Sunday, 24th November 2024

Sri Nirmalanandanatha Swamiji Column: ಉಪನಿಷತ್ತು ಮತ್ತು ಆಧುನಿಕ ವಿಜ್ಞಾನದ ಒಡನಾಟ

ನಿರ್ಮಲನುಡಿ

ಶ್ರೀನಿರ್ಮಲಾನಂದನಾಥ ಸ್ವಾಮೀಜಿ

(ಭಾಗ- ೨)

ಒಂದು ಕಾಲದಲ್ಲಿ ಪಶ್ಚಿಮ ದೇಶಗಳಲ್ಲಿ ವಿಜ್ಞಾನ ಮತ್ತು ಧರ್ಮಗಳ ನಡುವೆ ತೀವ್ರವಾದ ಸಂಘರ್ಷ ಏರ್ಪಟ್ಟಿತ್ತು. ಸತ್ಯದ ಹುಡುಕಾಟ ದೈವದ್ರೋಹದ ಕೆಲಸವಾಗಿತ್ತು, ಒಂದು ಅಪರಾಧವಾಗಿತ್ತು. ಸತ್ಯದ ಹುಡುಕಾಟಕ್ಕೆ ಹೊರಟ ಕೋಪರ್ನಿಕಸ್, ಆರ್ಕಿಮಿಡೀಸ್, ಗಿಯಾರ್ಡನೋ ಬ್ರೂನೋ, ಹೈಪಾಷಿಯಾ ಮುಂತಾದ ಸಾಕಷ್ಟು ವಿeನಿಗಳನ್ನು ಕೊಲ್ಲಲಾಗಿತ್ತು, ಸಂಶೋಧನೆಯಲ್ಲಿ ತೊಡಗದಂತೆ ಅವರುಗಳ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಭಾರತದಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಏಕೆಂದರೆ ಇಲ್ಲಿ ವೈಜ್ಞಾನಿಕ ಹುಡುಕಾಟವೇ ಧಾರ್ಮಿಕ ಹುಡುಕಾಟಕ್ಕೆ ತಳಹದಿ ನಿರ್ಮಿಸಿಕೊಟ್ಟಿತ್ತು.

ಪಶ್ಚಿಮ ದೇಶದಲ್ಲಿ ನಡೆದ ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಂದಿತು, ಆಧುನಿಕ ಯುಗದಲ್ಲಿ ವಿಜ್ಞಾನ ಮೇಲುಗೈ ಸಾಧಿಸಿತು. ಆದರೆ ಹೀಗೆ ಮೇಲುಗೈ ಸಾಧಿಸಿದ ವಿಜ್ಞಾನ ತಾನು ಎಲ್ಲವನ್ನೂ ಅರಿಯಬ, ಎಲ್ಲದರ ಕುರಿತೂ ಖಚಿತ ಭವಿಷ್ಯವಾಣಿ ನುಡಿಯಬ, ಇನ್ನು ಹೊಸದಾಗಿ ಅರಿಯಬೇಕಾದ ಯಾವ ಸತ್ಯವೂ ಇಲ್ಲವೆಂಬ ಗರ್ವ ಬೆಳೆಸಿ ಕೊಂಡಿತು. ಶಾಶ್ವತ ಸಿದ್ಧಾಂತ, ಪ್ರಮೇಯಗಳನ್ನು ಪ್ರತಿ ಪಾದಿಸಲಾರಂಭಿಸಿತು. ನ್ಯೂಟನ್ ಹಲವು ನಿಯಮಗಳನ್ನು ರೂಪಿಸಿದ. ಅವು ಇಂದಿಗೂ ಪ್ರಸ್ತುತ. ಆದರೆ ಈ ನಿಯಮಗಳು ಭೌತವಸ್ತುವನ್ನು ಸ್ಥೂಲ ಹಂತದಲ್ಲಿ ಗಮನಿಸಿ ರೂಪಿಸಲಾದಂಥವಾಗಿವೆ. ಆದರೆ 20ನೆಯ ಶತಮಾನಕ್ಕೆ ಪದಾರ್ಪಣೆ ಮಾಡುವ ವೇಳೆಗೆ ವಿಜ್ಞಾನ ಬೆಳೆಸಿಕೊಂಡಿದ್ದ ಈ ಗರ್ವದ ಧೋರಣೆ ಕ್ರಮೇಣ ಕಂಪಿಸಲಾರಂಭಿಸಿತು.

ಪರಮಾಣುವಿನ ಶೋಧನೆ ಮುಂದುವರಿದಂತೆ ಆತನಕ ರೂಪಿಸಿಕೊಂಡಿದ್ದ ನಿಯಮಗಳೆಲ್ಲವೂ ಅಪ್ರಸ್ತುತ ವಾಗಲಾರಂಭಿಸಿ ಕ್ವಾಂಟಮ್ ಭೌತಶಾಸ್ತ್ರವೆಂಬ ಹೊಸ ಜ್ಞಾನಶಾಖೆಯೇ ಉದಯಿಸಿತು.

ಸಬ್ ಅಟಾಮಿಕ್ ಕಣಗಳನ್ನು ಪರಿಶೀಲಿಸುವಾಗ ಅವು‌ ವಿಚಿತ್ರ ರೀತಿಯಲ್ಲಿ ವರ್ತಿಸುತ್ತವೆ. ಅದರ ವರ್ತನೆಯನ್ನು
ವಿವರಿಸಲು ವಿeನಿಗಳು ತಿಣುಕಾಡುತ್ತಿದ್ದಾರೆ. ಈ ಕಣಗಳು ಒಮ್ಮೆ ಅಲೆಯ ರೂಪದಲ್ಲೂ, ಮತ್ತೊಮ್ಮೆ ಕಣಗಳ ರೂಪದಲ್ಲೂ ಅವಸ್ಥಾಂತರಗೊಳ್ಳುತ್ತಿರುತ್ತವೆ. ಅಲೆಗಳ ರೂಪದಲ್ಲಿರುವಾಗ ವಿಜ್ಞಾನಿ ಅದನ್ನು ಅವಲೋಕಿಸಿ ದೊಡನೆಯೇ ಆ ಅಲೆಗಳು ಕಣಗಳ ರೂಪಕ್ಕೆ ಪರಿವರ್ತನೆಯಾಗುತ್ತವಂತೆ. ಅಂದರೆ ವ್ಯಕ್ತಿಯೊಳಗಿನ ಪ್ರಜ್ಞೆ ಹೊರಗಿನ ಭೌತದ್ರವ್ಯಗಳ ಮೇಲೆ ಪ್ರಭಾವ ಉಂಟುಮಾಡಬಲ್ಲದು.

ಇದು ಹೊಸ ಒಳ ನೋಟವೇನಲ್ಲ. ದೃಕ್-ದೃಶ್ಯ ಪರಿಕಲ್ಪನೆಯನ್ನು ಉಪನಿಷತ್ತುಗಳು ಪ್ರಾರಂಭದಿಂದಲೂ ಪ್ರತಿಪಾದಿಸುತ್ತ ಬಂದಿವೆ. ನೋಡುವವನ ಮತ್ತು ನೋಟದ ಕುರಿತು ಆದಿಶಂಕರರು ಉಪನಿಷತ್ತುಗಳ ಹಿನ್ನೆಲೆಯಲ್ಲಿ ‘ದೃಕ್-ದೃಷ್ಟಿ ವಿವೇಕ’ ಎಂಬ ಕೃತಿಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ ಕಳೆದೊಂದು ಶತಮಾನದಿಂದಲೂ ವಿಜ್ಞಾನಿಗಳು ಭೌತಕಣಗಳ ಈ ಅನಿರೀಕ್ಷಿತ ವರ್ತನೆ, ಅವಸ್ಥಾಂತರದ ಸ್ವರೂಪವನ್ನು ಶೋಧಿಸುವ ಯತ್ನದಲ್ಲೇ ಇದ್ದಾರೆ.

ಯೋಗ ಮತ್ತು ಉಪನಿಷತ್ತಿನ ಚಿಂತನೆ ಅಸಲಿಗೆ ಧಾರ್ಮಿಕ ಅಥವಾ ಸೈದ್ಧಾಂತಿಕ ಚಿಂತನೆ ಅಲ್ಲವೇ ಅಲ್ಲ, ತನ್ನ ಸ್ವರೂಪದ ಅದು ವೈಜ್ಞಾನಿಕ ಚಿಂತನೆಯಾಗಿದೆ. ಯೋಗ ಮೂಲತಃ ಒಂದು ಮನೋವೈಜ್ಞಾನಿಕ ಅಧ್ಯಯನ ವಿಧಾನ. ಪಶ್ಚಿಮದ ಮನೋವಿಜ್ಞಾನ ರೋಗಗ್ರಸ್ತ ಮನಸ್ಸಿನ ಅಧ್ಯಯನವಾದರೆ ಪೂರ್ವದ ಮನೋವಿಜ್ಞಾನ ಸ್ವಸ್ಥ ಮನಸ್ಸಿನ ಅಧ್ಯಯನವಾಗಿದೆ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಜ್ಞಾನಕ್ಕಾಗಿ ಹೊರಜಗತ್ತಿನಲ್ಲಿ ನಡೆಸುವ ಹುಡುಕಾಟ ಕೀಳೆಂದೂ, ಒಳಜಗತ್ತಿನಲ್ಲಿ ನಡೆಸುವ ಹುಡುಕಾಟ ಮೇಲೆಂದೂ ನಾನು ಭಾವಿಸಿಲ್ಲ. ಎರಡೂ ಜ್ಞಾನಪ್ರಾಪ್ತಿಗಿರುವ 2 ವಿಭಿನ್ನ ವಿಧಾನಗಳು. ಜ್ಞಾನಾರ್ಜನೆಗೆ ಎರಡೂ ಅತ್ಯಗತ್ಯ, ಎರಡರಲ್ಲೂ ಪರಿಶ್ರಮವಿರತಕ್ಕದ್ದು. ಕೊನೆಗೆ ಜ್ಞಾನಪ್ರಾಪ್ತಿಯಾದ ಮೇಲೆ ಅವೆರಡೂ ಬೇರೆಬೇರೆಯಲ್ಲ ಎಂದು ತಿಳಿಯುತ್ತದೆ.

ವಿಜ್ಞಾನದ ಆಧುನಿಕ ಆವಿಷ್ಕಾರಗಳು ವೇದಾಂತದ ಒಳನೋಟಗಳನ್ನೇ ಪ್ರತಿಧ್ವನಿಸಲಿವೆ ಎಂದಿದ್ದರು ವಿವೇಕಾ
ನಂದರು. ಆಂತರ್ಯದಲ್ಲಿ ಎಲ್ಲವೂ ಒಂದೇ, ಹಲವಲ್ಲ ಎಂದು ಉಪನಿಷತ್ತುಗಳು ಸಾರುತ್ತವೆ. ವಿಜ್ಞಾನಿಗಳೂ ಇದನ್ನೇ ಹೊಸ ಪರಿಭಾಷೆಯಲ್ಲಿ ಹೇಳುತ್ತಿದ್ದಾರೆ. ಉಪನಿಷತ್ ದ್ರಷ್ಟಾರರೂ ಕ್ವಾಂಟಂ ಭೌತಶಾಸ್ತ್ರಜ್ಞರ ಈ ದ್ವಂದ್ವದ ಪರಿಭಾಷೆಯ ಮಾತನಾಡುತ್ತಾರೆ.

ಭೌತ ಪ್ರಕೃತಿಯ 8 ರೂಪಗಳಲ್ಲಿ ಮನಸ್ಸೂ ಒಂದು ಎನ್ನುವ ಇವರು ಮನಸ್ಸನ್ನು ಭೌತದ್ರವ್ಯವೆಂದೂ ಕರೆವರು. ಹಾಗೆಯೇ ಮನಸ್ಸು ಅಲೆಗಳ (ಚಿತ್ತವೃತ್ತಿಗಳ) ರೂಪದ್ದು ಎಂದೂ ಪ್ರತಿಪಾದಿಸುವರು. ನೊಬೆಲ್ ಪುರಸ್ಕೃತ ಮ್ಯಾಕ್ಸ್‌ ಪ್ಲಾಂಕ್, ‘ಪ್ರಜ್ಞೆಯೇ ಮೂಲಭೂತವಾದುದು, ಭೌತದ್ರವ್ಯವೇನಿದ್ದರೂ ಪ್ರಜ್ಞೆಯಿಂದ ನಿಷ್ಪನ್ನ ವಾದ ತತ್ವವಾಗಿದೆ’ ಎಂದಿದ್ದರು.

ಟೆಕ್ಸಾಸ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಡಾ. ಜಾರ್ಜ್ ಸುದರ್ಶನ್ ದಶಕಗಳಿಂದಲೂ ಉಪನಿಷತ್ತಿನ ಮೂಲತತ್ವ ಗಳ ಹಿನ್ನೆಲೆಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. 9 ಸಲ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಅವರು ತಮ್ಮ ‘ಡೌಟ್ ಆಂಡ್ ಸರ್ಟೈನಿಟಿ’ ಎಂಬ ಕೃತಿಯಲ್ಲಿ ಪ್ರಜ್ಞೆ ಮತ್ತು ಭೌತದ್ರವ್ಯಗಳ ನಡುವಿನ ಸಂಬಂಧದ ಕುರಿತ ಸಂಶೋಧನಾ ಫಲಿತಗಳನ್ನು ದಾಖಲಿಸಿದ್ದಾರೆ.

ಶ್ರೋಡಿಂಗರ್, ವರ್ನರ್ ಹೈಸೆನ್‌ಬರ್ಗ್ ಮುಂತಾದ ಭೌತವಿಜ್ಞಾನಿಗಳು ಉಪನಿಷತ್ತು ಗಳ ಹಿನ್ನೆಲೆಯಲ್ಲಿ ಕ್ವಾಂಟಂ ಮೆಕ್ಯಾನಿಕ ಕುರಿತು ಸಂಶೋಧನೆ ನಡೆಸಿರುವರು. ಅನಿಶ್ಚಿತತೆಯ ತತ್ವವನ್ನು ಪ್ರತಿಪಾದಿಸಿದ ಹೈಸೆನ್‌ಬರ್ಗ್ ಕ್ವಾಂಟಮ್ ಫಿಸಿಕ್ಸ್ ಕುರಿತು ಚಿಂತಿಸುವಾಗಲೆಲ್ಲ ಉಪನಿಷತ್ತುಗಳ ಕುರಿತು‌ ಚಿಂತಿಸುತ್ತಿರುವೆನೇ ಎಂದು ನನಗೆ ದಿಗಿಲಾಗುತ್ತದೆ. ನಾನು ಕಳೆದ 35 ವರ್ಷಗಳಿಂದ ಭೌತವಸ್ತುವಿನ ಕುರಿತು ಅಧ್ಯಯನ ಮಾಡುತ್ತಿದ್ದು ಭೌತವಸ್ತು ಎಂಬು ದಿಲ್ಲ ಎಂದು ಕಂಡುಕೊಂಡಿದ್ದೇನೆ. ಉಪನಿಷತ್ತುಗಳು ಸಹ ಭೌತವಸ್ತು ಎಂಬುದಿಲ್ಲ ಎಂದೇ ಪ್ರತಿಪಾದಿಸಿವೆ ಎಂದಿದ್ದಾರೆ.

ಪ್ರಸಿದ್ಧ ಭೌತಶಾಸ್ತ್ರಜ್ಞ ಡಾ.ಡೇವಿಡ್ ಬೋ ‘ನೋಡುವವನು ಮತ್ತು ನೋಟ’ದ ಕುರಿತು (ದಿ ಆಬ್ಸರ್ವರ್ ಆಂಡ್
ದಿ ಆಬ್ಸರ್ವ್ಡ್) ಆಧುನಿಕ ಯುಗದ ಉಪನಿಷತ್ ದ್ರಷ್ಟಾರರೆಂದು ಕರೆಯಬಹುದಾದ ಜೆ.ಕೃಷ್ಣಮೂರ್ತಿಯವ ರೊಂದಿಗೆ ದಶಕಗಳ ಕಾಲ ಸಂವಾದಿಸಿ ತಮ್ಮ ಸಂಶೋಧನಾ ನಿರ್ಣಯಗಳನ್ನು ಮರುಪರಿಶೀಲಿಸಿ ಕೊಂಡಿದ್ದರು. ತಮ್ಮ ಸಂಶೋಧನೆಗೆ ಉಪನಿಷತ್ತುಗಳ ಒಳನೋಟಗಳನ್ನು ಬಳಸಿಕೊಂಡ ಅಸಂಖ್ಯ ಭೌತವಿಜ್ಞಾನಿಗಳನ್ನು (ಪೀಟರ್ ರಸೆಲ, ಸ್ಟೀಫನ್ ವೇಯಿನ್ ಬರ್ಗ್, ಸರ್ ಜಾನ್ ಎಕ್ಲಿಸ್, ಸರ್ ಆರ್ಥರ್ ಎಡಿಂಗ್ಟನ್, ಕಾರ್ಲ್ ಪಿಯರ್ಸನ್, ನೀಲ್ಸ ಬೋರ್, ಮ್ಯಾಕ್ಸ್ ಪ್ಲಾಂಕ್, ಆಲ್ಬರ್ಟ್ ಐನ್‌ಸ್ಟೀನ್) ಉಖಿಸಬಹುದು. ವ್ಯಕ್ತಿನಿಷ್ಠ ಮನಸ್ಸು ಮತ್ತು ವಸ್ತುನಿಷ್ಠ ಭೌತದ್ರವ್ಯಗಳು ಬೇರೆ ಬೇರೆ‌ಯಲ್ಲ, ಕಾಣುವ ವಸ್ತುವನ್ನು ನೋಡುವ ವ್ಯಕ್ತಿಯಿಂದ ಬೇರ್ಪಡಿಸಲಾಗದು.

ಫ್ರಿಟ್ಜಾ- ಕಾಪ್ರಾ ಬರೆದಿರುವ ‘ದಿ ತಾವೋ ಆಫ್ ಫಿಸಿಕ್ಸ್’ ಈ ಸಂಬಂಧವನ್ನು ವಿವೇಚಿಸುವ‌ ಕಳೆದ ಶತಮಾನದ ಮಹತ್ವದ ಕೃತಿಯಾಗಿದೆ.

ಸಂವಾದವೇ ಪ್ರಧಾನವಾದ ಉಪನಿಷತ್ತುಗಳು ಜ್ಞಾನ ಪ್ರಾಪ್ತಿಗೆ ಬೌದ್ಧಿಕತೆ, ವೈಚಾರಿಕತೆಗಳ ಬಳಕೆಯನ್ನು ಎಂದಿಗೂ
ನಿರಾಕರಿಸಿಲ್ಲ. ಆದರೆ ಬೌದ್ಧಿಕತೆ, ವೈಚಾರಿಕತೆಗಳು ಒಂದು ಹಂತದವರೆಗೆ ಉಪಯುಕ್ತವಾದುದು, ಅವೇ ಅಂತಿಮ
ಉಪಾಧಿಗಳಲ್ಲ ಎನ್ನುತ್ತವೆ. ಶ್ರುತಿ, ಯುಕ್ತಿ ಮತ್ತು ಅನುಭೂತಿಗಳ ಸಾಮರಸ್ಯದಿಂದ ಸತ್ಯಪ್ರಾಪ್ತಿಯಾಗುತ್ತದೆ ಎಂದು
ಪ್ರತಿಪಾದಿಸುತ್ತವೆ. ಆಲ್ಬರ್ಟ್ ಐನ್‌ಸ್ಟೀನ್ ಗೊತ್ತಿದ್ದೇ ಗೊತ್ತಿಲ್ಲದೆಯೋ ಇದೇ ನಿರ್ಣಯಕ್ಕೆ ಬಂದಿದ್ದರು: ನಮ್ಮ ಎಲ್ಲ
ಬೌದ್ಧಿಕ ಪ್ರಯತ್ನಗಳೂ ಅಂತಿಮವಾಗಿ ವಿಫಲವಾಗುತ್ತವೆ.

ಅಂತಿಮ ಸತ್ಯವನ್ನರಿಯಲು ತಾರ್ಕಿಕ ನಿಯಮಗಳಿಲ್ಲ. ಅಂತಃಸೂರ್ತಿ ಮತ್ತು ಅನುಭೂತಿಗಳಿಂದ ಅದನ್ನು
ಅರಿಯಬಹುದು (ಕಲೆಕ್ಟೆಡ್ ಪೇಪರ್ಸ್ ಸಂ.7. ವಸ್ತುನಿಷ್ಠ (ಆಬ್ಜೆಕ್ಟಿವ್) ಅಧ್ಯಯನವಾದ ಭೌತಶಾಸ್ತ್ರವಿಂದು ವ್ಯಕ್ತಿನಿಷ್ಠ (ಸಬ್ಜೆಕ್ಟಿವ್) ಅಧ್ಯಯನವಾಗಿ ಪರಿಣಮಿಸುತ್ತಿದೆ.

ಇಂದಿನ ಭೌತವಿಜ್ಞಾನಕ್ಕೆ ಭೌತದ್ರವ್ಯದ ಪರಿಶೀಲನೆ ಗೌಣವಾಗಿದೆ, ಮನೋವೃತ್ತಿಯೇ ಪ್ರಧಾನವಾಗಿದೆ. ಗಮನಿ
ಸುವ ವಸ್ತುವಿಗಿಂತ ಗಮನಿಸುವವನ ಪ್ರಜ್ಞೆಗೆ ಪ್ರಾಧಾನ್ಯ ನೀಡುತ್ತಿದೆ. ಇಂದಿನ ವಿಜ್ಞಾನ ಮನುಷ್ಯನ ಆಧ್ಯಾತ್ಮಿಕ ಅನುಭವದ ಬಗ್ಗೆ ವಿಶೇಷ ಕುತೂಹಲ ಬೆಳೆಸಿಕೊಂಡಿದೆ. ತಾನು ಪರಿಶೀಲಿಸುವ ವಸ್ತುವಿನ ಹಿಂದಿರುವ ನಿಗೂಢ ವಾದ, ಸಕಲವನ್ನೂ ಐಕ್ಯಗೊಳಿಸುವ ಪರಬ್ರಹ್ಮ ತತ್ವದ ಬಗ್ಗೆ ಆಸಕ್ತಿ ತಳೆದಿದೆ. ಪರಿವರ್ತನಾಶೀಲವಾದ ಭೌತವಸ್ತುವಿನ ಹಿಂದಿರುವ ಮೂಲಭೂತ ತತ್ವವು ಕ್ವಾಂಟಮ್ ಸಿದ್ಧಾಂತದ ತಳಹದಿಯಾಗಿದೆ, ಮಾತ್ರವಲ್ಲ ಪೂರ್ವದೇಶದ ಲೋಕದೃಷ್ಟಿಯನ್ನು ರೂಪಿಸಿದೆ. ಆ ಮೂಲಭೂತ ತತ್ವವೇ ನಿಜವಾದ ಸತ್ಯವೆಂದೂ, ಅದರ ಅಭಿವ್ಯಕ್ತಿ ರೂಪದ ಕ್ಷಣಭಂಗುರವಾದ ಲೋಕಸತ್ಯವು ಮಿಥ್ಯೆಯೆಂದೂ ಉಪನಿಷತ್ತಿನ ಋಷಿಗಳು ಸಾರಿ ಹೇಳುತ್ತಾರೆ.

ಆ ಪರಮಸತ್ಯವನ್ನು ಪೂರ್ವದೇಶದ ಅನುಭಾವಿಗಳು ಧರ್ಮವೆಂದೂ, ಬೌದ್ಧ ದಾರ್ಶನಿಕರು ಧರ್ಮಕಾಯ ವೆಂದೂ, ತಾವೋ ವಾದಿಗಳು ತಾವೋ ಎಂದೂ ನಿರ್ವಚಿಸುತ್ತಾರೆ. ಅದನ್ನು ಕೇವಲ ಒಂದು ಜ್ಞಾನಶಾಖೆಯನ್ನು
ಅವಲಂಬಿಸಿ ಅನುಸಂಧಾನ ಮಾಡಲಾಗದು. ಯಾವೆಲ್ಲ ವಸ್ತುವಿಷಯಗಳು ಆಧುನಿಕ ವಿಜ್ಞಾನದ ಕಾಳಜಿಯ ವಿಚಾರಗಳಾಗಿವೆಯೋ ಆ ಎಲ್ಲ ವಸ್ತುವಿಷಯಗಳೂ ಉಪನಿಷತ್ತುಗಳು ಚರ್ಚಿಸುವ ಪ್ರಧಾನ ಸಂಗತಿಗಳೂ ಆಗಿವೆ.
ಅದು ಸೃಷ್ಟಿಯ ಏಕತೆಯನ್ನು ಪ್ರತಿಪಾದಿಸುವ ಪರಬ್ರಹ್ಮ ಮತ್ತು ಅದ್ವೈತದ ಪರಿಕಲ್ಪನೆ ಇರಬಹುದು, ಸೃಷ್ಟಿಯ
ಮೂಲವನ್ನು ಅರಿಯಬೇಕೆಂದು ತವಕಿಸುವ ಮನುಷ್ಯಪ್ರಜ್ಞೆ ಇರಬಹುದು, ಪರಿವರ್ತನಾಶೀಲ ಭೌತಿಕ ಪ್ರಪಂಚದ ಮಿಥ್ಯತ್ವದ ವಿವೇಚನೆ ಇರಬಹುದು, ಕಾಲದೇಶಗಳ ಪರಿಕಲ್ಪನೆ ಇರಬಹುದು ಅಥವಾ ಸತ್ಯವನ್ನು ಅರಿಯ ಬೇಕೆಂದು ಹೊರಡುವ ವ್ಯಕ್ತಿಯ ವಿವೇಕ, ನೈತಿಕತೆ, ಪ್ರಾಮಾಣಿಕತೆಗಳ ಪ್ರಶ್ನೆ ಇರಬಹುದು.

ವಿಜ್ಞಾನ-ವೇದಾಂತಗಳ ನಡುವಿನ ಅಂತಸಂಬಂಧ ಕುತೂಹಲಕರವಾದುದು. ಅವೆರಡರ ಅನ್ವೇಷಣಾ ವಿಧಾನ
ದಲ್ಲಿ ವ್ಯತ್ಯಾಸವಿರಬಹುದು. ಆದರೆ ಆಶಯ ಒಂದೇ. ಮನುಷ್ಯ ಪ್ರಜ್ಞೆಯನ್ನು, ಮನುಷ್ಯನ ಲೋಕದೃಷ್ಟಿಯನ್ನು,
ಮನುಷ್ಯ ಬದುಕನ್ನು ಇನ್ನಷ್ಟು ಹಸನುಗೊಳಿಸುವುದು. ಇದುವೇ ಎಲ್ಲ eನಾನ್ವೇಷಣೆಗಳ ಮೂಲ ಆಶಯವಾಗಿದೆ.
ಈಶಾವಾಸ್ಯ ಉಪನಿಷತ್ತು ದಶೋಪನಿಷತ್ತುಗಳಲ್ಲಿ ಅತ್ಯಂತ ಕಿರಿದಾದ ಉಪನಿಷತ್ತಾಗಿದೆ. ಶುಕ್ಲ ಯಜುರ್ವೇದದ
ಕೊನೆಯ ಭಾಗದಲ್ಲಿ ಬರುವ ಈ ಉಪನಿಷತ್ತಿನಲ್ಲಿ 18 ಮಂತ್ರಗಳಿವೆ. ಕಾವ್ಯದ ಮೊದಲಸಾಲೇ ಕಾವ್ಯದ ಶೀರ್ಷಿಕೆಯ ಸಾಲಾಗಿದೆ ಎಂದು ಕಾವ್ಯ ಮೀಮಾಂಸಕಾರರು ಹೇಳುತ್ತಾರೆ. ಈ ಉಪನಿಷತ್ತು ‘ಈಶಾವಾಸ್ಯಮಿದಂ ಸರ್ವಂ’ ಎಂದು ಪ್ರಾರಂಭವಾಗುವುದರಿಂದ ಇದು ಈಶಾವಾಸ್ಯೋಪನಿಷತ್ ಎಂದು ಹೆಸರಾಗಿದೆ.

ಮ್ಯಾಕ್ಸ್ ಮುಲ್ಲರ್, ರಾಜಾರಾಮ ಮೋಹನರಾಯ್ ಮುಂತಾದ ಆಧುನಿಕ ಪೂರ್ವಯುಗದ ವಿದ್ವಾಂಸರುಗಳಿಂದ
ಹಿಡಿದು ಗಾಂಧಿ ವಿನೋಬಾ ಭಾವೆವರೆಗಿನ ನೂರಾರು ಚಿಂತಕರು, ತತ್ವಜ್ಞಾನಿಗಳು, ಸಮಾಜ ಸುಧಾರಕರು ಈ ಉಪನಿಷತ್ತಿನ ಕುರಿತು ಮತ್ತೆ ಮತ್ತೆ ಚರ್ಚಿಸಿದ್ದಾರೆಂದರೆ ಇದರ ಮಹತ್ವ ಎಂಥದೆಂದು ಮನವರಿಕೆಯಾಗದಿರದು.

ಗಾಂಧೀಜಿಯಂತೂ ಮುಂದೊಂದು ದಿವಸ ಎಲ್ಲ ಉಪನಿಷತ್ತುಗಳೂ, ಎಲ್ಲ ಶಾಸ್ತ್ರಗ್ರಂಥಗಳೂ ಸುಟ್ಟು ಬೂದಿ ಯಾಗಿ, ಈಶಾವಾಸ್ಯ ಉಪನಿಷತ್ತಿನ ಮೊದಲ ಮಂತ್ರದ ಮೊದಲ ಸಾಲು ಮಾತ್ರ ಉಳಿದುಕೊಂಡರೂ ಸಾಕು ಹಿಂದೂಧರ್ಮ ಅಬಾಧಿತವಾಗಿ, ಶಾಶ್ವತವಾಗಿ ಬೆಳೆಯುತ್ತಿರುತ್ತದೆ ಎಂದಿದ್ದರು. ಅಪರೂಪದ ಅನುಭಾವಿ ಜಿಡ್ಡು ಕೃಷ್ಣಮೂರ್ತಿಯವರು ಜ್ಞಾನವನ್ನು ಸಂಪಾದಿಸುವ ಬಗೆ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುತ್ತ ‘ಫ್ರೀಡಂ ಫ್ರಂ ದಿ ನೋನ್’ (ತಿಳಿದುದರಿಂದ ಬಿಡುಗಡೆ ಯಾಗಬೇಕು) ಎಂದಿದ್ದರು. ತಿಳಿದುದರಿಂದ ಬಿಡುಗಡೆಯಾದಾಗ ಮನಸ್ಸು ಸ್ವತಂತ್ರವಾಗುತ್ತದೆ, ಹೊಸದರ ಗ್ರಹಿಕೆಗೆ ಸಿದ್ಧವಾಗುತ್ತದೆ. ಹಾಗಲ್ಲದೇ ತಿಳಿದುದರಿಂದ ಬಿಡುಗಡೆಯಾಗದಿದ್ದಲ್ಲಿ, ಮನಸ್ಸು ಹೊಸದಕ್ಕೂ ಹಳೆಯ ತಿಳಿವಳಿಕೆಯ ಬಣ್ಣ ಹಚ್ಚಿ ವ್ಯಾಖ್ಯಾನಿಸುತ್ತದೆ.

ಕೃಷ್ಣಮೂರ್ತಿಯವರ ಈ ಒಳನೋಟವನ್ನು ಈಶಾವಾಸ್ಯ ಉಪನಿಷತ್ತಿನಲ್ಲೂ ಕಾಣಬಹುದು. ಅವಿದ್ಯೆಯನ್ನು ಉಪಾಸನೆ ಮಾಡುವವರು ಗಾಢವಾದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ. ಯಾರು ವಿದ್ಯೆಯನ್ನು ಉಪಾಸನೆ ಮಾಡುವರೋ ಅವರು ಇನ್ನೂ ಹೆಚ್ಚಿನ ಕತ್ತಲೆಯ ಲೋಕವನ್ನು ಪ್ರವೇಶಿಸುವರು (ಈಶ 9). ಇದೇ ಈಶಾವಾಸ್ಯೋಪ ನಿಷತ್ತಿನಲ್ಲಿ ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ| ತತ್ತ್ವಂ ಪೂಷನ್ನ ಪಾವೃಣು ಸತ್ಯಧರ್ಮಾಯ ದೃಷ್ಟಯೇ|| (ಸತ್ಯದ (ಪರಮಾತ್ಮನ) ಮುಖವು ಸ್ವರ್ಣಮಯ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ.

ಹೇ ವಿಶ್ವಪೋಷಕನಾದ ಪ್ರಭುವೇ ಸತ್ಯ ಧರ್ಮದ ಉಪಾಸಕನಾದ ನನಗೆ ಸತ್ಯ ದರ್ಶನಕ್ಕಾಗಿ ಅದನ್ನು ಪಕ್ಕಕ್ಕೆ ಸರಿಸು) (ಈಶ 15) ಎಂಬ ಆಶೀರ್ವಚನ ಮಂತ್ರವಿದೆ. ಉಪನಿಷತ್ತು ಸತ್ಯ ಪ್ರಾಪ್ತಿಗೆ ನಮ್ಮ ಬುದ್ಧಿ, ತರ್ಕ, ವಿವೇಕ, ವೈಚಾರಿಕತೆ, ಸಾಧನೆ ಗಳಷ್ಟೇ ಸಾಲದು. ಅಖಂಡ ಬ್ರಹ್ಮಾಂಡವನ್ನು ವ್ಯಾಪಿಸಿರುವ ಆ ಪರಮಚೈತನ್ಯದ ಅನುಗ್ರಹ ವೂ ಬೇಕು ಎಂಬ ವಿನಯವನ್ನು ಕಲಿಸುತ್ತದೆ. ಅಂಥ ಪರಮಸತ್ಯದ ಕಾಣ್ಕೆಗಾಗಿ ಜೀವಿತವನ್ನು ಮುಡಿಪಾಗಿಟ್ಟಿರುವ ಎಲ್ಲ ಸಾಧಕರಿಗೆ, ವಿಜ್ಞಾನಿಗಳಿಗೆ ಶ್ರೇಯಸ್ಸು ಉಂಟಾಗಲಿ, ಅವರ ಚಿತ್ತವನ್ನು ಆವರಿಸಿರುವ ಆ ಚಿನ್ನದ ಪರದೆ ಪಕ್ಕಕ್ಕೆ ಸರಿದು ಸತ್ಯಧರ್ಮಗಳ ದರ್ಶನವಾಗಲಿ, ಶ್ರೀ ಕಾಲಭೈರವೇಶ್ವರನ ಕೃಪಾಶೀರ್ವಾದ ಅವರ ಮೇಲಿರಲಿ.

(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ
ಮಠದ ಪೀಠಾಧ್ಯಕ್ಷರು)

ಇದನ್ನೂ ಓದಿ: Sri Nirmalanand Swamiji Column: ಉಪನಿಷತ್ತುಗಳ ಸುತ್ತಮುತ್ತ ಒಂದು ಕಿರುನೋಟ