Friday, 22nd November 2024

Actor Darshan: ದರ್ಶನ್‌ ಮಧ್ಯಂತರ ಜಾಮೀನು ಅರ್ಜಿ; ನಾಳೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

Actor Darshan

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ (Actor Darshan) ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಪೀಠ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಅ.30ಕ್ಕೆ ಕಾಯ್ದಿರಿಸಿದೆ.

ಎಸ್‌ಪಿಪಿ ಪ್ರಸನ್ನಕುಮಾರ್‌ ವಾದ ಮಂಡಿಸಿ, ಆಸಾರಾಮ್‌ ಬಾಪು ಪ್ರಕರಣ ಉಲ್ಲೇಖಿಸಿ ಮಧ್ಯಂತರ ಜಾಮೀನು ಸಿಗಬೇಕು ಎಂದರೆ ಮೆಡಿಕಲ್‌ ಬೋರ್ಡ್‌ನ ಅನುಮತಿ ಬೇಕು. ಚಿಕಿತ್ಸೆಗೆ ಎಷ್ಟು ದಿನ ಬೇಕು ಎಂದು ವೈದ್ಯರು ವರದಿಯಲ್ಲಿ ತಿಳಿಸಿಲ್ಲ. ಎಷ್ಟು ದಿನ ಹಾಗೂ ಯಾವ ಚಿಕಿತ್ಸೆ ಬೇಕು ಎಂದು ಸ್ಪಷ್ಟತೆ ಇಲ್ಲ. ಬೇಕಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿಸಿ, ಎಷ್ಟು ದಿನ ಚಿಕಿತ್ಸೆ ಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದು, ಮಧ್ಯಂತರ ಜಾಮೀನಿನ ಬಗ್ಗೆ ನಿರ್ಧರಿಸಬೇಕು ಎಂದು ತಿಳಿಸಿದರು.

ನಂತರ ದರ್ಶನ್‌ ಪರ ವಕೀಲ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿ, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ 3 ತಿಂಗಳು ಮಧ್ಯಂತರ ಜಾಮೀನು ನೀಡಬೇಕು. ನರಗಳ ತೊಂದರೆ ಇರುವುದರಿಂದ ಕಾಲಿನಲ್ಲಿ ಸ್ಪರ್ಶದ ಸಮಸ್ಯೆಯಾಗಿದೆ. ಇದು ಮೆಡಿಕಲ್‌ ಎಮರ್ಜೆನ್ಸಿಯಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿಸದಿದ್ದರೆ ತೊಂದರೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಚಿಕಿತ್ಸೆ ಕೊಡಿಸಲು ಮಧ್ಯಂತರ ಜಾಮೀನು ಕೊಡಬೇಕು. ಚಿಕಿತ್ಸೆಯ ಬಗ್ಗೆ ಕಾಲಕಾಲಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಬಳಿಕ, ಅರ್ಜಿಯ ಆದೇಶವನ್ನು ನಾಳೆಗೆ ಕೋರ್ಟ್‌ ಕಾಯ್ದಿರಿಸಿದೆ.

ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ಕೋರ್ಟ್‌ಗೆ ಸೋಮವಾರ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಸಮಯ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಇಂದಿಗೆ ಕೋರ್ಟ್‌ ಮುಂದೂಡಿತ್ತು.

ಈ ಸುದ್ದಿಯನ್ನೂ ಓದಿ | Essential Medical: ಪ್ಯಾಲಸ್ತೀನ್‌ಗೆ ಭಾರತದ ಸಹಾಯಹಸ್ತ; 30 ಟನ್ ವೈದ್ಯಕೀಯ ಸಾಮಗ್ರಿ ರವಾನೆ

ಬೆನ್ನು ನೋವು ಹಿನ್ನೆಲೆಯಲ್ಲಿ ದರ್ಶನ್‌ಗೆ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸರಿಯಾಗಿ ರಕ್ತಪರಿಚಲನೆ ಆಗುತ್ತಿಲ್ಲ‌, ಇದರಂದ ಕಿಡ್ನಿಗೆ ಸಮಸ್ಯೆಯಾಗಬಹುದು. ಡಿಸ್ಕ್‌ ಸಮಸ್ಯೆ ಇರುವ ಹಿನ್ನೆಲೆ ತಕ್ಷಣ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇಲ್ಲದಿದ್ದರೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇದೆ ಎಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್‌ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್‌ಗೆ ಜಾಮೀನು ನೀಡಬೇಕು, ಬೆಂಗಳೂರು ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ಹೀಗಾಗಿ ದರ್ಶನ್‌ರನ್ನು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇನ್ನು ದರ್ಶನ್‌ ಆರೋಗ್ಯದ ಬಗ್ಗೆ ವೈದ್ಯಕೀಯ ವರದಿಯನ್ನು ಜೈಲು ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದರು.