Saturday, 23rd November 2024

Thierry Mathou: ಫ್ರೆಂಚ್‌ ರಾಯಭಾರಿಯ ಮೊಬೈಲ್‌ ಎಗರಿಸಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ

Thierry Mathou

ಹೊಸದಿಲ್ಲಿ: ದಿಲ್ಲಿಯ ಚಾಂದಿನಿ ಚೌಕ್‌ ಮಾರುಕಟ್ಟೆ (Chandni Chowk market)ಯಲ್ಲಿ ಭಾರತದಲ್ಲಿನ ಫ್ರೆಂಚ್‌ ರಾಯಭಾರಿ (French Ambassador) ಥಿಯರಿ ಮ್ಯಾಥೌ (Thierry Mathou) ಅವರ ಮೊಬೈಲ್‌ ಫೋನ್‌ ಎಗರಿಸಿದ್ದ ನಾಲ್ವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ದಿಲ್ಲಿಯ ಅತ್ಯಂತ ಜನಪ್ರಿಯ ಮಾರುಕಟ್ಟೆ ಚಾಂದಿನಿ ಚೌಕ್‌ಗೆ ತೆರಳಿದ್ದ ಥಿಯರಿ ಮ್ಯಾಥೌ ಅವರ ಮೊಬೈಲ್‌ ಫೋನನ್ನು ಕಳ್ಳರು ಎಗರಿಸಿದ್ದರು.

ಅ. 20ರಂದು ಚಾಂದಿನಿ ಚೌಕ್‌ಗೆ ಥಿಯರಿ ಮ್ಯಾಥೌ ಅವರು ತಮ್ಮ ಪತ್ನಿಯ ಜತೆ ತೆರಳಿದ್ದರು. ಈ ವೇಳೆ ಜೈನ್‌ ದೇಗುಲದ ಸಮೀಪ ಕಳ್ಳರು ಮೊಬೈಲ್‌ ಫೋನನ್ನು ಎಗರಿಸಿ ಪರಾರಿಯಾಗಿದ್ದರು. ಕೂಡಲೇ ಥಿಯರಿ ಮ್ಯಾಥೌ ಅವರು ದಿಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಥಿಯರಿ ಮ್ಯಾಥೌ ಅವರ ಜೇಬಿನಿಂದ ಕಳ್ಳರು ಫೋನ್‌ ಎಗರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಬಳಿಕ ಪೊಲೀಸರ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಬಂಧಿತ ನಾಲ್ವರು 20 ವರ್ಷ ಮತ್ತು 25 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲ ಯಮುನಾ ಪ್ರದೇಶದದವರು. ಬಂಧಿತರಿಂದ ಫೋನ್‌ ವಶ ಪಡಿಸಿಕೊಂಡ ಪೊಲೀಸರು ಅದನ್ನು ಫ್ರೆಂಚ್‌ ರಾಯಭಾರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ದಿಲ್ಲಿಯ ಚಾಂದಿನಿ ಚೌಕ್‌ ಅತ್ಯುತ್ತಮ ಶಾಪಿಂಗ್ ತಾಣ ಎನಿಸಿಕೊಂಡಿದೆ. ಇದು ದಿಲ್ಲಿಯ ಪ್ರಾಚೀನ ಶಾಪಿಂಗ್ ಪ್ರದೇಶಳಲ್ಲಿ ಒಂದು. ಮಾರುಕಟ್ಟೆಯ ಒಳಭಾಗದಲ್ಲಿ ಕತ್ರಾ ನೀಲ್‌, ಚಟ್ಟಾ ಚೌಕ್‌, ಖಾರಿ ಬಾಲಿ, ತಿಲಕ್‌ ಬಜಾರ್, ಚೋರ್ ಬಜಾರ್, ಪರಂತೇ ವಾಲಿ ಗಲಿಗಳಂತಹ ಅನೇಕ ಸಣ್ಣ ಬಜಾರ್‌ಗಳಿವೆ. ಇಲ್ಲಿ ಚಪ್ಪಲಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ ಹಾರ್ಡ್‌ವೇರ್‌ನವರೆಗೆ ಎಲ್ಲ ರೀತಿಯ ವಸ್ತುಗಳು ಇಲ್ಲಿ ದೊರೆಯುತ್ತವೆ. ವಾರದ ಎಲ್ಲ ಸಮಯದಲ್ಲಿಯೂ ಕಿಕ್ಕಿರಿದ ಜನಂದಣಿಯಿಂದ ಕೂಡಿರುವ ಈ ಮಾರುಕಟ್ಟೆಯು ದಿಲ್ಲಿಗೆ ಭೇಟಿ ನೀಡುವ ಶಾಪಿಂಗ್‌ ಪ್ರಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ.

ದೀಪಾವಳಿ ಶಾಪಿಂಗ್‌ಗೆ ಜನಪ್ರಿಯ

ಚಾಂದಿನಿ ಚೌಕ್‌ ವಿಶೇಷವಾಗಿ ದೀಪಾವಳಿ ಶಾಪಿಂಗ್‌ಗೆ ಜನಪ್ರಿಯ ತಾಣ ಎನಿಸಿಕೊಂಡಿದೆ. ದೀಪಾವಳಿ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಗೆ ಜನ ಸಾಗರವೇ ಹರಿದು ಬರುತ್ತದೆ. ಈ ವರ್ಷದ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದ್ದು ಖರೀದಿ ಭರಾಟೆ ಜೋರಾಗಿದೆ. ʼʼಚಾಂದಿನಿ ಚೌಕ್‌ನಲ್ಲಿ ಕಳ್ಳರ ಹಾವಳಿ ಕೂಡ ವಿಪರೀತವಾಗಿದೆ. ಹೀಗಾಗಿ ಇಲ್ಲಿ ಶಾಪಿಂಗ್‌ ಮಾಡುವವರು ಎಚ್ಚರಿಕೆಯಿಂದ ಇರಬೇಕುʼʼ ಎಂದು ಪೊಲೀಸರು ಗ್ರಾಹಕರಿಗೆ ಸೂಚನೆ ನೀಡುವುದು ಸಾಮಾನ್ಯ. ಎಷ್ಟೇ ಎಚ್ಚರಿಕೆ ವಹಿಸಿದರೂ ಕಳ್ಳರು ತಮ್ಮ ಕೈ ಚಳಕ ತೋರಿ ಮೊಬೈಲ್‌ ಫೋನ್‌, ಪರ್ಸ್‌ನಂತಹ ಬೆಲೆ ಬಾಳುವ ವಸ್ತುಗಳನ್ನು ಎಗರಿಸುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಈ ಸುದ್ದಿಯನ್ನೂ ಓದಿ: BTR elephants case: ಬಾಂಧವಗಢ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಏಳು ಆನೆಗಳ ಸಾವು; ವಿಷ ಪ್ರಾಶನದ ಶಂಕೆ