Friday, 22nd November 2024

Shocking: ಮಗ ಮೃತಪಟ್ಟಿರುವುದು ಗೊತ್ತಿಲ್ಲದೆ 4 ದಿನ ಆಹಾರಕ್ಕಾಗಿ ಕಾದು ಕುಳಿತ ಅಂಧ ಪೋಷಕರು ಅಸ್ವಸ್ಥ; ಪೊಲೀಸರಿಂದ ರಕ್ಷಣೆ

Shocking

ಹೈದರಾಬಾದ್‌: ಹಿರಿಯ ಅಂಧ ದಂಪತಿ ತಮ್ಮ 30 ವರ್ಷದ ಪುತ್ರ ಮೃತಪಟ್ಟಿರುವುದನ್ನು ತಿಳಿಯದೆ, ಹಸಿವು, ಬಾಯಾರಿಕೆಯಿಂದ ಬಳಲುತ್ತ, 4 ದಿನಗಳ ಕಾಲ ಮನೆಯೊಳಗೆ ಕಳೆದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ವಿಷಯ ತಿಳಿದ ಪೊಲೀಸರು ಸದ್ಯ ದಂಪತಿಯನ್ನು ರಕ್ಷಿಸಿದ್ದಾರೆ (Shocking).

ತೆಲಂಗಾಣದ ನಾಗೊಳೆಯಲ್ಲಿ ಈ ಘಟನೆ ನಡೆದಿದೆ. ನಾಗೊಳೆಯ ಅಂಧರ ಕಾಲೊನಿಯ ಮನೆಯಲ್ಲಿ ಅಸ್ವಸ್ಥರಾಗಿದ್ದ 60 ವಯಸ್ಸಿನ ಕೆ.ರಮಣ ಹಾಗೂ 65 ವಯಸ್ಸಿನ ಶಾಂತ ಕುಮಾರಿ ಅವರನ್ನು ರಕ್ಷಿಸಲಾಗಿದೆ.

ಘಟನೆಯ ಹಿನ್ನೆಲೆ

ಇವರ ಮನೆಯೊಳಗಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಸೋಮವಾರ (ಅ. 28) ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಪೊಲೀಸರು ಧಾವಿಸಿ ಮನೆಯೊಳಗೆ ಪ್ರವೇಶಿಸಿದಾಗ 30 ವರ್ಷದ ಯುವಕನ ಶವ ಪತ್ತೆಯಾಗಿತ್ತು. ಜತೆಗೆ ಅಂಧ ದಂಪತಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ʼʼಮಲಗಿದ್ದ ಯುವಕ 4-5 ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆʼʼ ಎಂದು ಪ್ರಾಥಮಿಕ ತನಿಖೆ ನಡೆಸಿದ ಬಳಿಕ ನಾಗೊಳೆ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಎ.ಸೂರ್ಯ ನಾಯಕ್‌ ತಿಳಿಸಿದ್ದಾರೆ.

ತಮ್ಮ ಕಿರಿ ಪುತ್ರ ಮೃತಪಟ್ಟಿರುವುದು ತಿಳಿಯದ ಈ ಅಂಧ ದಂಪತಿ ಆಹಾರ, ನೀರು ನೀಡಲು ಪದೇ ಪದೆ ಕರೆಯುತ್ತಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ದುರ್ಬಲ ಧ್ವನಿಯಿಂದ ನೆರೆಹೊರೆಯವರಿಗೆ ಈ ವಿಚಾರ ಗೊತ್ತಾಗಲಿಲ್ಲ. ಸದ್ಯ ಪೊಲೀಸರು ಅವರಿಗೆ ಆಹಾರ ಮತ್ತು ನೀರನ್ನು ನೀಡಿ ಆರೈಕೆ ಮಾಡಿದ್ದಾರೆ. ಹೈದರಾಬಾದ್‌ನ ಮತ್ತೊಂದು ಕಡೆ ವಾಸಿಸುತ್ತಿರುವ ದಂಪತಿಯ ಹಿರಿಯ ಪುತ್ರ ಪ್ರದೀಪ್‌ಗೆ ಪೊಲೀಸರು ಮಾಹಿತಿ ನೀಡಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತನನ್ನು ಈ ದಂಪತಿಯ ಕಿರಿಯ ಮಗ ಪ್ರಮೋದ್ ಎಂದು ಗುರುತಿಸಲಾಗಿದೆ.

4 ದಿನಗಳ ಹಿಂದೆ ಹೆತ್ತವರಿಗೆ ರಾತ್ರಿಯ ಊಟ ನೀಡಿದ ಬಳಿಕ ಮಲಗಿದ್ದ ಪ್ರಮೋದ್‌ ಅಲ್ಲಿಯೇ ಮೃತಪಟ್ಟಿದ್ದರು. ʼʼಮಲಗಿದಲ್ಲೇ ಪ್ರಮೋದ್‌ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೆ ನಿಜವಾದ ಕಾರಣ ತಿಳಿದು ಬಂದಿಲ್ಲ. ಪೋಸ್ಟ್‌ ಮಾರ್ಟಮ್‌ ವರದಿ ಬಳಿಕವೇ ಪ್ರಮೋದ್‌ ಸಾವಿನ ನಿಜವಾದ ಕಾರಣ ಗೊತ್ತಾಗಲಿದೆʼʼ ಎಂದು ಎ.ಸೂರ್ಯ ನಾಯಕ್‌ ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ayushman Bharat : 70 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿಸ್ತರಣೆ; ಯೋಜನೆಯ ವಿವರಗಳು ಇಲ್ಲಿವೆ

ಮನೆ ಕೊಡುವುದಾಗಿ ನಂಬಿಸಿ ಅಂಧ ದಂಪತಿಗೆ 13 ಲಕ್ಷ ರೂ. ವಂಚನೆ

ತುಮಕೂರು: ಮನೆ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬಳು ಅಂಧ ದಂಪತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಪ್ರಕರಣವು ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವಿ ದಿನಗಳ ಹಿಂದೆ ನಡೆದಿತ್ತು. ಅಂಧ ಅಣ್ಣಪ್ಪ ಗಾದ್ರಿ ಹಾಗೂ ಮಮತಾ ವಂಚನೆಗೊಳಗಾದ ದಂಪತಿ. ಶಿಲ್ಪಾ ಎಂಬಾಕೆಯೇ ವಂಚಿಸಿದವಳು. ಮೂಲತಃ ಚಿತ್ರದುರ್ಗದವರಾದ ಅಣ್ಣಪ್ಪ, ಇಲ್ಲಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಣ್ಣಪ್ಪ ಎಸ್‌ಬಿಐ ಬ್ಯಾಂಕ್ ನೌಕರ, ಪತ್ನಿ ಮಮತಾ, ಪಾಲಿಕೆಯ ನೌಕರರಾಗಿದ್ದಾರೆ.