ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧ ನಾಳೆಯಿಂದ(ಶುಕ್ರವಾರ) ವಾಂಖೆಡೆ ಸ್ಟೇಡಿಯಂನಲ್ಲಿ(Wankhede Stadium) ಆರಂಭವಾಗಲಿರುವ ಮೂರನೇ ಟೆಸ್ಟ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರಿಗೆ ವಿಶೇಷ ಪಂದ್ಯವಾಗಿದೆ. ಹೌದು, 11 ವರ್ಷಗಳ ಬಳಿಕ ರೋಹಿತ್ ತವರಿನಲ್ಲಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.
ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನಾಡಿದ್ದು 2013 ರಲ್ಲಿ. ಅದು ಕ್ರಿಕೆಟ್ ದೇವರು ಎಂದು ಕರೆಯುವ ಸಚಿನ್ ತೆಂಡೂಲ್ಕರ್ ಅವರ ವಿದಾಯ ಪಂದ್ಯವಾಗಿತ್ತು. ವಿಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿ ಮಿಂಚಿದ್ದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರೋಹಿತ್ 127 ಎಸೆತಗಳಿಂದ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಬಾರಿಸಿದ್ದರು.
— Rohit Sharma (@ImRo45) September 16, 2024
ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ರೋಹಿತ್ ಇದೀಗ ತವರಿನ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಇಲ್ಲಿ ಆಡಿದ್ದ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದಂತೆ ಈ ಬಾರಿಯೂ ಶತಕ ಬಾರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಈಗಾಗಲೇ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿರುವ ಭಾರತ ವೈಟ್‌ವಾಶ್ ಮುಖಭಂಗದಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡವಿದೆ.
ಅಂತಿಮ ಟೆಸ್ಟ್‌ಗೆ ಆಯ್ಕೆಯಾಗಿರುವ ಬೌಲಿಂಗ್ ಆಲ್ ರೌಂಡರ್ ಹರ್ಷಿತ್ ರಾಣಾ ಪಾದಾರ್ಪಣೆ ಮಾಡುವ ಸಾಧ್ಯತೆ ಇಲ್ಲ. ಜತೆಗೆ, ಈ ಪಂದ್ಯದಲ್ಲೂ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರೆ ಎಂದು ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸುಳಿವು ನೀಡಿದ್ದಾರೆ.
ಇದನ್ನೂ ಓದಿ Rohit Sharma : ಭಾರತದ ಸೋಲಿಗೆ ರೋಹಿತ್ ಕಾರಣವಲ್ಲ ಎಂದ ಶಿಖರ್ ಧವನ್
22 ವರ್ಷದ ವೇಗಿ ಹರ್ಷಿತ್ ರಾಣಾ, ರಣಜಿಯಲ್ಲಿ ದೆಹಲಿಯನ್ನು ಪ್ರತಿನಿಧಿಸಿ ಅಸ್ಸಾಂ ವಿರುದ್ಧ 5 ವಿಕೆಟ್ ಸಹಿತ ಅರ್ಧ ಶತಕ ಸಿಡಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಮೀಸಲು ಆಟಗಾರರಾಗಿ ಭಾರತೀಯ ತಂಡಕ್ಕೆ ಕರೆ ಬಂದಿತ್ತು. ಅಲ್ಲದೆ, ಮುಂಬೈಯಲ್ಲಿ ರಾಣಾ ಭಾರತ ಪರ ಆಡಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಆದರೆ ಈ ಸಾಧ್ಯತೆಯನ್ನು ನಾಯರ್ ಅಲ್ಲಗೆಳೆದಿದ್ದಾರೆ.