Wednesday, 30th October 2024

Nishadh Yusuf : ಸೂರ್ಯ ಅಭಿನಯದ ‘ಕಂಗುವಾ’ ಸಿನಿಮಾದ ಎಡಿಟರ್‌ ನಿಗೂಢ ಸಾವು! ಆಗಿದ್ದಾದರೂ ಏನು?

Nishadh Yusuf

ತಿರುವನಂತರಪುರಂ : ಖ್ಯಾತ ಚಲನಚಿತ್ರ ಎಡಿ‌ಟರ್ ನಿಶಾದ್ ಯೂಸುಫ್(Nishadh Yusuf) ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪಣಂಪಲ್ಲಿನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣನ್ನು ದಾಖಲಿಸದ ಪೊಲೀಸರು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸುತ್ತಿದೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ನಿಶಾದ್ ಯೂಸುಫ್ ದಕ್ಷಿಣ ಭಾರತದ ಖ್ಯಾತ ಚಿತ್ರ ಸಂಕಲನಕಾರರಾಗಿದ್ದರು. 2022 ರಲ್ಲಿ ಯೂಸುಫ್ ಕೇರಳ ರಾಜ್ಯ ನೀಡುವ ಅತ್ಯುತ್ತಮ ಚಲನಚಿತ್ರ ಎಡಿಟರ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸೂರ್ಯ ಅಭಿನಯದ ಮುಂಬರುವ ಕಂಗುವ ( Kanguva) ಚಿತ್ರದ ಎಡಿಟರ್‌ ಆಗಿ ಕೆಲಸ ಮಾಡಿದ್ದರು.

‘ತಳ್ಳುಮಾಲಾ’, ‘ಚಾವೆರ್’, ‘ಉಂಡಾ’, ‘ಸೌದಿ ವೆಲ್ಲಕ್ಕ’, ‘ಒನ್’, ‘ಆಪರೇಷನ್ ಜಾವಾ’, ‘ಬಾಝೂಕಾ’, ಮತ್ತು ಮುಂಬರುವ ಬಹುನಿರೀಕ್ಷಿತ ಕಂಗುವಾ ಚಿತ್ರದ ಎಡಿಟರ್‌ ಆಗಿ ಕೆಲಸ ಮಾಡಿದ್ದರು. ತಳ್ಳುಮಾಳ’ ಸಿನಿಮಾಗೆ ಅತ್ಯುತ್ತಮ ಸಂಪಾದಕ ಪ್ರಶಸ್ತಿ ಲಭಿಸಿದೆ.

ನಿಶಾದ್ ಯೂಸುಫ್ ಅವರ ಸಾವನ್ನು ಕೇರಳದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ (FEFKA) ನಿರ್ದೇಶಕರ ಒಕ್ಕೂಟವು ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ದೃಢಪಡಿಸಿದೆ. “ಬದಲಾಗುತ್ತಿರುವ ಮಲಯಾಳಂ ಚಿತ್ರರಂಗದ ಸಮಕಾಲೀನ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಿಟರ್ ನಿಶಾದ್ ಯೂಸುಫ್ ಅವರ ಅನಿರೀಕ್ಷಿತ ನಿಧನವನ್ನು ಚಲನಚಿತ್ರ ಜಗತ್ತು ಶೀಘ್ರವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‌ಅವರ ಕುಟುಂಬವು ಅವರ ಅಗಲಿಕೆಯನ್ನು ತಡೆದುಕೊಳ್ಳುವಂತಾಗಲಿ” ಎಂದು ಹೇಳಿದೆ.

ಇದನ್ನೂ ಓದಿ : Kanguva First Review: ಬಿಡುಗಡೆ ಮುನ್ನವೇ ಹೊರಬಿತ್ತು ʼಕಂಗುವಾʼ ರಿವ್ಯೂ; ಹೇಗಿದೆ ಕಾಲಿವುಡ್‌ ಸ್ಟಾರ್‌ ಸೂರ್ಯ ಸಿನಿಮಾ?

ನಿಶಾದ್ ಯೂಸುಫ್ ಮೂಲತಃ ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್ ಮೂಲದವರಾಗಿದ್ದು, ಈಗ ಕೊಚ್ಚಿಯಲ್ಲಿ ವಾಸವಾಗಿದ್ದರು. ಮೃತರು ಮಗ , ಮಗಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ನಿಶಾದ್‌ ಯೂಸುಫ್‌ ಅಕಾಲಿಕ ಮರಣಕ್ಕೆ ಕೇರಳದ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿಶಾದ್‌ ಯೂಸುಫ್‌ ಅವರ ಬಹು ನಿರೀಕ್ಷಿತ ಚಿತ್ರ ಕಂಗುವ ಎರಡು ವಾರಗಳಲ್ಲಿ ಅಂದರೆ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ನಡೆದ ಚೆನ್ನೈನಲ್ಲಿ ಆಯೋಜಿಸಲಾದ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಯುಸೂಪಫ್‌ ಕೊನೆಯದಾಗಿ‌  ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ಕಾಂಗುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಈ ವಿಷಯವನ್ನು ಸ್ವತಃ ಸೂರ್ಯನೇ ಬಹಿರಂಗಪಡಿಸಿದ್ದರು.