Wednesday, 30th October 2024

Actor Darshan: ದರ್ಶನ್‌ಗೆ ಜೈಲ್‌ ಅಥವಾ ಬೇಲ್:‌ ಇಂದೇ ಹೈಕೋರ್ಟ್‌ ತೀರ್ಪು

renukaswamy murder case high court actor darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renuka Swamy Murder Case) ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿ (Bellary Jail) ಇರುವ ನಟ ದರ್ಶನ್‌ (Actor Darshan) ಅನಾರೋಗ್ಯಪೀಡಿತರಾಗಿದ್ದು, ಇಂದು ಬೇಲ್‌ ಸಿಗಲಿದೆಯೋ ಇಲ್ಲವೋ ಎಂಬುದರ ಮೇಲೆ ಅವರ ಚಿಕಿತ್ಸೆಯ ಸ್ವರೂಪ ನಿರ್ಧಾರವಾಗಲಿದೆ. ಅವರ ಜಾಮೀನು ಮನವಿಯ ವಿಚಾರಣೆ ನಿನ್ನೆ ಮುಕ್ತಾಯಗೊಂಡಿದ್ದು, ಇಂದು ಅದರ ತೀರ್ಪನ್ನು ಹೈಕೋರ್ಟ್‌ (Karnataka high court) ನೀಡಲಿದೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರೆ, ಪೊಲೀಸರ ಪರ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ವಾದ ಮಾಡಿದರು. ವಕೀಲರ ವಾದಗಳ ನಂತರ, ಹೈಕೋರ್ಟ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಜಾಮೀನು ಅನುಮೋದನೆಯಾದರೆ, ಅವರು ನೇರವಾಗಿ ಬೆಂಗಳೂರು ಅಥವಾ ಮೈಸೂರಿಗೆ ಆಗಮಿಸಿ ಆಸ್ಪತ್ರೆಗೆ ಹೋಗುವ ಸಾಧ್ಯತೆ ಇದೆ.

ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ನಾಲ್ಕೂವರೆ ತಿಂಗಳುಗಳೇ ಕಳೆದಿವೆ. ಅವರು ಜೂನ್ 11ರಂದು ಬಂಧನಕ್ಕೆ ಒಳಗಾದರು. ವಿರುದ್ಧವಾಗಿ ಹಲವು ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು. ಚಾರ್ಜ್​ಶೀಟ್ ಸಲ್ಲಿಕೆ ಆದ ಬಳಿಕವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೆಳಹಂತದ ಕೋರ್ಟ್​ನಲ್ಲಿ ಜಾಮೀನು ವಜಾ ಆಗಿತ್ತು. ಈಗ ಹೈಕೋರ್ಟ್​ನಲ್ಲಿ ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ.

ದರ್ಶನ್‌ ಪರ ವಕೀಲ ಸಿವಿ ನಾಗೇಶ್ ಅವರು ದರ್ಶನ್​ಗೆ ಇರುವ ಬೆನ್ನು ನೋವು ಹಾಗೂ ಅದರ ತೀವ್ರತೆಯನ್ನು ಕೋರ್ಟ್​ಗೆ ಮನವರಿಕೆ ಮಾಡಿದರು. ‘ಬೆನ್ನು ನೋವಿಗೆ ಸಾಮಾನ್ಯ ಚಿಕಿತ್ಸೆ ಸಾಕಾಗುವುದಿಲ್ಲ ಮತ್ತು ಅವರು ಶಸ್ತ್ರಚಿಕಿತ್ಸೆಯನ್ನೇ ಮಾಡಿಸಿಕೊಳ್ಳಬೇಕು. ಹೀಗಾಗಿ ಜಾಮೀನು ನೀಡಲೇಬೇಕು’ ಎಂದು ಸಿವಿ ನಾಗೇಶ್ ಕೋರ್ಟ್ ಬಳಿ ಕೋರಿದರು.

ಅತ್ತ ಪ್ರಸನ್ನ ಕುಮಾರ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಈಗಿನ ವರದಿಯಲ್ಲಿ ದರ್ಶನ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿಯೇ ಇದೆ. ಮುಂದೊಂದು ದಿನ ಸಮಸ್ಯೆ ಬರಹುದು ಎಂದಿದೆ. ಅಲ್ಲದೆ, ದರ್ಶನ್​ಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂಬ ಬಗ್ಗೆ ಉಲ್ಲೇಖ ಇಲ್ಲ’ ಎಂದು ವಾದ ಮಾಡಿದರು. ಇದನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ‘ಆರೋಗ್ಯ ಪ್ರತಿಯೊಬ್ಬ ಕೈದಿಯ ಹಕ್ಕು’ ಎಂದಿದ್ದಾರೆ.

ದರ್ಶನ್ ಅವರಿಗೆ ಕುಳಿತುಕೊಳ್ಳಲು ಹಾಗೂ ನಿಂತುಕೊಳ್ಳಲೂ ಆಗದ ಸ್ಥಿತಿ ನಿರ್ಮಾಣ ಆಗಿದೆ. ಅವರ ಆರೋಗ್ಯ ದಿನಕಳೆದಂತೆ ಹದಗೆಡುತ್ತಿದೆ ಎನ್ನಲಾಗಿದೆ. ಈಗಾಗಲೇ ಅವರ ಕಾಲು ಮರುಗಟ್ಟುವಿಕೆ ಆರಂಭ ಆಗಿದೆಯಂತೆ. ಇದು ಹೀಗೆ ಮುಂದುವರಿದರೆ ದರ್ಶನ್​ಗೆ ಅಪಾಯ ಕಟ್ಟಿಟ್ಟ ಬುಟ್ಟಿ ಎನ್ನಲಾಗಿದೆ.

ಮಧ್ಯಾಹ್ನ 2.30ಕ್ಕೆ ದರ್ಶನ್​ ಪ್ರಕರಣದಲ್ಲಿ ಆದೇಶ ಹೊರ ಬರಲಿದೆ. ದರ್ಶನ್​ಗೆ ಜಾಮೀನು ಸಿಕ್ಕರೆ ಫ್ಯಾನ್ಸ್ ಇದನ್ನು ಸಂಭ್ರಮಿಸಲಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆಯುವುದರಿಂದ ಅವರು ನೇರವಾಗಿ ಆಸ್ಪತ್ರೆಗೆ ತೆರಳುವ ಸಾಧ್ಯತೆ ಇದೆ.

ಇದನ್ನೂ ಓದಿ: Actor Darshan: ದರ್ಶನ್‌ ಮಧ್ಯಂತರ ಜಾಮೀನು ಅರ್ಜಿ; ನಾಳೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್