ತುಮಕೂರು: ಸಂಕಷ್ಟದಲ್ಲಿರುವ ಕೈ ಮಗ್ಗ ನೇಕಾರರು ಒಂದೇ ವೇದಿಕೆಯಲ್ಲಿ ಬಂದು ಗ್ರಾಹಕರಿಗೆ ನೇರವಾಗಿ ತಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡುವುದರಿಂದ ಲಾಭ ಗಳಿಸಬಹುದು ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆಯ ತುಮಕೂರು ಪೂರ್ವ ವಲಯದ ಜಂಟಿ ನಿರ್ದೇಶಕ ಶ್ರೀಧರ ನಾಯಕ್ ಹೇಳಿದರು.
ನಗರದ ಶಂಕರ ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ. 29 ರಿಂದ ನ.೨ ರವರೆಗೆ ಆಯೋಜಿಸಿರವ ವಸ್ತ್ರ ವೈಭವ-೨೦೨೪ ಜಿಲ್ಲಾ ಕೈ ಮಗ್ಗ ಮೇಳ ಉದ್ಘಾಟಿಸಿ ಮಾತನಾಡಿ, ಎಲ್ಲ ಜಿಲ್ಲೆಗಳಿಂದ ನೇಕಾರರು ಆಗಮಿಸಿದ್ದು ೨೫ ಸ್ಟಾಲ್‌ಗಳನ್ನು ಮಾಡಲಾಗಿದೆ. ಮೊಳಕಾಲ್ಮೂರು ರೇಷ್ಮೆ ಸೀರೆ, ಕಲ್ಲರೂ ರೇಷ್ಮೆ ಸೀರೆ, ವೈ.ಎನ್.ಹೊಸಕೋಟೆ ರೇಷ್ಮೆ ಸೀರೆ, ಕಾಟನ್ ಉತ್ಪನ್ನಗಳು ಹಾಗೂ ಉಣ್ಣೆ ಕಂಬಳಿಗಳು, ಇನ್ನೂ ಮುಂತಾದ ಆಕರ್ಷಕ ಕೈ ಮಗ್ಗ ಉತ್ಪನ್ನಗಳನ್ನು ಶೇ ೨೦ % ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರು ಖರೀದಿ ಮಾಡುವ ಮೂಲಕ ನೇಕಾರ ರನ್ನು ಪ್ರೋತ್ಸಾಹಿಸಬೇಕು ಎಂದರು.
ಮೇಳದಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಬಾಗಲಕೋಟೆ, ಬೆಂಗಳೂರು, ಚಾಮರಾಜನಗರ, ಕಲಬುರಗಿ, ಶಿವಮೊಗ್ಗ ಜಿಲ್ಲೆಗಳ ಕೈ ಮಗ್ಗ ನೇಕಾರರ ಸಹಕಾರ ಸಂಘಗಳು ಭಾಗವಹಿಸಿವೆ ಎಂದು ಮಾಹಿತಿ ನೀಡಿದರು. ಕೈ ಮಗ್ಗ ನೇಕಾರರಿಗೆ ಇಲಾಖೆಯಿಂದ ಬಹಳಷ್ಟು ಸೌಲಭ್ಯಗಳು ಸಿಗಲಿದೆ. ಪ್ರತಿ ವರ್ಷ ನೇಕಾರ್ ಸಮ್ಮಾನ್ ಎಂದು ಮಾಡುವ ಮೂಲಕ ರಾಜ್ಯದಲ್ಲಿ ೪೭ ಸಾವಿರ ಮಂದಿಗೆ ೫೦೦೦ ರೂ ನೀಡುತ್ತೇವೆ. ಈ ವರ್ಷವೂ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಅನ್ವಯ ನೀಡಲಾಗುವುದು. ಇದಲ್ಲದೆ, ಕೈ ಮಗ್ಗ ಇಲ್ಲದವರಿಗೆ ಕೈ ಮಗ್ಗ ಸಹ ನಮ್ಮ ಇಲಾಖೆಯಿಂದ ನೀಡಲಾಗುತ್ತದೆ. ೩೦ ಸಾವಿರ ಅದಕ್ಕೆ ವೆಚ್ಚವಾಗಲಿದ್ದು ೫೦ % ಸಬ್ಸಿಡಿ ನೀಡುತ್ತೇವೆ. ಇದಲ್ಲದೆ ಪವರ್ ಸಬ್ಸಿಡಿ ಸಹ ನೀಡಲಾಗುತ್ತಿದೆ. ೧೦ ಹೆಚ್ ಪಿವರೆಗೂ ಉಚಿತವಾಗಿ ನೀಡಲಾಗುತ್ತಿದೆ. ೧೦ ರಿಂದ ೨೦ ಹೆಚ್‌ಪಿಗೆ ೧.೨೫ ವರೆಗೆ ದರ ನಿಗದಿ ಮಾಡಲಾಗಿದೆ ಎಂದರು.
ಉಪ ನಿರ್ದೇಶಕ ಟಿ.ಜಿ.ಸಂತೋಷ್, ಸಹಾಯಕ ನಿರ್ದೇಶಕ ಮಂಜುನಾಥ್ ಅಮ್ರದ್ ಹಾಗೂ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: Tumkur News: ಉಪ್ಪಾರ ಪ್ರತಿಭಾ ಪುರಸ್ಕಾರಕ್ಕೆ ಶಾಸಕ ಸಿಬಿಎಸ್ ಗೈರು: ಆಕ್ರೋಶ