ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಈ ಸಲದ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ (Mann Ki Baat) ಮುಖ್ಯವಾಗಿ ಡಿಜಿಟಲ್ ಅರೆಸ್ಟ್ (Digital Arrest ) ಎಂಬ ಸೈಬರ್ ಕ್ರೈಂ ಪ್ರಕರಣಗಳ ಗಂಭೀರತೆಯ ಬಗ್ಗೆ ವಿವರಿಸಿದ್ದಾರೆ. ದೇಶದ ಜನತೆ ಈ ವಂಚನೆಗೆ ಒಳಗಾಗದಿರುವಂತೆ ಎಚ್ಚರ ವಹಿಸಬೇಕೆಂದು ಕರೆ ನೀಡಿದ್ದಾರೆ.
ಈ ಡಿಜಿಟಲ್ ಅರೆಸ್ಟ್ ಬಗ್ಗೆ ತಿಳಿದುಕೊಳ್ಳದಿದ್ದರೆ, ಸೈಬರ್ ಅಪರಾಧಿಗಳ ( Cybercriminal ) ವಂಚನೆಗೆ ಬಲಿಯಾಗಿ ಬ್ಯಾಂಕ್ ಅಕೌಂಟ್‌ನಲ್ಲಿರುವ ದುಡ್ಡನ್ನು ಕಳೆದುಕೊಳ್ಳುವುದಲ್ಲದೆ, ಮಾನಸಿಕ, ದೈಹಿಕ ಚಿತ್ರ ಹಿಂಸೆಯನ್ನೂ ಅನುಭವಿಸಬೇಕಾಗಿ ಬರಬಹುದು. ನಾನಾ ರಾಜ್ಯಗಳಲ್ಲಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮಾತ್ರವಲ್ಲದೆ, ವೈದ್ಯರು, ಟೆಕ್ಕಿಗಳು, ನಿವೃತ್ತ ಸೇನಾಧಿಕಾರಿಗಳು, ವ್ಯಾಪಾರಿಗಳು, ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರೂ, ನಾನಾ ಪದವಿಗಳನ್ನು ಪಡೆದಿರುವ ಸುಶಿಕ್ಷಿತರು ಕೂಡ ಇಂಥ ಡಿಜಿಟಲ್ ಅರೆಸ್ಟ್‌ಗೀಡಾಗಿ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಯಾರಿಗೂ ಹೇಳಿಕೊಳ್ಳಲಾಗದ ಮಾನಸಿಕ, ದೈಹಿಕ ಹಿಂಸೆಗೀಡಾಗಿದ್ದಾರೆ.
ವಿಜಯಪುರದಲ್ಲಿ ಡಿಜಿಟಲ್ ಅರೆಸ್ಟ್:
ವಿಜಯಪುರದ ನಿವಾಸಿ ಸಂತೋಷ್ ಚೌಧರಿ ಅವರಿಗೆ ಇತ್ತೀಚೆಗೆ ವಂಚಕನೊಬ್ಬ ಮುಂಬಯಿ ಪೊಲೀಸರ ಹೆಸರಿನಲ್ಲಿ ವಿಡಿಯೊ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ. ಆದರೆ ಇಂಥ ಸ್ಕ್ಯಾಮ್‌ಗಳ ಬಗ್ಗೆ ಅರಿವಿದ್ದ ಚೌಧರಿ ಅವರು, ತಕ್ಷಣ ಜಾಗೃತರಾಗಿದ್ದಲ್ಲದೆ, ವಿಡಿಯೊ ಕರೆಯನ್ನು ರೆಕಾರ್ಡ್ ಮಾಡಿದ್ದರು. ಹಾಗೂ ತಮ್ಮ ಆಧಾರ್ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಎಷ್ಟು ಕೇಳಿದರೂ, ವಂಚಕನಿಗೆ ಕೊಟ್ಟಿರಲಿಲ್ಲ. ವಂಚಕ ಥೇಟ್ ಪೊಲೀಸ್ ಅಧಿಕಾರಿಯಂತೆ ಕಾಣಲು ಕ್ಯಾಪ್, ಪದಕ, ಬ್ಯಾಡ್ಜ್ ಸೇರಿದಂತೆ ಸಮ ವಸ್ತ್ರದ ವೇಷವನ್ನು ಹಾಕಿಕೊಂಡಿದ್ದ. ಪೊಲೀಸ್ ಸ್ಟೇಶನ್‌ನಲ್ಲಿ ಇರುವಂತೆಯೇ ಸೆಟ್ ರೆಡಿ ಮಾಡಿದ್ದ. ಆದರೆ ಸಂತೋಷ್ ಚೌಧರಿ ಆತನ ಬಲೆಗೆ ಬಿದ್ದಿರಲಿಲ್ಲ. ಬಳಿಕ ಸ್ಕ್ರೀನ್ ರೆಕಾರ್ಡ್ ಅನ್ನು ಪೊಲೀಸರಿಗೆ ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ವಿಡಿಯೊ ಕ್ಲಿಪ್ಪಿಂಗ್ ಸಹಿತ ಸಮಗ್ರವಾಗಿ ವಿವರಿಸಿದ್ದರು.
ಇನ್ನೊಂದು ಕೇಸ್‌ನಲ್ಲಿ ಇತ್ತೀಚೆಗೆ ಬೆಂಗಳೂರಿನ ಬಹು ರಾಷ್ಟ್ರೀಯ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥೆಯೊಬ್ಬರು ಡಿಜಿಟಲ್ ಅರೆಸ್ಟ್ ಆಗಿ 50 ಲಕ್ಷ ರೂ. ವಂಚನೆಗೀಡಾಗಿದ್ದರು. ಸೈಬರ್ ಕ್ರಿಮಿನಲ್‌ಗಳು ಸ್ಕೈಪ್ ಮೂಲಕ ವಿಡಿಯೊ ಕರೆ ಮಾಡಿದ್ದರು. ಆಧಾರ್ ವಿವರಗಳನ್ನು ಪಡೆದಿದ್ದರು. ನಿಮ್ಮ ಆಧಾರ್ ವಿವರಗಳು ಮಾದಕ ವಸ್ತುಗಳ ಕಳ್ಳ ಸಾಗಣೆಗೆ ಬಳಕೆಯಾಗುತ್ತಿದೆ ಎಂದು ನಂಬಿಸಿದ್ದರು. ಆತಂಕಕ್ಕೀಡಾಗಿದ್ದ ಮಹಿಳೆ 10 ಗಂಟೆಗೂ ಹೆಚ್ಚು ಕಾಲ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಇರುವಂತೆ ಬಲವಂತಪಡಿಸಿದ್ದರು. ಕುಟುಂಬದಿಂದ ದೂರ ಇರುವಂತೆ ಮಾಡಿದ್ದರು. ಈ ವೇಳೆ ಆಕೆಯ ಬ್ಯಾಂಕ್ ಖಾತೆಯಿಂದಲೇ 50 ಲಕ್ಷ ರೂ. ಸಾಲದ ಹಣವನ್ನು ಪಡೆದು, ಲಕ್ಷಾಂತರ ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಇಲ್ಲೂ ವಂಚಕರು ಮುಂಬಯಿ ಪೊಲೀಸ್ ಅಧಿಕಾರಿಗಳ ವೇಷ ಧರಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ, ವಿಜಯಪುರ ನಗರದ ವೈದ್ಯರೊಬ್ಬರಿಗೆ ಖದೀಮರು ವಿಡಿಯೊ ಕರೆ ಮಾಡಿದ್ದರು. ಫೆಡೆಕ್ಸ್ ಕೊರಿಯರ್ ಮೂಲಕ ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿದ್ದೀರಿ ಎಂದು ಹೆದರಿಸಿದ್ದರು. ಹಾಗೂ 54 ಲಕ್ಷ ರೂ.ಗಳನ್ನು ಲಪಟಾಯಿಸಿದ್ದರು. ಮುಂಬಯಿನ ನಾರ್ಕೋಟಿಕ್ಸ್ ಬ್ರಾಂಚ್‌ನ ಅಧಿಕಾರಿಗಳೆಂದು ನಂಬಿಸಿ ವಂಚಿಸಿದ್ದರು.
ಹಿರಿಯ ಉದ್ಯಮಿ ಓಸ್ವಾಲ್‌ಗೆ 7 ಕೋಟಿ ರೂ. ವಂಚನೆ
ಲೀಡಿಂಗ್ ಟೆಕ್ಸ್‌ಟೈಲ್ ಉದ್ಯಮಿ ಹಾಗೂ ವರ್ಧಮಾನ್ ಗ್ರೂಪ್‌ನ ಚೇರ್ಮನ್ ಎಸ್‌ಪಿ ಓಸ್ವಾಲ್ ಅವರಿಗೆ 82 ವರ್ಷ ವಯಸ್ಸು. ಸೈಬರ್ ಕ್ರಿಮಿನಲ್‌ಗಳ ಗ್ಯಾಂಗ್ ಇವರನ್ನು ಹೇಗೆ ಯಾಮಾರಿಸಿತ್ತೆಂದರೆ ಅಚ್ಚರಿಯಾದೀತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನಾನಾ ಸರ್ಕಾರಿ ಇಲಾಖಾ ಮುಖ್ಯಸ್ಥರ ಸೋಗಿನಲ್ಲಿ ಎಸ್‌ಪಿ ಓಸ್ವಾಲ್ ಅವರನ್ನು ಬೆದರಿಸಿ ಹಲವು ಬ್ಯಾಂಕ್ ಖಾತೆಗಳಿಂದ 7 ಕೋಟಿ ರೂ.ಗಳನ್ನು ವಂಚಿಸಲಾಗಿತ್ತು. ಓಸ್ವಾಲ್ ಎರಡು ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿದ್ದರು. ಪೊಲೀಸರು ಈ ಕೇಸಿನಲ್ಲಿ 5 ಕೋಟಿ ರೂ.ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಖದೀಮರು ವರ್ಚುವಲ್ ಕೋರ್ಟ್ ರೂಮ್ ಕ್ರಿಯೇಟ್ ಮಾಡಿದ್ದರು. ನಕಲಿ ನೋಟಿಸ್‌ಗಳನ್ನು ಕಳಿಸಿದ್ದರು.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಟೊಮಿಕ್ ಎನರ್ಜಿ ಡಿಪಾರ್ಟ್‌ಮೆಂಟ್‌ನ ವಿಜ್ಞಾನಿಯೊಬ್ಬರನ್ನು ವಂಚಕರು ಡಿಜಿಟಲ್ ಅರೆಸ್ಟ್ ಮಾಡಿದ್ದರು. ಬಳಿಕ 71 ಲಕ್ಷ ರೂ.ಗಳನ್ನು ದೋಚಿದ್ದರು. ಸಿಬಿಐ ಮತ್ತು ಟ್ರಾಯ್ ಅಧಿಕಾರಿಗಳ ಸೋಗಿನಲ್ಲಿ ಅವರನ್ನು ವಂಚಿಸಲಾಗಿತ್ತು.
ನೋಯ್ಡಾದಲ್ಲಿ 79 ವರ್ಷ ವಯಸ್ಸಿನ ನಿವೃತ್ತ ಮೇಜರ್ ಜನರಲ್ ಒಬ್ಬರನ್ನು 5 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಅವರಿಂದ 2 ಕೋಟಿ ರೂ.ಗಳನ್ನು ವಂಚಕರು ಲೂಟಿ ಹೊಡೆದಿದ್ದರು. ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಕ್ರಿಮಿನಲ್‌ಗಳು ಯಾಮಾರಿಸಿದ್ದರು. ಇದನ್ನು ನಂಬಿದ ಮೇಜರ್ ಜನರಲ್, ಆರ್ ಟಿಜಿಎಸ್ ಮೂಲಕ 2 ಕೋಟಿ ರೂ.ಗಳನ್ನು ಒಂದೇ ಸಲ ವಂಚಕರ ಖಾತೆಗೆ ವರ್ಗಾಯಿಸಿದ್ದರು. ಬ್ಯಾಂಕ್ ಮ್ಯಾನೇಜರ್‌ಗೆ ಸಂದೇಹ ಬಂದು ಮೆಸೇಜ್ ಕಳಿಸಿದ್ದರೂ, ಮೇಜರ್ ಜನರಲ್ ಅದನ್ನು ನಿರ್ಲಕ್ಷಿಸಿದ್ದರು. ನೋಯ್ಡಾದಲ್ಲಿ ಪೂಜಾ ಗೋಯೆಲ್ ಎಂಬ ವೈದ್ಯೆಯೊಬ್ಬರಿಗೆ ವಿಡಿಯೊ ಕರೆ ಮಾಡಿದ್ದ ಕ್ರಿಮಿನಲ್‌ಗಳು, ನಿಮ್ಮ ಮೊಬೈಲ್ ನಂಬರ್ ಮೂಲಕ ಅಶ್ಲೀಲ ವಿಡಿಯೊಗಳು ಹರಿದಾಡುತ್ತಿವೆ ಎಂದು ಯಾಮಾರಿಸಿದ್ದರು. ಪೂಜಾ ಗೋಯೆಲ್ 60 ಲಕ್ಷ ರೂ. ವಂಚನೆಗೀಡಾಗಿದ್ದರು.
ಹೈದರಾಬಾದ್‌ನಲ್ಲಿ ಇತ್ತೀಚೆಗೆ 44 ವರ್ಷ ವಯಸ್ಸಿನ ಟೆಕ್ಕಿಯೊಬ್ಬರು ಸೈಬರ್ ಕ್ರಿಮಿನಲ್‌ಗಳಿಂದ 30 ಗಂಟೆಗಳ ಸುದೀರ್ಘ ಕಾಲ ಡಿಜಿಟಲ್ ಅರೆಸ್ಟ್ ಆಗಿದ್ದರು. ಮನೆಯಿಂದ 15 ಕಿ.ಮೀ ದೂರದಲ್ಲಿದ್ದ ಲಾಡ್ಜ್‌ವೊಂದರಲ್ಲಿ ತಂಗಿದ್ದ ಟೆಕ್ಕಿಗೆ ಶುಕ್ರವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ ತನಕ ಪಾತಕಿಗಳು ವಿಡಿಯೊ ಕರೆ ಮೂಲಕ ಕಾಡಿದ್ದರು. ಹೇಗೋ ತಪ್ಪಿಸಿಕೊಂಡ ಅವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಆರಂಭದಲ್ಲಿ ಫೆಡೆಕ್ಸ್ ಕೊರಿಯರ್ ಏಜೆಂಟರ ಪೋಸಿನಲ್ಲಿ ಟೆಕ್ಸ್ಟ್ ಮೆಸೇಜ್ ಕಳಿಸಿದ್ದ ಕ್ರಿಮಿನಲ್‌ಗಳು ಬಳಿಕ ಮುಂಬಯಿ ಪೊಲೀಸರೆಂದು ಯಾಮಾರಿಸಿದ್ದರು. ಆಧಾರ್ ಸಂಖ್ಯೆಯು ಅಕ್ರಮ ಹಣ ವರ್ಗಾವಣೆಗಳಲ್ಲಿ ಬಳಕೆಯಾಗುತ್ತಿದೆ ಎಂದು ವಂಚಿಸಿದ್ದರು. ಬಳಿಕ ವಾಟ್ಸ್ ಆಪ್ ವಿಡಿಯೊ ಕರೆ ಮಾಡಿ, ಕುಟುಂಬದಿಂದ ದೂರ ಇರುವಂತೆ ಸೂಚಿಸಿದ್ದರು. ಆತಂಕದಿಂದ ಟೆಕ್ಕಿ ಮನೆ ಬಿಟ್ಟು ಲಾಡ್ಜ್‌ಗೆ ಸೇರಿದ್ದ. ಭಾನುವಾರ ಬೆಳಗ್ಗೆ ವಿಡಿಯೊ ಕರೆ ಹಠಾತ್ ಸ್ಥಗಿತವಾಯಿತು. ಬಳಿಕ ಪೊಲೀಸರಿಗೆ ದೂರು ನೀಡಿದ ಟೆಕ್ಕಿ ಪಾರಾಗಿದ್ದ.
ಹಾಗಾದರೆ ಏನಿದು ಡಿಜಿಟಲ್ ಅರೆಸ್ಟ್ ?
ಇದೊಂದು ಹೊಸ ಸೈಬರ್ ಫ್ರಾಡ್. ಇಲ್ಲಿ ವಂಚಕರು ಸ್ಕೈಪೆ ಅಥವಾ ಇತರ ವಿಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ತಮ್ಮನ್ನು ಪೊಲೀಸ್ ಅಧಿಕಾರಿಗಳು, ನಾರ್ಕೋಟಿಕ್ಸ್, ಟ್ರಾಯ್, ಸಿಬಿಐ, ಆರ್‌ಬಿಐ, ಕಸ್ಟಮ್ಸ್ ಅಥವಾ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುತ್ತಾರೆ.
ಬಳಿಕ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬಂದಿದ್ದು, ಅದರಲ್ಲಿ ಡ್ರಗ್ಸ್ ಇದೆ ಎಂದು ಹೇಳುತ್ತಾರೆ. ಕೆಲವರಿಗೆ ನಿಮ್ಮ ಮೊವೈಲ್ ನಂಬರ್ ಮೂಲಕ ಅಶ್ಲೀಲ ವಿಡಿಯೊಗಳು ಸಿಕ್ಕಿವೆ ಎನ್ನುತ್ತಾರೆ. ಇನ್ನು ಕೆಲವರಿಗೆ ನಿಮ್ಮ ಬಳಿ ಅಕ್ರಮವಾಗಿ ಗಳಿಸಿದ ಆದಾಯ ಇದೆ ಎಂಬಿತ್ಯಾದಿಯಾಗಿ ಆರೋಪಿಸುತ್ತಾರೆ. ದಿನ ಕಳೆದಂತೆ ಹೊಸ ಹೊಸ ವರಸೆಗಳಿಂದ ಸಂತ್ರಸ್ತರನ್ನು ತಮ್ಮ ವಂಚನೆಯ ಬಲೆಗೆ ಬೀಳಿಸಲು ಯತ್ನಿಸುತ್ತಾರೆ.
ನೀವು ನಮಗೆ ಬೇಕಿರುವ ವಿವರಗಳನ್ನು ತಕ್ಷಣ ಕೊಡದಿದ್ದರೆ ಅರೆಸ್ಟ್ ಮಾಡಲೇಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಬಳಿಕ ವಿಷಯವನ್ನು ಗೌಪ್ಯವಾಗಿಟ್ಟುಕೊಳ್ಳಬೇಕಿರುವುದರಿಂದ ಕುಟುಂಬದ ಇತರ ಸದಸ್ಯರಿಂದ ದೂರ ಇರುವಂತೆ ಬೆದರಿಸುತ್ತಾರೆ. ಮನೆಯ ಕೊಠಡಿಯಲ್ಲಿ ಯಾರಿಗೂ ಗೊತ್ತಾಗದಿರುವಂತೆ ಏಕಾಂಗಿಯಾಗಿ ವಿಡಿಯೊ ಕರೆಯಲ್ಲಿ ಡಿಜಿಟಲ್ ವಿಚಾರಣೆ ನಡೆಸುತ್ತಾರೆ. ಅಧಾರ್, ಬ್ಯಾಂಕ್ ಅಕೌಂಟ್ ಪಿನ್ ಮೊದಲಾದ ಗೌಪ್ಯ ವಿವರಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಬಳಸಿ ಹಣ ದೋಚುತ್ತಾರೆ. ಅಮಾಯಕರನ್ನು ವಿಡಿಯೊ ಕರೆಯಲ್ಲಿ ನಂಬಿಸಲು ನಿಜವಾದ ಪೊಲೀಸ್ ಸ್ಟೇಶನ್ ಅಥವಾ ಸರ್ಕಾರಿ ಕಚೇರಿಯಂತೆ ಸೆಟ್ ಮಾಡಿರುತ್ತಾರೆ. ಸಮ ವಸ್ತ್ರದಲ್ಲಿರುತ್ತಾರೆ. ಹಿನ್ನೆಲೆಯಲ್ಲಿ ಪೊಲೀಸ್ ವಾಹನಗಳ ಸೈರನ್ ಹಾಕುತ್ತಾರೆ. ನಕಲಿ ಐಡಿಗಳನ್ನು ತೋರಿಸುತ್ತಾರೆ. ಕಳೆದ ಫೆಬ್ರವರಿಯಲ್ಲಿ ಲೋಕಸಭೆಗೆ ತಿಳಿಸಿದ ಪ್ರಕಾರ, 2023ರಲ್ಲಿ 11,28,265 ಹಣಕಾಸು ಸೈಬರ್ ವಂಚನೆ ಕುರಿತ ದೂರುಗಳು ದಾಖಲಾಗಿವೆ. ಇವುಗಳಲ್ಲಿ ಅನೇಕ ಡಿಜಿಟಲ್ ಅರೆಸ್ಟ್ ಕೇಸ್‌ಗಳೂ ಇವೆ.
ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಹೇಳಿದ್ದೇನು?
ವಿಜಯಪುರದಲ್ಲಿ ನಡೆದ ಡಿಜಿಟಲ್ ಅರೆಸ್ಟ್ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿಯವರು, ಇಂಥ ಖತರ್‌ನಾಕ್ ವಂಚನೆಗಳ ಬಗ್ಗೆ ಸಾರ್ವಜನಿಕರು ಅರಿವು ಹೊಂದಿರಬೇಕು. ಯಾವುದೇ ಪೊಲೀಸ್, ಸಿಬಿಐ, ಆರ್‌ಬಿಐ ಇತ್ಯಾದಿ ಸಂಸ್ಥೆಯ ಅಧಿಕಾರಿಗಳು ವಿಡಿಯೊ ಕರೆ, ಟೆಕ್ಸ್ಟ್ ಮೆಸೇಜ್ ಮೂಲಕ ತನಿಖೆ ನಡೆಸುವುದಿಲ್ಲ. ಅರೆಸ್ಟ್ ಮಾಡುವ ಬೆದರಿಕೆ ಹಾಕುವುದಿಲ್ಲ. ಹಣ ಕೇಳುವುದಿಲ್ಲ. ಆದ್ದರಿಂದ ಇಂಥ ಕರೆಗಳು ಬಂದಾಗ ಹೆದರಬೇಡಿ. ಯಾರೂ ಇಂಥ ವಿಡಿಯೊ, ಫೋನ್ ಕರೆ ಮಾಡುವುದಿಲ್ಲ ಎಂದು ಗೊತ್ತಿದ್ದರೆ ಸಾಕು. ಬಳಿಕ ಸ್ಕ್ರೀನ್ ರೆಕಾರ್ಡ್ ಮಾಡಿ. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಕ್ಕೆ ಕರೆ ಮಾಡಿ. ಪೊಲೀಸರಿಗೆ ತಿಳಿಸಿ. Cybercrime.gov.in ವೆಬ್ ಸೈಟ್‌ನಲ್ಲಿ ತಿಳಿಸಿ. ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯೇ ಇಲ್ಲ. ಅದೊಂದು ವಂಚನೆ ಎಂಬುದನ್ನು ತಿಳಿಯಿರಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Ayushman Bharat : 70 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿಸ್ತರಣೆ; ಯೋಜನೆಯ ವಿವರಗಳು ಇಲ್ಲಿವೆ
ಸೈಬರ್ ವಂಚಕರು ಈಗ ಹಿಂದಿಗಿಂತ ಹೆಚ್ಚು ಹೊಸ ಉಪಾಯಗಳಿಂದ ವಂಚಿಸುತ್ತಿದ್ದಾರೆ. ಇತ್ತೀಚಿನ ಡಿಜಿಟಲ್ ಮತ್ತು ಎಐ ತಂತ್ರಜ್ಞಾನಗಳನ್ನು ದುರ್ಬಳಕೆ ಮಾಡುತ್ತಾರೆ. ವಂಚನೆ ಆಗುವ ತನಕ ಇಂದಿಷ್ಟೂ ಸಂಶಯ ಬರದಂತೆ ವರ್ತಿಸುತ್ತಾರೆ. ಆದ್ದರಿಂದ ಇಂಥ ಕರೆಗಳು ಬಂದಾಗ ತಲ್ಲಣಗೊಳ್ಳಬಾರದು. ಸಾವಧಾನವಾಗಿ ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ಅಪರಿಚಿತ ಇ-ಮೇಲ್ ಲಿಂಕ್‌ಗಳನ್ನು ಕ್ಲಿಕ್ಕಿಸದಿರುವುದು, ಅಪರಿಚಿತರಿಗೆ ಒಟಿಪಿ ಕೊಡದಿರುವುದು, ಅಪರಿಚಿತ ಮೊಬೈಲ್ ಆಪ್‌ಗಳನ್ನು ಡೌನ್ ಲೋಡ್ ಮಅಡದಿರುವುದು ಇಲ್ಲಿ ಮುಖ್ಯ. ಸೈಬರ್ ವಂಚನೆಗಳು ಹೇಗೆ ನಡೆಯುತ್ತವೆ ಎಂಬ ಜಾಗೃತಿ ಸಮಾಜದಲ್ಲಿ ಅತ್ಯವಶ್ಯಕವಾಗಿದೆ.