Friday, 22nd November 2024

Naim Qassem: ಇಸ್ರೇಲ್‌ ಏರ್‌ಸ್ಟ್ರೈಕ್‌ನಲ್ಲಿ ಹತನಾದ ನಸ್ರಲ್ಲಾನ ಉತ್ತರಾಧಿಕಾರಿಯಾಗಿ ನಯೀಮ್‌ ಕಾಸ್ಸೆಮ್‌ ನೇಮಕ

naim

ಬೈರುತ್‌: ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿ(Israel Airstrike)ಯಲ್ಲಿ ಹತನಾದ ಹೆಜ್ಬುಲ್ಲಾ(Hezbollah) ನಾಯಕ ಹಸನ್‌ ನಸ್ರಲ್ಲಾ(Hassan Nasralla)ನ ‍ಸ್ಥಾನಕ್ಕೆ ನಯೀಮ್‌ ಕಾಸ್ಸೆಮ್‌(Naim Qassem)ನನ್ನು ಹೊಸ ಮುಖ್ಯಸ್ಥನನ್ನಾಗಿ ನೇಮಿಸಿದೆ. ನಸ್ರಲ್ಲಾಗೆ ದೀರ್ಘಕಾಲದ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಖಾಸ್ಸೆಮ್, ಇದೀಗ ಪೂರ್ಣ ಪ್ರಮಾಣದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಕಸ್ಸೆಮ್‌‌ನನ್ನು ಹೆಜ್ಬುಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಹೆಜ್ಬುಲ್ಲಾದ ಶುರಾ ಕೌನ್ಸಿಲ್ ಸಭೆಯಲ್ಲಿ ದೃಢಪಡಿಸಲಾಗಿದೆ. ನಸ್ರಲ್ಲಾನ ಜತೆ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಅಲ್ಲದೇ ನಸ್ರಲ್ಲಾನ ಜತೆಗೂಡಿಕೊಂಡು ಹಲವಾರು ಹೆಜ್ಬುಲ್ಲಾ ಸಂಘಟನೆಯ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಇನ್ನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಸ್ರಲ್ಲಾ ಅಗಲಿದ್ದರೂ ಆತನ ನೀತಿ ಮತ್ತು ಗುತಿಯನ್ನು ಕಾರ್ಯಗತಗೊಳಿಸುವ ಪ್ರತಿಜ್ಞೆಯನ್ನು ಕಸ್ಸೆಮ್‌ ಮಾಡಿದ್ದಾನೆ.

ನೈಮ್ ಕಾಸ್ಸೆಮ್ ಹಿನ್ನೆಲೆ

1991ರಲ್ಲಿ ಹೆಜ್ಬುಲ್ಲಾ ಸಂಘಟನೆ ಸೆಕ್ರೆಟರಿ ಜನರಲ್ ಆಗಿದ್ದ ಅಬ್ಬಾಸ್ ಅಲ್-ಮುಸಾವಿ ಅವರನ್ನು ಡೆಪ್ಯೂಟಿ ಚೀಫ್ ಆಗಿ ನೇಮಿಸಿದಾಗ ನಯಿಮ್ ಕಾಸ್ಸೆಮ್ ಸಂಘಟನೆಗೆ ಸೇರ್ಪಡೆಗೊಂಡಿದ್ದ. 1992ರಲ್ಲಿ ಇಸ್ರೇಲಿ ಹೆಲಿಕಾಪ್ಟರ್ ದಾಳಿಯಿಂದ ಅಲ್-ಮುಸಾವಿಯ ಹತ್ಯೆಯ ನಂತರ, ಖಾಸ್ಸೆಮ್ ಹಸನ್ ನಸ್ರಲ್ಲಾ ನಾಯಕತ್ವದಲ್ಲಿ ಸಂಘಟನೆಯ ಉನ್ನತ ಹುದ್ದೆಯನ್ನು ಪಡೆದಿದ್ದ. ಇನ್ನು ಹೆಜ್ಬುಲ್ಲಾ ಸಂಘಟನೆಯ ಪ್ರಮುಖ ವಕ್ತಾರರಲ್ಲಿ ಒಬ್ಬನಾಗಿದ್ದು, ಹಲವು ಮಾಧ್ಯಮಗಳ ಜತೆ ಉತ್ತಮ ಸಂಪರ್ಕ ಹೊಂದಿದ್ದಾನೆ.

ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ನಸ್ರಲ್ಲಾನನ್ನು ಕೊಲ್ಲಲಾಗಿತ್ತು. ಇದು ಲೆಬನಾನಿನ ಉಗ್ರಗಾಮಿ ಸಂಘಟನೆಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿರುವ ನಸ್ರಲ್ಲಾ ಲೆಬನಾನಿನ ಉಗ್ರಗಾಮಿ ಸಂಘಟನೆಯ ಪರಮೋಚ್ಚ ನಾಯಕನಾಗಿದ್ದ. ಬೈರುತ್‌ನಲ್ಲಿ ಮೇಲೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾಹ್‌ನ ಪುತ್ರಿ ಝೈನಾಬ್ ಕೂಡ ಸಾವನ್ನಪ್ಪಿದ್ದಳು.

ಇದರ ಬೆನ್ನಲ್ಲೇ ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾನ ಉತ್ತಾರಾಧಿಕಾರ ಎಂದೇ ಹೇಳಲಾಗುತ್ತಿದ್ದ ಮತ್ತೊರ್ವ ಹೆಜ್ಬುಲ್ಲಾ ಕಮಾಂಡರ್‌ ಹಶೆಂ ಸಫೀದ್ದೀನ್‌(Hashem Safieddine)ನನ್ನು ಹೊಡೆದುರುಳಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Hashem Safieddine: ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್‌