Thursday, 31st October 2024

Deepavali celebration : ಅಮೆರಿಕಾದ ಶ್ವೇತ ಭವನದಲ್ಲಿ ಮೊಳಗಿದ ‘ಓಂ ಜೈ ಜಗದೀಶ ಹರಿ’ ಭಜನೆ

Deepavali celebration

ವಾ‌ಶಿಂಗ್‌ಟನ್‌: ಜಗತ್ತಿನಾದ್ಯಂತ ಎಲ್ಲೆಡೆ ದೀಪಾವಳಿ ಹಬ್ಬ( Deepavali celebration) ಆಚರಿಸಲಾಗುತ್ತಿದೆ. ಜಗತ್ತಿನ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕದ (America) ಶ್ವೇತ ಭವನದಲ್ಲಿ( White House) ಕೂಡ ದೀಪಾವಳಿ ಆಚರಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌( Joe Biden) ಅಧಿಕೃತ ನಿವಾಸದಲ್ಲಿ ಭಜನೆ ಸದ್ದು ಮೊಳಗಿದೆ. ಶ್ವೇತಭವನದಲ್ಲಿ ಸೋಮವಾರ ಭಾರತೀಯರ ಸಮ್ಮುಖದಲ್ಲಿ ದೀಪಾವಳಿ ಆಚರಿಸಲಾಗಿದೆ.

ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಹಂಚಿಕೊಂಡ ವಿಡಿಯೊದಲ್ಲಿ ಮಿಲಿಟರಿ ಬ್ಯಾಂಡ್‌ನ ನಾಲ್ಕು ಸದಸ್ಯರು ಪಿಯಾನೊ, ಪಿಟೀಲು, ಸೆಲ್ಲೋ ಮತ್ತು ಡ್ರಮ್‌ಗಳಲ್ಲಿ ‘ಓಂ ಜೈ ಜಗದೀಶ ಹರಿ ಭಜನೆ’ಯನ್ನು ನುಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ಅವರು  ದೀಪಾವಳಿಯಲ್ಲಿ ಶ್ವೇತಭವನದಲ್ಲಿ ಮಿಲಿಟರಿ ಬ್ಯಾಂಡ್ ‘ಓಂ ಜೈ ಜಗದೀಶ್ ಹರೇ’ ನುಡಿಸುವುದನ್ನು ಕೇಳಲು ಅದ್ಭುತವಾಗಿದೆ . ದೀಪಾವಳಿ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾವಿರಕ್ಕೂ ಅಧಿಕ ಲೈಕ್ಸ್‌ ಪಡೆದುಕೊಂಡಿದ್ದು, ಭಾರತೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : PM Narendra Modi: ದೇಶದ ಜನತೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ

ಭಾರತೀಯ-ಅಮೆರಿಕನ್ ಸಂಗೀತ ಸಂಯೋಜಕ ಮತ್ತು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಹಾಡಿನ ನಿರೂಪಣೆ ಚೆನ್ನಾಗಿ ಮಾಡಲಾಗಿದೆ ವಾದಕರು ಅದ್ಭುತವಾಗಿ ನುಡಿಸಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ತಮ್ಮ ನಿವಾಸ ಶ್ವೇತ ಭವನದಲ್ಲಿ ಜೋ ಬೈಡನ್‌ ದೀಪಾವಳಿ ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಅಮೆರಿಕದ ಹಲವು ಗಣ್ಯರು ಸೇರಿದಂತೆ 600 ಕ್ಕೂ ಅಧಿಕ ಭಾರತೀಯರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. ಸಂಪ್ರದಾಯದಂತೆ ಬೈಡನ್‌ ಬ್ಲೂರೂಂನಲ್ಲಿ ದೀಪ ಬೆಳಗಿದ್ದಾರೆ. ನಂತರ ಮಾತನಾಡಿದ ಅವರು “ಶ್ವೇತ ಭವನದಲ್ಲಿ ದೀಪಾವಳಿ ಆಯೋಜನೆ ಮಾಡಿರುವುದು ಖುಷಿಯಿದೆ” ಎಂದು ಹೇಳಿದ್ದಾರೆ. ಪ್ರಸ್ತುತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕೂಡ ವಿಡಿಯೋ ಸಂದೇಶದ ಮೂಲಕ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ ರೂಢಿಯಲ್ಲಿದ್ದು, ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಈ ಆಚರಣೆ ಜಾರಿಗೆ ತಂದಿದ್ದರು.