Sunday, 24th November 2024

Ayodhya Deepotsav 2024: ಅಯೋಧ್ಯೆಯಲ್ಲಿ ಏಕಕಾಲಕ್ಕೆ ಬೆಳಗಿದ 25 ಲಕ್ಷ ದೀಪ; ಹೊಸ ವಿಶ್ವ ದಾಖಲೆ: ಇಲ್ಲಿದೆ ನೋಡಿ Photo Gallery

Ayodhya Deepotsav 2024

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡುವುದರೊಂದಿಗೆ ಈ ಬಾರಿಯ ದೀಪಾವಳಿ ಸಂಭ್ರಮ ಆರಂಭವಾಗಿದೆ (Ayodhya Deepotsav 2024). ಬುಧವಾರ (ಅ. 30) ಈ ಅದ್ಧೂರಿ ದೀಪೋತ್ಸವವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಿದ್ದಾರೆ. ವಿಶೇಷ ಎಂದರೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲಕ ರಾಮನ ಪ್ರಾಣ ಪ್ರತಿಷ್ಠೆ ಆದ ಬಳಿಕ ನಡೆದ ಮೊದಲ ದೀಪೋತ್ಸವ ಇದು. ಜತೆಗೆ ಲಕ್ಷ ಲಕ್ಷ ಹಣತೆ ಬೆಳಗುವ ಮೂಲಕ ಗಿನ್ನಿಸ್‌ ದಾಖಲೆ (Guinness World Records) ಬರೆಯಲಾಯಿತು.

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಏಕಕಾಲಕ್ಕೆ 25,12,585 ಎಣ್ಣೆಯ ದೀಪವನ್ನು ಬೆಳಗಲಾಯಿತು. ಈ ಮೂಲಕ ಏಕಕಾಲಕ್ಕೆ ಅತೀ ಹೆಚ್ಚು ಎಣ್ಣೆಯ ದೀಪವನ್ನು ಬೆಳಗಿದ ದಾಖಲೆ ನಿರ್ಮಿಸಲಾಯಿತು.

ಹಿಂದಿನ ದಾಖಲೆ ಕಳೆದ ವರ್ಷದ ದೀಪೋತ್ಸವದ ಹೆಸರಿನಲ್ಲಿದೆ. 2023ರಲ್ಲಿ ಏಕಕಾಲಕ್ಕೆ 22 ಲಕ್ಷ ದೀಪಗಳನ್ನು ಹಚ್ಚಿಡಲಾಗಿತ್ತು.

ಈ ಬಾರಿ 28 ಲಕ್ಷ ಹಣತೆಗಳನ್ನು ಬೆಳಗುವ ಮೂಲಕ ದಾಖಲೆ ಬರೆಯಬೇಕು ಎನ್ನುವ ನಿಟ್ಟಿನಲ್ಲಿ ಹಿಂದಿನಿಂದಲೇ ತಯಾರಿ ನಡೆಸಿಕೊಂಡು ಬರಲಾಗಿತ್ತು.

ಪ್ರವಾಸೋದ್ಯಮ ಇಲಾಖೆ, ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯೆಯ ಜಿಲ್ಲಾಡಳಿತ ಜಂಟಿಯಾಗಿ ಈ ಸಾಧನೆ ಮಾಡಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಸಮಿತಿಯಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಈ ಸಾಧನೆಯ ಹಿಂದೆ 30,000ಕ್ಕೂ ಅಧಿಕ ಸ್ವಯಂ ಸೇವಕರ ಪರಿಶ್ರಮ ಇದೆ ಎಂದು ಅವರು ತಿಳಿಸಿದರು.

ವಿಶೇಷ ಎಂದರೆ ರಾಮ ಮಂದಿರ, ಸರಯೂ ನದಿ ಪರಿಸರದಲ್ಲಿ ಚೀನೀ ನಿರ್ಮಿತ ದೀಪಗಳಿಗೆ ಅನುಮತಿ ಇರಲಿಲ್ಲ.

ಇದರ ಜತೆಗೆ ರಾಮನ ಜೀವನದ ಮೇಲೆ ಬೆಳಕು ಚೆಲ್ಲುವ ವಿವಿಧ ಸ್ತಬ್ಧ ಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ಸರಯೂ ನದಿಯ ಸುಮಾರು 55 ಘಾಟ್‌ನಲ್ಲಿ ಈ ದೀಪಗಳನ್ನು ಬೆಳಗಿಸಲಾಗಿದೆ.

ಇದರ ಜತೆಗೆ 1,100 ಪುರೋಹಿತರು ಮಹಾ ಆರತಿಯನ್ನು ಬೆಳಗಿದ್ದಾರೆ. ಪರಿಸರಕ್ಕೆ ಪೂರಕವಾದ ಪಟಾಕಿ ಸಿಡಿಸಲಾಗಿದೆ. ಜತೆಗೆ ಲೇಸರ್‌ ಶೋ ವ್ಯವಸ್ಥೆಯನ್ನೂ ಮಾಡಲಾಗಿದೆ.

ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಉದ್ಘರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Deepavali 2024: ಅಯೋಧ್ಯೆ ಸರಯೂ ನದಿ ದಡದಲ್ಲಿ ಬೆಳಗಿದ ಲಕ್ಷ ಲಕ್ಷ ಹಣತೆಗಳು; ದೀಪದ ಬೆಳಕಿನಲ್ಲಿ ಕಂಗೊಳಿಸಿದ ರಾಮ ಮಂದಿರ