Friday, 22nd November 2024

Waqf Board: ವಕ್ಫ್‌ ಆಸ್ತಿ ವಿವಾದ; ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದ ಸಿದ್ದರಾಮಯ್ಯ

Waqf Board

ಬೆಂಗಳೂರು: ಯಾವ ರೈತರನ್ನೂ ತಮ್ಮ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ರೈತರಿಗೆ ನೋಟಿಸ್ (Waqf Board) ನೀಡಲಾಗಿದ್ದರೆ, ಅದನ್ನು ವಾಪಸ್‌ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ವಿಜಯಪುರ, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಕಂದಾಯ ಸಚಿವ ಕೃಷ್ಣಬೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ನೆನ್ನೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ಒಳ ಮೀಸಲಾತಿ ಜಾರಿ ಪರಾಮರ್ಶೆಗದ ಏಕಸದಸ್ಯ ಆಯೋಗ ರಚನೆ

ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಲು ತೀರ್ಮಾನಿಸಲಾಗಿದ್ದು, ಒಳಮೀಸಲಾತಿ ಜಾರಿ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲು ಮೂರು ತಿಂಗಳ ಅವಧಿ ನೀಡಲಾಗುವುದು. ಈಗಾಗಲೇ ನೇಮಕಾತಿಗೆ ಮಾಡಿರುವ ಅಧಿಸೂಚನೆಗಳನ್ನು ಹೊರತುಪಡಿಸಿ, ಏಕ ಸದಸ್ಯ ಸದಸ್ಯ ಆಯೋಗದ ವರದಿ ಬರುವವರೆಗೆ ಎಲ್ಲ ಸರ್ಕಾರಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು: ಜೋಶಿ ಆರೋಪ

ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ: ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಸಾಮಾಜಿಕ ನ್ಯಾಯ ಸುಮ್ ಸುಮ್ನೆ ಬರೋದಿಲ್ಲ. ಇಂಥಾ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಒಳಮೀಸಲಾತಿ ಕುರಿತ ಸಚಿವ ಸಂಪುಟ ನಿರ್ಣಯಕ್ಕಾಗಿ ತಮ್ಮನ್ನು ಅಭಿನಂದಿಸಿದ ಮಾದಿಗ ಸಮುದಾಯದ ರಾಜ್ಯ ಮುಖಂಡರು, ಪ್ರತಿಷ್ಠಿತರು, ಒಳಮೀಸಲಾತಿ ಹೋರಾಟದ ನಾಯಕರು, ಪದಾಧಿಕಾರಿಗಳು ಮತ್ತು ಸಮುದಾಯದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಒಳಮೀಸಲಾತಿಗಾಗಿ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ನಡೆಸಿದೆ. ಈಗ ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲದಿದ್ದರೂ ಶೇ.90 ರಷ್ಟು ಸಮುದಾಯಗಳಿಗೆ ಸಮಾಧಾನ‌ ಆಗುವ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದನ್ನು ನಮ್ಮ‌ ಸರ್ಕಾರ ಮಾಡಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Joe Biden: ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ; ದೀಪ ಬೆಳಗಿ ಬೈಡೆನ್‌ ಭಾವುಕ ನುಡಿ

ಗೃಹ ಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ದಲಿತ ಶಾಸಕರ ಸಭೆಯಲ್ಲಿ, “ಒಳ ಮೀಸಲಾತಿಗೆ ತಮ್ಮ ವಿರೋಧ ಇಲ್ಲ” ಎನ್ನುವ ನಿರ್ಣಯ ಮಾಡಿದ್ದಾಗಿದೆ. ಹೀಗಾಗಿ ಎಲ್ಲರೂ ಒಳಮೀಸಲಾತಿ ಪರವಾಗಿದ್ದಾರೆ.

ತೆಲಂಗಾಣ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ಒಂದು ಆಯೋಗ ರಚನೆ ಮಾಡಿದ್ದಾಗಿದೆ. ನಾನು ತೆಲಂಗಾಣ ಸಿಎಂ ಜತೆಗೂ ಇತ್ತೀಚಿಗೆ ಮೈಸೂರಿನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಕ್ಯಾಬಿನೆಟ್ ನಿರ್ಣಯ ಆಗಿದೆ. ಆದರೆ ಆದೇಶ ಆಗಿಲ್ಲ. ನಮ್ಮ ಕ್ಯಾಬಿನೆಟ್‌ನಲ್ಲೂ ಹಿಂದೊಮ್ಮೆ ಅನೌಪಚಾರಿಕ ಚರ್ಚೆ ಮಾಡಿದ್ದೆ. ನೆನ್ನೆಯ ಕ್ಯಾಬಿನೆಟ್‌ನಲ್ಲಿ ಸಚಿವ ಮಹದೇವಪ್ಪ ಒಳಮೀಸಲಾತಿ ವಿಚಾರ ಪ್ರಸ್ತಾಪಿಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ತಿಮ್ಮಾಪುರ ಅವರು, ಮುನಿಯಪ್ಪ ಅವರು ಎಲ್ಲರೂ ಮಾತನಾಡಿದರು. ಎಲ್ಲರೂ ಒಳ ಮೀಸಲಾತಿಗೆ ಒಪ್ಪಿಕೊಂಡರು. ಯಾರದ್ದೂ ವಿರೋಧ ಇರಲಿಲ್ಲ. ಆದರೆ ಅಗತ್ಯ ಡಾಟಾ ಅಗತ್ಯವಿದೆ ಎನ್ನುವ ಸಂಗತಿ ಕೂಡ ಚರ್ಚೆಗೆ ಬಂದಿದೆ. ಹೀಗಾಗಿ ಆಯೋಗ ರಚನೆ ಮಾಡಿದ್ದೇವೆ. ಆಯೋಗ ಎಲ್ಲ ವರದಿಗಳನ್ನೂ ಅಧ್ಯಯನ ಮಾಡಿ ಅಗತ್ಯ ಅಂಕಿ ಅಂಶ ಸಮೇತ ವರದಿ ನೀಡುತ್ತದೆ. ವರದಿ ಬರುವವರೆಗೂ ಹೊಸದಾಗಿ ಯಾವ ನೇಮಕಾತಿ ನೋಟಿಫಿಕೇಶನ್ ಹೊರಡಿಸುವುದು ಬೇಡ ಎನ್ನುವ ನಿರ್ಣಯ ಆಗಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.

ಬಿಜೆಪಿ ಕೇಂದ್ರದಲ್ಲಿ ಏಕೆ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ?

ಸಮುದಾಯಗಳನ್ನು ಪರಸ್ಪರ ಸುಳ್ಳುಗಳ ಮೂಲಕ ಎತ್ತಿಕಟ್ಟುವ ಬಿಜೆಪಿ ಕೇಂದ್ರದಲ್ಲಿ ಏಕೆ ಎಸ್‌ಸಿಪಿ/ಟಿಎಸ್‌ಪಿ (SCP/TSP) ಕಾಯ್ದೆ ಜಾರಿ ಮಾಡಿಲ್ಲ? ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯಗಳಲ್ಲೂ ನಾವು ಜಾರಿ ಮಾಡಿದ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆಯನ್ನು ಅವರೇಕೆ ಮಾಡಲಿಲ್ಲ ಹೇಳಿ. ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ. ಬಿಜೆಪಿಯ ಯಾವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ರಾಜ್ಯ ಮಾತ್ರ. ಇದು ನನ್ನ ಕಮಿಟ್‌ಮೆಂಟ್. ರಾಜಕಾರಣಕ್ಕಾಗಿ ಇದೆಲ್ಲಾ ಮಾಡಿದ್ದಲ್ಲ. ಇದರ ಮುಂದುವರೆದ ಭಾಗವಾಗಿಯೇ ಒಳಮೀಸಲಾತಿ ಜಾರಿಗೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನೂ ಓದಿ | ANR National Awards 2024: ಸೂಪರ್‌ ಸ್ಟಾರ್‌ ಚಿರಂಜೀವಿಗೆ ANR ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಮಾಜದಲ್ಲಿ ಸಮಾನತೆ ಸುಮ್ನೆ ಬರೋದಿಲ್ಲ. ಈ ರೀತಿ ನಿರ್ಣಯಗಳನ್ನು ತಗೋಬೇಕಾತ್ತೆ. ಹೊಸ ಆಯೋಗದ ವರದಿ ನಿಗದಿತ ಸಮಯದೊಳಗೆ ಬರುವ ನಿರೀಕ್ಷೆ ಇದೆ. ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದರು.