ಬೆಂಗಳೂರು: ದೀಪಾವಳಿ ಹಬ್ಬದ (Deepavali 2024) ಸಂದರ್ಭದಲ್ಲಿ ಉಂಟಾಗುವ ಪಟಾಕಿ ಅವಘಡಗಳಿಂದ (Crackers accident) ಸಂಭವಿಸುವ ಕಣ್ಣಿನ ಹಾನಿ (Eye injury) ಅಥವಾ ಗಾಯದ ಚಿಕಿತ್ಸೆಗಾಗಿ ನಗರದ ಕಣ್ಣಿನ ಆಸ್ಪತ್ರೆಗಳು (Eye hospital) ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ.
ಮಿಂಟೊ ಆಸ್ಪತ್ರೆ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ ಹಾಸ್ಪಿಟಲ್, ಡಾ. ಅಗರವಾಲ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ನಾರಾಯಣ ನೇತ್ರಾಲಯ ಸೇರಿ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ.
‘ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗುವ ಜತೆಗೆ ಸುಟ್ಟ ಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಪಟಾಕಿಯ ಜೋರಾದ ಶಬ್ದದಿಂದ ಶ್ರವಣ ಸಮಸ್ಯೆ ಕೂಡ ಉಂಟಾಗುತ್ತದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಉಸಿರಾಟದ (ಆಸ್ತಮಾ) ಹಾಗೂ ಚರ್ಮದ ತೊಂದರೆಗಳು ಕಾಣಿಸಿಕೊಳ್ಳಲಿವೆ. ಪಟಾಕಿಗಳನ್ನು ಹಚ್ಚಲೇಬೇಕು ಎಂದಾದಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಿ’ ಎಂದು ನಗರದ ನೇತ್ರ ವೈದ್ಯರು ಮನವಿ ಮಾಡಿದ್ದಾರೆ.
‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ಹೇಳಿದ್ದಾರೆ.
35 ಹಾಸಿಗೆ ವ್ಯವಸ್ಥೆ: ‘ಹಬ್ಬದ ಸಮಯದಲ್ಲಿ ಚಿಕಿತ್ಸೆಗೆ ಬೇಕಾದ ಔಷಧವನ್ನು ದಾಸ್ತಾನು ಮಾಡಿಕೊಂಡು, ಶಸ್ತ್ರಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಶೇಷ ತಜ್ಞರನ್ನು ಒಳಗೊಂಡ ವೈದ್ಯರ ತಂಡವು ಸಮಯಾನುಸಾರ ಸೇವೆ ನೀಡಲು ಸಿದ್ಧವಾಗಿದೆ. ಒಟ್ಟು 35 ಹಾಸಿಗೆಗಳನ್ನು ಪಟಾಕಿ ಗಾಯಾಳುಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಇವುಗಳಲ್ಲಿ ತಲಾ 10 ಪುರುಷರು ಹಾಗೂ ಮಹಿಳೆಯರಿಗೆ, 15 ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಕಳೆದ ವರ್ಷ ಪಟಾಕಿ ಗಾಯಕ್ಕೆ 40 ಮಂದಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ಜಿ. ತಿಳಿಸಿದರು.
‘ಪಟಾಕಿಗಳಿಂದ ಉಂಟಾದ ಗಾಯಗಳು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಈ ಗಾಯಗಳು ಗಂಭೀರ ಹಾನಿ ಅಥವಾ ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುತ್ತವೆ. ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಪಟಾಕಿ ಗಾಯಗಳಿಗೆ ಇದೇ 31ರಿಂದ ನ.2ರವರೆಗೆ ದಿನದ 24 ಗಂಟೆಗಳೂ ಚಿಕಿತ್ಸೆ ದೊರೆಯಲಿದೆ’ ಎಂದು ರಾಜಾಜಿನಗರದ ನಾರಾಯಣ ನೇತ್ರಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಮಿತ್ತಲ್ ಹೇಳಿದರು.
ಸುಟ್ಟ ಗಾಯಕ್ಕೆ ವಿಕ್ಟೋರಿಯಾದಲ್ಲಿ ವ್ಯವಸ್ಥೆ
ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ದಿನದ 24 ಗಂಟೆಯೂ ಇಲ್ಲಿ ತುರ್ತು ವೈದ್ಯಕೀಯ ಸೇವೆ ಲಭ್ಯವಿರಲಿದೆ. ತೀವ್ರ ನಿಗಾ ಘಟಕ (ಐಸಿಯು) ಸೌಲಭ್ಯವೂ ಇರಲಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ. ರಮೇಶ್ ಕೃಷ್ಣ ಕೆ. ತಿಳಿಸಿದ್ದಾರೆ. ತುರ್ತು ಸಂಪರ್ಕ ಸಂಖ್ಯೆ: 7498809105 9740322179 8197969128 ಅಥವಾ 9994584495
ಸಹಾಯವಾಣಿಗಳು
ಮಿಂಟೊ ಕಣ್ಣಿನ ಆಸ್ಪತ್ರೆ: 9481740137 ಅಥವಾ 08026707176 ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121641/1643 ಅಥವಾ 9902546046 ನಾರಾಯಣ ನೇತ್ರಾಲಯ ಎನ್ಎಚ್ ಹೆಲ್ತ್ ಸಿಟಿ ಬೊಮ್ಮಸಂದ್ರ: 080 66660655 ಅಥವಾ 9902821128 ನಾರಾಯಣ ನೇತ್ರಾಲಯ ಇಂದಿರಾನಗರ ಶಾಖೆ: 080 66974000 ಅಥವಾ 9916024455 ನಾರಾಯಣ ನೇತ್ರಾಲಯ ಹುಳಿಮಾವು ಶಾಖೆ: 080 66121618 ಅಥವಾ 9035154170 ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ) 080 69038900 ಅಥವಾ 9739270477 ರೈನ್ಬೋ ಮಕ್ಕಳ ಆಸ್ಪತ್ರೆ: (ಬನ್ನೇರುಘಟ್ಟ) 9355400341 ಮಾರತಹಳ್ಳಿ ಶಾಖೆ 9355400340 ಹೆಬ್ಬಾಳ ಶಾಖೆ 9355400342 ಜಯನಗರದ ನೇತ್ರಧಾಮ: 080 26088000 ಅಥವಾ 9448071816 ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ: ಬನ್ನೇರುಘಟ್ಟ ಶಾಖೆ 08048193419 ರಾಜರಾಜೇಶ್ವರಿ ನಗರ ಶಾಖೆ 918048193501
ಪಟಾಕಿ ಸಿಡಿಸುವಾಗ ಈ ಎಚ್ಚರಿಕೆ ಅನುಸರಿಸಿ:
ಪಟಾಕಿ ಖರೀದಿಸಲೇಬೇಕಾದಲ್ಲಿ ಐಎಸ್ಐ ಪ್ರಮಾಣೀಕರಣದ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ
ಪಟಾಕಿಗಳ ಮೇಲಿರುವ ಎಚ್ಚರಿಕೆ ಸೂಚನೆ ಅನುಸರಿಸಿ
ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ
ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ
ಮೈದಾನ ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ
ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು
ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ
ಪಟಾಕಿ ಸಿಡಿದಾಗ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ
ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ
ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ -ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ.
ಇದನ್ನೂ ಓದಿ: Dark Circle: ಕಣ್ಣಿನ ಕೆಳಗಿನ ಕಪ್ಪು ವರ್ತುಲ ನಿಮ್ಮ ಅಂದ ಕೆಡಿಸುತ್ತದೆಯೇ? ಹಾಗಾದ್ರೆ ಈ ಮಾಸ್ಕ್ ಹಚ್ಚಿ ನೋಡಿ!