ಬೆಂಗಳೂರು: ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಕಳೆದ ಬಜೆಟ್ ಯುವಜನರಲ್ಲಿ ಕುಶಲತೆ ವೃದ್ಧಿಸುವ ನಿಟ್ಟಿನಲ್ಲಿ ರೂ.3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಪ್ರಧಾನಮಂತ್ರಿ ಉದ್ಯೋಗ ಮೇಳ (ರೋಜ್ಗಾರ್ ಮೇಳ) ದ 2ನೇ ಹಂತದಲ್ಲಿ ದೇಶದಾದ್ಯಂತ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 51,000 ಯುವಜನರಿಗೆ ದೇಶದ 40 ಸ್ಥಳಗಳಲ್ಲಿ ನೇರ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ನಡೆಯಿತು. ಆನ್ಲೈನ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಪ್ಪತೈದು ಯುವ ಜನರಿಗೆ ನೇಮಕಾತಿ ಪತ್ರ ವಿತರಿಸಿ ಬಳಿಕ , ಮಾತನಾಡಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು: ಜೋಶಿ ಆರೋಪ
ಕೇಂದ್ರ ಸರ್ಕಾರದ ಹನ್ನೆರಡು ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. 2047ನೇ ವರ್ಷಕ್ಕೆ ವಿಕಸಿತ ಭಾರತ್ ಗುರಿಯನ್ನು ಮುಟ್ಟಬೇಕು ಎನ್ನುವ ಛಲದೊಂದಿಗೆ ಮೋದಿ ಅವರು ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಹೆಚ್ಚು ಉತ್ತೇಜನ ಕೊಡುತ್ತಿದ್ದಾರೆ. ಅದಕ್ಕಾಗಿ ಬಜೆಟ್ನಲ್ಲಿ ರೂ.3 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಹಣವೂ ನೇರವಾಗಿ ಎಂಎಸ್ಎಂಇ (MSME) ಗಳಿಗೆ ನೇರವಾಗಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳ ಅಡಿಯಲ್ಲಿ ಮೋದಿ ಅವರು, ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ (PLI) ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ. ಭಾರತವನ್ನು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಸಹಕಾರಿ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಚೆ ಇಲಾಖೆಯನ್ನು ಶ್ಲಾಘಿಸಿದ ಸಚಿವರು, ಮೊದಲ ಹಂತದ ಉದ್ಯೋಗ ಮೇಳದಲ್ಲಿ ಇಲಾಖೆಯು 30,000 ಯುವ ಜನರಿಗೆ ಉದ್ಯೋಗ ನೀಡಿದೆ. ಎರಡನೇ ಹಂತದಲ್ಲಿ 20,000 ಮಂದಿಗೆ ಉದ್ಯೋಗ ನೀಡಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ‘ಕ್ರೊಮ್ಯಾಟಿಕ್ ರಿದಮ್ಸ್’ ವರ್ಣಚಿತ್ರಗಳ ಪ್ರದರ್ಶನ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.