Wednesday, 30th October 2024

Darshan Thoogudeepa Bail : ಬೇಲ್‌ ಪಡೆದ ದರ್ಶನ್‌ ಜೈಲಿನಿಂದ ಹೊರಬರುವುದು ಯಾವಾಗ?

Darshan Thoogudeepa Bail

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸದಲ್ಲಿ ನಟ ದರ್ಶನ್‌ಗೆ ಬೇಲ್ (Darshan Thoogudeepa Bail) ಸಿಕ್ಕಿರುವುದೇನೋ ಸರಿ. ಆದರೆ ಅವರು ಯಾವಾಗ ಜೈಲಿನಿಂದ ಹೊರಕ್ಕೆ ಬರುತ್ತಾರೆ ಎಂಬ ಅನುಮಾನ ಅಭಿಮಾನಿಗಳು ಹಾಗೂ ಆಪ್ತರಿಗೆ ಶುರುವಾಗಿದೆ. ಯಾಕೆಂದರೆ ಸಾಮಾನ್ಯ ಪ್ರಕರಣಗಳಲ್ಲಿ ಬೇಲ್ ಸಿಕ್ಕ ತಕ್ಷಣವೇ ಜೈಲಿನಿಂದ ಕೈದಿಗಳನ್ನು ಬಿಡುವಂತಿಲ್ಲ. ಬದಲಾಗಿ ನಿಗದಿತ ಪ್ರಕ್ರಿಯೆಗಳನ್ನು ಮುಗಿಸಬೇಕಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಇದು ವಾರಗಟ್ಟಲೆ ಸಾಗುತ್ತದೆ. ಇದೇ ಕೇಸಲ್ಲಿ ಜೈಲು ಸೇರಿದ್ದ ಕೆಲವು ಆರೋಪಿಗಳ ಕತೆಯೂ ಇದೇ ಆಗಿತ್ತು. ಅವರು ಬೇಲ್ ಪಡೆದ ಒಂದು ವಾರದ ಬಳಿಕ ಹೊರ ಬಂದಿದ್ದರು. ಹೀಗಾಗಿ ದರ್ಶನ್ ಎಷ್ಟು ಹೊತ್ತಿಗೆ ಹೊರಕ್ಕೆ ಕಾಲಿಡುತ್ತಾರೆ ಎಂಬ ಅನುಮಾನ ಕಾಡಿದೆ.

ದರ್ಶನ್​ಗೆ ಆರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. ಅವರಿಗೆ ಇರುವ ಬೆನ್ನು ಹುರಿಯ ಸಮಸ್ಯೆಯ ಚಿಕಿತ್ಸೆಗಾಗಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಬೆಳಿಗ್ಗೆ 10:45ರ ವೇಳೆಗೆ ನ್ಯಾಯಮೂರ್ತಿಗಳು ಆದೇಶ ಪ್ರಕಟಿಸಿದ್ದಾರೆ. ಆರು ವಾರ ಅವರಿಗೆ ಜಾಮೀನು ಸಿಕ್ಕಿದೆ.

ಇದೀಗ ಜಾಮೀನು ಆದೇಶದ ಪ್ರತಿಯನ್ನು ನ್ಯಾಯಾಲಯವು ಸಂಬಂಧಪಟ್ಟ ಜೈಲಿಗೆ ಕಳಿಸಬೇಕಾಗುತ್ತದೆ. ಅದಕ್ಕೆ ಮುನ್ನ ಜಾಮೀನುದಾರರ ದರ್ಶನ್‌ ಷರತ್ತುಗಳನ್ನು ಪೂರೈಸಬೇಕು. ಆದಾಗ್ಯೂ ದರ್ಶನ್ ಪ್ರಕರಣದಲ್ಲಿ ಇವೆಲ್ಲವೂ ತ್ವರಿತವಾಗಿ ಮುಕ್ತಾಯವಾಗಬಹುದು. ದರ್ಶನ್​ ಬಹುತೇಕ ಇಂದೇ ಬುಧವಾರವೇ ಹೊರಕ್ಕೆ ಬರಲಿದ್ದಾರೆ. ನ್ಯಾಯಾಲಯದ ಆದೇಶ ಪ್ರತಿಯನ್ನು ತಕ್ಷಣವೇ ಜೈಲಿಗೆ ತಲುಪಿಸುವ ಕೆಲಸ ನಡೆಯಲಿದೆ. ಆದೇಶ ಪ್ರತಿಯನ್ನು ಮುದ್ರಣ ಮಾಡಿಕೊಂಡು ದರ್ಶನ್ ಪರ ವಕೀಲರ ತಂಡ ಬಳ್ಳಾರಿ ಜೈಲಿಗೆ ಹೋಗಿ ತಲುಪಿಸುತ್ತಾರೆ. ಜೈಲು ಸಿಬ್ಬಂದಿ ಅದನ್ನು ಪಡೆದು ಬಿಡುಗಡೆ ಮಾಡಲಿದ್ದಾರೆ.

ಸಂಜೆ ವೇಳೆಗೆ ದರ್ಶನ್​ರ ಜಾಮೀನು ಪ್ರತಿ ಬಳ್ಳಾರಿ ಜೈಲು ತಲುಪಲಿದೆ. ಜಾಮೀನು ಆದೇಶ ದೊರೆತಾಗ ಬಿಡುಗಡೆ ಮಾಡಬೇಕು ಎಂಬ ನಿಯಮ ಇರುವ ಕಾರಣ ತಡವಾದರೂ ಸಹ ಬಿಡುಗಡೆ ಮಾಡಲಿದ್ದಾರೆ. ಬಿಗ್​ಬಾಸ್ ಮನೆಯಿಂದ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್ 14 ದಿನಗಳ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಜೈಲಿನಿಂದ ಬಿಡುಗಡೆ ಆಗಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನೂಓದಿ: Actor Darshan: ಜಾಮೀನು ನೀಡಿದ ಹೈಕೋರ್ಟ್‌ ದರ್ಶನ್‌ಗೆ ವಿಧಿಸಿದ ಶರತ್ತುಗಳು ಏನೇನು?

ದರ್ಶನ್‌ ಬೇಲ್‌ನಲ್ಲಿ ಕೆಲವೊಂದು ಷರತ್ತುಗಳನ್ನು ಹಾಕಲಾಗಿದೆ. ಅದರಲ್ಲಿ ಅವರಿಗೆ ಆಸ್ಪತ್ರೆಗೆ ದಾಖಲಾಗುವ ಷರತ್ತುಗಳೂ ಇವೆ. ಹೀಗಾಗಿ ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಅವರು ಆಸ್ಪತ್ರೆ ಸೇರಲಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಕಡೆಗೆ ಹೋದರೆ ಬೇಲ್ ಕಂಡೀಷನ್ ಮುರಿದಂತಾಗುತ್ತದೆ.