Saturday, 23rd November 2024

New Rule: ನವೆಂಬರ್ 1ರಿಂದ ಜಾರಿಗೆ ಬರಲಿದೆ ಈ 7 ಹೊಸ ನಿಯಮಗಳು

New Rule

ದೇಶಾದ್ಯಂತ ಜನಜೀವನದ ಮೇಲೆ ಪರಿಣಾಮ ಬೀರುವ ಏಳು ಹೊಸ ನಿಯಮಗಳು (New Rule) ನವೆಂಬರ್ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ವಿಶೇಷವಾಗಿ ಹಣ ವರ್ಗಾವಣೆಗೆ (Money Transfer Guidelines) ಸಂಬಂಧಿಸಿದ ಹೊಸ ನಿಯಮವನ್ನು ಒಳಗೊಂಡಿದೆ. ಪರಿಣಾಮಕಾರಿ ಬಜೆಟ್ ನಿರ್ವಹಣೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ದೇಶದ ಜನ ಜೀವನ ಸುಲಭ ಮತ್ತು ಹೆಚ್ಚು ಸುರಕ್ಷಿತವಾಗುತ್ತವೆ. ಎಲ್ಲರೂ ತಿಳಿದುಕೊಂಡಿರಬೇಕು ಹೊಸ ನಿಯಮಗಳ ಕುರಿತು ಇಲ್ಲಿದೆ ಪ್ರಮುಖ ಮಾಹಿತಿ.

ದೇಶಿಯ ಹಣ ವರ್ಗಾವಣೆ (Domestic Money Transfer)

ನವೆಂಬರ್ 1ರಿಂದ ದೇಶಿಯ ಹಣ ವರ್ಗಾವಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮವನ್ನು ಘೋಷಿಸಿದೆ. ಈ ನಿಯಮದ ಮೂಲಕ ಹಣಕಾಸು ಕಾನೂನು ಪಾಲನೆ ಮತ್ತು ದೇಶೀಯ ಹಣ ವರ್ಗಾವಣೆಯ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಆರ್‌ಬಿಐ ಪ್ರಕಾರ ಜುಲೈ 24ರ ಸುತ್ತೋಲೆಯಲ್ಲಿ ಬ್ಯಾಂಕಿಂಗ್ ಔಟ್‌ಲೆಟ್‌ಗಳ ಲಭ್ಯತೆ, ಹಣ ವರ್ಗಾವಣೆಗಾಗಿ ಪಾವತಿ ವ್ಯವಸ್ಥೆ ಮತ್ತು ಕೆವೈಸಿ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸುವ ಸೇವೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಈಗ ಬಳಕೆದಾರರಿಗೆ ಹಣ ವರ್ಗಾವಣೆಯನ್ನು ಸುಲಭ ಮತ್ತು ಸುರಕ್ಷಿತಗೊಳಿಸಲು ಬಹು ಡಿಜಿಟಲ್ ಆಯ್ಕೆಗಳನ್ನು ನೀಡಲಾಗಿದೆ.

New Rule

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಯುಟಿಲಿಟಿ ಬಿಲ್ ಪಾವತಿ ಮತ್ತು ಹಣಕಾಸು ಶುಲ್ಕಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಯೊಂದು ನವೆಂಬರ್ 1ರಿಂದ ಜಾರಿಗೆ ತರಲಿದೆ. ಅಸುರಕ್ಷಿತ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಹಣಕಾಸು ಶುಲ್ಕಗಳು ತಿಂಗಳಿಗೆ ಶೇ. 3.75ಕ್ಕೆ ಹೆಚ್ಚಳವಾಗಲಿದೆ. ಬಿಲ್ಲಿಂಗ್ ಅವಧಿಯಲ್ಲಿ ಮಾಡಿದ ಯುಟಿಲಿಟಿ ಪಾವತಿಗಳ ಒಟ್ಟು ಮೊತ್ತವು 50,000 ರೂ. ಮೀರಿದರೆ ಶೇ. 1ರಷ್ಟು ಶುಲ್ಕ ಹೆಚ್ಚಳವಾಗಲಿದೆ. ಇದು ಡಿಸೆಂಬರ್ 1ರಿಂದ ಅನ್ವಯವಾಗಲಿದೆ.

ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆ

ಐಸಿಐಸಿಐ ಬ್ಯಾಂಕ್ ತನ್ನ ಶುಲ್ಕ ರಚನೆ ಮತ್ತು ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೋಗ್ರಾಂನಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳು ವಿಮೆ, ದಿನಸಿ ಖರೀದಿ ಸೇರಿದಂತೆ ಹಲವು ಸೇವೆಗಳ ಮೇಲೆ ಪರಿಣಾಮ ಬೀರುತ್ತವೆ. ಇದು ನವೆಂಬರ್ 15ರಿಂದ ಅನ್ವಯವಾಗಲಿದೆ.

ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ ಗಡುವು

ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ನವೆಂಬರ್ 30 ಕೊನೆಯ ದಿನವಾಗಿದೆ. ಇಂಡಿಯನ್ ಬ್ಯಾಂಕ್ ಈಗ ಇಂಡ್ ಸೂಪರ್ 300 ದಿನಗಳ ಎಫ್‌ಡಿಯಲ್ಲಿ ಸಾಮಾನ್ಯ ಜನರಿಗೆ ಶೇ. 7.05, ಹಿರಿಯರಿಗೆ ಶೇ. 7.55 ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಶೇ. 7.80 ಬಡ್ಡಿ ದರಗಳನ್ನು ನೀಡುತ್ತದೆ. 400 ದಿನಗಳವರೆಗೆ ಇಂಡಿಯನ್ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ ಶೇ. 7.25, ಹಿರಿಯರಿಗೆ ಶೇ. 7.75 ಮತ್ತು ಸೂಪರ್ ಸೀನಿಯರ್ ನಾಗರಿಕರಿಗೆ ಶೇ. 8 ಬಡ್ಡಿ ದರಗಳನ್ನು ನೀಡುತ್ತದೆ.

New Rule

ಮುಂಗಡ ರೈಲು ಟಿಕೆಟ್ ಬುಕ್ಕಿಂಗ್

ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೇ ಈಗಾಗಲೇ ಘೋಷಣೆ ಮಾಡಿದೆ. ಹಿಂದೆ 120 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಿತ್ತು. ಆದರೆ ಇನ್ನು ಪ್ರಯಾಣಿಕರು ಕೇವಲ 60 ದಿನಗಳ ಮುಂಚಿತವಾಗಿ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯ. ಮುಂಗಡ ಕಾಯ್ದಿರಿಸುವಿಕೆಯ ಅವಧಿಯು ರೈಲು ಹೊರಡುವ ದಿನವನ್ನು ಹೊರತುಪಡಿಸಿದೆ. ಹೊಸ ನಿಯಮವು ನವೆಂಬರ್ 1ರಿಂದ ಜಾರಿಗೆ ಬರಲಿದೆ.

ಟಿಆರ್‌ಎಐ ಹೊಸ ನಿಯಮ

ನವೆಂಬರ್ 1ರಿಂದ ಟೆಲಿಕಾಂ ಕಂಪನಿಗಳು ಸ್ಪ್ಯಾಮ್ ಮತ್ತು ವಂಚನೆಯನ್ನು ಎದುರಿಸಲು ಹೊಸ ನಿಯಮಗಳ ಭಾಗವಾಗಿ ಸಂದೇಶ ಪತ್ತೆ ಹಚ್ಚುವಿಕೆಯನ್ನು ಜಾರಿಗೆ ತರಲಿದೆ. ಇದು ಸಂದೇಶಗಳ ಮೂಲವನ್ನು ಮೇಲ್ವಿಚಾರಣೆ ಮಾಡಲಿದೆ. ನಿರ್ದಿಷ್ಟ ಮಾನದಂಡಗಳನ್ನು ಪೂರೈಸಲು ವಿಫಲವಾದವುಗಳಿಗೆ ನಿರ್ಬಂಧ ವಿಧಿಸಲಿದೆ.

Penalty to Google: ಯೂಟ್ಯೂಬ್ ನಿಷೇಧ: ರಷ್ಯಾ ನ್ಯಾಯಾಲಯದಿಂದ ಗೂಗಲ್‌ಗೆ ಭಾರಿ ದಂಡ

ಎಲ್‌ಪಿಜಿ ಸಿಲಿಂಡರ್ ದರ

ಪ್ರತಿ ತಿಂಗಳ ಮೊದಲನೆಯ ದಿನದಂತೆ ಪೆಟ್ರೋಲಿಯಂ ಕಂಪನಿಗಳು ನವೆಂಬರ್ 1ರಂದು ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರಗಳನ್ನು ಘೋಷಿಸಲಿದೆ. ಗೃಹ ಬಳಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದೇ ಇದ್ದರೂ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಳಿತವಾಗುವ ಸಾಧ್ಯತೆ ಇದೆ.