ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕನ್ನಡ ಸಂಘ, ಕಸಾಪ, ರೋಟರಿ ಕ್ಲಬ್ ಹಾಗು ಎಸ್.ಬಿ.ಸಿ.ಬಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನ. ೧ ರಿಂದ ೫ ರವರೆಗೆ ಕನ್ನಡ ಸಂಘದ ಆವರಣದಲ್ಲಿ ಡಾ. ರಾಜಕುಮಾರ್ ಜೀವನ ಕಲಾ ಪಯಣದ ಸಮಗ್ರ ಪ್ರದರ್ಶಿನಿ ಪಂಚದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ರೇಣುಕಸ್ವಾಮಿ ತಿಳಿಸಿದರು.
ಡಾ.ರಾಜ್ ಅಭಿಮಾನಿ ರೂಪೇಶ್ ಅವರು ಸಂಗ್ರಹಿಸಿ ರೂಪಿಸಿರುವ ಡಾ. ರಾಜ್ ಚಿತ್ರಗಳು, ಅವರ ಕಲೆ, ಹಾಗು ಬದುಕು ಬರಹವನ್ನು ಒಳಗೊಂಡ ಈ ಪ್ರದರ್ಶನವನ್ನು ಶಾಸಕ ಸಿ.ಬಿ.ಸುರೇಶಬಾಬು ಉದ್ಘಾಟಿಸಲಿದ್ದಾರೆ. ಪುರಸಭಾ ಅಧ್ಯಕ್ಷ ಕೆಂಗಲ್ ದಯಾನಂದ್, ತಹಸೀಲ್ದಾರ್ ಪುರಂದರ್, ತಾಲ್ಲೂಕು ಈಡಿಗರ ಸಂಘದ ಅಧ್ಯಕ್ಷ ನಾಗರಾಜ್ ಸೇರಿ ಇತರರು ಆಗಮಿಸಲಿದ್ದಾರೆ ಎಂದು ಸೋಮವಾರ ವಿವರಿಸಿದರು.
ಅಭಿಮಾನಿ ರೂಪೇಶ್ ಮಾತನಾಡಿ ನಾನು ಐದನೇ ವಯಸ್ಸಿನಲ್ಲಿ ಇದ್ದಾಗಲೇ ರಾಜಕುಮಾರ್ ಬಗ್ಗೆ ಆಸಕ್ತಿ ಬೆಳಸಿ ಕೊಂಡವನು. ನನ್ನ ತಾಯಿ ಕೂಡ ರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದು ನನ್ನ ಜನನದ ಹಿಂದಿನ ದಿನ ಕೂಡ ರಾಜ್ ಅಭಿನಯದ ಚಿತ್ರ ವೀಕ್ಷಿಸಿದ್ದಾರೆ. ನನ್ನ ತಾಯಿ, ಸ್ನೇಹಿತರು, ಹಿತೈಷಿಗಳು ಕಲಾ ಪಯಣ ಸಾಗಲು ನೆರವಾದರು. ಅವರ ಬೆಂಬಲದಿಂದಾಗಿ ತಮ್ಮ ಸಂಗ್ರಹದ ಕಲೆ ಬೆಳಕಿಗೆ ಬರಲು ನೆರವಾಯಿತು. ನಿಮ್ಮಿಂದ ಪ್ರೋತ್ಸಾಹ ಸಿಕ್ಕರೆ ಈ ಕಾರ್ಯಕ್ರಮಕ್ಕೆ ಹೊಸ ಮೆರಗು ಸಿಗುತ್ತದೆ ಎಂದು ತಿಳಿಸಿದರು.
ರಾಜ್ ಸಮಗ್ರ ಚರಿತ್ರೆ ಬರೆದ ರುಕ್ಕೋಜಿ ಅವರು ನನ್ನ ಬಳಿ ಇರುವ ರಾಜ್ ಸಂಗ್ರಹದ ಪುಟಗಳನ್ನು ತೋರಿಸುವಂತೆ ಕೇಳಿದಾಗ ಅನಿವಾರ್ಯ ಕಾರಣಗಳಿಂದ ಅವರಿಗೆ ತೋರಿಸಲು ಸಾಧ್ಯವಾಗಲಿಲ್ಲ ಎಂದು ರೂಪೇಶ್ ನೊಂದು ನುಡಿದರು. ಕನ್ನಡ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಕಸಾಪ ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ, ರೋಟರಿ ಅಧ್ಯಕ್ಷ ಲಿಂಗದೇವರು ಹಾಜರಿದ್ದರು.