Wednesday, 30th October 2024

Viral News: ಕರ್ನಾಟಕವನ್ನು ಮರ್ಮಾಂಗಕ್ಕೆ ಹೋಲಿಸಿದ ಇನ್ಫ್ಲೂಯೆನ್ಸರ್‌ನ ಮರ್ಮಕ್ಕೆ ಬಿಸಿ ಮುಟ್ಟಿಸಿದ ಕನ್ನಡಿಗರು

Viral News

ಮುಂಬೈ: ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ದಿನಗಣೆ ಆರಂಭವಾಗಿದ್ದು, ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ. ಈ ಮಧ್ಯೆ ಕರ್ನಾಟಕಕ್ಕೆ, ಕನ್ನಡಿಗರಿಗೆ ಅವಮಾನ ಮಾಡಿದ ಮಹಾರಾಷ್ಟ್ರದ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಒಬ್ಬನಿಗೆ ತಕ್ಕ ಶಾಸ್ತಿ ಮಾಡಲಾಗಿದ್ದು, ಕನ್ನಡಿಗರ ತಾಕತ್ತು, ಶಕ್ತಿ ಏನು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ. ಕರ್ನಾಟಕವನ್ನು ತನ್ನ ಜನನಾಂಗಕ್ಕೆ ಹೋಲಿಸಿ ಅವಮಾನ ಮಾಡಿದ್ದ ದೇವ್‌ ಶರ್ಮಾ ಪೊಲೀಸರ ಎಚ್ಚರಿಕೆಯಿಂದ ಥಂಡಾ ಹೊಡೆದಿದ್ದು, ಇದೀಗ ಕ್ಷಮೆಯಾಚಿಸಿದ್ದಾನೆ (Viral News).

ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ರೀಲ್ಸ್‌ ಮಾಡಿದ್ದ ದೇವ್‌ ಶರ್ಮಾ ಕರ್ನಾಟಕಕ್ಕೆ, ಕನ್ನಡಿಗರಿಗೆ ಅವಮಾನ ಮಾಡಿದ್ದ, ಅವಾಚ್ಯ ಪದಗಳಿಂದ ನಿಂದಿಸಿದ್ದ. ಇದರಿಂದ ಕೆಂಡಾಮಂಡಲರಾದ ಕನ್ನಡಿಗರು ಆತನ ವಿರುದ್ಧ ಕಿಡಿ ಕಾರಿದ್ದರು. ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರನ್ನು ಟ್ಯಾಗ್‌ ಮಾಡಿ ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಕರ್ನಾಟಕ ಪೊಲೀಸರು ಮುಂಬೈ ಪೊಲೀಸರ ಸಂಪರ್ಕ ಸಾಧಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

ಅದರಂತೆ ಪೊಲೀಸರು ಆತನನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಥರಗುಟ್ಟಿದ ಆತ ಕನ್ನಡಿಗರ ಕ್ಷಮೆ ಕೋರಿ ಇದೀಗ ವಿಡಿಯೊ ಮಾಡಿದ್ದಾನೆ. ʼʼಇನ್ನು ಮುಂದೆ ಯಾರಿಗೂ ನೋವಾಗದ ರೀತಿಯಲ್ಲಿ ಕ್ರಿಯಾತ್ಮಕ ವಿಡಿಯೊಗಳನ್ನು ಮಾಡುತ್ತೇನೆ. ದಯವಿಟ್ಟು ಕ್ಷಮಿಸಿ. ನನ್ನ ತಪ್ಪಿನ ಅರಿವು ಮೂಡಿಸಿದ್ದಕ್ಕಾಗಿ ಬೆಂಗಳೂರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆʼʼ ಎಂದು ದೇವ್ ಶರ್ಮಾ ತಿಳಿಸಿದ್ದಾನೆ.

ಆಕ್ಷೇಪಾರ್ಹ ವಿಡಿಯೊದಲ್ಲಿ ಏನಿತ್ತು?

ಉತ್ತರ ಭಾರತದ ಕೆಲವು ಎಡಬಿಡಂಗಿಗಳು ಕರ್ನಾಟಕವನ್ನು, ಕನ್ನಡಿಗರನ್ನು ಮೊದಲು ಅವಮಾನ ಮಾಡಿ ಬಳಿಕ ಕ್ಷಮೆಯಾಚಿಸುವ ಪ್ರವೃತ್ತಿಯನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಉತ್ತರ ಭಾರತದ ಮಹಿಳೆಯೊಬ್ಬಳು ಕನ್ನಡಿಗರನ್ನು ಕೆಣಕಲು ಹೋಗಿ ಉದ್ಯೋಗವನ್ನೇ ಕಳೆದುಕೊಂಡಿದ್ದಳು. ಬಳಿಕ ಕ್ಷಮೆಯಾಚಿಸಿ ತಿಪ್ಪೆ ಸಾರಿಸಲು ಯತ್ನಿಸಿದ್ದಳು. ದೇವ್‌ ಶರ್ಮಾ ಕೂಡ ಅಂತಹದ್ದೇ ಅಧಿಕಪ್ರಸಂಗ ಮಾಡಲು ಹೋಗಿ ಇದೀಗ ಬುದ್ಧಿ ಕಲಿತಿದ್ದಾನೆ.

ಮೊದಲ ವಿಡಿಯೊದಲ್ಲಿ ಟಿವಿ ಪರದೆಯಲ್ಲಿ ಭಾರತದ ನಕ್ಷೆಯನ್ನು ತೋರಿಸುತ್ತಾ ದಿಲ್ಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಕರ್ನಾಟಕ ಎಲ್ಲಿದೆ ಎಂದು ಓರ್ವ ಕೇಳುತ್ತಾನೆ. ಅದಕ್ಕೆ ದೇವ್‌ ಶರ್ಮಾ ಉತ್ತರಿಸುತ್ತಾ, ದಿಲ್ಲಿ ಮತ್ತು ರಾಜಸ್ಥಾನ ಇಲ್ಲಿದೆ ಎಂದು ನಕ್ಷೆಯನ್ನು ತೋರಿಸುತ್ತಾನೆ. ಬಳಿಕ ಮುಂಬೈ ಹೃದಯದಲ್ಲಿದೆ ಎನ್ನುತ್ತಾನೆ. ಕೊನೆಗೆ ಕರ್ನಾಟಕ ಎಲ್ಲಿದೆ ಎಂದು ಕೇಳಿದಾಗ ದೇವ್‌ ಶರ್ಮಾ ಮೂತ್ರ ಮಾಡುವ ಜಾಗವನ್ನು ತೋರಿಸಿದ್ದಾನೆ.

ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವರ ಸಹನೆಯ ಕಟ್ಟೆ ಒಡೆದಿದೆ. ಆತನಿಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಇದರಿಂದ ಕುಪಿತನಾದ ದೇವ್‌ ಶರ್ಮಾ ಸರಣಿ ವಿಡಿಯೊಗಳನ್ನು ಮಾಡಿ ಕನ್ನಡಿಗರನ್ನು ಮತ್ತಷ್ಟು ಕೆಣಕ್ಕಿದ್ದಾನೆ. ʼʼನೀವು ದೇಶದ ಎಲ್ಲ ಜನರಿಗೆ ಕನ್ನಡ ಅಂತಾ ಹೇಳಿ ಎಂದು ಯಾಕೆ ಒತ್ತಾಯ ಮಾಡ್ತೀರಿ? ನೀವು ದಿಲ್ಲಿ, ಮುಂಬೈ ಎಲ್ಲೆಡೆ ಹೋಗಿ, ಪಾಕಿಸ್ತಾನಕ್ಕೆ ಹೋಗಿ ಆಗ ಗೊತ್ತಾಗುತ್ತದೆ. ಪಾಕಿಸ್ತಾನದಲ್ಲಿ ಕನ್ನಡ ಅಂತ ಹೇಳಿ ಆಗ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ. ಹರಿಯಾಣಕ್ಕೆ ಹೋಗಿ ಕನ್ನಡ ಮಾತನಾಡಿ ಎಂದು ಹೇಳಿದರೆ ಬುದ್ಧಿ ಕಲಿಸುತ್ತಾರೆʼʼ ಎಂದೆಲ್ಲ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.

ಇದಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದಾಗಲೂ ಸುಮ್ಮನಾಗದ ಆತ ಮತ್ತೆ, ʼʼಇಡೀ ದೇಶದಲ್ಲಿಯೇ ಕರ್ನಾಟಕಕ್ಕೆ ಕೆಟ್ಟ ಹೆಸರಿದೆ. ನಾನು ಏನೇ ಮಾತನಾಡಿದರೂ ನೀವೇನೂ ಕಿತ್ತುಕೊಳ್ಳಲು ಆಗುವುದಿಲ್ಲ. ನಿಮ್ಮ ಬೆದರಿಕೆಗೆ ನಾನೇನೂ ಹೆದರುವುದಿಲ್ಲ. ನೀವು ಗಂಡಸರಾಗಿದ್ದರೆ ನನ್ನ ಮುಂದೆ ಬಂದು ಮಾತನಾಡಿʼʼ ಎಂದು ಕನ್ನಡಿಗರಿಗೆ ಸವಾಲು ಹಾಕಿದ್ದಾನೆ.

ಸದ್ಯ ಆತನ ರೋಷಾವೇಶವೆಲ್ಲ ತಣ್ಣಗಾಗಿದೆ. ಪೊಲೀಸರ ಎಚ್ಚರಿಕೆಗೆ ಹೆದರಿ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾನೆ. ಈ ಮೂಲಕ ಕನ್ನಡಿಗರ ಹೋರಾಟ, ಒಗ್ಗಟ್ಟು ಮತ್ತೊಮ್ಮೆ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!