Thursday, 31st October 2024

Dr Vijay Darda Column: ದೀಪಾವಳಿ ಮತ್ತು ಚುನಾವಣೆ

ಸಂಗತ

ಡಾ.ವಿಜಯ್‌ ದರಡಾ

ದೀಪಾವಳಿ ಹಬ್ಬವು ಸಾಂಪ್ರದಾಯಿಕವಾಗಿ ಶುರುವಾಗುವುದು ಧನ ತ್ರಯೋದಶಿಯೊಂದಿಗೆ. ಈ ಶುಭ ಸಂದರ್ಭ ದಲ್ಲಿ ನನ್ನ ಬಂಧು-ಮಿತ್ರರು ಮತ್ತು ‘ವಿಶ್ವವಾಣಿ’ ಓದುಗ ಕುಟುಂಬದ ಜತೆ ಸಂಭ್ರಮವನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಇಲ್ಲಿ ನಾನು ‘ಕುಟುಂಬ’ ಎಂಬ ಶಬ್ದವನ್ನು ವಿಶಾಲಾರ್ಥದಲ್ಲಿ ಬಳಸಿರುವೆ. ತಮ್ಮಲ್ಲಿ ಹುದುಗಿ ರುವ ಶ್ರೇಷ್ಠತೆಯಿಂದಾಗಿ ನನಗೆ ಅತೀವ ಪ್ರೀತಿ-ಶಕ್ತಿಯನ್ನು ಧಾರೆಯೆರೆದಿರುವ ಚಿಂತನಶೀಲ ಓದುಗರನ್ನೂ, ಎಲ್ಲ ಬಂಧು-ಮಿತ್ರರನ್ನೂ ಈ ‘ಕುಟುಂಬ’ದ ಪರಿಕಲ್ಪನೆ ಒಳಗೊಂಡಿದೆ.

ಈ ‘ಬೆಳಕಿನ ಹಬ್ಬ’ವೇ ಹಾಗೆ. ಪ್ರೀತಿಪಾತ್ರರೊಂದಿಗೆ ನೀವು ಸಂತಸ-ಸಂಭ್ರಮವನ್ನು ಹಂಚಿಕೊಳ್ಳದಿದ್ದರೆ, ಪ್ರೀತಿಯ ಹೊನಲಿನಿಂದ ಇತರರ ಬಾಳಿಗೆ ತಂಪೆರೆಯದಿದ್ದರೆ ಬೆಳಕಿನ ಆನಂದ ಅಪೂರ್ಣವಾಗೇ ಉಳಿದುಬಿಡುತ್ತದೆ. ಹೀಗಾಗಿ, ಮೊದಲಿಗೆ ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯವನ್ನು ಕೋರುತ್ತೇನೆ. ಹಿಂದಿನ ದೀಪಾವಳಿಗಳಿಗಿಂತ ಈ ಬಾರಿಯದು ಸಂಪೂರ್ಣ ಭಿನ್ನವಾಗಿರಲಿದೆ. ದೀಪಾವಳಿಯ ಜತೆಗೆ ಚುನಾವಣೆಗಳ ಬಗ್ಗೆಯೂ ಯೋಚಿಸುತ್ತಿರುವಾಗ,
“ಮನಸ್ಸಿನಲ್ಲಿ ಒಳಗೊಳಗೇ ಲಡ್ಡು ಬಿರಿಯಿತು… ಕೈಯಲ್ಲಿ ಮಿಂಚು ಸುಳಿದಾಡಿತು!” ಎಂಬ ಬಾಲ್ಯದ ನುಡಿಗಟ್ಟು ನನಗೆ ನೆನಪಾಯಿತು.

ಹೃದಯದಲ್ಲಿ ಉಕ್ಕುವ ಆನಂದ ಮತ್ತು ಕೈಯಲ್ಲಿ ಹಿಡಿಯುವ ಮತಾಪು ಎರಡೂ ಸಂತಸ- ಸಂಭ್ರಮವನ್ನು ಸಂಕೇತಿಸುತ್ತವೆ ಎಂಬುದಿಲ್ಲಿ ಸ್ಪಷ್ಟ! ಆದರೆ ಚುನಾವಣೆಯ ಕಾಲಘಟ್ಟದಲ್ಲಿ ಈ ಪಾತ್ರಗಳು ಕೊಂಚ ಭಿನ್ನ ವಾಗಿರುತ್ತವೆ. ಅಂದರೆ, ಚುನಾವಣಾ ಸ್ಪರ್ಧೆಗೆ ಪಕ್ಷದಿಂದ ಟಿಕೆಟ್ ಪಡೆದವರು ಸಹಜವಾಗಿ ಒಳಗೊಳಗೇ ಖುಷಿ ಯಾಗಿರುತ್ತಾರೆ. ಈ ಪೈಕಿ ಯಾರು ಗೆಲುವಿನ ಸಿಹಿಯನ್ನು ಚಪ್ಪರಿಸುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಹೀಗೆ ಖುಷಿಯಾಗಿರುವವರು ನಿಮ್ಮ ಬಾಯನ್ನೂ ಸಿಹಿಯಾಗಿಸಲು ಬಯಸಲಿದ್ದಾರೆ, ‘ನಿಮ್ಮ ಪ್ರದೇಶದಲ್ಲಿ ಅಭಿವೃ
ದ್ಧಿಯ ಮಿಂಚು ಮಿನುಗಲಿದೆ’ ಎಂಬ ‘ಹೊಳೆ ಹೊಳೆಯುವ’ ಭರವಸೆಯನ್ನಂತೂ ನೀಡಲಿದ್ದಾರೆ ಎಂಬುದು ಖಂಡಿತ. ಅಭಿವೃದ್ಧಿಯೆಡೆಗೆ, ಜನಕಲ್ಯಾಣದೆಡೆಗೆ ನಿಜಾರ್ಥದಲ್ಲಿ ಸಮರ್ಪಿಸಿಕೊಂಡಿರುವ ಅನೇಕ ನಾಯಕರಿದ್ದಾರೆ ಎಂಬುದನ್ನು ಬಲ್ಲೆ, ಆದರೆ ಪೊಳ್ಳು ಭರವಸೆಯ ಪ್ರವೀಣರಿಗೂ ನಮ್ಮಲ್ಲೇನೂ ಕೊರತೆಯಿಲ್ಲ ಎಂಬ ‘ಅಪ್ರಿಯ ಸತ್ಯ’ವನ್ನಿಲ್ಲಿ ಮರೆಯುವಂತಿಲ್ಲ.

ಈ ಚುನಾವಣಾ ಕಾಲಘಟ್ಟವು ಮತದಾರರ ಬಾಳಿಗೂ ನಿಜಾರ್ಥದ ದೀಪಾವಳಿಯನ್ನು ತರಲಿದೆ ಎನ್ನುವುದಿಲ್ಲಿ ಕ್ಷೇಮ. ಈ ಬಾರಿಯ ದೀಪಾವಳಿ ಚುನಾವಣಾ ಪರ್ವದ ಜತೆಗೇ ಮೇಳೈಸಿರುವುದರಿಂದಾಗಿ, ಮತದಾರರನ್ನು
ಅದಕ್ಕೆ ತಕ್ಕಂತೆಯೇ ನಡೆಸಿಕೊಳ್ಳಲಾಗುತ್ತದೆ. ಹಾಗಾದಲ್ಲಿ ಉಳಿದ 5 ವರ್ಷಗಳ ಅವಧಿಯಲ್ಲಿ ಮತದಾರರು ತಮ್ಮ ನಾಯಕರ ಬಾಯಿಸಿಹಿ ಮಾಡುತ್ತಾರೆ, ಹೂವಿನಹಾರ ಹಾಕುತ್ತಾರೆ, ಅಷ್ಟೇಕೆ ತಮ್ಮ ಕ್ಷೇತ್ರಕ್ಕೆ ಅವರು ಆಗಮಿಸಿ ಬಿಟ್ಟರಂತೂ ಪಟಾಕಿಯ ಸರಮಾಲೆಯನ್ನೇ ಸಿಡಿಸಿಬಿಡುತ್ತಾರೆ.

ಭಾರತೀಯ ಪ್ರಜಾಪ್ರಭುತ್ವದ ಈ ಸಂಪ್ರದಾಯವನ್ನು ಮೆಲುಕುಹಾಕುವಾಗ, ಅಟಲ್ ಬಿಹಾರಿ ವಾಜಪೇಯಿಯವರ ಕವಿತೆಯ ಕೆಲ ಸಾಲುಗಳೂ ಮನದಲ್ಲಿ ಇಣುಕುತ್ತವೆ: “ನಾವು ನಿಲ್ದಾಣ ವನ್ನೇ ಗಮ್ಯಸ್ಥಾನವೆಂದು ಪರಿಗಣಿಸಿದ್ದಕ್ಕೆ ಗುರಿಯು ಕಣ್ಣಿಂದ ಮರೆಯಾಗಿ ಬಿಟ್ಟಿತು. ವರ್ತಮಾನದ ಮೋಹಜಾಲದಲ್ಲಿ ನಾಳೆಗಳನ್ನು ಮರೆಯದಿರೋಣ, ಬನ್ನಿ ಮತ್ತೊಮ್ಮೆ ದೀಪ ಹಚ್ಚೋಣ! ಆಹುತಿ ಉಳಿದಿದೆ ಯಜ್ಞ ಅಪೂರ್ಣವಾಗಿದೆ, ಪ್ರೀತಿಪಾತ್ರರು ಒಡ್ಡಿದ ಅಡೆತಡೆ ಗಳು ನಮ್ಮನ್ನು ಸುತ್ತುವರಿದಿವೆ. ಅಂತಿಮ ಜಯದ ಸಿಡಿಲಘೋಷ ಮೊಳಗಿಸಲು ಹೊಸದಾಗಿ ದಽಚಿಯ ಮೂಳೆ ಗಳನ್ನು ಕರಗಿಸೋಣ, ಬನ್ನಿ ಮತ್ತೊಮ್ಮೆ ದೀಪ ಹಚ್ಚೋಣ!”.

ದೀಪಾವಳಿ ಮತ್ತು ಚುನಾವಣೆ ಬಗ್ಗೆ ಹೀಗೆ ಆಲೋಚಿಸುತ್ತಿರುವಾಗಲೇ ಹೊಸ ಪರಿಕಲ್ಪನೆಯೊಂದು ಮಿಂಚಿನಂತೆ ಸುಳಿಯಿತು. ಅದುವೇ- ‘ಧನವರ್ಷಿತರು’ ಅಂದರೆ ಹಣದ ಸುರಿಮಳೆಗೆ ಒಡ್ಡಿಕೊಂಡವರು ಎಂಬುದು. ಭಾರಿ ಶ್ರೀಮಂತರನ್ನು ‘ಧನವರ್ಷಿತರು’ ಎನ್ನುತ್ತೇವೆ. ಧನತ್ರಯೋದಶಿ ಇಲ್ಲದೆಯೂ ನಮ್ಮ ಚುನಾವಣಾ ವ್ಯವಸ್ಥೆಯನ್ನು ಸಂಪತ್ತು ಆವರಿಸಿಬಿಟ್ಟಿದೆ, ಅಲ್ಲಿ ಹಣದ ಸುರಿಮಳೆ ಯಾಗುತ್ತಿದೆ ಎನ್ನಲು ನನಗಾವ ಹಿಂಜರಿಕೆಯಿಲ್ಲ. ಏಕೆಂದರೆ, ಚುನಾವಣಾ ಪರ್ವದಲ್ಲಿ ಹೀಗೊಂದು ‘ಧನತ್ರಯೋದಶಿ’ ಕಾಣಬರುವುದು ಸಾಮಾನ್ಯ.

ಚುನಾವಣೆಗಳ ನಿರ್ವಹಣೆಗೆ ಆಗುವ ವೆಚ್ಚವೆಷ್ಟು ಎಂಬುದು ಜನರಿಗೆ ಗೊತ್ತಿರುವಂಥದ್ದೇ. ಒಂದೊಮ್ಮೆ ಅಭ್ಯರ್ಥಿ ಜನಪ್ರಿಯನಾಗಿದ್ದು, ತನ್ನ ಮತಕ್ಷೇತ್ರ ದಲ್ಲಿ ಗಮನಾರ್ಹ ಕೆಲಸ-ಕಾರ್ಯಗಳನ್ನು ಕೈಗೊಂಡಿದ್ದರೂ, ಚುನಾವಣಾ
ಸ್ಪರ್ಧೆಗೆ ಅವನಿಗೆ ಕನಿಷ್ಠಪಕ್ಷ 15-20 ಕೋಟಿ ರು. ಬೇಕಾಗುತ್ತದೆ ಎಂಬುದು ಬಹಿರಂಗ ಗುಟ್ಟು. ಒಂದೊಮ್ಮೆ ಸದರಿ ಸ್ಥಾನಕ್ಕೆ ಭಾರಿ ಪೈಪೋಟಿಯಿದ್ದರೆ, ಈ ಮೊತ್ತ 50 ಕೋಟಿಗೂ ಮುಟ್ಟಬಹುದು!

ನಮ್ಮ ಇತ್ತೀಚಿನ ಲೋಕಸಭಾ ಚುನಾವಣೆಗೂ ಸ್ವಲ್ಪ ಮುನ್ನ ಅಮೆರಿಕದ ‘ದಿ ಇಕನಾಮಿಸ್ಟ್’ ನಿಯತಕಾಲಿಕದಲ್ಲಿ ಗಮನಾರ್ಹ ವರದಿಯೊಂದು ಪ್ರಕಟವಾಗಿತ್ತು. “ಭಾರತದಲ್ಲಿ ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಅಮೆರಿಕದ ಚುನಾವಣೆಯನ್ನೂ ಮೀರಿಸಿ, ವಿಶ್ವದ ಅತ್ಯಂತ ವೆಚ್ಚದಾಯಕ ಚುನಾವಣೆ ಎನಿಸಿಕೊಳ್ಳಬಹುದು. ಏನಿಲ್ಲವೆಂದರೂ 83000 ಕೋಟಿ ರುಪಾಯಿ ಈ ವೇಳೆ ವೆಚ್ಚವಾಗುವ ಅಂದಾಜಿದೆ” ಎಂದಿತ್ತು ಆ ವರದಿ. ಇದನ್ನೇ
ಆಧಾರವಾಗಿಟ್ಟುಕೊಂಡರೆ, ಪ್ರತಿ ಲೋಕಸಭಾ ಸ್ಥಾನಕ್ಕೂ ಸರಾಸರಿ 153 ಕೋಟಿ ರು. ವೆಚ್ಚವಾಗುತ್ತದೆ ಎಂದಾ ಯಿತು!

‘Centre for Media Studies’ ಎಂಬ ಸಂಸ್ಥೆ ಅಂದಾಜಿಸಿದಂತೆ, 2019ರ ಲೋಕಸಭಾ ಚುನಾವಣೆಗೆ 55-60 ಸಾವಿರ ಕೋಟಿ ರು. ಅಥವಾ ಪ್ರತಿ ಲೋಕಸಭಾ ಸ್ಥಾನಕ್ಕೆ ಸುಮಾರು 100 ಕೋಟಿ ರು. ವೆಚ್ಚವಾಗಿತ್ತು. ಒಂದೊಮ್ಮೆ ಪ್ರತಿ ಸ್ಥಾನಕ್ಕೂ ಮೂವರು ‘ಗಂಭೀರ’ ಅಭ್ಯರ್ಥಿಗಳು ಸ್ಪರ್ಧಿಸಿದರೆ, ಪ್ರತಿಯೊಬ್ಬರೂ ಕನಿಷ್ಠ 30 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಪೀಕಬೇಕಾಗುತ್ತದೆ. ವಾಸ್ತವಿಕ ವೆಚ್ಚ ಇದಕ್ಕಿಂತ ಹೆಚ್ಚೇ ಇರುತ್ತದೆ ಎನ್ನಿ!

ನಿಮಗೊಂದು ಗಮ್ಮತ್ತಿನ ಸಂಗತಿ ನೆನಪಿರಬಹುದು- “ನೀವು ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಾ?” ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಪ್ರಶ್ನಿಸಿದಾಗ, ಅವರು ಖಡಾಖಂಡಿತವಾಗಿ “ಚುನಾವಣಾ ಸ್ಪರ್ಧೆಗೆ ಬೇಕಾಗುವಷ್ಟು ಹಣ ನನ್ನಲ್ಲಿಲ್ಲ” ಎಂದಿದ್ದರು! ಅಲ್ಲಿಗೆ, ನಮ್ಮ ಚುನಾವಣಾ ವ್ಯವಸ್ಥೆ ‘ಹಣಬಲದ ಬಿಗಿಮುಷ್ಟಿ’ಯಲ್ಲಿ ಸಿಲುಕಿ ಬಿಟ್ಟಿದೆ ಎಂದಾಯಿತು.

ಹಾಗಂತ ನಿರಾಶೆಗೊಳ್ಳಬೇಕಿಲ್ಲ. ಒಂದಲ್ಲಾ ಒಂದು ದಿನ ಈ ಚಿತ್ರಣ ಬದಲಾಗಲಿದೆ, ಒಳ್ಳೆಯ ಕಾಲ ಬರಲಿದೆ. ಚುನಾವಣೆಯು ‘ಧನವರ್ಷದ ಬಾಬತ್ತಲ್ಲ’ ಎಂಬ ಚಿತ್ತಸ್ಥಿತಿ ರೂಪುಗೊಂಡಾಗ ಜನತಂತ್ರದ ದೀಪಾವಳಿ ನಿಜಾರ್ಥ ದಲ್ಲಿ ಬೆಳಗುತ್ತದೆ. ಸದ್ಯಕ್ಕೆ ದೀಪಾವಳಿಯನ್ನು ಆಚರಿಸೋಣ, ಸಂಭ್ರಮಿಸೋಣ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಯೋಗ್ಯತೆಯನ್ನು ಮೌಲ್ಯಮಾಪನ ಮಾಡೋಣ. ಚುನಾವಣೆಗಳ ಕುರಿತಾಗಿ ಚರ್ಚಿಸಲು, ಲೋಕಾಭಿರಾಮವಾಗಿ ಹರಟಲು ಮತ್ತೊಂದು ಸಮಯ ಇದ್ದೇ ಇದೆ. ಸದ್ಯಕ್ಕೆ ದೀಪಾವಳಿಯ ಪುಳಕಗಳನ್ನು ಅನುಕ್ಷಣವೂ ಮೆಲುಕುಹಾಕೋಣ. ‘ಆಕಾಶದಲ್ಲಿನ ನಕ್ಷತ್ರಗಳ ಮೆರವಣಿಗೆಯಂತೆ, ಈ ಪುಟ್ಟ ದೀಪಗಳು ನಿಮಗೆ ಸವಾಲು ಹಾಕುತ್ತಿವೆ! ನಿಮ್ಮನ್ನು ಅಪ್ಪಿಕೊಳ್ಳುವ ಈ ಪುಟ್ಟದೀಪಗಳು ಅಮಾವಾಸ್ಯೆಯಲ್ಲೂ ಹೊಸಬೆಳಕು ತರುತ್ತವೆ!’ ಎಂಬ ಕವಿನುಡಿ ನಮಗೆ ಸ್ಪೂರ್ತಿಯಾಗಲಿ.

‘ಬೆಳಕಿನ ಹಬ್ಬ’ ಅಥವಾ ‘ದೀಪಗಳ ಹಬ್ಬ’ ಎಂದು ಕರೆಯಲ್ಪಡುವ ದೀಪಾವಳಿ ನಮ್ಮೊಳಗಿನ ಅಂಧಕಾರವನ್ನು ಕಿತ್ತೊಗೆಯುವ, ತನ್ಮೂಲಕ ಸಂಭ್ರಮಿಸುವ ಒಂದು ಪರ್ವಕಾಲವೂ ಹೌದು. ಈ ಅಂಧಕಾರ ನೀಗಬೇಕೆಂದರೆ, ಪ್ರೀತಿ-ಅಂತಃಕರಣದ ಕಿರಣಗಳು ಹೊಮ್ಮಬೇಕು. ಆಗ ಮಾತ್ರವೇ ಮನವನ್ನು ಕವಿದ ಕತ್ತಲೆಯ ಛಾಯೆ ಚದುರಿ ಹೋಗು ತ್ತದೆ! ಈ ದೀಪಗಳು ಹಬ್ಬ ನಿಮ್ಮ ಬಾಳಲ್ಲಿ ಆರೋಗ್ಯ, ಪ್ರೀತಿ ಮತ್ತು ಆನಂದದ ಹೊನಲನ್ನೇ ಹರಿಸಲಿ. ನಿಮ್ಮೆಲ್ಲ ರಿಗೂ ದೀಪಾವಳಿ ಹಬ್ಬದ ಹಾರ್ದಿಕ ಮತ್ತು ಭರಪೂರ ಶುಭಾಶಯಗಳು.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ; Dr Vijay Darda Column: ವಿದೇಶಿ ಸಂಬಂಧದ ಹೊಸ ಸಮೀಕರಣಗಳು