Sunday, 24th November 2024

Rangaswamy Mookanahally Column: ಸೋಲಲೇಬಾರದೆಂಬ ಧೋರಣೆ ತರವಲ್ಲ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಸೋಲುಗಳನ್ನು ಗೆಲುವಿನ ಹಾರವನ್ನಾಗಿ ಬದಲಾಯಿಸಿಕೊಂಡವರ ಸಂಖ್ಯೆ ಅಸಂಖ್ಯ. ಇವರೆಲ್ಲರಲ್ಲೂ ಇದ್ದ ಒಂದು ಕಾಮನ್ ಫ್ಯಾಕ್ಟರ್ ಎಂದರೆ, ಇವರಾರೂ ಸೋಲಿಗೆ ಹೆದರಲಿಲ್ಲ, ಮಾಡುತ್ತಿದ್ದ ಕೆಲಸವನ್ನು ಬಿಡಲಿಲ್ಲ. ಸೋಲಿಗೆ ತಲೆ ತಗ್ಗಿಸದೆ ನಿಂತು ಹೋರಾಡುವುದು ಕಷ್ಟದ ಕೆಲಸ. ಇವರೆಲ್ಲರೂ ಆ ಮಾರ್ಗವನ್ನೇ ಆಯ್ದುಕೊಂಡವರು.

ಥಾಮಸ್ ಅಲ್ವಾ ಎಡಿಸನ್ ಹೆಸರನ್ನು ಕೇಳದವರು ಕಡಿಮೆ. ಆತ ಅಮೆರಿಕನ್ ಸಂಶೋಧಕ, ಬ್ಯುಸಿನೆಸ್‌ಮ್ಯಾನ್. ಆತ ಜಗತ್ತಿಗೆ ನೀಡಿರುವ ಕಾಣಿಕೆಗಳ ಪಟ್ಟಿ ಬಹಳ ದೊಡ್ಡದು. ಮೋಷನ್ ಪಿಕ್ಚರ್ ಕ್ಯಾಮೆರಾ, ಬಲ್ಬ್, ಇಲೆಕ್ಟ್ರಿಕ್ ಪವರ್ ಜೆನರೇಷನ್, ಮಾಸ್ ಕಮ್ಯುನಿಕೇಷನ್‌ ಈತನ ಸಂಶೋಧನೆಯಲ್ಲಿ ಮುಖ್ಯವಾದವು. ನಿಮಗೆ ಗೊತ್ತಿರಲಿ ಈ ಯಶಸ್ಸು ಅಥವಾ ಜಯ ಎನ್ನುವುದು ಅಷ್ಟೊಂದು ಸುಲಭವಾಗಿ ಯಾರ ಕೈಗೂ ಎಟುಕುವುದಿಲ್ಲ.

ಅದು ಸಾಧಕನಾಗುವನ ತಾಳ್ಮೆಯನ್ನು, ಸಹನೆಯನ್ನು ಪರೀಕ್ಷಿಸುತ್ತದೆ. ಪದೇ ಪದೆ ಕೈಕೊಡುವ ತನ್ನ ಬುದ್ಧಿಯಿಂದ ಸಾಧಕನ ದಿಕ್ಕು ತಪ್ಪಿಸುವ, ‘ಗಿವ್ -ಅಪ್’ ಮಾಡುವ ಮನೋಸ್ಥಿತಿಗೆ ದೂಡುತ್ತದೆ. ಇವೆಲ್ಲವನ್ನೂ ಸಹಿಸಿಕೊಳ್ಳುವ ಗುಣವುಳ್ಳವನಿಗೆ ಮಾತ್ರ ಇದು ಒಲಿಯುತ್ತದೆ. ಥಾಮಸ್ ಅಲ್ವಾ ಎಡಿಸನ್‌ಗೆ ಕೂಡ ಹೀಗೇ ಆಗುತ್ತದೆ. ಆತ ನಡೆದು ಬಂದ ಹಾದಿ ಯಾವ ರೋಲರ್ ಕೋಸ್ಟರ್‌ಗೂ ಕಡಿಮೆಯೇನಿಲ್ಲ. ಸತತ ಸೋಲುಗಳಿಂದ ಎಡಿಸನ್ ಕಂಗೆಡಲಿಲ್ಲ , ಸಂಶೋಧನೆ ನಿಲ್ಲಿಸಲಿಲ್ಲ. ಬದಲಿಗೆ ಆತ ಹೇಳುತ್ತಾನೆ ‘I failed my way to success’. ಗೆಲುವಿನ ಹಾದಿಯನ್ನು ಸೋಲಿಸಿದೆ ಎನ್ನುತ್ತಾನೆ.

ಗೆಲುವಿನ ಹಾದಿ ಕಠಿಣ ಹೀಗಾಗಿ ಈ ಮಾತನ್ನು ಹೇಳಿದ್ದಾನೆ. ಜತೆಗೆ ಹತ್ತು ಸಾವಿರ ದಾರಿಗಳಿಂದ ಗೆಲುವು ಸಾಧ್ಯವಿಲ್ಲ ಎನ್ನುವುದನ್ನು ನಾನು ಕಲಿತೆ ಎನ್ನುತ್ತಾನೆ. ಹತ್ತು ಸಾವಿರ ಪ್ರಯತ್ನದಲ್ಲಿ ನಾನು ಸೋತೆ ಎನ್ನುವ ಮಾತನ್ನು ಆತ ಆಡುವುದಿಲ್ಲ. ಹತ್ತು ಸಾವಿರ ದಾರಿಯಲ್ಲಿ ಗೆಲುವು ಸಿಗುವುದಿಲ್ಲ ಎನ್ನುವುದು ಸರಿಯಾದ ದಾರಿಯಿಂದ ತಿಳಿಯಿತು ಎನ್ನುತ್ತಾನೆ. ಸೋಲಿಗೆ ಹೆದರಿ ಮಾಡುವ ಕೆಲಸವನ್ನು ಬಿಟ್ಟಿದ್ದರೆ? ನಾವು ಇಂದು ಎಡಿಸನ್ ಬಗ್ಗೆ ಮಾತನಾಡು ತ್ತಿರಲಿಲ್ಲ .

ನಮ್ಮ ಕನಸು ಮತ್ತು ಜಯದ ನಡುವೆ ಏನಾದರೂ ಇದ್ದರೆ ಅದು ಸೋಲಿನ ಬಗೆಗಿನ ಭಯ ಮಾತ್ರ. ಸೋಲಿಗಿಂತ, ಸೋಲಿನ ಭಯ ದೊಡ್ಡದು. ಸೋಲು ಆ ಕ್ಷಣದಲ್ಲಿ ಆಗುವಂಥದ್ದು, ಆದರೆ ಸೋಲಿನ ಭಯವಿದೆಯಲ್ಲ ಅದು ದಿನದ ಇಪ್ಪತ್ನಾಲ್ಕು ಗಂಟೆ ಜತೆಯಾಗಿರುತ್ತದೆ. ಮನುಷ್ಯನನ್ನು ಹೈರಾಣು ಮಾಡಿಬಿಡುತ್ತದೆ. ಸೋಲಲೇ
ಬಾರದು ಎಂದು ಬದುಕುವುದು ಕೂಡ ಸೋಲಿಗಿಂತ ಕಡಿಮೆಯಿಲ್ಲ.

ಸೋಲಬಾರದು ಎನ್ನುವ ಮನಸ್ಥಿತಿಯೇ ತಪ್ಪು. ಇಟ್ಸ್ ಓಕೆ ಟು ಫಲ. ಮಕ್ಕಳನ್ನು ನೋಡಿ, ಅವು ಅದೆಷ್ಟು ಸಹಜ ವಾಗಿ ಬೀಳುತ್ತವೆ, ಅಷ್ಟೇ ಸಹಜವಾಗಿ ಎದ್ದು ನಡೆಯಲು ಪ್ರಾರಂಭಿಸುತ್ತವೆ. ಅವುಗಳಲ್ಲಿ ಬಿದ್ದೆ, ಸೋತೆ ಎನ್ನುವ ಭಯವಿಲ್ಲ, ಅದಕ್ಕೆ ಮಕ್ಕಳು ಸಹಜವಾಗಿ ಮೇಲೇಳುತ್ತಾರೆ. ನಡೆಯುವುದನ್ನು ಕಲಿಯುತ್ತಾರೆ. ಅವರಿಗೆ ಆ ವಯಸ್ಸಿನ ‘ದೊಡ್ಡವರ’ ಮನಸ್ಥಿತಿ ಬಂದುಬಿಟ್ಟಿದ್ದರೆ? ಮುಕ್ಕಾಲು ಪಾಲು ಮಕ್ಕಳು ನಡೆಯುವುದನ್ನೇ ಕಲಿಯುತ್ತಿರಲಿಲ್ಲ.

ಗಮನಿಸಿ ನೋಡಿ ನಾವು ನಮ್ಮ ಸೋಲು, ಭಯ, ನಿರಾಸೆ, ಅಸಮರ್ಥತೆಯನ್ನು ಮಕ್ಕಳಿಗೆ ನಮಗೆ ಗೊತ್ತಿಲ್ಲದೇ ವರ್ಗಾಯಿಸಿ ಬಿಡುತ್ತೇವೆ. ‘ಹುಷಾರು, ಬಿದ್ದೀಯ, ಅದು ಮಾಡಬೇಡ, ಇದು ಬೇಡ..’ ಹೀಗೆ ನೆಗೆಟಿವ್ ಮಾತುಗಳ ಪಟ್ಟಿ ಬಹಳ ದೊಡ್ಡದು. 40ರ ಪ್ರಾಯದ ಪ್ರಮಾಣ ತಪ್ಪಿದ ದೇಹ ಮತ್ತು ತೂಕವುಳ್ಳ ಪೋಷಕರು ನಾಲ್ಕು ಮೆಟ್ಟಿಲಿನಿಂದ ಎಗರುವುದು ಆಗದ ಮಾತು.

ಅದೇ ಮಕ್ಕಳು ನೋಡಿ ಲೀಲಾಜಾಲವಾಗಿ ನೆಗೆದುಬಿಡುತ್ತವೆ. ಅವರಲ್ಲಿ ಇರುವ ಈ ಸಹಜ ಉತ್ಸಾಹವನ್ನು, ಸಾಮರ್ಥ್ಯವನ್ನು ಚಿವುಟುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಕುಣಿಯುವ, ಎಗರುವ ಉತ್ಸಾಹಿ ಮಕ್ಕಳನ್ನು ಕಂಡ ತಕ್ಷಣ ಹೊರಡುವ ಮಾತು ‘ಹುಷಾರು ಬಿದ್ದೀಯ’. ನಮ್ಮಲ್ಲಿನ ತಲ್ಲಣಗಳನ್ನು ಅದೆಷ್ಟು ಬೇಗ ವರ್ಗಾಯಿಸಿಬಿಡುತ್ತೇವೆ. ಯಾರೊಬ್ಬರೂ ‘ಎಗರು ಕಂದ, ನಾನಿದ್ದೇನೆ’ ಎನ್ನುವುದು ಕೇಳಿಬರುವುದಿಲ್ಲ. ಬಿದ್ದರೆ ಎನ್ನುವ ಭಯದ ಮಹಾತ್ಮೆ. ಬದುಕಿನಲ್ಲಿ ಇನ್ನೊಂದು ದರ್ಜೆಗೆ ಏರಲು ಕಡಿವಾಣ ಹಾಕುವುದು ಕೂಡ ಇದೇ ಫಿಯರ್ ಆಫ್ ಫೈಲ್ಯೂರ್.

ಒಂದು ಗೆಲುವು ಸುಮ್ಮನೆ ಸಿಕ್ಕುವುದಿಲ್ಲ, ಗೆಲುವು ಒಂದೊಳ್ಳೆ ನಿರ್ಧಾರದ ಫಲ. ಒಂದೊಳ್ಳೆ ನಿರ್ಧಾರ ತೆಗೆದು ಕೊಳ್ಳುವುದಕ್ಕೆ ಬಹಳಷ್ಟು ಅನುಭವ ಬೇಕೇಬೇಕು. ಇಂಥ ಅನುಭವ ಪುಕ್ಕಟೆ ಸಿಗುವುದಿಲ್ಲ ಅಥವಾ ಅದು ಮಾರುಕಟ್ಟೆಯಲ್ಲಿ ಬಿಕರಿಗೂ ಇಲ್ಲ. ಪುಸ್ತಕವನ್ನು ಓದಿ ಒಂದಷ್ಟು ಕಲಿಯಬಹುದು ಎನ್ನುವುದು ಕೂಡ ಅಲ್ಪ ಸಮಾಧಾನ. ಇಂಥ ಅನುಭವಗಳು ಬರುವುದು ಕೆಟ್ಟ ನಿರ್ಧಾರಗಳಿಂದ, ಆ ನಿರ್ಧಾರಗಳ ಫಲದಿಂದ ಬಂದ ಸೋಲಿನಿಂದ!

ಹೀಗಾಗಿ ಇದೊಂದು ಸೈಕಲ್. ಒಂದಿಲ್ಲದೆ ಇನ್ನೊಂದಿಲ್ಲ. ನಿರ್ಧಾರಗಳು ಕೂಡ ಆ ಕ್ಷಣದ ನಿರ್ಧಾರಗಳು. ಅಂದಿಗೆ ಅದು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದಿಲ್ಲ, ನಿರ್ಧಾರ ಒಳಿತೇ ಅಥವಾ ಕೆಟ್ಟದ್ದೇ ಎನ್ನುವುದನ್ನು ಸಮಯ ಮತ್ತು ಫಲಿತಾಂಶ ನಿರ್ಧರಿಸುತ್ತವೆ. ಹೀಗೆ ಅಂದಿನ ನಿರ್ಧಾರಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಸಿಗದೇ ಸೋತ ಮಹನೀಯರ ಪಟ್ಟಿ ನಮ್ಮ ಬಳಿಯಿದೆ. ಸೋತೆ ಎಂದು ಕುಗ್ಗದ ಕಾರಣಕ್ಕೆ ಅವರು ಗೆದ್ದಿದ್ದಾರೆ, ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ.

ಇಂಥ ಮಹನೀಯರ ಪಟ್ಟಿಯಲ್ಲಿ ಮೊದಲಿಗೆ ಬರುವುದು ಅಬ್ರಹಾಂ ಲಿಂಕನ್. 1860ರಲ್ಲಿ ಅಮೆರಿಕ ದೇಶದ ಪ್ರೆಸಿಡೆಂಟ್ ಹುದ್ದೆಗೆ ಏರುವ ಮುನ್ನ ಅವರ ಹಾದಿಯನ್ನು ಒಮ್ಮೆ ಗಮನಿಸಿ ನೋಡಿ. 1832ರಲ್ಲಿ, ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಲೆಜಿಸ್ಲೇಟರ್ ಸ್ಪರ್ಧೆಯಲ್ಲಿ ಅದೇ ವರ್ಷ ಸೋಲು ಕಾಣುತ್ತಾರೆ, ಮುಂದಿನ ವರ್ಷ ಅಂದರೆ 1833ರಲ್ಲಿ ತಾವು ಶುರುಮಾಡಿದ್ದ ಬಿಸಿನೆಸ್‌ನಲ್ಲಿ ಸೋಲು ಕಾಣುತ್ತಾರೆ. 1834ರಲ್ಲಿ ಲೆಜಿಸ್ಲೇಟರ್ ಆಗಿ ಆಯ್ಕೆಯಾಗುತ್ತಾರೆ. 1835ರಲ್ಲಿ ತಮ್ಮ ಮನದನ್ನೆಯನ್ನು ಕಳೆದುಕೊಳ್ಳುತ್ತಾರೆ, ಇದರ ಪರಿಣಾಮ 1836ರಲ್ಲಿ ಮೆಂಟಲ್ ಬ್ರೇಕ್‌ಡೌನ್‌ಗೆ ತುತ್ತಾಗುತ್ತಾರೆ. 1838ರಲ್ಲಿ ಸ್ಪೀಕರ್ ಹುದ್ದೆಗೆ ಸ್ಪರ್ಧಿಸಿ ಸೋಲುತ್ತಾರೆ.

ಕಾಂಗ್ರೆಸ್ ನಾಮಿನೇಷನ್ 1843ರಲ್ಲಿ ವಿಫಲವಾಗುತ್ತದೆ. 1848ರಲ್ಲಿ ಮರುಪ್ರಯತ್ನದಲ್ಲಿ ವಿಫಲರಾಗುತ್ತಾರೆ. 1849ರಲ್ಲಿ ಲ್ಯಾಂಡ್ ಆಫೀಸರ್ ಪದವಿಗೂ ರಿಜೆಕ್ಷನ್ ಅನುಭವಿಸುತ್ತಾರೆ. 1854ರಲ್ಲಿ ಸೆನೆಟ್ ಚುನಾವಣೆಯಲ್ಲಿ ಸೋಲು ಕಾಣುತ್ತಾರೆ. 1856ರಲ್ಲಿ ವೈಸ್ ಪ್ರೆಸಿಡೆಂಟ್ ಹುದ್ದೆಗೆ ನಾಮಿನೇಷನ್ ಹಂತದ ಸೋಲು ಕಾಣುತ್ತಾರೆ. ಮತ್ತೆ
1858ರಲ್ಲಿ ಸೆನೆಟರ್ ಚುನಾವಣೆಯಲ್ಲಿ ಕೂಡ ಸೋಲುತ್ತಾರೆ.

ಕಟ್ಟಕಡೆಗೆ 1860ರಲ್ಲಿ ಅಮೆರಿಕದ ಪ್ರೆಸಿಡೆಂಟ್ ಹುದ್ದೆಗೆ ಗೆದ್ದು ಬರುತ್ತಾರೆ. ಅಬ್ಬಾ ಅದೇನು ಪ್ರಯಾಣ! ಲಿಂಕನ್ ಅವರ ಜೀವನದ ಟೈಮ್‌ಲೈನ್ ಗಮನಿಸಿ ನೋಡಿ, ಅಲ್ಲಿ ಬಹುತೇಕ ಸೋಲುಗಳಿವೆ, ಇನ್ ಫ್ಯಾಕ್ಟ್ ಸೋಲುಗಳ ಪಟ್ಟಿಯೇ ದೊಡ್ಡದು. ತಮ್ಮ ಸೋಲಿನಿಂದ ಹತಾಶರಾಗಿದ್ದರೆ ಅವರು ಅಮೆರಿಕ ದೇಶದ ಪ್ರೆಸಿಡೆಂಟ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಅವರು ‘ಗಿವ್ -ಅಪ್’ ಮಾಡಿದ್ದರೆ ಇಂದಿಗೆ ಅವರನ್ನು ನಾವು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಗೆಲುವಿನ ಹಿಂದೆ ಸೋಲು ಸದಾ ಹೊಂಚುಹಾಕಿ ಕಾಯುತ್ತಿರುತ್ತದೆ. ಗೆಲುವು ಕೂಡ ಸೋಲಿನ ಹಿಂದೆ ಇದ್ದೇ ಇರುತ್ತದೆ. ಈ ಸತ್ಯವನ್ನು ನಾವು ತಿಳಿದುಕೊಂಡರೆ ಬದುಕು ಸುಂದರ.

ಇನ್ನಷ್ಟು ಸಾಧಕರ ಸೋಲಿನ ಪಟ್ಟಿ ನೀಡುವೆ. ಇದರ ಉದ್ದೇಶವಿಷ್ಟೇ, ಸೋಲು ಕೇವಲ ನಮಗೆ ಮಾತ್ರವಲ್ಲ; ಗೆದ್ದವರು, ಸಾಧಕರು ಎಂದು ಇಂದಿಗೆ ನಾವು ಯಾರನ್ನು ಕರೆಯುತ್ತೇವೆಯೋ ಅವರನ್ನು ಕೂಡ ಸೋಲು ಬಿಟ್ಟಿಲ್ಲ. ಗೆಲುವು ಮತ್ತು ಸೋಲು ಎರಡೂ ಅಂತಿಮ ನಿಲ್ದಾಣವಲ್ಲ. ಬದುಕು ಅದೊಂದು ಪ್ರಯಾಣ.

೧) ಹೆಸರಾಂತ ಬಾಸ್ಕೆಟ್‌ಬಾಲ್ ಆಟಗಾರ ಮೈಕಲ್ ಜೋರ್ಡನ್ ತನ್ನ ಹೈಸ್ಕೂಲ್ ಟೀಮ್‌ಗೆ ಸೆಲೆಕ್ಟ್ ಆಗುವುದರಲ್ಲಿ
ವಿಫಲನಾಗಿದ್ದ.
೨) ಹೆಸರಾಂತ ಚಲನಚಿತ್ರ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಒಂದಲ್ಲ ಎರಡಲ್ಲ ಮೂರು ಬಾರಿ ಫಿಲಂ ಸ್ಕೂಲ್‌ನಲ್ಲಿ ಪ್ರವೇಶ ಪಡೆಯಲು ವಿಫಲನಾಗಿದ್ದ.
೩) ವಾಲ್ಟ್ ಡಿಸ್ನಿ ಕಥೆ ಇನ್ನೂ ಕೌತುಕದ್ದು, ಈತನಿಗೆ ಇಮ್ಯಾಜಿನೇಶನ್ ಕೊರತೆಯಿದೆ ಎನ್ನುವ ಕಾರಣ ಕೊಟ್ಟು ಈತ ಕೆಲಸ ಮಾಡುತ್ತಿದ್ದ ಪತ್ರಿಕೆ ಕೆಲಸದಿಂದ ತೆಗೆದುಹಾಕಿರುತ್ತದೆ. ನಂತರ ಈತನ ಇಮ್ಯಾಜಿನೇಶನ್‌ನಿಂದ ಮಿಕ್ಕಿ ಮೌಸ್ ಸೃಷ್ಟಿಯಾದದ್ದು, ಜಾಗತಿಕ ಮನ್ನಣೆ ಗಳಿಸಿದ್ದು ಇಂದಿಗೆ ಇತಿಹಾಸ.

೪) ಜಾಗತಿಕ ಮನ್ನಣೆ ಪಡೆದಿರುವ ಆಲ್ಬರ್ಟ್ ಐನ್‌ಸ್ಟೀನ್ ಎನ್ನುವ ವಿಜ್ಞಾನಿಯನ್ನು ಶಾಲೆಯಿಂದ ಹೊರದಬ್ಬ ಲಾಗಿತ್ತು. ಓದಿನಲ್ಲಿ ಹಿಂದೆ ಬಿದ್ದಿದ್ದಾನೆ, ಗ್ರಹಣಶಕ್ತಿ ಕಡಿಮೆ ಎನ್ನುವ ಕಾರಣವನ್ನು ಅದಕ್ಕೆ ನೀಡಲಾಗಿತ್ತು.
೫) ಜಗದ್ವಿಖ್ಯಾತ ಹ್ಯಾರಿ ಪಾಟರ್ ಕಥೆಯನ್ನು ಬರೆಯುವಾಗ ಜೆ.ಕೆ.ರೋಲಿಂಗ್ ವಿಚ್ಛೇದಿತ ಮಹಿಳೆ; ಆಕೆಯು ಮಾನಸಿಕವಾಗಿ, ದೈಹಿಕವಾಗಿ ಬೆ ಆಗಿರದ ದಿನಗಳವು. ಕೈಯಲ್ಲಿ ಪುಡಿಗಾಸು ಇರದ ಕಾರಣ ಸರಕಾರ ನಡೆಸುವ ಸೋಷಿಯಲ್ ವೆಲ್ ಫೇರ್ ಕಿಚನ್‌ನಲ್ಲಿ ಊಟ-ತಿಂಡಿಯನ್ನು ಮಾಡುತ್ತಿದ್ದರು.

೬) ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಓಪ್ರಾ ವಿನ್- ಎಂಬ ಟಿವಿ ನಿರೂಪಕಿಯನ್ನು, ‘ಈಕೆ ಈ ಜಾಗಕ್ಕೆ ಸೂಕ್ತವಲ್ಲ’ ಎಂದು ನಿರಾಕರಿಸಲಾಗಿತ್ತು.

ಹೀಗೆ ಸೋಲುಗಳನ್ನು ಗೆಲುವಿನ ಹಾರವನ್ನಾಗಿ ಬದಲಾಯಿಸಿಕೊಂಡ ಮಹನೀಯರ, ಮಹಿಳೆಯರ ಸಂಖ್ಯೆ ಅಸಂಖ್ಯ. ಇವರೆಲ್ಲರಲ್ಲೂ ಇದ್ದ ಒಂದು ಕಾಮನ್ ಫ್ಯಾಕ್ಟರ್ ಏನು ಎನ್ನುವುದನ್ನು ಈ ವೇಳೆಗೆ ಬುದ್ಧಿವಂತ ಓದುಗ ಗ್ರಹಿಸಿರುತ್ತಾನೆ. ಇವರಾರೂ ಸೋಲಿಗೆ ಹೆದರಲಿಲ್ಲ, ಮಾಡುತ್ತಿದ್ದ ಕೆಲಸವನ್ನು ಬಿಡಲಿಲ್ಲ. ‘ಗಿವ್-ಅಪ್’ ಮಾಡುವುದು ಅತ್ಯಂತ ಸುಲಭದ ಮಾರ್ಗ. ಸೋಲಿಗೆ ತಲೆ ತಗ್ಗಿಸದೆ ನಿಂತು ಹೋರಾಡುವುದು ಕಷ್ಟದ ಕೆಲಸ. ಇವರೆಲ್ಲರೂ ಕಷ್ಟದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡವರು.

ಹೋಗುವ ಮುನ್ನ: ಸೋಲಿಗಿಂತ ಸೋಲಿನ ಭಯ ದೊಡ್ಡದು. ಬಹುತೇಕ ಸಮಯ ಆ ಭಯವೇ ಸೋಲಿಗೆ ಕಾರಣ. ಎಡಿಸನ್ ಮನಸ್ಥಿತಿ ನಮ್ಮದಾಗಿರಲಿ. ನೂರು ಬಾರಿ ಸೋತೆ ಎನ್ನುವುದಕ್ಕಿಂತ ಗೆಲುವಿನ ದಾರಿ ಹುಡುಕುವ ನೂರು ಪ್ರಯತ್ನವನ್ನು ಮಾಡಿದೆ ಎನ್ನುವ ಮನೋಭಾವ ಬಹಳಷ್ಟು ಬದಲಾವಣೆಗೆ ಕಾರಣವಾಗಬಲ್ಲದು. ಮಾಡುವ ಕೆಲಸದ ಮೇಲಿನ ನಂಬಿಕೆ ಮತ್ತು ‘ನೆವರ್ ಗಿವ್-ಅಪ್’ ಮನಸ್ಥಿತಿ ಬೆಳೆಸಿಕೊಳ್ಳುವುದು ಅತಿ ಮುಖ್ಯ. ಇದನ್ನೇ ‘ಎಡಿಸನ್ ಮನಸ್ಥಿತಿ’ ಎನ್ನುತ್ತಾರೆ.

ನಮ್ಮ ಹುಟ್ಟು, ಪರಿಸರ, ವಿದ್ಯಾಭ್ಯಾಸ, ಅನುಭವಗಳು ನಾವ್ಯಾರು ಎನ್ನುವುದನ್ನು ಬಹುಪಾಲು ನಿರ್ಧರಿಸುತ್ತವೆ. ಆದರೆ ಈ ವಿಶ್ವದಲ್ಲಿ ಯಾವುದನ್ನೂ ‘ಇದಮಿತ್ಥಂ’ ಎಂದು ಹೇಳಲಾಗುವುದಿಲ್ಲ. ಪರಿಸರ ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದೇಶದಲ್ಲಿ, ಜಗತ್ತಿನಲ್ಲಿರುವ ಎಲ್ಲಾ ಭಯಗಳ ಜತೆಗೆ ಇನ್ನೊಂದು ಭಯ ಕೂಡ ಇದೆ. ಅದೇ ಸಮಾಜದ ಭಯ! ಟೀಕಾಕಾರರ ಭಯ. ನನ್ನ ಬಗ್ಗೆ ಯಾರೇನು ಅಂದುಕೊಳ್ಳುತ್ತಾರೆ ಎನ್ನುವ ಭಯ. ಅವರಿವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಎನ್ನುವುದಕ್ಕಿಂತ ನಾವು ನಮ್ಮ ಬಗ್ಗೆ ಏನಂದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ನೆನಪಿರಲಿ- ಕೊನೆಗೂ ಚರಿತ್ರೆಯಲ್ಲಿ ಸಾಧಕನ ಹೆಸರು ಮಾತ್ರ ಉಳಿದುಕೊಳ್ಳುತ್ತದೆ. ಟೀಕಾಕಾರರ ಹೆಸರು ಎಲ್ಲಿಯೂ ದಾಖಲಾಗುವುದಿಲ್ಲ.

ಇದನ್ನೂ ಓದಿ: Rangaswamy Mookanahalli Column: ಜಾಗತಿಕವಾಗಿ ತೈಲ ಬೆಲೆ ಕುಸಿದರೂ ಅದರ ಲಾಭ ಮಾತ್ರ ನಮಗಿಲ್ಲ!