Thursday, 31st October 2024

BJP campaign List: ಸ್ಟಾರ್‌ಗಳಿಲ್ಲದ ಬಿಜೆಪಿ ಪಟ್ಟಿ

ಪಕ್ಷ ನಿಷ್ಠರು-ವಿಜಯೇಂದ್ರ ನಡುವೆ ಮುಂದುವರಿದ ಮುಸುಕಿನ ಗುದ್ದಾಟ
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯೇಂದ್ರ ಬಣದವರಿಗೆ ಮಾತ್ರ ಸ್ಥಾನ

ಬೆಂಗಳೂರು: ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ಪಕ್ಷ ನಿಷ್ಠರ ನಡುವಿನ
ಮುಸುಕಿನ ಗುದ್ದಾಟ ಮುಂದುವರಿದಿದೆ. ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಯೂ ಈ ಬಿರುಕು ಸ್ಪಷ್ಟವಾಗಿ ಕಾಣುತ್ತಿದೆ. ಹೌದು, ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ ಸ್ಟಾರ್
ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 40 ಜನರ ಈ ಪಟ್ಟಿಯಲ್ಲಿ, ವಿಜಯೇಂದ್ರ
ವಿರೋಽ ಪಡೆಯಲ್ಲಿ ಕಾಣಿಸಿ ಕೊಂಡಿರುವ ಹಲವು ‘ಪ್ರಮುಖ’ರಿಗೆ ಸ್ಥಾನ ಸಿಕ್ಕಿಲ್ಲ. ಈ ಮೂಲಕ ಬಿಜೆಪಿಯಲ್ಲಿ
ವಿಜಯೇಂದ್ರ ಬಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಪ್ರಮುಖವಾಗಿ ಲಿಂಗಾಯತ ಸಮುದಾಯ ಪ್ರಬಲ ನಾಯಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, 18 ವರ್ಷಗಳ ಕಾಲ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅರವಿಂದ ಲಿಂಬಾವಳಿ, ಬೆಳಗಾವಿ ಭಾಗದ ಹಾಗೂ ಪರಿಶಿಷ್ಟ ಪಂಗಡದ ಪ್ರಮುಖ ನಾಯಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರಿಗೆ ಈ ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವಕಾಶ ನೀಡದಿರುವುದು ಪಕ್ಷದಲ್ಲಿ ವಿರೋಧಕ್ಕೆ ಕಾರಣವಾಗಿದೆ.

ಕಳೆದ ವಿಧಾನಸಭಾ ಚುನಾವಣಾ ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಬಹುತೇಕ ಈ ಎಲ್ಲ ನಾಯಕರ ಹೆಸರುಗಳಿದ್ದವು. ಈ ನಾಯಕರು ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿರುವ ಉದಾಹರಣೆ ಯಿದೆ. ಆದರೆ ಈಗ ವಿಜಯೇಂದ್ರ ಹಾಗೂ ಅವರ ತಂಡ ಮಾಡುತ್ತಿರುವ ತಪ್ಪುಗಳ ಬಗ್ಗೆ ಗಟ್ಟಿ ಧ್ವನಿ ಎತ್ತಿರುವ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಪರಾಜಿತ ಅಭ್ಯರ್ಥಿ ಚನ್ನಪಟ್ಟಣ ಉಸ್ತುವಾರಿ: ಮೈತ್ರಿ ಪಕ್ಷದ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣಕ್ಕೆ ತಮ್ಮೇಶ್ ಗೌಡ ಹಾಗೂ ರುದ್ರೇಶ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಆದರೆ ಡಿಕೆ ಸಹೋದರರು, ಯೋಗೇಶ್ವರ ವಿರುದ್ಧ ತಂತ್ರಗಾರಿಕೆ ರೂಪಿಸಲು ಬಲಿಷ್ಠ ನಾಯಕರನ್ನು ನೇಮಿಸಬೇಕಿತ್ತು ಎನ್ನುವ ಮಾತುಗಳು ಕೇಳಿಬಂದಿವೆ. ಹಾಗೇ ನೋಡಿದರೆ ವಿಜಯೇಂದ್ರ ಆಪ್ತ ರುದ್ರೇಶ್ ಅವರಿಗೆ ಚುನಾವಣೆ ಎದುರಿಸಿರುವ ಅನುಭವವೇ ಇಲ್ಲ. ಇನ್ನೊಂದೆಡೆ ತಮ್ಮೇಶ್ ಗೌಡ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ.

ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಟಾರ್‌ಗಿರಿ ಗಳಿಸಿರುವ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರಿದ್ದರೂ ಅವರೆಲ್ಲರನ್ನೂ ಬಿಟ್ಟು, ತಮ್ಮೇಶ್ ಗೌಡ ಮತ್ತು ರುದ್ರೇಶ್ ಅವರನ್ನು ನೇಮಿಸಿರುವುದು ಯಾರಿಗೆ ಸಹಾಯ
ಮಾಡುವುದಕ್ಕೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ ಎನ್ನುವ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಪಟ್ಟಿಯಲ್ಲಿರುವ ಪ್ರಮುಖರು
ಬಿ.ಎಸ್.ಯಡಿಯೂರಪ್ಪ, ರಾಧಾಮೋಹನ್ ದಾಸ್ ಅಗರ್ವಾಲ ಸುಧಾಕರ್ ರೆಡ್ಡಿ ಬಿ.ವೈ.ವಿಜಯೇಂದ್ರ ಆರ್.ಅಶೋಕ ಛಲವಾದಿ ನಾರಾಯಣಸ್ವಾಮಿ ಡಿ.ವಿ.ಸದಾನಂದಗೌಡ ಬಸವರಾಜ ಬೊಮ್ಮಾಯಿ ಪ್ರಲ್ಹಾದ ಜೋಶಿ
ನಳಿನ್‌ಕುಮಾರ್ ಕಟೀಲ ಗೋವಿಂದ ಕಾರಜೋಳ ಸಿ.ಎನ್. ಅಶ್ವತ್ಥ ನಾರಾಯಣ ಸಿ.ಟಿ.ರವಿ ಬಿ.ಶ್ರೀರಾಮುಲು
ಜಗದೀಶ್ ಶೆಟ್ಟರ್

ವಿಜಯೇಂದ್ರ ನಿಷ್ಠರಿಗೆ ಅವಕಾಶ?
ರಾಜ್ಯ ಬಿಜೆಪಿ ಬಿಡುಗಡೆಗೊಳಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಗಮನಿಸಿದರೆ ಈ ಪಟ್ಟಿಯಲ್ಲಿ ಬಲಿಷ್ಠ ನಾಯಕರು, ಪಕ್ಷದ ನಿಷ್ಠ ನಾಯಕರಿಗಿಂತ ಹೆಚ್ಚಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವವರಿಗೇ ಅವಕಾಶ ನೀಡಲಾಗಿದೆ ಎಂಬುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಈ
ಬಗ್ಗೆ ಪಕ್ಷದ ವಲಯದಲ್ಲಿಯೂ ಭಾರಿ ವಿರೋಧ ಶುರುವಾಗಿದ್ದು, ಉಪಚುನಾವಣೆ ಮುಗಿಯುತ್ತಿದ್ದಂತೆ ಅತೃಪ್ತರ ಗುಂಪು ಇನ್ನಷ್ಟು ದೊಡ್ಡದಾಗುವ ಸಾಧ್ಯತೆ ಸ್ಪಷ್ಟವಾಗಿದೆ.

ಇದನ್ನೂ ಓದಿ: BJP Membership : ಬಿಜೆಪಿಯ ಸಕ್ರಿಯ ಸದಸ್ಯರಾಗಿ ಸದಸ್ಯತ್ವ ನವೀಕರಿಸಿದ ಪ್ರಧಾನಿ ಮೋದಿ