Friday, 22nd November 2024

DCX Systems Share Price: ಬೆಂಗಳೂರು ಮೂಲದ ಡಿಸಿಎಕ್ಸ್ ಸಿಸ್ಟಮ್ಸ್ ಷೇರು ಜಿಗಿತ

DCX Systems Share Price

ಮುಂಬೈ: ಬೆಂಗಳೂರು ಮೂಲದ ಕೇಬಲ್ ತಯಾರಕ ಕಂಪೆನಿ ಡಿಸಿಎಕ್ಸ್ ಸಿಸ್ಟಮ್ಸ್ ಷೇರು (DCX Systems Share Price)ಗಳು ಅ. 29ರ ವಹಿವಾಟಿನಲ್ಲಿ ಸದ್ದು ಮಾಡಿದ್ದು, ಪ್ರತಿ ಷೇರಿಗೆ 322.10 ರೂ. ತಲುಪಿದೆ. ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಗ್ಲೋಬಲ್ ಐಎನ್‌ಸಿ (Lockheed Martin Global Inc)ಯಿಂದ 379.67 ಕೋಟಿ ರೂ. ಮೌಲ್ಯದ ರಫ್ತು ಆರ್ಡರ್‌ ಅನ್ನು ಡಿಸಿಎಕ್ಸ್ ಸಿಸ್ಟಮ್ಸ್‌ನ ಅಂಗಸಂಸ್ಥೆಯಾದ ರಾನಿಯಲ್ ಅಡ್ವಾನ್ಸ್ಡ್ ಸಿಸ್ಟಮ್ಸ್ (Raneal Advanced Systems) ಸ್ವೀಕರಿಸಿದ ನಂತರ ಷೇರಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಕ್ಸ್ ಸಿಸ್ಟಮ್ಸ್ “ನಮ್ಮ ಅಂಗಸಂಸ್ಥೆ ಮೆಸರ್ಸ್ ರಾನಿಯಲ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಅಮೆರಿಕದ ಮೆಸರ್ಸ್ ಲಾಕ್ಹೀಡ್ ಮಾರ್ಟಿನ್ ಗ್ಲೋಬಲ್ ಐಎನ್‌ಸಿಯಿಂದ 45,199,440.00 ಡಾಲರ್‌ (ಸುಮಾರು 379.67 ಕೋಟಿ ರೂ.) ಮೌಲ್ಯದ ರಫ್ತು ಆರ್ಡರ್‌ ಸ್ವೀಕರಿಸಿದೆʼʼ ಎಂದು ತಿಳಿಸಿದೆ.

ಒಪ್ಪಂದದ ಭಾಗವಾಗಿ ಡಿಸಿಎಕ್ಸ್ ಸಿಸ್ಟಮ್ಸ್‌ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಪೂರೈಸಬೇಕಾಗಿದೆ. ಇದಕ್ಕಾಗಿ 12 ತಿಂಗಳಲ್ಲಿ ಕಾಲಾವಕಾಶ ಇದೆ ಎಂದು ಡಿಸಿಎಕ್ಸ್ ಸಿಸ್ಟಮ್ಸ್ ಹೇಳಿದೆ. ಕಳೆದ ತಿಂಗಳು ಕಂಪೆನಿಯು ಇಸ್ರೇಲ್‌ನ ಎಎಲ್‌ಟಿಎ ಸಿಸ್ಟಮ್ಸ್ ಲಿಮಿಟೆಡ್‌ನಿಂದ 18,495,779.10 ಡಾಲರ್ (154.80 ಕೋಟಿ ರೂ.) ಮೌಲ್ಯದ ಆರ್ಡರ್‌ ಸ್ವೀಕರಿಸಿತ್ತು. ಜುಲೈಯಲ್ಲಿ ಎಲೆಕ್ಟ್ರಾನಿಕ್ ಮಾಡ್ಯೂಲ್‌ಗಳ ತಯಾರಿಕೆ ಮತ್ತು ಪೂರೈಕೆಗಾಗಿ ಲಾರ್ಸೆನ್ & ಟೂಬ್ರೊ ಲಿಮಿಟೆಡ್‌ (Larsen & Toubro Limited) 1,250 ಕೋಟಿ ರೂ.ಗಳ ಬೃಹತ್‌ ಆರ್ಡರ್‌ ನೀಡಿತ್ತು.

ಬೆಂಗಳೂರು ಮೂಲ

ಬೆಂಗಳೂರು ಮೂಲದ ಡಿಸಿಎಕ್ಸ್ ಸಿಸ್ಟಮ್ಸ್ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕೇಬಲ್ ಹಾರ್ನೆಸ್‌ಗಳನ್ನು ತಯಾರಿಸುತ್ತಿದೆ. ಕಂಪೆನಿಯ ಉತ್ಪನ್ನಗಳು ಸಿಸ್ಟಮ್ ಇಂಟೆಗ್ರೇಶನ್‌, ರಾಡಾರ್ ವ್ಯವಸ್ಥೆಗಳು, ಸಂವೇದಕಗಳು, ಎಲೆಕ್ಟ್ರಾನಿಕ್ ಯುದ್ಧ ಉಪಕರಣಗಳು, ಕ್ಷಿಪಣಿಗಳು, ಸಂವಹನ ವ್ಯವಸ್ಥೆಗಳು, ರೇಡಿಯೋ ಆವರ್ತನ, ಕೋಆಕ್ಸಿಯಲ್, ಡೇಟಾ ಕೇಬಲ್‌ನಂತಹ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಡಿಸಿಎಕ್ಸ್ ಸಿಸ್ಟಮ್ಸ್ ತಮ್ಮ ಉತ್ಪನ್ನಗಳನ್ನು ದುರಸ್ತಿಗೊಳಿಸುವ ವ್ಯವಸ್ಥೆಯನ್ನೂ ಹೊಂದಿದೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.

ಡಿಸಿಎಕ್ಸ್ ಸಿಸ್ಟಮ್ಸ್‌ನ ಮಾರುಕಟ್ಟೆ ಬಂಡವಾಳೀಕರಣವು 3,587.76 ಕೋಟಿ ರೂ. ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (ಬಿಎಸ್ಇ) ತಿಳಿಸಿದೆ. ಕಂಪೆನಿಯು ಬಿಎಸ್ಇ ಸ್ಮಾಲ್ ಕ್ಯಾಪ್ ವಿಭಾಗದಲ್ಲಿ ಬರುತ್ತದೆ. ಡಿಸಿಎಕ್ಸ್ ಸಿಸ್ಟಮ್ಸ್‌ನ ಪ್ರತಿ ಷೇರಿಗೆ 52 ವಾರಗಳ ಗರಿಷ್ಠ ಮೌಲ್ಯ 451.90 ರೂ. ಮತ್ತು ಕನಿಷ್ಠ 235 ರೂ. ಆಗಿತ್ತು.

ಎಲೆಕ್ಟ್ರಾನಿಕ್ ಉಪ-ವ್ಯವಸ್ಥೆಗಳು ಮತ್ತು ಕೇಬಲ್‌ಗಳ ತಯಾರಿಕೆಯಲ್ಲಿ ದೇಶದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಡಿಸಿಎಕ್ಸ್ ಸಿಸ್ಟಮ್ಸ್‌ ಅನ್ನು 2011 ರಲ್ಲಿ ಸ್ಥಾಪಿಸಲಾಯಿತು. ಕಳೆದ 10 ವರ್ಷಗಳಿಂದ ಡಿಸಿಎಕ್ಸ್ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಇಸ್ರೇಲ್, ಅಮೆರಿಕ, ಕೊರಿಯಾ ಮೊದಲಾದ 26 ಕಡೆಗಳ ಗ್ರಾಹಕರನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಗೂಳಿ ನೆಗೆತ; ಸೆನ್ಸೆಕ್ಸ್‌, ನಿಫ್ಟಿಯಲ್ಲಿ ಚೇತರಿಕೆ