Wednesday, 30th October 2024

Karnataka Waqf Controversy : ರಾಜ್ಯದಲ್ಲೂ ವಕ್ಫ್‌ ಆಸ್ತಿ ವಿವಾದ; ಏನು, ಎತ್ತ? Complete Details

ಕೇಶವ್ ಪ್ರಸಾದ್ ಬಿ

ಕಳೆದ ವರ್ಷ ತಮಿಳುನಾಡಿನಲ್ಲಿ ಸಾವಿರಾರು ವರ್ಷ ಹಳೆಯ ಶಿವ ದೇವಾಲಯವಿದ್ದ ಇಡೀ ಊರನ್ನೇ ವಕ್ಫ್‌ ತನ್ನದು (Karnataka Waqf Controversy) ಎಂದು ಘೋಷಿಸಿದಾಗ ಜನತೆ ಅಚ್ಚರಿಗೀಡಾಗಿದ್ದರು. ಈ ಹಿಂದೆ ತಮಿಳುನಾಡು, ತೆಲಂಗಾಣ, ಆಂಧ್ರ, ಕೇರಳ, ಗುಜರಾತ್‌ ಮೊದಲಾದ ರಾಜ್ಯಗಳಲ್ಲಿ ವಕ್ಫ್‌ ಭೂ ಹಗರಣದ ಬಗ್ಗೆ ಸುದ್ದಿಯಾಗುತ್ತಿತ್ತು. ಆದರೆ ಇದೀಗ ನಮ್ಮ ರಾಜ್ಯದಲ್ಲೇ, ವಿಜಯಪುರ ಜಿಲ್ಲೆಯ ತಾಲೂಕುಗಳಲ್ಲಿ ಸಾವಿರಾರು ಎಕರೆಗಟ್ಟಲೆ ಭೂಮಿಗೆ ಸಂಬಂಧಿಸಿ ವಕ್ಫ್‌ ಆಸ್ತಿ ವಿವಾದ ಹಠಾತ್ ಭುಗಿಲೆದ್ದಿದೆ. ದೇಶ ವ್ಯಾಪಿ ಸಂಚಲನ ಮೂಡಿಸಿದೆ.

ವಿಜಯಪುರದ ನೂರಾರು ರೈತರು ರಾತ್ರೋರಾತ್ರಿ ತಮ್ಮ ಆಸ್ತಿಯ ಪಹಣಿ ಪತ್ರಗಳಲ್ಲಿ ವಕ್ಫ್‌ ಬೋರ್ಡ್‌ ಆಸ್ತಿ ಎಂದು ಬದಲಾವಣೆಯಾಗಿರುವುದನ್ನು ಕಂಡು ಹೌಹಾರಿದ್ದಾರೆ. ಆತಂಕದಿಂದ ಪ್ರತಿಭಟನೆ ನಡೆಸಿದ್ದಾರೆ. ವಕ್ಫ್‌ ವಿವಾದವು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ರೈತರಿಗೆ ಸೇರಿರುವ ಬರೋಬ್ಬರಿ 1,500 ಎಕರೆಗಳಷ್ಟು ಆಸ್ತಿಯನ್ನು ವಕ್ಫ್‌ ಕಬಳಿಸಲು ಹೊಂಚು ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ.

ವಿವಾದ ತೀವ್ರವಾದ ಬೆನ್ನಲ್ಲೇ ಸಚಿವ ಎಂಬಿ ಪಾಟೀಲ್‌, ಜಮೀರ್‌ ಖಾನ್‌, ಕೃಷ್ಣ ಭೈರೇಗೌಡ ಮೊದಲಾದವರು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಪರ ಸ್ಪಷ್ಟನೆ ನ್ನು ಕೊಟ್ಟಿದ್ದಾರೆ. ತಹಸೀಲ್ದಾರ್‌ ಕಡೆಯಿಂದ ತಪ್ಪಾಗಿದೆ ಎಂದೂ ಸಚಿವ ಎಂಬಿ ಪಾಟೀಲ್‌ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ವಿವಾದದ ಕಿಚ್ಚು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಇದಕ್ಕೆ ಕಾರಣವೂ ಇದೆ. ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಅಂಗೀಕರಿಸಲು ಯತ್ನಿಸುತ್ತಿರುವ ವೇಳೆಯಲ್ಲಿಯೇ, ನಾನಾ ರಾಜ್ಯಳಲ್ಲಿ ವಕ್ಫ್‌ ಆಸ್ತಿ ವಿವಾದವೂ ಹೆಚ್ಚುತ್ತಿದೆ. ಹಾಗಾದರೆ, ಏನಿದರ ಮರ್ಮ? ಏನಿದು ವಕ್ಫ್‌ ಆಸ್ತಿ ವಿವಾದ?

ವಿಜಯಪುರದಲ್ಲಿ ಆಗಿದ್ದೇನು?

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ರೈತರಿಗೆ ನೋಟಿಸ್‌ ಬಂತು. ನಿಮ್ಮ ಆಸ್ತಿ ವಕ್ಫ್‌ ಮಂಡಳಿಗೆ ಸೇರಿದೆ ಎಂದು ನೋಟಿಸ್‌ ತಿಳಿಸಿತ್ತು. ರಾತ್ರೋರಾತ್ರಿ 44 ಆಸ್ತಿಗಳ ಪಹಣಿ ಪತ್ರಗಳಲ್ಲಿ ರೈತರ ಆಸ್ತಿಯ ಮಾಲಿಕತ್ವ ವಕ್ಫ್‌ ಮಂಡಳಿಯದ್ದು ಎಂದು ಬದಲಾಗಿತ್ತು. ಭೂ ದಾಖಲೆಯನ್ನು ಏಕಾಏಕಿ ಬದಲಿಸಿದ ವಿವಾದ ತೀವ್ರವಾಗುತ್ತಿದ್ದಂತೆ ಸಚಿವ ಎಂಬಿ ಪಾಟೀಲ್‌, ಇಂಡಿ ತಾಲ್ಲೂಕಿನ ತಹಶೀಲ್ದಾರರು ರೈತರಿಗೆ ಯಾವುದೇ ನೋಟಿಸ್‌ ನೀಡದೆ ಆಸ್ತಿಯ ಇಂಡೀಕರಣ ಮಾಡಿದ್ದಾರೆ. ಈ ತಪ್ಪನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಹಾಗಾದರೆ ತಹಸೀಲ್ದಾರರಿಗೆ ನೋಟಿಸ್‌ ನೀಡದೆಯೇ ರೈತರ ಆಸ್ತಿಗಳನ್ನು ಇಂಡೀಕರಣ ಮಾಡಲು ಪ್ರೇರಣೆ ಯಾವುದಾಗಿತ್ತು? ಪ್ರತಿಪಕ್ಷ ಬಿಜೆಪಿಯ ಆರೋಪ ಏನೆಂದರೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್‌ ಅಹ್ಮದ್‌ ಅವರು ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಈ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರ ವಕ್ಫ್‌ ಕಾಯಿದೆಗೆ ತಿದ್ದುಪಡಿ ತರುವುದಕ್ಕಿಂತ ಮೊದಲು ಸಾಧ್ಯವಾದಷ್ಟು ಆಸ್ತಿಗಳನ್ನು ಕಬಳಿಸುವುದೇ ವಕ್ಫ್‌ ಮತ್ತು ಸರ್ಕಾರದ ಉದ್ದೇಶವಾಗಿದೆ ಎಂಬುದು ಬಿಜೆಪಿಯ ಆರೋಪವಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮಗಳಲ್ಲಿನ ಹಲವಾರು ಮಂದಿ ನೋಟಿಸ್‌ ಪಡೆದಿರುವುದು ವಾಸ್ತವ. ಆದರೆ ಸಚಿವ ಎಂಬಿ ಪಾಟೀಲ್‌ ಪ್ರಕಾರ, ತಹಶೀಲ್ದಾರರ ಯಡವಟ್ಟಿನಿಂದ ರೈತರಿಗೆ ನೋಟಿಸ್‌ ನೀಡದೆಯೇ ಇಂಡೀಕರಣ ಮಾಡಲಾಗಿದೆ. ಹೊನವಾಡ ಗ್ರಾಮದ 11 ಎಕರೆ ಮಾತ್ರ ವಕ್ಫ್‌ ಆಸ್ತಿಯಾಗಿದೆ. ಉಳಿದದ್ದೆಲ್ಲ ರೈತರದ್ದೇ ಆಗಿದೆ ಎನ್ನುತ್ತಾರೆ ಸಚಿವ ಎಂಬಿ ಪಾಟೀಲ್.‌ ಏನಿದು ಇಂಡೀಕರಣ ಎನ್ನುತ್ತೀರಾ? ಅರಣ್ಯೇತರ ಚಟುವಟಿಕೆಗಳು, ಒತ್ತುವರಿಯಿಂದ ಕೈ ಬಿಟ್ಟು ಹೋಗಿರುವ ಅರಣ್ಯ ಭೂಮಿಯನ್ನು ಆರ್‌ ಟಿಸಿ ಮ್ಯುಟೇಶನ್‌ ಮತ್ತಿತರ ಕಂದಾಯ ದಾಖಲೆಗಳಲ್ಲಿ ಮರು ನಮೂದಿಸುವ ಪ್ರಕ್ರಿಯೆಯೇ ಇಂಡೀಕರಣ. ಅಂದರೆ ಅಂಥ ಭೂಮಿ ಮತ್ತೆ ಅರಣ್ಯ ಇಲಾಖೆಗೆ ಸೇರುತ್ತದೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೀಗೆನ್ನುತ್ತಾರೆ- ನೋಡಿ, ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆಯೇ ಒಟ್ಟು 14,201 ಎಕರೆ ವಕ್ಫ್‌ ಆಸ್ತಿ ಇತ್ತು. 1973-74ರಲ್ಲೇ ಗೆಜೆಟ್‌ ನೋಟಿಫಿಕೇಶನ್‌ ಆಗಿತ್ತು. ಈ ಪೈಕಿ ಈಗ ವಕ್ಫ್‌ ಸಂಸ್ಥೆಗೆ ಉಳಿದಿರೋದು ಕೇವಲ 700 ಎಕರೆಗಳು ಮಾತ್ರ. ಉಳಿದ ಜಮೀನುಗಳನ್ನು ರೈತರಿಗೆ ಭೂ ಸುಧಾರಣೆ ಕಾಯಿದೆಯಡಿ ಅಥವಾ ಇನಾಂ ರದ್ದತಿ ಕಾಯಿದೆ ಅಡಿಯಲ್ಲಿ ಮಂಜೂರು ಮಾಡಲಾಗಿತ್ತು. ಅಂಥ ಜಮೀನಿಗೆ ಸಂಬಂಧಿಸಿ ಯಾರಿಗೂ ನೋಟಿಸ್‌ ಕೊಟ್ಟಿಲ್ಲ. ಹಲವು ಯೋಜನೆಗಳಿಗೂ ಭೂಸ್ವಾಧೀನವಾಗಿದೆ. 121 ನೋಟಿಸ್‌ ಹೋಗಿರೋದು ನಿಜ. ಇಂಡಿ ತಾಲ್ಲೂಕಿನಲ್ಲಿ ತಹಶೀಲ್ದಾರರು ನೋಟಿಸ್‌ ಕೊಡದೆ ಇಂಡೀಕರಣ ಮಾಡಿದ್ದಾರೆ. ಈ ಕಾನೂನು ಪ್ರಕ್ರಿಯೆಯಲ್ಲಿ ಲೋಪವಾಗಿರುವುದರಿಂದ ಸರಿಪಡಿಸಲಾಗುವುದು. ಹೊನವಾಡ ಗ್ರಾಮದಲ್ಲಿ 11 ಎಕರೆ ಮಾತ್ರ ವಕ್ಫ್‌ ಆಸ್ತಿಯಿದೆ.

ಕಂದಾಯ ಇಲಾಖೆ ಈ ಹಿಂದೆಯೇ ಇಂಡೀಕರಣ ಮಾಡಬೇಕಿತ್ತು. ಸರ್ಕಾರಗಳ ಗೆಜೆಟ್‌ ಅಧಿಸೂಚನೆಗಳ ಪ್ರಕಾರ ಎಪ್ಪತ್ತು -ಎಂಭತ್ತರ ದಶಕದಲ್ಲೇ ಇಂಡೀಕರಣವಾಗಿರುತ್ತಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ರೈತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರ ಹಿಂಪಡೆಯುತ್ತಿಲ್ಲ. ಕನಿಷ್ಠ ರೈತರಿಗೆ ಯಾವುದು ಮಂಜೂರಾಗಿಲ್ಲವೋ, ಆ ಜಾಗವನ್ನು ಮಾತ್ರ ಗುರುತಿಸಿ, ಅದನ್ನು ವಕ್ಫ್‌ ಮಂಡಳಿಗೆ ಹಿಂತಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆಯಷ್ಟೇ. ಅಷ್ಟಕ್ಕೂ ಅಲ್ಲಿರುವ ಜಾಗಗಳೆಲ್ಲವೂ ಈ ಹಿಂದೆ ಮುಸ್ಲಿಂ ಸಮುದಾಯದವರೇ ವಕ್ಫ್‌ ಸಂಸ್ಥೆಗೆ ದಾನವಾಗಿ ನೀಡಿರುವಂಥದ್ದೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಕೃಷ್ಣ ಭೈರೇಗೌಡ.

ದೇಶವ್ಯಾಪಿ ವಕ್ಫ್‌ ವಿವಾದ

ಇತ್ತೀಚಿನ ವರ್ಷಗಳಲ್ಲಿ ವಕ್ಫ್‌ ಆಸ್ತಿಗಳ ವಿವಾದ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ವಕ್ಫ್ 2006ರಲ್ಲಿ 1.2 ಲಕ್ಷ ಎಕರೆ ಜಮೀನನ್ನು ಹೊಂದಿತ್ತು. 2009ರಲ್ಲಿ ಇದು 4 ಲಕ್ಷಕ್ಕೆ ಏರಿತು. 2024ರಲ್ಲಿ 9.4 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮಿಲಿಟರಿ, ರೈಲ್ವೆ ಬಿಟ್ಟರೆ ಅತಿ ಹೆಚ್ಚು ಆಸ್ತಿಯನ್ನು ವಕ್ಫ್‌ ಹೊಂದಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದು ಸಾರ್ವಜನಿಕರಿಗೆ ಅಚ್ಚರಿ ಮತ್ತು ಆತಂಕ ಹುಟ್ಟಿಸಿದೆ. ಮುಖ್ಯವಾಗಿ ವಕ್ಫ್‌ ಸಂಸ್ಥೆಗೆ ನೀಡಿರುವ ಹೆಚ್ಚಿನ ಅಧಿಕಾರದ ದುರ್ಬಳಕೆ ಆಗುತ್ತಿದೆಯೇ? ಎಂಬ ಸಂದೇಹ ಸೃಷ್ಟಿಸಿದೆ.

ಹಾಗಾದರೆ ಏನಿದು ವಕ್ಫ್?‌ ವಕ್ಫ್‌ ಮಂಡಳಿಯ ಉದ್ದೇಶವೇನು?

ವಕ್ಫ್‌ ಎಂದರೆ, ಇಸ್ಲಾಂ ಮತೀಯ ಉದ್ದೇಶಗಳಿಗೆ ದಾನವಾಗಿ ಪಡೆಯುವ ಸ್ಥಿರ ಮತ್ತು ಚರಾಸ್ತಿಗಳು. ದಾನಿಗಳು ಇದನ್ನು ನೀಡುತ್ತಾರೆ. ಭಾರತದಲ್ಲಿ 1913ರಲ್ಲಿ ಬ್ರಿಟಿಷ್‌ ಆಡಳಿತದ ಕಾಲದಲ್ಲೇ ಕೇಂದ್ರೀಯ ವಕ್ಫ್‌ ಮಂಡಳಿಯ ಸ್ಥಾಪನೆಯಾಯಿತು. 1995ರಲ್ಲಿ ವಕ್ಫ್‌ ಕಾಯಿದೆಯ ಸಬ್‌ ಸೆಕ್ಷನ್‌ ಅಡಿಯಲ್ಲಿ ವಕ್ಫ್‌ ಮಂಡಳಿಗೆ ಶಾಸನ ಬದ್ಧ ಮಾನ್ಯತೆ ನೀಡಲಾಯಿತು. ವಕ್ಫ್‌ ಆಸ್ತಿಗಳ ನಿರ್ವಹಣೆ ಈ ಮಂಡಳಿಯ ಉದ್ದೇಶ. ಒಮ್ಮೆ ವಕ್ಫ್‌ಗೆ ಆಸ್ತಿ ವರ್ಗಾವಣೆಯಾದರೆ ಅದನ್ನು ಆದಾಯಕ್ಕಾಗಿ ಮಾರುವಂತಿಲ್ಲ. ಪ್ರಸ್ತುತ ನಾನಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್‌ ಮಂಡಳಿಗಳು ಇವೆ.
ಆದರೆ ಈ ವಕ್ಫ್‌ ಮಂಡಳಿಗಳು ಭ್ರಷ್ಟಾಚಾರ, ಭೂ ಅತಿಕ್ರಮಣ, ನಿಧಿಯ ದುರ್ಬಳಕೆ, ಅಧಿಕಾರದ ದುರುಪಯೋಗ ಮತ್ತು ಹಗರಣಗಳಿಗೆ ಕುಖ್ಯಾತಿ ಪಡೆದಿದೆ. ಇದಕ್ಕೆ ಕಾರಣವೇನು?

ವಕ್ಫ್‌ ಬೋರ್ಡ್‌ಗಳಲ್ಲಿ ಅದನ್ನು ನಿರ್ವಹಿಸುವ ಮುತಾವಲಿಗಳು ವಕ್ಫ್‌ ಆಸ್ತಿಗಳ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದಿಲ್ಲ, ಅಧಿಕಾರ ದುರ್ಬಳಕೆ ಮಾಡುತ್ತಾರೆ ಎಂಬ ಆರೋಪಗಳಿವೆ. ಸ್ಥಳೀಯ ಕಂದಾಯ ಅಧಿಕಾರಿಗಳೊಡನೆ ಇವರು ಪರಿಣಾಮಕಾರಿ ಸಂವಹನ ನಡೆಸುವುದಿಲ್ಲ. ವಕ್ಫ್‌ ಆಸ್ತಿಯ ನೋಂದಣಿ, ಟೈಟಲ್‌ ಡಿಕ್ಲರೇಶನ್‌ ಸರಿಯಾಗಿ ಆಗುವುದಿಲ್ಲ. ಇದರಿಂದ ಆಸ್ತಿ ವಿವಾದಗಳು ಹೆಚ್ಚುತ್ತಿವೆ. 1995ರ ವಕ್ಫ್‌ ಕಾಯಿದೆ ಮತ್ತು 2013 ರಲ್ಲಿ ಯುಪಿಎ ಸರ್ಕಾರ ತಂದಿದ್ದ ತಿದ್ದುಪಡಿ ವಿವಾದಾತ್ಮಕವಾಗಿತ್ತು.

ಸಿವಿಲ್ ಕೋರ್ಟ್‌ ವ್ಯಾಪ್ತಿಯಿಂದ ಹೊರಕ್ಕೆ?

ವಕ್ಫ್‌ ಆಸ್ತಿಯ ವಿವಾದಗಳಿಗೆ ಸಂಬಂಧಿಸಿ ಸಿವಿಲ್‌ ಕೋರ್ಟ್‌ಗಳು, ರೆವೆನ್ಯೂ ಕೋರ್ಟ್‌ಗಳು ಮತ್ತು ಇತರ ಪ್ರಾಧಿಕಾರಗಳಲ್ಲಿ ಪ್ರಶ್ನಿಸುವಂತಿಲ್ಲ. ವಕ್ಫ್‌ ಕಾಯಿದೆ 1995ರ ಸೆಕ್ಷನ್‌ 85 ಅಡಿಯಲ್ಲಿ ಇದನ್ನು ತಿಳಿಸಲಾಗಿದೆ.

ಇದು ವಕ್ಫ್‌ ಆಡಳಿತ ಮಂಡಳಿಯನ್ನು ಮತ್ತಷ್ಟು ವಿವಾದಾತ್ಮಕವನ್ನಾಗಿಸಿದೆ. ವಕ್ಫ್‌ ಟ್ರಿಬ್ಯೂನಲ್‌ಗಳು ತೆಗೆದುಕೊಳ್ಳುವ ನಿರ್ಣಯಗಳು ಪಾರದರ್ಶಕವಾಗದೆಯೂ ಇರಬಹುದು. ಅದನ್ನು ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್. ಹೀಗಿದ್ದರೂ, ಒಂದು ವೇಳೆ ವಕ್ಫ್‌ ಬೋರ್ಡ್‌ ವಿರುದ್ಧ ತಕರಾರಿದ್ದರೆ, ನೇರವಾಗಿ ಹೈಕೋರ್ಟ್‌ ಮೆಟ್ಟಿಲನ್ನೇ ಏರಬೇಕಾಗುತ್ತದೆ.

ವಕ್ಫ್‌ ಆಸ್ತಿಗಳ ಸರ್ವೇ ಕೂಡ ತೃಪ್ತಿಕರವಾಗಿಲ್ಲ. ರಾಜ್ಯಗಳ ವಕ್ಫ್‌ ಮಂಡಳಿಗಳೂ ಅಧಿಕಾರ ದುರ್ಬಳಕೆ ಮಾಡಿರುವ ಆರೋಪ ಎದುರಿಸುತ್ತಿವೆ. ವಕ್ಫ್‌ ಕಾಯಿದೆ ಎನ್ನುವುದು ಧಾರ್ಮಿಕ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ಕಾಯಿದೆಯಾಗಿದ್ದು, ಮುಸ್ಲಿಂ ಮತ ಬಿಟ್ಟರೆ ಬೇರೆ ಯಾವುದೇ ಸಮುದಾಯಕ್ಕೆ ಇಂಥ ಕಾನೂನು ಅಸ್ತಿತ್ವದಲ್ಲಿ ಇಲ್ಲ.

ವಕ್ಫ್‌ ಆಸ್ತಿಗಳ ಒತ್ತುವರಿ, ವಕ್ಫ್‌ ಆಸ್ತಿಗಳ ದುರ್ಬಳಕೆ ಮತ್ತು ದುರಾಡಳಿತಕ್ಕೆ ಸಂಬಂಧಿಸಿ ಮುಸ್ಲಿಮರು ಮತ್ತು ಮುಸ್ಲೀಮೇತರರು ಸರ್ಕಾರಕ್ಕೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ. ವಕ್ಫ್‌ ವಿವಾದಗಳ ಕುರಿತು ಟ್ರಿಬ್ಯೂನಲ್‌ಗಳಲ್ಲಿ 40,950 ಕ್ಕೂ ಹೆಚ್ಚು ಕೇಸ್‌ಗಳು ಬಾಕಿ ಇವೆ.

ತಮಿಳುನಾಡಿನ ಇಡೀ ಗ್ರಾಮವನ್ನು ತನ್ನದು ಎಂದಿದ್ದ ವಕ್ಫ್:

ತಮಿಳುನಾಡಿನ ತಿರುಚೆಂಡುರೈ ಎಂಬ ಇಡೀ ಗ್ರಾಮವನ್ನು ವಕ್ಫ್‌ ಬೋರ್ಡ್‌ ತನ್ನ ಆಸ್ತಿ ಎಂದು 2022ರಲ್ಲಿ ಘೋಷಿಸಿದಾಗ ದೇಶದ ಜನತೆ ಬೆಚ್ಚಿದ್ದರು. ಒಟ್ಟು 389 ಎಕರೆ ಸ್ಥಳವಿರುವ ಗ್ರಾಮದಲ್ಲಿ 1,500 ವರ್ಷ ಪ್ರಾಚೀನವಾದ ಮತ್ತು ಚೋಳ ರಾಜರು ಕಟ್ಟಿಸಿದ್ದ ದೇವಸ್ಥಾನವೂ ಇತ್ತು. ಇದೂ ತನ್ನ ಆಸ್ತಿ ಎಂದು ವಕ್ಫ್‌ ಬೋರ್ಡ್‌ ವಾದಿಸಿತ್ತು. ಇದರಿಂದ ಗ್ರಾಮಸ್ಥರು ವಕ್ಫ್‌ ಮಂಡಳಿಯ ಅನುಮತಿ ಇಲ್ಲದೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿತ್ತು. ವಕ್ಫ್‌ ಮಂಡಳಿ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದ ಬಳಿಕ, ಇದೀಗ ಅವರ ಆಸ್ತಿಗಳನ್ನು ಎಂದಿನಂತೆ ನೋಂದಣಿ ಮಾಡಿಕೊಳ್ಳಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದೆ. ಈ ಘಟನೆ ಸಂಸತ್ತಿನಲ್ಲೂ ಚರ್ಚೆಗೀಡಾಗಿತ್ತು.

ಸೂರತ್‌ ನಗರಪಾಲಿಕೆ ಕಟ್ಟಡ ತನ್ನದು ಎಂದಿದ್ದ ವಕ್ಫ್

ಸೂರತ್‌ ನಗರಪಾಲಿಕೆಯ ಕಟ್ಟಡವನ್ನೂ ಗುಜರಾತ್ ವಕ್ಫ್‌ ಮಂಡಳಿ ತನ್ನ ಆಸ್ತಿ ಎಂದು ಘೋಷಿಸಿತ್ತು. ಮೊಗಲರ ಕಾಲದಲ್ಲಿ ಈ ಕಟ್ಟಡ ಹಜ್‌ ಯಾತ್ರಿಗಳಿಗೆ ಬಳಕೆಯಾಗುತ್ತಿತ್ತು. ಸ್ವಾತಂತ್ರ್ಯಾನಂತರ ದಾಖಲೆಗಳು ಬದಲಾಗಿಲ್ಲ, ಹೀಗಾಗಿ ಇದು ವಕ್ಫ್‌ ಆಸ್ತಿಯಾಗಿದೆ ಎಂದು ವಕ್ಫ್‌ ಮಂಡಳಿ ವಾದಿಸಿತ್ತು.

ಶ್ರೀಕೃಷ್ಣನ ನಾಡು, ಗುಜರಾತಿನ ದೇವಭೂಮಿ ದ್ವಾರಕಾದಲ್ಲಿಯೂ ಎರಡು ದ್ವೀಪಗಳು ತನಗೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ಗುಜರಾತ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ವಿಜಯಪುರ ಜಿಲ್ಲೆಯ ಪ್ರಮುಖ ಮಠವಾಗಿರುವ ವಿರಕ್ತ ಮಠದ ಆಸ್ತಿಯ ಮೇಲೆಯೂ ವಕ್ಫ್‌ ಬೋರ್ಡ್‌ ಕಣ್ಣಿಟ್ಟಿದೆ. ಅದೂ ತನ್ನ ಜಾಗ ಎಂದು ವಕ್ಫ್‌ ಪ್ರತಿಪಾದಿಸಿದೆ.

ಎಷ್ಟು ಆಸ್ತಿಗಳು ವಕ್ಫ್‌ ಮಂಡಳಿಯ ನಿಯಂತ್ರಣದಲ್ಲಿವೆ?

ವಕ್ಫ್‌ ಬೋರ್ಡ್‌ ಪ್ರಸ್ತುತ 8 ಲಕ್ಷದ 70 ಸಾವಿರ ಆಸ್ತಿಗಳನ್ನು ನಿಯಂತ್ರಸುತ್ತಿದೆ. ದೇಶಾದ್ಯಂತ 9 ಲಕ್ಷದ 40 ಸಾವಿರ ಎಕರೆಗಳ ಆಸ್ತಿಯನ್ನು ವಕ್ಫ್‌ ಹೊಂದಿದೆ. ಇವುಗಳ ಅಂದಾಜು ಮೌಲ್ಯ 1 ಲಕ್ಷದ 20 ಸಾವಿರ ಕೋಟಿ ರೂ. ಜಗತ್ತಿನಲ್ಲೇ ಅತಿ ಹಚ್ಚು ವಕ್ಫ್‌ ಅನ್ನು ಭಾರತ ಹೊಂದಿದೆ.

ಟ್ರಿಬ್ಯೂನಲ್‌ಗಳಲ್ಲಿ ವಕ್ಫ್‌ ವಿರುದ್ಧ 40,951 ಕೇಸ್‌ಗಳು ಬಾಕಿ ಇವೆ. ಅವುಗಳಲ್ಲಿ 9942 ಕೇಸ್‌ಗಳನ್ನು ಮುಸ್ಲಿಮರೇ ವಕ್ಫ್‌ ಮಂಡಳಿಗಳ ದುರಾಡಳಿತದ ವಿರುದ್ಧ ದಾಖಲಿಸಿದ್ದಾರೆ.

ವಕ್ಫ್‌ ತಿದ್ದುಪಡಿ ವಿಧೇಯಕ 2024ರಲ್ಲಿ ಏನೇನಿದೆ?
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್‌ ತಿದ್ದುಪಡಿ ವಿಧೇಯಕವು 1995ರ ವಕ್ಫ್‌ ಕಾಯಿದೆಯನ್ನು ಯುನಿಫೈಡ್‌ ವಕ್ಫ್‌ ಮ್ಯಾನೇಜ್‌ಮೆಂಟ್‌, ಎಂಪವರ್‌ಮೆಂಟ್‌. ಎಫೀಶಿಯೆಂಟ್‌ ಆಂಡ್‌ ಡೆವಲಪ್‌ಮೆಂಟ್‌ ಆಕ್ಟ್‌ ಎಂದು ಮರು ನಾಮಕೃಣ ಮಾಡಲಿದೆ. ಸರ್ಕಾರಿ ಆಸ್ತಿಗಳನ್ನು ವಕ್ಫ್‌ ಎಂದು ಗುರುತಿಸಿದರೆ ಅದನ್ನು ಮರಳಿ ಪಡೆಯಲಿದೆ.

ಇದನ್ನೂ ಓದಿ: Waqf board: ಇಲ್ಲಿನ ಮುಸ್ಲಿಂರೆಲ್ಲ ಹಿಂದುಗಳೇ ಆಗಿದ್ದವರು, ವಕ್ಫ್‌ಗೆ ಹೇಗೆ ಲಕ್ಷ ಲಕ್ಷ ಎಕರೆ ಆಸ್ತಿ ಬಂತು: ಜೋಶಿ ಪ್ರಶ್ನೆ

ತಿದ್ದುಪಡಿ ವಿಧೇಯಕದ ಪ್ರಕಾರ ಯಾವುದಾದರೂ ಆಸ್ತಿಯನ್ನು ತನ್ನದು ಎಂದು ವಕ್ಫ್‌ ಏಕಪಕ್ಷೀಯವಾಗಿ ನಿರ್ಧರಿಸುವಂತಿಲ್ಲ. ಜಿಲ್ಲಾಧಿಕಾರಿಗಳು ಇದನ್ನು ನಿರ್ಣಯಿಸಲಿದ್ದಾರೆ. ಹೊಸ ವಿಧೇಯಕದ ಪ್ರಕಾರ ಕೇಂದ್ರೀಯ ವಕ್ಫ್‌ ಬೋರ್ಡಿಗೆ ಮುಸ್ಲೀಮೇತರರೂ ಸೇರ್ಡೆಯಾಗಲಿದ್ದಾರೆ. ಸದ್ಯಕ್ಕೆ ವಿಧೇಯಕವು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಯಲ್ಲಿದೆ. ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವು ಮಂಡನೆಯಾಗುವ ನಿರೀಕ್ಷೆ ಇದೆ.

ವಕ್ಫ್‌ ಮಂಡಳಿಗೆ ವಿಶೇಷ ಅಧಿಕಾರ ಕೊಟ್ಟಿದ್ದು ಯಾರು?

ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ವಕ್ಫ್‌ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡುವ ಹೊಸ ಕಾಯಿದೆಯನ್ನು ಅಂಗೀಕರಿಸಲಾಯಿತು. ಅದರ ಪ್ರಕಾರ, ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಗುರುತಿಸುವ ಗಣನೀಯ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಲಾಯಿತು. 2013ರಲ್ಲಿ ಈ ಕಾಯಿದೆಯನ್ನು ಪರಿಷ್ಕರಿಸಲಾಯಿತು. ಈ ವಿಶೇಷ ಅಧಿಕಾರದಿಂದಾಗಿ ವಕ್ಫ್‌ ಯಾವುದಾದರೂ ಆಸ್ತಿಯನ್ನು ತನ್ನದು ಎಂದು ಅನ್ನಿಸಿದರೆ ಅಧಿಕೃತವಾಗಿ ವಕ್ಫ್‌ ಆಸ್ತಿ ಎಂದು ಘೋಷಿಸಬಹುದು. ವಿವಾದಗಳಲ್ಲಿ ಅಂತಿಮ ತೀರ್ಮಾನವನ್ನು ಟ್ರಿಬ್ಯೂನಲ್‌ ತೆಗೆದುಕೊಳ್ಳುತ್ತದೆ.

ಹಾಗಾದರೆ ಎಲ್ಲ ಮುಸ್ಲಿಂ ರಾಷ್ಟ್ರಗಳಲ್ಲಿ ವಕ್ಫ್‌ ಕಡ್ಡಾಯವೇ? ಅಲ್ಲಿ ಇದೆಯೇ?
ಇಲ್ಲ. ಎಲ್ಲ ಮುಸ್ಲಿಂ ರಾಷ್ಟ್ರಗಳೂ ವಕ್ಫ್‌ ಆಸ್ತಿ ಎಂಬುದನ್ನೇ ಹೊಂದಿಲ್ಲ. ಟರ್ಕಿ, ಲಿಬಿಯಾ, ಈಜಿಪ್ಟ್‌, ಸುಡಾನ್‌, ಲೆಬೆನಾನ್‌, ಸಿರಿಯಾ, ಜೋರ್ಡಾನ್‌, ಟುನೀಷಿಯಾ ಮತತು ಇರಾಕ್‌ನಲ್ಲಿ ವಕ್ಫ್‌ ಇಲ್ಲ. ಭಾರತದಲ್ಲಿ ಮಾತ್ರ ವಕ್ಫ್‌ ಮಂಡಳಿ ಮೂರನೇ ಅತಿ ದೊಡ್ಡ ಭೂ ಮಾಲೀಕ ಸಂಸ್ಥೆಯಾಗಿದೆ.