Friday, 22nd November 2024

VAO Exam 2024: ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದ ಕೆಇಎ

VAO Exam 2024

ಬೆಂಗಳೂರು: ಅಕ್ಟೋಬರ್ 27ರಂದು ನಡೆದಿದ್ದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ (VAO Exam 2024) ಪೇಪರ್‌-1 ಮತ್ತು ಪೇಪರ್‌-2ರ ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಕೀ ಉತ್ತರಗಳನ್ನು ವೀಕ್ಷಿಸಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ.29ರಂದು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಆದರೆ, ಹಲವು ತಪ್ಪು ಕೀ ಉತ್ತರಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೀ ಉತ್ತರಗಳನ್ನು ಹಿಂಪಡೆದಿದ್ದ ಕೆಇಎ, ಇದೀಗ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.

ಅ. 27ರಂದು ನಡೆದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ http://kea.kar.nic.ind ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಕೀ-ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಲಿಂಕ್‌ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗಳಿಗೆ 50 ರೂ.ಗಳನ್ನು ಪಾವತಿಸಬೇಕು ಹಾಗೂ ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ಕಂಡ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ತೀರ್ಮಾನಿಸುವ ಕೀ-ಉತ್ತರಗಳು ಅಂತಿಮವಾಗಿರುತ್ತದೆ ಎಂದು ಕೆಇಎ ಈಗಾಗಲೇ ಮಾಹಿತಿ ನೀಡಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಹಾಗೂ ಆಕ್ಷೇಪಣೆ ಸಲ್ಲಿಸಲು ಕೆಇಎ ವೆಬ್‌ಸೈಟ್‌ನ https://cetonline.karnataka.gov.in/kea/vacrec24 ಈ ಲಿಂಕ್‌ ಕ್ಲಿಕ್‌ ಮಾಡಿ

VAO ಪರೀಕ್ಷೆ ಪತ್ರಿಕೆ-1ರ ಕೀ ಉತ್ತರಗಳು

VAO ಪರೀಕ್ಷೆ ಪತ್ರಿಕೆ-2ರ ಕೀ ಉತ್ತರಗಳು

ಈ ಸುದ್ದಿಯನ್ನೂ ಓದಿ | VAO Exam 2024: ಗ್ರಾಮಾಡಳಿತ ಅಧಿಕಾರಿ ನೇಮಕಾತಿ; ಕಡ್ಡಾಯ ಕನ್ನಡ ಪರೀಕ್ಷೆ ಕೀ ಉತ್ತರ ಪ್ರಕಟ