Thursday, 31st October 2024

Bomb Threat: ಸ್ನೇಹಿತರ ಜತೆಗಿನ ಟ್ರಿಪ್‌ ಕ್ಯಾನ್ಸಲ್‌ ಮಾಡೋಕೆ ಈತ ಮಾಡಿದ ಪ್ಲ್ಯಾನ್‌ ಏನ್‌ ಗೊತ್ತಾ? ಮಾಡಿದ ಕಿತಾಪತಿಗೆ ಈಗ ಜೈಲೇ ಗತಿ!

bomb threat

ತಿರುವನಂತಪುರಂ: ಅಬುದಾಬಿಗೆ ಪ್ರಯಾಣ ಬೆಳೆಸಿದ್ದ ಏರ್‌ ಅರಾಬಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆವೊಡ್ಡಿದ ಹಿನ್ನೆಲೆ ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಮಲಪ್ಪುರಂನ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನಕ್ಕೆ ಬೆದರಿಕೆ(Bomb Threat) ಹಿನ್ನೆಲೆ ಏಕಾಏಕಿ ಪ್ರಯಾಣ ರದ್ದುಗೊಳಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್‌ ಇಜಾಸ್‌(26) ಎಂಬಾತನನ್ನು ಅರೆಸ್ಟ್‌ ಮಾಡಿದ್ದಾರೆ.

ಪಾಲಕ್ಕಾಡ್‌ ಮೂಲದ ಇಜಾಸ್‌ ಇಮೇಲ್‌ ಮೂಲಕ ಮಂಗಳವಾರ ಸಂಜೆ ಏರ್‌ಪೋರ್ಟ್‌ ನಿರ್ದೇಶಕನಿಗೆ ಮೇಲ್‌ ಮೂಲಕ ಸಂದೇಶ ಕಳುಹಿಸಿದ್ದು, ವಿಮಾನದಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆವೊಡ್ಡಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳ ದೂರಿನ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು, ಸೈಬರ್ ಪೊಲೀಸರ ಸಹಾಯದಿಂದ ಬೆದರಿಕೆಯ ಮೂಲವನ್ನು ಪತ್ತೆಹಚ್ಚಿದರು ಮತ್ತು ಇಜಾಸ್‌ನನ್ನು ಶಂಕಿತ ಎಂದು ಗುರುತಿಸಿದ್ದಾರೆ.

ಏನಿದು ಘಟನೆ?

ಇಜಾಸ್‌ನ ಸ್ನೇಹಿರೆಲ್ಲಾ ಕೂಡಿಕೊಂಡು ಅಬುದಾಬಿಗೆ ಟ್ರಿಪ್‌ ಪ್ಲ್ಯಾನ್‌ ಮಾಡಿದ್ದರು. ಅದಕ್ಕಾಗಿ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ತೀರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ. ಹೀಗಾಗಿ ಈ ಟೂರನ್ನು ತಪ್ಪಿಸಲೆಂದು ಪ್ಲ್ಯಾನ್‌ ಮಾಡಿದ್ದ ಇಜಾಸ್‌, ವಿಮಾನಕ್ಕೆ ಬಾಂಬ್‌ ಬೆದರಿಕೆವೊಡ್ಡಿದ್ದಾನೆ ಎನ್ನಲಾಗಿದೆ. ಬೆದರಿಕೆ ಬರುತ್ತಿದ್ದಂತೆ ತಕ್ಷಣ ವಿಮಾನ ಟೇಕ್‌ ಆಫ್‌ ಆಗುವುದನ್ನು ಅಧಿಕಾರಿಗಳು ತಡೆದಿದ್ದಾರೆ.

ಇದರ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಪೊಲೀಸರು ಲಿಜಾಸ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಇದೊಂದು ನಕಲಿ ಬಾಂಬ್‌ ಕರೆಯೆಂಬುದು ಬಯಲಾಯಿತು. ವಿಮಾನವು ಟೇಕ್ ಆಫ್ ಆಗುವುದನ್ನು ತಡೆಯುವುದು ಆತನ ಏಕೈಕ ಉದ್ದೇಶವಾಗಿತ್ತು. ನಾಗರಿಕ ವಿಮಾನಯಾನ ಕಾಯ್ದೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನು ಇಂದು ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 100 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿವೆ. ಏರ್ ಇಂಡಿಯಾ ಸುಮಾರು 36 ವಿಮಾನಗಳಿಗೆ, ಇಂಡಿಗೋ ಸುಮಾರು 35 ಮತ್ತು ವಿಸ್ತಾರಾ 32 ವಿಮಾನಗಳಿಗೆ ಬಾಂಬ್ ಬೆದರಿಕೆಗಳಿಗೆ ಗುರಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ 16 ದಿನಗಳಲ್ಲಿ, 510 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳು ಇದೇ ರೀತಿಯ ಬೆದರಿಕೆಗಳನ್ನು ಎದುರಿಸಿವೆ.

ಈ ಸುದ್ದಿಯನ್ನೂ ಓದಿ:Bomb threat: ಪಾಕ್‌ನ ISI ಬೆಂಬಲಿತ ಉಗ್ರರಿಂದ ದೇಗುಲ ಸ್ಫೋಟ… ಇಸ್ಕಾನ್‌ಗೂ ಬಂತು ಬಾಂಬ್‌ ಬೆದರಿಕೆ