Saturday, 23rd November 2024

IND vs SA T20I: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಕ್ಷ್ಮಣ್‌ ಕೋಚ್‌

ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20(IND vs SA T20I) ಸರಣಿಗೆ ಈಗಾಗಲೇ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಇದೀಗ ನಾಲ್ಕು ಪಂದ್ಯಗಳ ಈ ಸರಣಿಗೆ ವಿವಿಎಸ್‌ ಲಕ್ಷ್ಮಣ್‌(VVS Laxman) ಅವರನ್ನು ಕೋಚ್‌ ಆಗಿ ನೇಮಕ ಮಾಡಲಾಗಿದೆ. ಇತ್ತಂಡಗಳ ನಡುವಣ ಸರಣಿ ನವೆಂಬರ್‌ 8 ರಿಂದ 15ರ ತನಕ ನಡೆಯಲಿವೆ.

ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌(Gautam Gambhir) ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳುವ ಕಾರಣ ಲಕ್ಷ್ಮಣ್‌ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಕೋಚ್‌ ಆಗಿ ನೇಮಿಸಲಾಗಿದೆ. ಈ ಹಿಂದೆ ದ್ರಾವಿಡ್‌ ಕೋಚ್‌ ಆಗಿದ್ದಾಗಲೂ ಲಕ್ಷ್ಮಣ್‌ ಹಲವು ಬಾರಿ ಹಂಗಾಮಿ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.  ಇವರ ಮಾರ್ಗದರ್ಶನದಲ್ಲೇ ಅಂಡರ್ 19 ವಿಶ್ವ ಕಪ್, ಕಳೆದ ವರ್ಷ ನಡೆದಿದ್ದ ಏಷ್ಯನ್​ ಗೇಮ್ಸ್​ನಲ್ಲಿ(Asian Games 2023) ಭಾರತ ಪುರುಷರ ತಂಡ ಐತಿಹಾಸಿಕ ಚಿನ್ನದ ಪದಕ ಕೂಡ ಜಯಿಸಿತ್ತು. ಪ್ರಸ್ತುತ ಅವರು ಎನ್‌ಸಿಎ ಅಧ್ಯಕ್ಷರಾಗಿದ್ದಾರೆ. ಗಂಭೀರ್‌ಗೂ ಮುನ್ನ ಬಿಸಿಸಿಐ ಲಕ್ಷ್ಮಣ್‌ ಅವರನ್ನು ಭಾರತ ತಂಡದ ಕೋಚ್‌ ಮಾಡಲು ಮುಂದಾಗಿತ್ತು. ಆದರೆ ಅವರು ನಿರಾಸಕ್ತಿ ತೋರಿದ್ದರು.

ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ವೈಶಾಖ್‌ ಇದೀಗ ಟೀಮ್‌ ಇಂಡಿಯಾ ಪರ ಪದಾರ್ಪಣ ಪಂದ್ಯವನ್ನಾಡುವ ಕಾತರದಲ್ಲಿದ್ದಾರೆ.

ಇದನ್ನೂ ಓದಿ IND vs NZ: ದುಬಾರಿ ವೇತನ ವೇಸ್ಟ್‌; ಗಂಭೀರ್‌ ವಿರುದ್ಧ ಟೀಕೆಗಳ ಸುರಿಮಳೆ

ಭಾರತ ತಂಡ

ಸೂರ್ಯಕುಮಾರ್‌ ಯಾದವ್‌ (ನಾಯಕ), ಅಭಿಷೇಕ್‌ ಶರ್ಮ, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ರಮಣ್‌ದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯಿ, ಅರ್ಷದೀಪ್‌ ಸಿಂಗ್‌, ವಿಜಯ್‌ಕುಮಾರ್‌ ವೈಶಾಖ್‌, ಆವೇಶ್‌ ಖಾನ್‌, ಯಶ್‌ ದಯಾಳ್‌.

ಆಸೀಸ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿ ನವೆಂಬರ್​ 22ರಂದು ಶುರುವಾಗಲಿದ್ದು, ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದೆ. 2ನೇ ಟೆಸ್ಟ್​ ಡಿಸೆಂಬರ್​ 6ರಿಂದ 10ರವರೆಗೆ ಅಡಿಲೇಡ್​ನಲ್ಲಿ ನಿಗದಿಯಾಗಿದೆ. 1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ.

ಟೆಸ್ಟ್‌ ಸರಣಿಗೆ ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಸರ್ಫ‌ರಾಜ್‌ ಖಾನ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಪ್ರಸಿದ್ಧ್ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.