ಮುಂಬಯಿ: ಬಹುನಿರೀಕ್ಷಿತ ಐಪಿಎಲ್ 2025(IPL 2025) ಮೆಗಾ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರನ್ನು ಅಂತಿಮಗೊಳಿಸುವ ಸಮಯ ಬಂದಿದೆ. ನಾಳೆ (ಅಕ್ಟೋಬರ್ 31) ಸಂಜೆ 5 ಗಂಟೆಯೊಳಗೆ ಎಲ್ಲ ಫ್ರಾಂಚೈಸಿಗಳು ರಿಟೇನ್(IPL 2025 Retention) ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಿದೆ. ಈಗಾಗಲೆ ಎಲ್ಲ ತಂಡಗಳ ರಿಟೇನ್ ಲೆಕ್ಕಾಚಾರದ ಬಗ್ಗೆ ವಿವಿಧ ವರದಿಗಳು ಹರಿದಾಡುತ್ತಿದ್ದು 10 ತಂಡಗಳ ರಿಟೇನ್ ಲೆಕ್ಕಾಚಾರದ ವಿವರ ಇಲ್ಲಿದೆ.
ರಿಟೇನ್ ನಿಯಮಗಳೇನು?
ಐಪಿಎಲ್ ರೀಟೆನ್ಷನ್ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು.
ವೀಕ್ಷಣೆ ಎಲ್ಲಿ?
ರೀಟೆನ್ಷನ್ ಪ್ರಕ್ರಿಯೆ JioCinemaದಲ್ಲಿ ಉಚಿತವಾಗಿ ಮತ್ತು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೋಡಬಹುದಾಗಿದೆ. ನೇರ ಪ್ರಸಾರ ಸಂಜೆ 4 ರಿಂದ ಆರಂಭವಾಗಲಿದೆ.
ಚೆನ್ನೈ ಸೂಪರ್ಕಿಂಗ್ಸ್
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ (18 ಕೋಟಿ ರೂ.), ನಾಯಕ ಋತುರಾಜ್ ಗಾಯಕ್ವಾಡ್ (18 ಕೋಟಿ ರೂ.), ಶ್ರೀಲಂಕಾ ವೇಗಿ ಮಥೀಶ ಪಥಿರಣ (14 ಕೋಟಿ ರೂ.), ಆಲ್ರೌಂಡರ್ ಶಿವಂ ದುಬೆ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲಿದೆ ಎನ್ನಲಾಗಿದೆ. ‘ಅನ್ಕ್ಯಾಪ್ಡ್’ ಆಗಿ ಧೋನಿ ಚೆನ್ನೈ ಪರ ಆಡಲಿದ್ದಾರೆ ಎನ್ನಲಾಗಿದೆ.
ಆರ್‌ಸಿಬಿ
ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ ಈ ಬಾರಿ ವಿರಾಟ್ ಕೊಹ್ಲಿಯನ್ನು ಮಾತ್ರ ರಿಟೇನ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಗಿ ಮೊಹಮದ್ ಸಿರಾಜ್ ಮತ್ತು ರಜತ್ ಪಾಟೀದಾರ್ ರಿಟೇನ್ ಬಯಸಿದ್ದರೂ, ಇನ್ನೂ ಅಂತಿಮಗೊಂಡಿಲ್ಲ. ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ರಿಟೇನ್ಗೆ ಆಸಕ್ತಿ ತೋರಿಲ್ಲ. ಈ ನಡುವೆ ಕೊಹ್ಲಿ ರಿಟೇನ್ಗಾಗಿ ಆರ್‌ಸಿಬಿ ಗರಿಷ್ಠ 18 ಕೋಟಿ ಬದಲಾಗಿ 25 ಕೋಟಿ ರೂ.ವರೆಗೂ ವ್ಯಯಿಸಲು ಸಿದ್ಧವಾಗಿದೆ ಎನ್ನಲಾಗಿದೆ.
ಲಕ್ನೋ ಸೂಪರ್ಜೈಂಟ್ಸ್
ಲಕ್ನೋ ತಂಡ ನಿಕೋಲಸ್ ಪೂರನ್ (18 ಕೋಟಿ ರೂ.), ಮಾರ್ಕಸ್ ಸ್ಟೋಯಿನಿಸ್ (14 ಕೋಟಿ ರೂ.) ಮತ್ತು ಮಯಾಂಕ್ ಯಾದವ್ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ನಾಯಕನಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಲಕ್ನೋ ತಂಡದಲ್ಲಿ ರಿಟೇನ್ ಆಗುವುದಿಲ್ಲ ಎನ್ನಲಾಗಿದೆ. ಅವರು ಆರ್‌ಸಿಬಿ ಪರ ಆಡುವ ಸಾಧ್ಯತೆ ಹೆಚ್ಚಾಗಿದೆ. ಅನ್ಕ್ಯಾಪ್ಡ್ ಕೋಟಾದಡಿ ಆಯುಷ್ ಬದೋನಿ ರಿಟೇನ್ ಆಗಬಹುದು.
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನು ರಿಟೇನ್ ಮಾಡಿಕೊಂಡರೂ ನಾಯಕತ್ವ ನೀಡದಿರಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಅಕ್ಷರ್ ಪಟೇಲ್ ಜತೆಗೆ ಜೇಕ್ ಫ್ರೇಸರ್ ಮೆಕ್ಗುರ್ಕ್ ಅಥವಾ ಕುಲದೀಪ್ ಯಾದವ್ರನ್ನು ರಿಟೇನ್ ಮಾಡಿಕೊಳ್ಳಲು ಡೆಲ್ಲಿ ಬಯಸಿದೆ.
ಕೋಲ್ಕತ ನೈಟ್ರೈಡರ್ಸ್
ಹಾಲಿ ಚಾಂಪಿಯನ್ ಕೆಕೆಆರ್ ತಂಡ ಆಂಡ್ರೆ ರಸೆಲ್(18 ಕೋಟಿ ರೂ.) ಸುನೀಲ್ ನಾರಾಯಣ್ (14 ಕೋಟಿ ರೂ.) ಮತ್ತು ರಿಂಕು ಸಿಂಗ್ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಬಹುದು. ಹರ್ಷಿತ್ ರಾಣಾ (4 ಕೋಟಿ ರೂ.) ದೇಶೀಯ ಆಟಗಾರರಾಗಿ (ಅನ್ಕ್ಯಾಪ್ಡ್) ರಿಟೇನ್ ಆಗಲಿದ್ದಾರೆ. ಹಾಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ರಿಟೇನ್ ಮಾಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.
ಸನ್‌ರೈಸರ್ಸ್ ಹೈದರಾಬಾದ್
ಹಾಲಿ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ರನ್ನು 23 ಕೋಟಿ ರೂ.ಗೆ ರಿಟೇನ್ ಮಾಡಿಕೊಳ್ಳಲು ಮುಂದಾಗಿದೆ. ಜತೆಗೆ ಆಸೀಸ್‌ನ ಪ್ಯಾಟ್ ಕಮ್ಮಿನ್ಸ್ (18 ಕೋಟಿ ರೂ.), ಅಭಿಷೇಕ್ ಶರ್ಮ (14 ಕೋಟಿ ರೂ.) ಅವರನ್ನೂ ರಿಟೇನ್ ಮಾಡಿಕೊಳ್ಳಲಿದೆ ಎನ್ನಲಾಗಿದೆ.
ಮುಂಬೈ ಇಂಡಿಯನ್ಸ್
5 ಬಾರಿಯ ಚಾಂಪಿಯನ್ ಮುಂಬೈ ತಂಡ ಮಾಜಿ ನಾಯಕ ರೋಹಿತ್ ಶರ್ಮ (18 ಕೋಟಿ ರೂ.), ಜಸ್ಪ್ರೀತ್ ಬುಮ್ರಾ (18 ಕೋಟಿ ರೂ.), ಹಾರ್ದಿಕ್ ಪಾಂಡ್ಯ (14 ಕೋಟಿ ರೂ.), ಸೂರ್ಯಕುಮಾರ್ ಯಾದವ್ (14 ಕೋಟಿ ರೂ.), ತಿಲಕ್ ವರ್ಮ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಅವರಿಗೆ ಮುಂಬೈ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಶಶಾಂಕ್ ಸಿಂಗ್ ಮತ್ತು ಆಶುತೋಷ್ರನ್ನು ತಲಾ 4 ಕೋಟಿ ರೂ.ಗಳಿಗೆ ರಿಟೇನ್ ಮಾಡಿಕೊಳ್ಳಲು ಬಯಸಿದೆ. ಉಳಿದಂತೆ ವೇಗಿ ಅರ್ಷದೀಪ್ ಸಿಂಗ್ರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದ್ದರೂ, ಅವರಿಗಾಗಿ 18 ಕೋಟಿ ರೂ. ವ್ಯಯಿಸಲು ಸಿದ್ಧವಿಲ್ಲ. ಹೀಗಾಗಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಮೂಲಕ ಅರ್ಷದೀಪ್ರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ ಎನ್ನಲಾಗಿದೆ.
ರಾಜಸ್ಥಾನ ರಾಯಲ್ಸ್
ಚೊಚ್ಚಲ ಬಾರಿಯ ಚಾಂಪಿಯನ್ ರಾಜಸ್ಥಾನ್ ಸಂಜು ಸ್ಯಾಮ್ಸನ್ (18 ಕೋಟಿ ರೂ.), ಯಶಸ್ವಿ ಜೈಸ್ವಾಲ್ (14 ಕೋಟಿ ರೂ.) ಮತ್ತು ರಿಯಾನ್ ಪರಾಗ್ (11 ಕೋಟಿ ರೂ.) ರಿಟೇನ್ ಮಾಡಿಕೊಳ್ಳಲು ಬಯಸಿದೆ. ಇದರೊಂದಿಗೆ ಸಂದೀಪ್ ಶರ್ಮರನ್ನು (4 ಕೋಟಿ ರೂ.) ಅನ್ಕ್ಯಾಪ್ಡ್ ಆಗಿ ರಿಟೇನ್ ಮಾಡಿಕೊಳ್ಳಲಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಅವರನ್ನು ಆರ್ಟಿಎಂ ಮೂಲಕ ರಿಟೇನ್ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿರುವ ಕಾರಣ ಬಲಿಷ್ಠ ತಂಡ ರೂಪಿಸುವ ಸಾಧ್ಯತೆ ಇದೆ.
ಗುಜರಾತ್ ಟೈಟಾನ್ಸ್
ಗುಜರಾತ್ ತಂಡ ನಾಯಕ ಶುಭಮಾನ್ ಗಿಲ್ (18 ಕೋಟಿ ರೂ.), ರಶೀದ್ ಖಾನ್ (14 ಕೋಟಿ ರೂ.) ಮತ್ತು ಮೊಹಮದ್ ಶಮಿ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದೆ. ರಾಹುಲ್ ತೆವಾಟಿಯಾರನ್ನು (4 ಕೋಟಿ ರೂ.) ಅನ್ಕ್ಯಾಪ್ಡ್ ಆಗಿ ರಿಟೇನ್ ಮಾಡಿಕೊಳ್ಳಲಿದೆ.