Monday, 28th October 2024

Government Jobs: ಎಲ್ಲಾ ನೇಮಕಾತಿಗಳನ್ನು 3 ತಿಂಗಳು ಮುಂದೂಡಲು ರಾಜ್ಯ ಸರ್ಕಾರ ನಿರ್ಧಾರ; ಕಾರಣವೇನು?

Government Jobs

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದ್ದು, ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸಲು ಆಯೋಗವನ್ನು ರಚಿಸಲು ನಿರ್ಧರಿಸಿದೆ. ಹೀಗಾಗಿ ಆಯೋಗವು ತನ್ನ ವರದಿಯನ್ನು ಸಲ್ಲಿಸುವವರೆಗೆ ಮುಂಬರುವ ಎಲ್ಲಾ ನೇಮಕಾತಿಗಳನ್ನು (Government Jobs) ಕನಿಷ್ಠ ಮೂರು ತಿಂಗಳವರೆಗೆ ಮುಂದೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಎಸ್‌ಸಿ ಒಳ ಮೀಸಲಾತಿ ಜಾರಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಆಂತರಿಕ ಮೀಸಲಾತಿ ನೀಡುವ ಬಗ್ಗೆ ಕರ್ನಾಟಕದಲ್ಲಿ ಬೇಡಿಕೆ ಕೇಳಿಬಂದಿದೆ. ಎಸ್‌ಸಿಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಹಿನ್ನೆಲೆಯಲ್ಲಿ, ಎಸ್ಸಿಗಳಲ್ಲಿ ಒಳ ಮೀಸಲಾತಿ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ದತ್ತಾಂಶವನ್ನು ಪಡೆದ ನಂತರ, ಮುಂದಿನ ಕ್ರಮವನ್ನು ನಿರ್ಧರಿಸಲು ನಿರ್ಧರಿಸಲಾಗಿದೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರ ಸಮಿತಿಗೆ ಸೂಚಿಸಲಿದೆ ಎಂದು ಹೇಳಿದ್ದಾರೆ.

ಆಯೋಗವು ತನ್ನ ವರದಿಯನ್ನು ಸಲ್ಲಿಸುವವರೆಗೆ ಮುಂಬರುವ ಎಲ್ಲಾ ನೇಮಕಾತಿಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಮುಂದೂಡಲು ಕ್ಯಾಬಿನೆಟ್ ನಿರ್ಧರಿಸಿದೆ. ಇಂದಿನಿಂದ ಯಾವುದೇ ನೇಮಕಾತಿಯನ್ನು ಸೂಚಿಸಬೇಕಾದರೆ, ಆ ಪ್ರಕ್ರಿಯೆ ನಡೆಯುವುದಿಲ್ಲ, ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ನಂತರವೇ ಅದು ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಎಸ್‌ಸಿ ಜನಾಂಗದಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು 2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಲಾಗಿತ್ತು. ವಿವಿಧ ಕಾರಣಕ್ಕೆ ಆಯೋಗವು ವರದಿ ನೀಡಲು ವಿಳಂಬವಾಗಿತ್ತು. ಕೊನೆಗೆ 2012ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು. ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟವು, ಎಸ್‌ಸಿ ಎಡಗೈ ಸಮುದಾಯಗಳಿಗೆ ಶೇ. 6, ಬಲಗೈ ಸಮುದಾಯಗಳಿಗೆ ಶೇ. 5.5, ಸ್ಪಶ್ಯರಿಗೆ (ಬಂಜಾರ, ಭೋವಿ, ಕೊರ್ಚಾ, ಕುರುಮಾ ಇತ್ಯಾದಿ) ಶೇ. 4.5 ಮತ್ತು ಇತರರಿಗೆ ಶೇ. 1 ರಷ್ಟು ಒಳ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಒಳ ಮೀಸಲಾತಿಯ ಬಗ್ಗೆ ನಿರ್ಧಾರ ತೆಗೆದುಕೊಂಡಿತ್ತು.

ಈ ಸುದ್ದಿಯನ್ನೂ ಓದಿ | Narendra Modi: ಇಂದು ಜಗತ್ತೇ ಭಾರತದ ಮಾತನ್ನು ಅಲಿಸುತ್ತಿದೆ; ಪ್ರಧಾನಿ ಮೋದಿ ಬಣ್ಣನೆ

ಇನ್ನು ಆಗಸ್ಟ್ 1 ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು “ಸರ್ಕಾರರದ ಸಾಮಾಜಿಕ ಕಲ್ಯಾಣ ಯೋಜನೆಗಳು ಹೆಚ್ಚೆಚ್ಚು ಹಿಂದುಳಿದ ವರ್ಗಗಳಿಗೆ ತಲುಪುವುದಕ್ಕಾಗಿ ಒಳ ಮೀಸಲಾಗಿತಿ ಒದಗಿಸಲು ರಾಜ್ಯಗಳಿಗೆ ಅವಕಾಶ ನೀಡುವ ತೀರ್ಪು ನೀಡಿತ್ತು. ಏಳು ನ್ಯಾಯಧೀಶರ ಪೈಕಿ ಆರು ನ್ಯಾಯಾಧೀಶರು ಒಳಮೀಸಲು ಪರವಾಗಿ ತೀರ್ಪು ನೀಡಿದ್ದರು. ಇದೇ ವೇಳೆ 2004ರಲ್ಲಿ ಇ.ವಿ.ಚಿನ್ನಯ್ಯ ವರ್ಸಸ್ ಸ್ಟೇಟ್ ಆಫ್ ಆಂಧ್ರಪ್ರದೇಶ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನೀಡಿದ್ದ ತೀರ್ಪನ್ನು ನ್ಯಾಯಪೀಠ ರದ್ದುಗೊಳಿಸಿತ್ತು. ಒಂದು ಜಾತಿಯೊಳಗೆ ಎಲ್ಲರಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಉನ್ನತಿಗಾಗಿ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಸಾಂವಿಧಾನಿಕವಾಗಿ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.