ನ್ಯೂಯಾರ್ಕ್: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಅಕ್ಟೋಬರ್ 27ರಂದು ನಡೆದ ʼಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ʼ ಸ್ಪರ್ಧೆಯಲ್ಲಿ ʼಮಿಸ್ ಇಂಡಿಯಾʼ ಜೀವಿಕಾ ಬೆಂಕಿ (Jeevika Benki) ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದು, ʼಮಿಸ್ ಬೋಸ್ನಿಯಾʼ ಆಜ್ರಾ ಕ್ಲಾಫಿಜಾ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ 2024 ಕಿರೀಟವನ್ನು ಗೆದ್ದಿದ್ದಾರೆ.
ಸುಮಾರು 30 ದೇಶಗಳು ಭಾಗವಹಿಸಿದ್ದ ಹಾಗೂ 53 ವರ್ಷಗಳ ಇತಿಹಾಸವಿರುವ ಫೆಸ್ಟಿವಲ್ ಆಫ್ ನೇಶನ್‌ನಲ್ಲಿ 16 ವರ್ಷದ ಜೀವಿಕ ಬೆಂಕಿ ಇಷ್ಟು ದೊಡ್ಡ ಸಾಧನೆ ಮಾಡಿದ ಮೊದಲ ಹೆಮ್ಮೆಯ ಕನ್ನಡತಿಯಾಗಿದ್ದಾಳೆ. ಜೀವಿಕ ಬೆಂಕಿ ಮೊದಲು ʼಮಿಸ್ ಇಂಡಿಯಾʼ ಸ್ಪರ್ಧೆಯನ್ನು ಗೆದ್ದು ನಂತರ ಒಂದು ರೀತಿಯ ಸಣ್ಣ ಪ್ರಮಾಣದ ʼಮಿಸ್ ಯುನಿವರ್ಸ್ʼ ವಿಶ್ವ ಸುಂದರಿ ಸ್ಪರ್ಧೆಯ ತರಹ ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್‌ನಲ್ಲಿ ಟಾಪ್ ಫೈವ್ ಫೈನಲ್ ಲಿಸ್ಟ್‌ಗೆ ಬಂದು, ಮತ್ತೆ ಕೊನೆ ಹಂತದ ರೋಚಕ ಸ್ಪರ್ಧೆಯಲ್ಲಿ ಅತಿ ಸ್ವಲ್ಪ ಅಂತರದಲ್ಲಿ ಮೊದಲ ಸ್ಥಾನವನ್ನು ತಪ್ಪಿಸಿಕೊಂಡು ಫಸ್ಟ್ ರನ್ನರ್ ಸ್ಥಾನವನ್ನು ಪಡೆದಿದ್ದಾಳೆ.
ಇದಕ್ಕೂ ಮೊದಲು ನಡೆದ ಎಲ್ಲಾ ದೇಶಗಳ ಮೆರವಣಿಗೆಯಲ್ಲಿ ಮಿಸ್ ಇಂಡಿಯಾ ಜೀವಿಕಾ ಬೆಂಕಿ ಭಾರತ ತಂಡದ ನೇತೃತ್ವವನ್ನು ವಹಿಸಿದ್ದಳು. ಮಿನಿ ವಿಶ್ವಸಂಸ್ಥೆಯ ತರಹ ಕಂಡುಬಂದ ಇಂದಿನ ಅದ್ಧೂರಿ ಕಾರ್ಯಕ್ರಮದಲ್ಲಿ ಅಂದಾಜು 30 ದೇಶಗಳ ಸುಮಾರು 3000 ಜನರು ಭಾಗವಹಿಸಿದ್ದರು. ಇದರಲ್ಲಿ ಎಲ್ಲಾ ದೇಶಗಳ ವಿವಿಧ ಭಕ್ಷ್ಯಗಳ ಆಹಾರಗಳ ಅಂಗಡಿಗಳನ್ನು ಹಾಕಲಾಗಿತ್ತು.
ಈಗ ನಿಸ್ಕಯೂನ ಹೈಸ್ಕೂಲ್‌ನಲ್ಲಿ 11ನೇ ಕ್ಲಾಸ್ ಓದುತ್ತಿರುವ ಜೀವಿಕಾ ಬೆಂಕಿ, ವೀಕೆಂಡ್‌ನಲ್ಲಿ ಫ್ಲೈಟ್ ಸ್ಕೂಲ್‌ನಲ್ಲಿ ವಿಮಾನ ಪೈಲೆಟ್ ತರಬೇತಿ ಪಡೆಯುತ್ತಿದ್ದಾಳೆ. ಟೆನ್ನಿಸ್ ಮತ್ತು ಲಕ್ರಾಸ್ ತಂಡಗಳ ಕ್ಯಾಪ್ಟನ್ ಆಗಿದ್ದಾಳೆ. ಆಲ್ಬನಿ ಕನ್ನಡ ಸಂಘದ ಯೂಥ್ ವಿಂಗ್‌ನ ಸೆಕ್ರೆಟರಿ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ.
ಮಿಸ್ ಫೆಸ್ಟಿವಲ್ ಆಪ್ ನೇಷನ್ಸ್ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದ ಜೀವಿಕಾ ಬೆಂಕಿ ಮಾತನಾಡಿ, “ನನ್ನ ಈ ಪ್ರಶಸ್ತಿಯನ್ನು ಕೆಲ ದಿನಗಳ ಹಿಂದೆಯಷ್ಟೇ ನಿಧನರಾದ ನನ್ನ ತಾತನಿಗೆ (ತಾಯಿಯ ತಂದೆ) ಅರ್ಪಿಸುತ್ತಿದ್ದೇನೆ. ನಿಧನದ ವಿಷಯ ತಿಳಿದ ತಕ್ಷಣ ನನ್ನ ತಾಯಿ ಉಮಾ ಇಂಡಿಯಾಕ್ಕೆ ಧಾವಿಸಿ ಹೋಗಿದ್ದಾರೆ. ಇವತ್ತು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಂಡೆ. ನನ್ನ ತಂದೆ ಬೆಂಕಿ ಬಸಣ್ಣ ಅವರು ನನಗೆ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ಕೊಟ್ಟಿದ್ದಾರೆ. ಜತೆಗೆ ಇಲ್ಲಿಯ ಕನ್ನಡ ಕಲಿ ಶಾಲೆಯ ಗುರುಗಳಾದ ಲತಾ ಮೇಡಂ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನನ್ನ ತಾಯಿ ಇಲ್ಲಿ ಇಲ್ಲದ ಕಾರಣ ಕವಿತಾ ಆಂಟಿ ನನ್ನ ಮೇಕಪ್ ಮಾಡಿದ್ದು, ನನ್ನಿಷ್ಟದ ರುಚಿಯಾದ ಅಡುಗೆಯನ್ನು ಮಾಡಿ ಪ್ರೀತಿಯಿಂದ ಉಣಬಡಿಸಿದ್ದಾರೆ.
ಇನ್ನು ಆಲ್ಬನಿ ಕನ್ನಡ ಸಂಘದ ಬಹಳಷ್ಟು ಜನರು ಫೆಸ್ಟಿವಲ್ ಆಫ್ ನೇಶನ್ಸ್‌ಗೆ ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ನನಗೆ ಧೈರ್ಯ, ಸಹಕಾರ, ಪ್ರೋತ್ಸಾಹ ಮತ್ತು ಬೆಂಬಲವನ್ನು ಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಸ್ವಲ್ಪದರಲ್ಲಿ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ ಕಿರೀಟ ತಪ್ಪಿದ್ದಕ್ಕೆ ಕೊಂಚ ಬೇಜಾರಾಗಿದೆ. ಆದರೆ, ಇದನ್ನು ನಾನು ಸ್ಪೋಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಪ್ರಶಸ್ತಿ ಗೆದ್ದ ʼಮಿಸ್ ಬೋಸ್ನಿಯಾʼಗೆ ನನ್ನ ತುಂಬು ಹೃದಯದ ಅಭಿನಂದನೆಗಳನ್ನು ಹೇಳುತ್ತೇನೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅನುಭವವೇ ಒಂದು ರೋಚಕ ಹಾಗೂ ಗೌರವದ ವಿಷಯವಾಗಿದೆ. ಇದು ನನ್ನ ಜೀವನದ ಒಂದು ಪ್ರಮುಖ ಮೈಲುಗಲ್ಲಾಗಿದೆ. ನಾನು ಜೀವನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡುವುದು ಇದೆ” ಎಂದು ಜೀವಿಕಾ ಬೆಂಕಿ ತಿಳಿಸಿದಳು.
ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಸಂಗೀತ, ಕಲೆ, ನೃತ್ಯಗಳನ್ನು ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.
ಈ ಸುದ್ದಿಯನ್ನೂ ಓದಿ | Deepavali Fashion 2024: ದೀಪಾವಳಿ ಹಬ್ಬದ ವೈವಿಧ್ಯಮಯ ಲೆಹೆಂಗಾ ಸ್ಟೈಲಿಂಗ್‌ಗೆ ಇಲ್ಲಿದೆ 5 ಸಿಂಪಲ್ ಐಡಿಯಾ