Friday, 22nd November 2024

Baby Death: ಹೆರಿಗೆ ನೋವು ಕಾಣಿಸಿಕೊಂಡರೂ ರಜೆ ಕೊಡದ ಮೇಲಾಧಿಕಾರಿ; ಗರ್ಭದಲ್ಲೇ ಮಗು ಸಾವು

Baby Death

ಒಡಿಶಾ: ಸಾಮಾನ್ಯವಾಗಿ ಸರ್ಕಾರಿ ನೌಕರರಾದ ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಆರು ತಿಂಗಳ ರಜೆ ನೀಡುತ್ತದೆ. ಆದರೆ ಒಡಿಶಾದ ಕೇಂದ್ರ ಪಾರಾ ಜಿಲ್ಲೆಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡರೂ ಅಲ್ಲಿನ ಅಧಿಕಾರಿ ಗರ್ಭಿಣಿಗೆ ರಜೆ ನೀಡದ ಕಾರಣ ಗರ್ಭದಲ್ಲೇ(Baby Death) ಮಗು ಸಾವನ್ನಪ್ಪಿದ ಅಮಾನುಷ ಘಟನೆ ನಡೆದಿದೆ.

ದೇರಾಬಿಶ್ ಬ್ಲಾಕ್‍ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿ ಬಾರ್ಷಾ ಅವರಿಗೆ ಕೆಲಸದ ಸಮಯದಲ್ಲಿ ಅವಧಿಗೂ ಮೊದಲೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತಂತೆ. ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಸ್ನೇಹಲತಾ ಸಾಹೂ ಮತ್ತು ಇತರ ಅಧಿಕಾರಿಗಳ ಬಳಿ ವಿನಂತಿಸಿದ್ದಾರೆ.  ಆದರೆ ಅವರು ಮಹಿಳೆಯ ಮನವಿಯನ್ನು ನಿರ್ಲಕ್ಷಿಸಿ , ಕೆಟ್ಟದಾಗಿ ವರ್ತಿಸಿದ್ದರು. ನಂತರ, ಬಾರ್ಷಾ ಅವರ ಸಂಬಂಧಿಕರು ಅವರನ್ನು ಕೇಂದ್ರಪಾರಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರಿಗೆ ಅಲ್ಟ್ರಾಸೌಂಡ್ ಮಾಡಿಸಿದಾಗ ಅವರ ಹೊಟ್ಟೆಯಲ್ಲಿ ಮಗು ಸತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಸಿಡಿಪಿಒ ಅವರ ಮಾನಸಿಕ ಕಿರುಕುಳ ಮತ್ತು ಸಂಪೂರ್ಣ ನಿರ್ಲಕ್ಷ್ಯ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಸಾಹೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಕೇಂದ್ರಪಾರಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನೀಲು ಮೊಹಾಪಾತ್ರ ಅವರು  “ದೂರು ಸ್ವೀಕರಿಸಿ ಜಿಲ್ಲಾಡಳಿತವು ಈ ಬಗ್ಗೆ ತನಿಖೆ ನಡೆಸಿದ ನಂತರ ವರದಿ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ (ಡಿಎಸ್‍ಡಬ್ಲ್ಯೂಒ) ನಿರ್ದೇಶನ ನೀಡಿದೆ.

ಇದನ್ನೂ ಓದಿ:ಎಂಜಲು ಸಿಡಿಸಿ ರೊಟ್ಟಿ ಮಾಡಿ ಬಡಿಸಿದ ಇರ್ಷಾದ್‌ ಬಂಧನ; ಹೋಟೆಲ್ ಬಂದ್‌!

ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಪಾರ್ವತಿ ಪರಿದಾ ಅವರು ಘಟನೆಯ ಬಗ್ಗೆ ಕೇಂದ್ರಪಾರಾ ಕಲೆಕ್ಟರ್ ಅವರೊಂದಿಗೆ ಚರ್ಚಿಸಿದ್ದಾರೆ ಮತ್ತು ತಕ್ಷಣವೇ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ, “ಬಾರ್ಷಾ ಅವರಿಗೆ ಹೊಟ್ಟೆ ನೋವು ಇರುವುದು ನನಗೆ ತಿಳಿದಿರಲಿಲ್ಲ” ಎಂದು ಸಮಾಜಾಯಿಷಿ ನೀಡಿದ್ದಾರೆ.