Saturday, 23rd November 2024

Virat Kohli: ಆರ್‌ಸಿಬಿಗೆ ಮತ್ತೆ ಕೊಹ್ಲಿ ನಾಯಕ!

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bengaluru) ತಂಡದಲ್ಲಿ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ವಿರಾಟ್​ ಕೊಹ್ಲಿ(Virat Kohli) ಅವರು ಮತ್ತೆ ಐಪಿಎಲ್​ನಲ್ಲಿ ಆರ್​ಸಿಬಿ(RCB) ತಂಡದ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸುವಂತೆ ಮಾಡಿದೆ.

ಈ ಹಿಂದೆ ಆರ್‌ಸಿಬಿ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್​ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ವಿರಾಟ್​ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೂಕ್ತ ನಾಯಕನ ಸ್ಥಾನಕ್ಕೆ ಚೆನ್ನೈ ತಂಡದಲ್ಲಿದ್ದ ಫಾಫ್​ ಡುಪ್ಲೆಸಿಸ್​ ಅವರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಲಾಗಿತ್ತು.

ಇದನ್ನೂ ಓದಿ IPL 2025: ಡೆಲ್ಲಿ ತೊರೆದು ಗುರುವಿನ ತಂಡ ಸೇರಲು ಮುಂದಾದ ಶಿಷ್ಯ ಪಂತ್‌

ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ 700ಕ್ಕೂ ಅಧಿಕ ರನ್​ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್​ ಎನಿಸಿಕೊಂಡಿದ್ದರು.

ಕನ್ನಡಿಗ ಕೆ.ಎಲ್​ ರಾಹುಲ್​ ಕೂಡ ಆರ್​ಸಿಬಿ ತಂಡಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೆಲ ತಿಂಗಳಿನಿಂದ ಕೇಳಿರುತ್ತಿದೆ. ಒಂದೊಮ್ಮೆ ಕೊಹ್ಲಿ ನಾಯಕನ ಸ್ಥಾನ ತಿರಸ್ಕರಿಸಿದರೆ, ರಾಹುಲ್​ ಆರ್​ಸಿಬಿ ಸೇರಿದರೆ ನಾಯಕತ್ವ ಅವರ ಪಾಲಾಗುವು ಸಾಧ್ಯತೆ ಇದೆ.

ಕೊಹ್ಲಿಯ ನಾಯಕತ್ವ ಸಾಧನೆ ಹೇಗಿದೆ?

ವಿರಾಟ್​ ಕೊಹ್ಲಿ 2013ರಲ್ಲಿ ಆರ್​ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್​ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್​​ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್​ ಇತಿಹಾಸದಲ್ಲಿ ವಿನ್ನಿಂಗ್ಸ್​ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.