ಹೊಸದಿಲ್ಲಿ: ತೆಲಂಗಾಣ ಸರ್ಕಾರ ಬುಧವಾರ (ಅ. 30) 1 ವರ್ಷದವರೆಗೆ ಕಚ್ಚಾ ಮೊಟ್ಟೆಗಳಿಂದ ತಯಾರಿಸುವ ಮಯೋನೈಸ್ (Mayonnaise)ನ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಯೋನೈಸ್ ಸೇವನೆಯಿಂದ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ ಎನ್ನುವ ದೂರು ನಿರಂತರವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ (Food Poisoning).
ಮೊಟ್ಟೆಯ ಹಳದಿ ಭಾಗ, ಎಣ್ಣೆ ಮತ್ತು ಸಕ್ಕರೆಯನ್ನು ವಿಸ್ಕ್ ಮಾಡುವ ಮೂಲಕ ಮಯೋನೈಸ್ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸ್ಯಾಂಡ್‌ವಿಚ್, ಸಲಾಡ್, ವಿವಿಧ ತಿಂಡಿ, ಶಾವರ್ಮಾ ಮತ್ತು ವಿವಿಧ ಭಕ್ಷ್ಯಗಳಲ್ಲಿ ಸೈಡ್ ಡಿಶ್ ಅಥವಾ ಡ್ರೆಸ್ಸಿಂಗ್ ಆಗಿ ಬಳಸಲಾಗುತ್ತದೆ. “ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳ ಪ್ರಕಾರ ಕಚ್ಚಾ ಮೊಟ್ಟೆಗಳಿಂದ ತಯಾರಿಸಿದ ಮಯೋನೈಸ್ ಸೇವಿಸಿ ಹಲವರು ಅನಾರೋಗ್ಯಕ್ಕೀಡಾಗಿದ್ದಾರೆʼʼ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Prohibition on Mayonnaise made from raw eggs
— Commissioner of Food Safety, Telangana (@cfs_telangana) October 30, 2024
The prohibition applies to Mayonnaise being prepared by FBOs for commercial use, using raw eggs without any pasteurisation.
The ban does not apply to mayonnaise which is produced from pasteurised eggs, with due safety measures to… pic.twitter.com/dYL8igLDvu
ಕಳೆದ ವರ್ಷವೇ ಕೇರಳ ಸರ್ಕಾರ ಮಯೋನೈಸ್ ಅನ್ನು ನಿಷೇಧಿಸಿತ್ತು. 2023ರಲ್ಲಿ ನಡೆಸಿದ ವಿವಿಧ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಮಯೋನೈಸ್‌ನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮಯೋನೈಸ್ ಉತ್ಪಾದನೆ ಮತ್ತು ಸಂಗ್ರಹವನ್ನು ನಿಷೇಧಿಸಿತ್ತು. ಈ ಮೂಲಕ ಕೇರಳ ಮಯೋನೈಸ್ ನಿಷೇಧಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು.
ರಸ್ತೆ ಬದಿಯಲ್ಲಿ ಮೊಮೊಸ್ ಸೇವಿಸಿ ಮಹಿಳೆ ಸಾವು
ಹೈದರಾಬಾದ್: ರಸ್ತೆ ಬದಿಯ ಅಂಗಡಿಯಿಂದ ಮೊಮೊಸ್ (Momos) ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು 15 ಜನರು ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ. ನಗರದ ಪ್ರತ್ಯೇಕ ಸ್ಥಳದಲ್ಲಿ ಈ ಘಟನೆ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವಾರ ಬಂಜಾರಾ ಹಿಲ್ಸ್ ಪೊಲೀಸ್ ವ್ಯಾಪ್ತಿಯ ವಿವಿಧ ಸ್ಟಾಲ್‌ಗಳಲ್ಲಿ ಅನೇಕರು ಮೊಮೊಸ್ ಸೇವಿಸಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ಮತ್ತು ಇತರರು ‘ದೆಹಲಿ ಮೊಮೊಸ್’ ಹೆಸರಿನ ಫುಡ್ ಸ್ಟಾಲ್‌ನಿಂದ ಮೊಮೊಸ್ ಸೇವಿಸಿದ್ದಾರೆ. ಚಿಂತಲ್ ಬಸ್ತಿಯಲ್ಲಿರುವ ಈ ಸ್ಟಾಲ್ ಅನ್ನು ಮೂರು ತಿಂಗಳ ಹಿಂದೆ ಬಿಹಾರದಿಂದ ಬಂದ ಆರು ಜನರು ಸ್ಥಾಪಿಸಿದ್ದರು. ಸ್ಟಾಲ್ ನಡೆಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಮೊಸ್ ತಿಂದು ಸಾವನ್ನಪ್ಪಿದ ಮಹಿಳೆಯ ಕುಟುಂಬದ ಸದಸ್ಯರು, ತಿಂಡಿ ತಿಂದ ಮಹಿಳೆ ಅಸ್ವಸ್ಥಗೊಂಡಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳೀಯರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ʼʼತಿಂಡಿ ಸೇವಿಸಿದ ಒಂದು ಗಂಟೆಯ ನಂತರ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅ. 28ರ ಬೆಳಗ್ಗೆ 8.30ರ ಸುಮಾರಿಗೆ ಮಹಿಳೆ ಮೃತಪಟ್ಟಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಮಾರಾಟಗಾರರ ಕಾರ್ಯಾಚರಣೆಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಆಹಾರ ಸುರಕ್ಷತಾ ಅಧಿಕಾರಿಗಳು, ಪೊಲೀಸರ ಸಹಯೋಗದಲ್ಲಿ ಸ್ಟಾಲ್ ಅನ್ನು ಪತ್ತೆಹಚ್ಚಿದರು ಮತ್ತು ಇದು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
ಈ ಸುದ್ದಿಯನ್ನೂ ಓದಿ: Karnataka Waqf Controversy : ರಾಜ್ಯದಲ್ಲೂ ವಕ್ಫ್ ಆಸ್ತಿ ವಿವಾದ; ಏನು, ಎತ್ತ? Complete Details