Wednesday, 30th October 2024

Deepavali 2024: ಅಯೋಧ್ಯೆ ಸರಯೂ ನದಿ ದಡದಲ್ಲಿ ಬೆಳಗಿದ ಲಕ್ಷ ಲಕ್ಷ ಹಣತೆಗಳು; ದೀಪದ ಬೆಳಕಿನಲ್ಲಿ ಕಂಗೊಳಿಸಿದ ರಾಮ ಮಂದಿರ

Deepavali 2024

ಲಖನೌ: ದೀಪಾವಳಿ ಸಂಭ್ರಮ ಆರಂಭವಾಗಿದೆ (Deepavali 2024). ಈ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ (Ayodhya Ram Mandir)ದಲ್ಲಿ ಬುಧವಾರ (ಅ. 30) ದೀಪೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷದ ದೀಪಾವಳಿ ಮುನ್ನಾ ದಿನ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಿಸುವುದು ವಾಡಿಕೆ. ಅದರಂತೆ ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ರಾಮ ಮಂದಿರ ಉದ್ಘಾಟನೆಯ ನಂತರ ನಡೆಯುವ ಮೊದಲ ದೀಪೋತ್ಸವ ಇದು ಎನ್ನುವುದು ವಿಶೇಷ.

“ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ನಾವು ಆಚರಿಸುತ್ತಿರುವ 8ನೇ ದೀಪೋತ್ಸವ ಇದಾಗಿದೆ. 8 ವರ್ಷಗಳ ಹಿಂದೆ ಮೊದಲ ದೀಪೋತ್ಸವವನ್ನು ಆಚರಿಸಿದಾಗ ಎಲ್ಲರೂ ”ಯೋಗಿ ಜೀ ದಯವಿಟ್ಟು ರಾಮ ಮಂದಿರವನ್ನು ನಿರ್ಮಿಸಿ” ಎಂದು ಮನವಿ ಮಾಡಿದ್ದರು. ಆ ಸಮಯದಲ್ಲಿ ಭಗವಾನ್ ರಾಮ ಶೀಘ್ರದಲ್ಲೇ ನಮ್ಮೆಲ್ಲರನ್ನೂ ಆಶೀರ್ವದಿಸುತ್ತಾನೆ ಎಂದು ನಾನು ಹೇಳಿದ್ದೆ. ನಾವೆಲ್ಲರೂ ಪ್ರಧಾನಿ ಮೋದಿ ಮತ್ತು ಅವರ ದೂರದೃಷ್ಟಿಗೆ ಕೃತಜ್ಞರಾಗಿದ್ದೇವೆ. ಇಡೀ ಜಗತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿದ್ದಾಗ 2020ರ ಆಗಸ್ಟ್ 5ರಂದು ಪ್ರಧಾನಿ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರಕ್ಕೆ ಅಡಿಪಾಯ ಹಾಕಿದರು” ಎಂದು ಯೋಗಿ ಆದಿತ್ಯನಾಥ್ ನೆನಪಿಸಿಕೊಂಡರು.

ಇದೇ ವೇಳೆ ಯೋಗಿ ಆದಿತ್ಯನಾಥ್‌ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಟೂರಿಸಂ ಅಪ್ಲಿಕೇಷನ್‌ ಮತ್ತು ಅಯೋಧ್ಯೆ ಮೇಯರ್‌ ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌ ಅವರು ʼʼಇಂದು ಕಾಶಿ ಬೆಳಗುತ್ತಿದೆ. ಇಡೀ ಜಗತ್ತೇ ಕಾಶಿಯನ್ನು ನೋಡುತ್ತಿದೆʼʼ ಎಂದು ಬಣ್ಣಿಸಿದರು. “ಇದು ಡಬಲ್ ಎಂಜಿನ್ ಸರ್ಕಾರ. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ. ಅಯೋಧ್ಯೆಯಲ್ಲಿ 2017ಕ್ಕೂ ಮೊದಲು ವಿದ್ಯುತ್ ಇರಲಿಲ್ಲ. ಅಂದು ರಾಮನನ್ನು ನಿರ್ಲಕ್ಷಿಸಿದರು, ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಅವರು ಈಗಲೂ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ, ಸನಾತನ ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅವರು ನಿಮ್ಮ ಅಸ್ತಿತ್ವದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅವರು ನಿಮ್ಮ ಪರಂಪರೆಯ ಬಗ್ಗೆ ಪ್ರಶ್ನೆಗಳನ್ನೂ ಎತ್ತುತ್ತಿದ್ದಾರೆ” ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಲೇಸರ್‌ ಲೈಟ್‌

ಅಯೋಧ್ಯೆಯ ಸರಯೂ ಘಾಟ್‌ನಲ್ಲಿ ಲೇಸರ್‌ ಮತ್ತು ಲೈಟ್‌ ಶೋ ಏರ್ಪಡಿಸಲಾಗಿದೆ. ಘಾಟ್‌ನ ತುಂಬ ಮಣ್ಣಿನ ಹಣತೆ, ದೀಪ ಹಚ್ಚಿಡಲಾಗಿದೆ. ದೀಪದ ಹಿನ್ನೆಲೆಯಲ್ಲಿ ರಾಮ ಲೀಲ ಪ್ರಸ್ತುತ ಪಡಿಸಲಾಗಿದೆ.

25 ಲಕ್ಷಕ್ಕೂ ಅಧಿಕ ದೀಪ

ಸರಯೂ ನದಿ ದಡ ದೀಪದ ಬೆಳಕಿನಲ್ಲಿ ಝಗಮಗಿಸಿದೆ. ಸುಮಾರು 25 ಲಕ್ಷಕ್ಕೂ ಅಧಿಕ ಮಣ್ಣಿನ ಹಣತೆಯನ್ನು ಬೆಳಗಲಾಗಿದೆ. ಈ ನಯನ ಮನೋಹರ ದೃಶ್ಯ ಎಲ್ಲರ ಗಮನ ಸೆಳೆದಿದೆ. ಅಯೋಧ್ಯೆ ನಗರವನ್ನು 28 ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಈ ಸುದ್ದಿಯನ್ನೂ ಓದಿ: Deepavali 2024: ದೀಪಾವಳಿಯಂದು ಅಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪ! ಗಿನ್ನಿಸ್‌ ದಾಖಲೆಯ ಗುರಿ