Wednesday, 30th October 2024

Viral Video: ರಂಗೋಲಿ ಹಾಕುತ್ತಿದ್ದ ಹುಡುಗಿಯರ ಮೇಲೆ ಕಾರು ಹತ್ತಿಸಿದ ಬಾಲಕ; ಸ್ಥಿತಿ ಗಂಭೀರ

Viral Video

ಇಂದೋರ್: ಹಬ್ಬದ ಸಂಭ್ರಮಕ್ಕೆ ಈಗಾಗಲೇ ಎಲ್ಲರೂ ತಯಾರಾಗಿದ್ದಾರೆ. ಹಬ್ಬದ ಕಳೆ ಹೆಚ್ಚಿಸಲು ಮನೆಮುಂದೆ ರಂಗೋಲಿ ಹಾಕಿ ಸಂಭ್ರಮಪಡುತ್ತಾರೆ. ಆದರೆ ಇಂದೋರ್‌ನಲ್ಲಿ ಹಬ್ಬದ ತಯಾರಿ ನಡೆಸುತ್ತಿದ್ದ ಇಬ್ಬರು ಹುಡುಗಿಯರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಘೋರ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

Viral Video

ವೈರಲ್ ಆದ ವಿಡಿಯೊದಲ್ಲಿ  ದೀಪಾವಳಿ ಹಬ್ಬಕ್ಕಾಗಿ ಹುಡುಗಿಯರಿಬ್ಬರು ತಮ್ಮ ಮನೆಯ ಹೊರಗೆ ಕುಳಿತು ರಂಗೋಲಿ ಹಾಕುತ್ತಿದ್ದಾಗ ವೇಗವಾಗಿ ಬಂದ ಎಸ್‌ಯುವಿ ಕಾರು ಚಲಾಯಿಸಿಕೊಂಡು ಬಂದ 17 ವರ್ಷದ ಬಾಲಕ ಏಕಾಏಕಿ ಅವರಿಗೆ ಡಿಕ್ಕಿ ಹೊಡೆದು ನಂತರ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ಗುದ್ದಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಹುಡುಗಿಯರಿಗೆ ಗಂಭೀರ ಗಾಯಗಳಾಗಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆ ಸ್ಥಳದಲ್ಲಿ ಅಳವಡಿಸಲಾದ  ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಘಟನೆ ರೆಕಾರ್ಡ್ ಆಗಿದೆ. ಸ್ಥಳಕ್ಕೆ ಬಂದ ಸ್ಥಳೀಯರು ತಕ್ಷಣ ಹುಡುಗಿಯರನ್ನು ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಆಕ್ರೋಶಗೊಂಡ ಜನರು ವಾಹನವನ್ನು ಧ್ವಂಸಗೊಳಿಸಿದ್ದಾರೆ. ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಗಾಯಗೊಂಡ ಹುಡುಗಿಯರನ್ನು ಪವನ್ ಪ್ರಜಾಪತ್ ಅವರ ಪುತ್ರಿ ಪ್ರಿಯಾಂಶಿ (21) ಮತ್ತು ಆನಂದ್ ಪ್ರಜಾಪತ್ ಅವರ ಪುತ್ರಿ ನವ್ಯಾ (13) ಎಂದು ಗುರುತಿಸಲಾಗಿದೆ. ನವ್ಯಾ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪ್ರಿಯಾಂಶಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ನವ್ಯಾ ಅವರ ಅಜ್ಜ ಜಗದೀಶ್ ಪ್ರಜಾಪತ್ ತಿಳಿಸಿದ್ದಾರೆ. ದೀಪಾವಳಿಯ ಸಂಭ್ರಮಕ್ಕಾಗಿ ತಯಾರಿ ನಡೆಸುತ್ತಿದ್ದ ಎರಡೂ ಕುಟುಂಬಗಳು ಈ ಘಟನೆಯಿಂದ ದುಃಖಕ್ಕೆ ಒಳಗಾಗಿದ್ದಾರೆ. 

ಇದನ್ನೂ ಓದಿ:ಹೆರಿಗೆ ನೋವು ಕಾಣಿಸಿಕೊಂಡರೂ ರಜೆ ಕೊಡದ ಮೇಲಾಧಿಕಾರಿ; ಗರ್ಭದಲ್ಲೇ ಮಗು ಸಾವು

ಅಪಘಾತ ಮಾಡಿದ ಕಾರಿನೊಳಗೆ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಹಿಂದಿನ ದಿನ ಚಾಲಕ ಅದೇ ರಸ್ತೆಯಲ್ಲಿ ಅಜಾಗರೂಕತೆಯಿಂದ ಡ್ರೈವಿಂಗ್  ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.