Wednesday, 30th October 2024

Mental Illness: ಮಾನಸಿಕ ಸಮಸ್ಯೆಗಳನ್ನು ಅಸ್ಪೃಶ್ಯ ಭಾವದಿಂದ ನೋಡಬಾರದು

ತುಮಕೂರು: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಸ್ಪೃಶ್ಯ ಭಾವದಿಂದ ನೋಡವ ಸಮಾಜದ ಮನಸ್ಥಿತಿ ಬದಲಾಗಲು ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಉತ್ತಮ ಕಾರ್ಯ ವಿದ್ಯಾರ್ಥಿಗಳಿಂದ ಆರಂಭ ವಾಗಬೇಕು ಎಂದು ಶ್ರೀದೇವಿ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿಲ್‌ ಕುಮಾರ್ ಬಿ. ಎನ್. ಹೇಳಿದರು.

ತುಮಕೂರು ವಿವಿಯ ಮನೋವಿಜ್ಞಾನ ಅಧ್ಯಯನ ವಿಭಾಗವು ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಉದ್ಯೋಗ ಸ್ಥಳಗಳಲ್ಲಿ ಮಾನಸಿಕ ಆರೋಗ್ಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ವಿಶ್ವದ ಜನಸಂಖ್ಯೆಯ ಸುಮಾರು 60% ಜನರು ಕೆಲಸದಲ್ಲಿದ್ದಾರೆ. ನಮ್ಮ ಜೀವನದ ಮೂರನೆ ಒಂದು ಭಾಗವನ್ನು ಕೆಲಸದ ಸ್ಥಳದಲ್ಲಿ ಕಳೆಯುತ್ತಿದ್ದೇವೆ. ಆರೋಗ್ಯಕರವಾದ ಕೆಲಸದ ವಾತಾವರಣವು ಮಾನಸಿಕ ಆರೋಗ್ಯಕ್ಕೆ ರಕ್ಷಣಾತ್ಮಕ ಅಂಶವಾಗಿದೆ. ಉದ್ಯೋಗ ಸ್ಥಳಗಳಲ್ಲಿನ ಒತ್ತಡವನ್ನು ನಿರ್ವಹಿಸಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಶೇ.೮೫ ರಷ್ಟು ಮಂದಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಸಲಹೆ ಸಿಗುತ್ತಿಲ್ಲ ಎಂದು ತಿಳಿಸಿದರು.

ಮನೋವೈದ್ಯರ ಆಪ್ತಸಮಾಲೋಚನೆಯಿಂದ ಮಾನಸಿಕ ಆರೋಗ್ಯದ ಕುರಿತು ಇರುವ ಮೂಢನಂಬಿಕೆಗಳು ಮತ್ತು ಅಪನಂಬಿಕೆಗಳನ್ನು ದೂರಮಾಡಿಕೊಳ್ಳಬಹುದು. ಮಾನಸಿಕ ಸಮಸ್ಯೆ ಇರುವವರಿಗೆ ಹುಚ್ಚರು ಎಂಬ ಹಣೆಪಟ್ಟಿ ಯನ್ನು ಸಮಾಜ ಕಟ್ಟಬಾರದು. ಅದರ ಕುರಿತು ಅರಿವು, ಕಾಳಜಿಯನ್ನು ತೋರಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಒತ್ತಡಗಳ ನಿವಾರಣೆಗೆ ಮನೋವೈದ್ಯರ ಆಪ್ತಸಮಾಲೋಚನೆ ಅವಶ್ಯಕವಾಗಿದೆ. ದುಷ್ಟ ಆಲೋಚನೆಗಳಿಂದ ಎರಡು ಮಹಾ ಯುದ್ಧಗಳು ನಡೆದಿವೆ. ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಕೈಯ್ಯಲ್ಲಿದೆ ಎಂದರು.

ವಿವಿಯ ಮನೋವಿಜ್ಞಾನ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಪರಶುರಾಮ ಕೆ. ಜಿ., ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಎ. ಎಂ. ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur News: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಬೃಹತ್ ಪಾದಯಾತ್ರೆಗೆ ತೀರ್ಮಾನಿಸಿದ ಹೋರಾಟ ಸಮಿತಿ