ನಗರದಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪು ಮೊಟಾರ್ ವಿತರಣೆ
ಶಿರಾ: ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಕಾನೂನು ತಂದ ಪರಿಣಾಮ ಪ.ಜಾತಿ ಮತ್ತು ಪಂಗಡದವರಿಗೆ ಸುಮಾರು ೩೫ ಸಾವಿರ ಕೋಟಿ ಅನುದಾನ ಸಿಗುತ್ತಿದೆ. ಈ ರೀತಿ ಕಾನೂನು ತಂದಿರುವುದು ಇಡೀ ಭಾರತ ದೇಶದಲ್ಲಿ ಕರ್ನಾಟಕ ಮೊದಲನೆಯದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ಅವರು ಮಂಗಳವಾರ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ಆದಿಜಾಂಭವ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಯಡಿ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಿಸಿ ಮಾತನಾಡಿದರು. ನಾನು ಕಾನೂನು ಸಚಿವನಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಜನಸಂಖ್ಯಾವಾರು ಅನುದಾನ ಒದಗಿಸಬೇಕೆಂದು ಕಾನೂನು ಮಾಡುವಂತೆ ತಿಳಿಸಿದಾಗ. ಅದಕ್ಕೆ ಒಪ್ಪಿ ಜನಸಂಖ್ಯಾವಾರ ಅನುದಾನ ಮೀಸಲಿಡಲು ಕಾನೂನು ತಂದ ಪರಿಣಾಮ ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರಿಗೆ ಸಾವಿರಾರು ಕೊಟಿ ಅನುದಾನ ಹೆಚ್ಚಳವಾಗಿದೆ ಎಂದರು.
ಈ ಬಾರಿ ಮಳೆ ವೈಪರಿತ್ಯದಿಂದ ಶಿರಾ ತಾಲೂಕಿನಲ್ಲಿ ಸರಿಯಾಗಿ ಮಳೆ ಬರಲಿಲ್ಲ. ಆದರೂ ಹೇಮಾವತಿ ನೀರಿನಿಂದ ತಾಲೂಕಿನ ೨೦ ಕೆರೆಗಳು ಹಾಗೂ ಕಳ್ಳಂಬೆಳ್ಳದಿAದ ಮದಲೂರು, ಹೇರೂರುವರೆಗೂ ಬ್ಯಾರೇಜ್ಗಳು ತುಂಬಿವೆ. ಇದರಿಂದ ಅಂತರ್ಜಲ ಹೆಚ್ಚಾಗಿದೆ ಎಂದ ಅವರು ನಾಳೆ ಶಿರಾಕ್ಕೆ ದೊಡ್ಡ ಕೈಗಾರಿಕೋದ್ಯಮಿಯನ್ನು ಬರಮಾಡಿ ಕೊಳ್ಳುತ್ತಿದ್ದೇನೆ. ಅವರು ಶಿರಾದಲ್ಲಿ ೫೦೦೦ ಮಂದಿಗೆ ಕೆಲಸ ಕೊಡುವ ಗಾಮೆಂಟ್ಸ್ ತೆರೆಯಲು ನಿರ್ಧರಿಸಿದ್ದಾರೆ. ಹಾಗೂ ಪ್ರತಿಯೊಬ್ಬ ಕಾರ್ಮಿಕರಿಗೂ ೨೨ ಸಾವಿರ ವೇತನ ನೀಡಲು ಒಪ್ಪಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡುತ್ತೇನೆ. ಶೀಘ್ರದಲ್ಲಿ ಗಾರ್ಮೆಂಟ್ ಪ್ರಾರಂಭಿಸಲು ಚರ್ಚಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ೧೫ ಫಲಾನುಭವಿಗಳಿಗೆ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ೪ ಜನ ಫಲಾನುಭವಿಗಳಿಗೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ೨೦೨೧-೨೨ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ೧೧ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಿಸ ಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ.ಜಯರಾಮಣ್ಣ, ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಂ.ರಾಜಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಾಗೂ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್.ಆರ್, ತಾಲೂಕು ಅಭಿವೃದ್ಧಿ ಅಧಿಕಾರಿ ಹನುಮಂತಯ್ಯ. ಎಸ್.ಜಿ, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಸದಸ್ಯರಾದ ರಾಧಾಕೃಷ್ಣ, ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಡಿ.ಸಿ.ಅಶೋಕ್ ಸೇರಿದಂತೆ ಹಲವರು ಹಾಜರಿದ್ದರು.