Wednesday, 30th October 2024

Prakash Shesharaghavachar Column: ರೈತರ ನೆತ್ತಿಯ ಮೇಲಿನ ತೂಗುಗತ್ತಿಯಾಗಿರುವ ವಕ್ಫ್‌

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್‌

ಮತಬ್ಯಾಂಕ್ ರಾಜಕಾರಣದ ಪರಾಕಾಷ್ಠೆಯ ಫಲವಾಗಿ 1995 ಮತ್ತು 2013ರಲ್ಲಿ ಕಾಂಗ್ರೆಸ್ ಸರಕಾರವು ಜಾರಿಗೆ ತಂದ ವಕ್ಫ್ ಕಾಯ್ದೆಯ1500 ವರ್ಷಗಳ ಇತಿಹಾಸವಿದ್ದ ಸುಂದರೇಶ್ವರ ದೇವಸ್ಥಾನವೂ ಸೇರಿದಂತೆ ಇಡೀ ಗ್ರಾಮ ವನ್ನು ವಕ್ಫ್ ಆಸ್ತಿಯೆಂದು ಏಕಾಏಕಿ ಘೋಷಿಸಲಾಯಿತು. ಎಐಡಿಯುಎಫ್ ಮುಖ್ಯಸ್ಥ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ಅವರು ದೆಹಲಿಯ‌ ಪಾರ್ಲಿಮೆಂಟ್ ಭವನವನ್ನು ವಕ್ಫ್ ಆಸ್ತಿಯ ಮೇಲೆ ನಿರ್ಮಿಸಲಾಗಿದೆ ಎಂದು ಬಾಂಬ್ ಸಿಡಿಸಿದರು. ಕರ್ನಾಟಕ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಫಿ ಸಾದಿಯವರು, ‘ವಿಧಾನಸೌಧ ಮತ್ತು ವಿಕಾಸ ಸೌಧಗಳು ವಕ್ಫ್ ಆಸ್ತಿ’ ಎಂದು ಹೇಳುತ್ತಾರೆ.

ಇವು ವಕ್ಫ್ ಆಸ್ತಿಯ ವಿಷಯವು ಇತ್ತೀಚಿನ ದಿನಗಳಲ್ಲಿ ಉಂಟುಮಾಡಿರುವ ಸಂಚಲನದ ಕೆಲ ಸ್ಯಾಂಪಲ್‌ಗಳು.
‘ವಕ್ಫ್ ’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ಶರಣಾಗು’ ಎಂದರ್ಥ. ದಾನವಾಗಿ ಪಡೆದ ಆಸ್ತಿಯನ್ನು ಧರ್ಮ ಮತ್ತು
ಸೇವಾಕಾರ್ಯಗಳಿಗಾಗಿ ಮಾತ್ರ ಉಪಯೋಗಿಸಬೇಕು. ಅಂಥ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎನ್ನಲಾಗುತ್ತದೆ. ಆಸ್ತಿಯು
ಒಮ್ಮೆ ವಕ್‌ನ ಪಾಲಾದರೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ; ವಕ್ಫ್ ಆಸ್ತಿಯನ್ನು ‘ದೇವರಿಗೆ ಸೇರಿದ್ದು’ ಎಂದು ಪರಿಗಣಿಸಲಾಗುವುದು.

ಬ್ರಿಟಿಷರು 1913ರಲ್ಲಿ ಮೊದಲ ಬಾರಿಗೆ ವಕ್ಫ್ ಕಾಯ್ದೆಯನ್ನು ಜಾರಿಗೆ ತಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಆಗಿನ ಪ್ರಧಾನಿ ನೆಹರು ಅವರು 1955ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತಂದರು. 1995ರಲ್ಲಿ ಪಿ.ವಿ.ನರಸಿಂಹರಾವ್ ಅವರು ಈ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲವನ್ನು ತುಂಬಿದರು. 1995ರ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ವಕ್ಫ್ ಭೂಮಿಯು ಮುಸ್ಲಿಮರಿಗೆ ಸೇರಿದ್ದು ಎಂದು ಭಾವಿಸಿದರೆ ಸಾಕು ಅದು ವಕ್ಫ್ ನ ಆಸ್ತಿಯಾಗುತ್ತದೆ. ತನ್ನ ಮಾಲೀಕತ್ವವನ್ನು ಸಾಬೀತು ಪಡಿಸಲು ವಕ್ಫ್ ಮಂಡಳಿಗೆ ಯಾವುದೇ ಪುರಾವೆಯ ಅಗತ್ಯ ವಿರುವುದಿಲ್ಲ.

ಆಸ್ತಿ ಕಳೆದುಕೊಂಡ ಮಾಲೀಕ ನ್ಯಾಯಾಲಯದ ಮೊರೆ ಹೋಗಲಾಗುವುದಿಲ್ಲ. ಆತ ನ್ಯಾಯಕ್ಕಾಗಿ ವಕ್ಫ್ ಬೋರ್ಡ್ ಟ್ರಿಬ್ಯೂನಲ್‌ಗೆ (ನ್ಯಾಯಮಂಡಳಿಗೆ) ಮೊರೆಹೋಗಬೇಕಾಗುತ್ತದೆ.

ವಕ್ಫ್ ಕಾಯ್ದೆಯ ಸೆಕ್ಷನ್ 85ರ ಪ್ರಕಾರ, ಇದು ನಿಮ್ಮ (ಅಂದರೆ ಮಾಲೀಕರ) ಸ್ವಂತ ಭೂಮಿ ಎಂಬುದನ್ನು ವಕ್ಫ್ ಬೋರ್ಡ್ ಟ್ರಿಬ್ಯೂನಲ್ ಸಮ್ಮುಖದಲ್ಲಿ ಸಾಬೀತುಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಭೂಮಿಯನ್ನು ಖಾಲಿ ಮಾಡುವಂತೆ ನಿಮಗೆ ಆದೇಶಿಸಲಾಗುತ್ತದೆ. ವಕ್ಫ್ ಕಾಯ್ದೆಯ ಸೆಕ್ಷನ್ 40ರ ಪ್ರಕಾರ, ಭೂಮಿಯ ಮೇಲಿನ
ಹಕ್ಕನ್ನು ಸಾಬೀತುಪಡಿಸುವುದು ವಕ್ಫ್ ಮಂಡಳಿಯ ಜವಾಬ್ದಾರಿಯಲ್ಲ, ಅದು ಭೂಮಿಯ ನಿಜವಾದ ಮಾಲೀಕನ
ಹೆಗಲ ಮೇಲಿನ ಹೊಣೆ. ಇಲ್ಲಿ ನ್ಯಾಯಮಂಡಳಿಯ ತೀರ್ಮಾನವೇ ಅಂತಿಮ. ವಕ್ಫ್ ನ್ಯಾಯಮಂಡಳಿಯ
ತೀರ್ಪನ್ನು ಯಾವುದೇ ನ್ಯಾಯಾಲಯ, ಅಷ್ಟೇಕೆ ಸುಪ್ರೀಂ ಕೋರ್ಟ್ ಕೂಡ ಬದಲಾಯಿಸಲು ಸಾಧ್ಯವಿಲ್ಲ. ಒಮ್ಮೆ ವಕ್ಫ್ ನ ಆಸ್ತಿ ಎನಿಸಿಕೊಂಡರೆ ಅದು ಎಂದೆಂದಿಗೂ ವಕ್ಫ್ ನ ಆಸ್ತಿಯೇ.

ಪ್ರಪಂಚದ ಎಲ್ಲಾ ಇಸ್ಲಾಮಿಕ್ ದೇಶಗಳು ವಕ್ಫ್ ಮಂಡಳಿಯನ್ನು ಹೊಂದಿಲ್ಲ. ಟರ್ಕಿ, ಲಿಬಿಯಾ, ಈಜಿಪ್ಟ್,
ಸುಡಾನ್, ಲೆಬನಾನ್, ಸಿರಿಯಾ, ಜೋರ್ಡಾನ್, ಟುನೀಶಿಯಾ ಮತ್ತು ಇರಾಕ್‌ನಲ್ಲಿ ವಕ್ಫ್ ಇಲ್ಲ. ‘ಜಾತ್ಯತೀತ’
ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಭಾರತದಲ್ಲಿ ಮಾತ್ರ ವಕ್ಫ್ ಬೋರ್ಡ್‌ಗಳು ಅತಿದೊಡ್ಡ ನಗರ ಭೂಮಾಲೀಕ ರಾಗಿರುವುದು ಮಾತ್ರವಲ್ಲದೆ, ಅವುಗಳ ಮೇಲೆ ನಿರಂಕುಶ ಅಧಿಕಾರವನ್ನು ಹೊಂದಿವೆ.

ಪ್ರಸ್ತುತ ಭಾರತದಲ್ಲಿ ವಕ್ಫ್ ಮಂಡಳಿಗಳ ನಿಯಂತ್ರಣದಲ್ಲಿ 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷದಷ್ಟು ಆಸ್ತಿಗಳಿವೆ. ಭಾರತದಲ್ಲಿ ಅತಿಹೆಚ್ಚು ಭೂಮಿ ಹೊಂದಿರುವ ಸಂಸ್ಥೆಗಳ ಪಟ್ಟಿಯಲ್ಲಿ ವಕ್ಫ್ ಮೂರನೆಯ ಸ್ಥಾನ ದಲ್ಲಿದೆ (18 ಲಕ್ಷ ಎಕರೆ ಭೂಮಿಯನ್ನು ಹೊಂದಿರುವ ರಕ್ಷಣಾ ಇಲಾಖೆ ಮೊದಲನೆಯ ಸ್ಥಾನದಲ್ಲಿದ್ದರೆ, 12 ಲಕ್ಷ ಎಕರೆ ಭೂಮಿ ಹೊಂದಿರುವ ಭಾರತೀಯ ರೇಲ್ವೆಯು ಎರಡನೆಯ ಸ್ಥಾನದಲ್ಲಿದೆ).

ವಕ್ಫ್ ಮಂಡಳಿಯಲ್ಲಿ ಕಿಂಚಿತ್ತೂ ಪಾರದರ್ಶಕತೆಯಿಲ್ಲ. ಸಾವಿರಾರು ಕೋಟಿ ಮೌಲ್ಯದ ಆಸ್ತಿಯು ಅಕ್ರಮವಾಗಿ
ಪರಭಾರೆಯಾಗಿದೆ. ಕೇವಲ ಕರ್ನಾಟಕದ ವಕ್ಫ್ ಆಸ್ತಿಯ ಬಗ್ಗೆ ತನಿಖೆಯನ್ನು ಕೈಗೊಂಡ ಅನ್ವರ್ ಮಣಪ್ಪಾಡಿ ಸಮಿತಿಯು ತಾನು ನೀಡಿದ ೭,೦೦೦ ಪುಟಗಳ ವರದಿಯಲ್ಲಿ, ವಕ್ಫ್ ಮಂಡಳಿಯಲ್ಲಿ 2.3 ಲಕ್ಷ ಕೋಟಿ ರುಪಾಯಿ ಮೊತ್ತದ ಭ್ರಷ್ಟಾಚಾರ ನಡೆದಿರುವುದನ್ನು ಬಯಲಿಗೆಳೆದಿದೆ.

ರಾಜ್ಯದಲ್ಲಿ ಒಟ್ಟು 54000 ಎಕರೆ ಜಮೀನು ವಕ್ಫ್ ಸುಪರ್ದಿನಲ್ಲಿದ್ದು, ಅದರಲ್ಲಿ 29000 ಎಕರೆ ಅಕ್ರಮವಾಗಿ ಪರಭಾರೆಯಾಗಿರುವುದನ್ನು ಅದು ತಿಳಿಸಿದೆ. ಈ ಹಗರಣದಲ್ಲಿ ಅಂದಿನ ಕಾಂಗ್ರೆಸ್ ಸರಕಾರದ ಹಲವು ಪ್ರಮುಖ ನಾಯಕರು ಶಾಮೀಲಾಗಿರುವ ಬಗೆಗಿನ ವಿವರಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ‘ವಕ್ಫ್ ಹಗರಣವು ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದಾಗಿದ್ದು, ತನಿಖೆಯಾದರೆ ಹಲವರು ಜೈಲಿಗೆ ಹೋಗಬೇಕಾಗುತ್ತದೆ’ ಎನ್ನುತ್ತಾರೆ ಅನ್ವರ್ ಮಣಪ್ಪಾಡಿಯವರು.

ವಕ್ಫ್ ಮಂಡಳಿಯ ಆಡಳಿತದಲ್ಲಿನ ಪಾರದರ್ಶಕತೆಯ ಕೊರತೆಯಿಂದಾಗಿ ಅಲ್ಲಿ ನಡೆಯುವ ಹಗರಣಗಳಿಗೆ
ಮುಸುಕು ಹಾಕಲಾಗಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ಮಾರಾಟ ಮಾಡಿಕೊಂಡು ತಮ್ಮ ಹೆಸರಿಗೆ ದಾಖಲೆ ಸೃಷ್ಟಿಸಿಕೊಳ್ಳುವುದು ವ್ಯಾಪಕವಾಗಿ ನಡೆದಿದೆ. ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ 2013ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿ, ಭೂಸ್ವಾಧೀನಪಡಿಸಿಕೊಳ್ಳಲು ವಕ್ ಮಂಡಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಯಿತು.
ದಾಖಲೆಯ ಸೂಕ್ತ ಪರಿಶೀಲನೆ ಇಲ್ಲದೆಯೇ ಯಾವುದೇ ಆಸ್ತಿಯನ್ನು ವಕ್ಫ್ ತನ್ನದು ಎಂದು ಹೇಳಬಹುದಾದ
ಅತಿರೇಕದ ಅಧಿಕಾರವನ್ನು 2013ರ ಈ ತಿದ್ದುಪಡಿ ನೀಡಿತು.

ಯುಪಿಯ ಸರಕಾರವು ತಾನು ಅಧಿಕಾರವನ್ನು ಕಳೆದುಕೊಳ್ಳುವ ಮುನ್ನ ಈ ತಿದ್ದುಪಡಿಯನ್ನು ತಂದು ಜನರ ತಲೆಯ ಮೇಲೆ ಚಪ್ಪಡಿ ಎಳೆದಿದೆ. ಇದಲ್ಲದೆ, 2013ರ ಅಂತ್ಯದಲ್ಲಿ ದೆಹಲಿಯಲ್ಲಿ ಸಾವಿರಾರು ಕೋಟಿ ಬೆಲೆಬಾಳುವ 123 ಆಸ್ತಿಗಳನ್ನು ವಕ್ಫ್ ಮಂಡಳಿಗೆ ಬಳುವಳಿಯಾಗಿ ಕೊಟ್ಟುಬಿಡಲಾಗಿದೆ.

2013ರ ಈ ಕಾಯ್ದೆಯ ದುರ್ಬಳಕೆ ಮಾಡಿಕೊಂಡು, ದೇಶದ ವಿವಿಧ ಭಾಗಗಳಲ್ಲಿನ ಹಲವಾರು ಪ್ರಮುಖ ಆಸ್ತಿಗಳ
ಮೇಲೆ ವಕ್ಫ್ ಕಣ್ಣುಹಾಕಿ ಅವನ್ನು ತನ್ನವೆಂದು ಪ್ರತಿಪಾದಿಸುತ್ತಿದೆ. ಹರಿಯಾಣದ ಜತಲಾನ ಗ್ರಾಮದಲ್ಲಿ ಗುರು ದ್ವಾರಕ್ಕೆ ಸೇರಿದ ಭೂಮಿಯನ್ನು ವಕ್ ತನ್ನದೆಂದು ಘೋಷಿಸಿದೆ. 2021ರ ನವೆಂಬರ್‌ನಲ್ಲಿ, ಮುಗ್ಲಿಸರದಲ್ಲಿ ರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರಧಾನ ಕಚೇರಿಯನ್ನು ತನ್ನ ಆಸ್ತಿ ಎಂದು ವಕ್ಫ್ ಘೋಷಿಸಿತು. ವಾರಾಣಸಿಯ ಪವಿತ್ರ ಕಾಶಿ ಮಂದಿರ ಇರುವ ಜಾಗವು ತನ್ನದೆಂದು ವಕ್ಫ್ ಹೇಳುತ್ತದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ತನ್ನದು ಎಂಬುದಾಗಿ ಅದು ಯಾವುದೇ ದಾಖಲೆಯಿಲ್ಲದೆ ಹಕ್ಕುಸಾಧಿಸಿತ್ತು.

ನಗರ ಪಾಲಿಕೆಯು ಸೂಕ್ತ ದಾಖಲೆಯನ್ನು ನೀಡಿದ ತರುವಾಯ ಈಗ ಆಸ್ತಿಯು ಪಾಲಿಕೆಯ ವಶವಾಗಿದೆ. ಸರಕಾರ ನೀಡಿದ ಶಾಸನ ಬಲವನ್ನು ವಕ್ಫ್ ದುರುಪಯೋಗ ಪಡಿಸಿಕೊಂಡು ಹಲವಾರು ಆಸ್ತಿಗಳ ಮೇಲೆ ತನ್ನ ಹಕ್ಕು ಸಾಧಿಸಲು ಮುಂದಾಗಿದ್ದರ ಪೈಕಿ ಇವು ಕೆಲವು ನಿದರ್ಶನಗಳಷ್ಟೇ. ಮೋದಿ ಸರಕಾರವು ಮೂರನೆಯ ಅವಧಿಗೆ ಅಧಿಕಾರಕ್ಕೆ ಬಂದ ತರುವಾಯ, ನಿಯಂತ್ರಣವಿಲ್ಲದ ವಕ್ಫ್ ಮಂಡಳಿಗಳ ಭೂದಾಹಕ್ಕೆ ಅಂಕುಶ ಹಾಕಲೆಂದು 1995ರ ಕಾಯ್ದೆಗೆ ತಿದ್ದುಪಡಿಯನ್ನು ತರಲು ನಿರ್ಣಯಿಸಿತು.

ತತ್ಪರಿಣಾಮವಾಗಿ, ಈ ಬಗ್ಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಲು ಹಾಗೂ ಸಂಬಂಧಿಸಿದ ವ್ಯಕ್ತಿಗಳ, ಸಂಸ್ಥೆಗಳ
ಅಭಿಪ್ರಾಯ ಪಡೆಯಲು ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ. ಇದರ ಕಲಾಪವು ಬಿಸಿಬಿಸಿಯಾಗಿಯೇ
ಸಾಗುತ್ತಿದೆ. ಆದರೆ, ವಿರೋಧ ಪಕ್ಷಗಳ ಸದಸ್ಯರು ತಮ್ಮ ಮತಬ್ಯಾಂಕ್ ರಕ್ಷಣೆಗಾಗಿ ಜಂಟಿ ಸಂಸದೀಯ ಸಮಿತಿಯ
ಸಭೆಯಲ್ಲಿ ಸದಸ್ಯರ ಜತೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಇಳಿಯಲೂ ಹೇಸಲಿಲ್ಲ. ಸಮಿತಿಯ ಅಧ್ಯಕ್ಷರ ಮೇಲೆ
ಗಾಜಿನ ಬಾಟಲಿ ಎಸೆದ ಕಾರಣ ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿಯವರನ್ನು ಸಮಿತಿಯಿಂದ
ಅಮಾನತು ಮಾಡಲಾಗಿದೆ. ಅಂದುಕೊಂಡಂತೆ ವಕ್ಫ್ ಕಾಯ್ದೆಗೆ ತಿದ್ದುಪಡಿಯಾದಲ್ಲಿ, ವಕ್ಫ್ ಮಂಡಳಿಯು ಸೂಕ್ತ ದಾಖಲೆಯಿಲ್ಲದೆಯೇ ಯಾವುದೇ ಆಸ್ತಿಯನ್ನು ತನ್ನದೆಂದು ಹೇಳಲು ಸಾಧ್ಯವಿರುವುದಿಲ್ಲ.

ವಕ್ಫ್ ಆಸ್ತಿಗಳ ಕುರಿತಾದ ಅಂತಿಮ ತೀರ್ಮಾನವನ್ನು ವಕ್ಫ್ ಮಂಡಳಿಯ ಬದಲಿಗೆ ಜಿಲ್ಲಾಧಿಕಾರಿಗಳ ನ್ಯಾಯಾಧೀ ಕರಣವು ಕೈಗೊಳ್ಳುತ್ತದೆ. ಮೊದಲ ಬಾರಿಗೆ ಮಂಡಳಿಯಲ್ಲಿ ಮಹಿಳೆಯರಿಗೆ ಸದಸ್ಯತ್ವ ನೀಡಲಾಗುವ, ಮುಸ್ಲಿಮೇ ತರರಿಗೂ ಸ್ಥಾನ ಕಲ್ಪಿಸುವ ಮತ್ತು ಇನ್ನೂ ಇತರ 47 ತಿದ್ದುಪಡಿಗಳನ್ನು ಈಗಾಗಲೇ ಪ್ರಸ್ತಾವಿಸಲಾಗಿದೆ. ಇದರ ನಡುವೆ, ಕರ್ನಾಟಕದ ವಿಜಯಪುರ ಜಿಲ್ಲೆಯ ಹೊನವಾಡದ ರೈತರಿಗೆ ವಕ್ಫ್ ಮಂಡಳಿಯು ನೀಡಿರುವ ಆಘಾತ ದಿಂದಾಗಿ, ತಲೆತಲಾಂತರದಿಂದ ಅವರ ಒಡೆತನದಲ್ಲಿದ್ದ 1500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿತ ವಾಗಿದೆ. ತತ್ಸಂಬಂಧವಾಗಿ ಅಕ್ಟೋಬರ್ 4ರಂದು ತಹಸೀಲ್ದಾರ್ ಅವರು ಇದನ್ನು ಪುಷ್ಟೀಕರಿಸಿ ನೋಟಿಸ್ ನೀಡಿದ್ದಾರೆ.

ತಮ್ಮದಾಗಿದ್ದ ಜಮೀನು ಬೆಳಕು ಹರಿಯುವುದರೊಳಗಾಗಿ ವಕ್ಫ್ ಆಸ್ತಿ ಆಗಿರುವುದರಿಂದ ಸದರಿ ರೈತರ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ರೈತರ ಹಿತಕಾಯಬೇಕಾದ ರೈತಸಂಘಗಳು ದಿವ್ಯಮೌನಕ್ಕೆ ಮೊರೆಹೋಗಿವೆ. ಜಿಲ್ಲೆಯ ಬಾಧಿತ ರೈತರು ‘ಈ ಬಾರಿ ದೀಪಾವಳಿ ಆಚರಿಸುವುದಿಲ್ಲ’ ಎಂದು ತೀರ್ಮಾನಿಸಿದ ಮೇಲೆ ಸರಕಾರವು ಸದ್ಯಕ್ಕೆ ಅವರಿಗೆ ಕೊಟ್ಟಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆದಿದೆ.

ಸಚಿವ ಎಂ.ಬಿ.ಪಾಟೀಲರು ಆರಂಭದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ, ‘ಬಿಜೆಪಿ ರಾಜಕೀಯ ಮಾಡುತ್ತಿದೆ’ ಎಂದು ತಳ್ಳಿಹಾಕಿದರು. ಆದರೆ, ತಮಗೆ ನೀಡಲಾದ ನೋಟಿಸ್‌ಗಳನ್ನು ರೈತರು ಪ್ರದರ್ಶಿಸಿದ ಮೇಲೆ, ‘ಕೇವಲ 11 ಎಕರೆ ವಕ್ ಆಸ್ತಿ, ಮಿಕ್ಕಿದ್ದಲ್ಲ’ ಎಂದು ಸಮಜಾಯಿಷಿ ನೀಡಿದರು. ಆತಂಕದಲ್ಲಿರುವ ರೈತರಿಗೆ ಧೈರ್ಯ ತುಂಬಬೇಕಿದ್ದ ಕಾಂಗ್ರೆಸ್ ಸರಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣದ ಅನಿವಾರ್ಯತೆಯಿಂದಾಗಿ ಮೌನ ವಹಿಸಿದೆ.

ವಿಜಯಪುರದಲ್ಲಾಗಿದ್ದು ರಾಜ್ಯಾದ್ಯಂತ ಹರಡುವುದರಲ್ಲಿ ಅನುಮಾನವೇ ಬೇಡ. ಈಗಾಗಲೇ ಯಾದಗಿರಿ ಮತ್ತು
ಧಾರವಾಡ ರೈತರಿಗೆ ವಕ್ ಬಿಸಿ ತಾಗಿದೆ. ಇತರ ಜಿಲ್ಲೆಯ ವಕ್ಫ್ ಮಂಡಳಿಗಳು ಇದೇ ರೀತಿಯಲ್ಲಿ ತಮ್ಮ ಹಕ್ಕನ್ನು ಮುಂದಿಟ್ಟು ರೈತರ ಜಮೀನಿಗೆ ಕಂಟಕ ತರುವುದು ನಿಶ್ಚಿತ. ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಈ
ಕಾರ್ಯಾಚರಣೆಯ ಹಿಂದಿರುವುದು ಮಂಡಳಿಗಳಿಗೆ ಬಲ ತುಂಬಿದೆ. ದೇವರ ಹೆಸರಿನಲ್ಲಿ ರೈತರ ಜಮೀನು ಕಬಳಿ ಸಲು ವಕ್ಫ್ ಮಂಡಳಿಗಳು ತುದಿಗಾಲ ಮೇಲೆ ನಿಂತಿರುವಂತೆ ತೋರುತ್ತಿದೆ. ತತ್ಪರಿಣಾಮವಾಗಿ ರಾಜ್ಯದ ರೈತರ ನೆತ್ತಿಯ ಮೇಲೆ ವಕ್ ತೂಗುಕತ್ತಿಯು ತೂಗುತ್ತಿದ್ದು, ಅವರು ಆತಂಕದಿಂದ ದಿನಗಳನ್ನು ದೂಡುವಂತಾಗಿದೆ.

(ಲೇಖಕರು ಬಿಜೆಪಿ ವಕ್ತಾರರು)

ಇದನ್ನೂ ಓದಿ: Prakash Shesharaghavachar Column: ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಚುನಾವಣಾ ಫಲಿತಾಂಶ