Wednesday, 30th October 2024

Bengaluru Rain: ಬೆಂಗಳೂರಿನ ವಿವಿಧೆಡೆ ಅಬ್ಬರಿಸಿದ ವರುಣರಾಯ; ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ ನಿರೀಕ್ಷೆ!

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ವರುಣರಾಯ ರಾಜ್ಯದಲ್ಲಿ ಮತ್ತೆ ಆರ್ಭಟಿಸುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರು (Bengaluru Rain) ಸೇರಿ ವಿವಿಧೆಡೆ ಬುಧವಾರ ಬಿರುಸಿನ ಮಳೆಯಾಗಿದ್ದು, ರಾಜಧಾನಿಯಲ್ಲಿ ಹಲವೆಡೆ ಭಾರಿ ಮಳೆಯಿಂದ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಯಿತು.

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ ವೀರಸಂದ್ರದ ಬಳಿ ರಸ್ತೆ ಜಲಾವೃತವಾಗಿದ್ದರಿಂದ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಇನ್ನು ಸುಮನಹಳ್ಳಿ ಜಂಕ್ಷನ್‌ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.

ಮುಂದಿನ 5 ದಿನಗಳ ಕಾಲ ವ್ಯಾಪಕ ಮಳೆ ಸಾಧ್ಯತೆ

ಇನ್ನು ಮುಂದಿನ 5 ದಿನಗಳ ಕಾಲ ಕರ್ನಾಟಕದ ಹಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ, ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ರಾಜ್ಯದ ಬೆಂಗಳೂರು ಸೇರಿ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಅ.31ರಿಂದ ನ.2ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಅದೇ ರೀತಿ ಉತ್ತರ ಒಳನಾಡಿನಲ್ಲಿ ನ.1, 2ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ | Food Adulteration: ರಾಜ್ಯದಲ್ಲಿ 230 ಗೋಲ್‌ಗಪ್ಪ ತಯಾರಿಕೆ ಘಟಕಗಳ ಮೇಲೆ ಅಧಿಕಾರಿಗಳ ದಾಳಿ