕೆ ಮಿಡಿಯುತ್ತವೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ದೃಶ್ಯ ಸಿನಿಮಾಗಳಲ್ಲಿ ಕಂಡಿದ್ದೆವು. ಇದೀಗ ಕಣ್ಣೆದುರೇ ಇಂತಹ ಘಟನೆ ನಡೆದುರುವುದು ನೋಡಿ ಮನಸ್ಸು ತುಂಬಿ ಬಂದಿದೆ ಎಂದು ಇನ್ನು ಕೆಲವರು ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಈ ಅಪರೂಪದ ಪ್ರಸಂಗ ಸದ್ಯ ರಾಜ್ಯ ಮಾತ್ರವಲ್ಲ ದೇಸಾದ್ಯಂತ ಚರ್ಚೆಗೆ ಕಾರಣವಾಗಿದೆ, ಅನೇಕರ ಕುತೂಹಲ ಕೆರಳಿಸಿದೆ.

ಈ ಸುದ್ದಿಯನ್ನೂ ಓದಿ: Viral News: ಎರಡೂ ಕೈಗಳಿಲ್ಲದಿದ್ದರೂ ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ; ವಿಶೇಷಚೇತನ ವ್ಯಕ್ತಿಯ ಶ್ರಮಕ್ಕೆ ನೆಟ್ಟಿಗರ ಹ್ಯಾಟ್ಸ್‌ಆಫ್‌