Thursday, 31st October 2024

Viral Video: 12 ವರ್ಷದಿಂದ ಬೆಂಗಳೂರಿನಲ್ಲಿದ್ದರೂ ಕನ್ನಡ ಕಲಿಯದ ಪರಭಾಷಿಕನ ಧಿಮಾಕು ಹೇಗಿದೆ ನೋಡಿ

Viral Video

ಬೆಂಗಳೂರು: ಕರ್ನಾಟಕ ಅದರಲ್ಲಿಯೂ ಬೆಂಗಳೂರು ವಿವಿಧ ಭಾಷಿಕರ ತವರೂರು. ಇಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ಜೀವನ ನಡೆಸುವ ಅನೇಕರಿದ್ದಾರೆ. ಹಲವು ವರ್ಷಗಳಿಂದ ಇವರು ಇಲ್ಲೇ ನೆಲೆಸಿದ್ದಾರೆ. ಈ ಪೈಕಿ ಹಲವರು ಕನ್ನಡ ಭಾಷೆ, ಸಂಸ್ಕೃತಿ ಕಲಿತು ಇಲ್ಲಿನವರೇ ಆಗಿದ್ದಾರೆ. ಆದರೆ ಇನ್ನು ಕೆಲವರು ಹಲವು ವರ್ಷಗಳಿಂದ ನೆಲೆಸಿದ್ದರೂ ಕನ್ನಡ ಕಲಿಯದೆ ಧಿಮಾಕು ತೋರುತ್ತಾರೆ. ಅಂತಹವರಿಗೆ ಕನ್ನಡಿಗರು ಸರಿಯಾದ ಬುದ್ದಿಯೂ ಕಲಿಸುತ್ತಾರೆ. ಕೆಲವೊಮ್ಮೆ ಇಂತಹ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಸದ್ಯ ಅಂತಹದ್ದೇ ವಿಡಿಯೊವೊಂದು ವೈರಲ್‌ ಆಗಿದೆ. ಪರಭಾಷಿಕನೊಬ್ಬ 12 ವರ್ಷ ಬೆಂಗಳೂರಿನಲ್ಲಿದ್ದರೂ ʼʼನಾನ್ಯಾಕೆ ಕನ್ನಡ ಕಲಿಬೇಕು, ನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲʼʼ ಎಂದು ಕೊಬ್ಬಿನಿಂದ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾನೆ (Viral Video).

12 ವರ್ಷಗಳಿಂದ ಬೆಂಗಳೂರಿನಲ್ಲಿದ್ದರೂ ಕನ್ನಡ ಕಲಿಯದೆ, ಅದರ ಅಗತ್ಯವಿಲ್ಲ ಎಂದ ಪರಭಾಷಿಕನ ವಿರುದ್ಧ ಕನ್ನಡಿಗರು ಕಿಡಿ ಕಾರಿದ್ದಾರೆ. ಪೆಟ್ರೋಲ್‌ ಬಂಕ್‌ ಒಂದರಲ್ಲಿ ಸಿಕ್ಕ ಪರಭಾಷಿಕನನ್ನು ಮಾತನಾಡಿಸಿದ ಕನ್ನಡಿಗ ದೇವರಾಜ್‌ ಎನ್ನುವವರೊಬ್ಬರು ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼಈ ವ್ಯಕ್ತಿ 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದಾನೆ. ಆದರೂ ಕನ್ನಡ ಕಲಿತಿಲ್ಲ. ಇವನಿಗೆ ಕನ್ನಡ ಅವಶ್ಯಕತೆ ಇಲ್ಲವಂತೆ. ಕನ್ನಡಿಗರು ಮಾತ್ರ ಹಿಂದಿ ಕಲಿಯಬೇಕಂತೆʼʼ ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಇಂಗ್ಲಿಷ್‌ನಲ್ಲಿ ಇವರಿಬ್ಬರ ಸಂಭಾಷಣೆ ನಡೆಯುತ್ತದೆ. ʼʼಸರ್ ನಿಮಗೆ ಕನ್ನಡ ಗೊತ್ತಿಲ್ವ?ʼʼ ಎಂದು ಆರಂಭದಲ್ಲಿ ದೇವರಾಜ್‌ ಪರಭಾಷಿಕನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಆತ ʼʼಇಲ್ಲʼʼ ಎಂದು ಹೇಳಿದ್ದಾನೆ. ಮಾತ್ರವಲ್ಲ ʼʼಯಾಕೆ ಕಲಿಯಬೇಕು?ʼʼ ಎಂದು ಮರು ಪ್ರಶ್ನೆ ಹಾಕಿದ್ದಾನೆ. ಪಟ್ಟು ಬಿಡದ ದೇವರಾಜ್‌, ʼʼಯಾಕೆ ಕಲಿಯಬಾರದು?ʼʼ ಎಂದು ಪ್ರತಿಕ್ರಿಯಿಸಿದ್ದಾರೆ. ʼʼಅಂತಹ ಅನಿವಾರ್ಯತೆ ಇಲ್ಲʼʼ ಎಂದು ಧಿಮಾಕಿನಿಂದ ಪರಭಾಷಿಕ ಉತ್ತರಿಸಿದ್ದಾನೆ.

ವಿಚಲಿತರಾಗದ ದೇವರಾಜ್‌ ಮತ್ತೆ ʼʼನೀವು ಪ್ರತಿ ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕು ಅಲ್ವ?ʼʼ ಎಂದು ಕೇಳಿದ್ದಾರೆ. ʼʼನಾನು ಎಲ್ಲ ಭಾಷೆಗಳನ್ನು, ಸಂಸ್ಕೃತಿಯನ್ನು ಗೌರವಿಸುತ್ತೇನೆ. ನಾನು ಕೂಡ ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆʼʼ ಎಂದು ಹೇಳಿದ್ದಾನೆ. ʼʼಹಾಗಾದರೆ ನೀವು ಕನ್ನಡ ಭಾಷೆ ಕಲಿಯಬೇಕಾಗಿತ್ತಲ್ವ?ʼʼ ಎಂದು ದೇವರಾಜ್‌ ಪುನಃ ಕೇಳಿದ್ದಾರೆ. ಅದಕ್ಕೆ ಆತ ನೀಡಿದ ಉತ್ತರ ಕೇಳಿ ಕನ್ನಡಿಗರ ಸಹನೆಯ ಕಟ್ಟೆ ಒಡೆದಿದೆ. ʼʼಇಲ್ಲಿ ಕನ್ನಡ ಕಲಿಯಬೇಕಾದ ಅಗತ್ಯವೇ ಇಲ್ಲ. ಯಾಕೆ ಕಲಿಯಬೇಕು?ʼʼ ಎಂದು ಮರು ಪ್ರಶ್ನಿಸಿದ್ದಾನೆ.

ಇದರಿಂದ ಕೆರಳಿದ ದೇವರಾಜ್‌, ʼʼನಿಮಗೆ ಇಲ್ಲಿ ಉದ್ಯೋಗ ಬೇಕು, ಇಲ್ಲಿ ವಸತಿ ಬೇಕು, ವೇತನ ಬೇಕು, ಎಲ್ಲ ಬೇಕು. ಆದರೆ ಕನ್ನಡ ಭಾಷೆ ಕಲಿಯುವುದಿಲ್ಲ ಎನ್ನುವುದಾದರೆ ನೀವು ಕರ್ನಾಟಕದಲ್ಲಿ ಯಾಕಿರಬೇಕು?ʼʼ ಎಂದು ಕೇಳಿದ್ದಾರೆ. ಅದಕ್ಕೆ ಆತ ಸಮರ್ಪಕವಾಗಿ ಉತ್ತರ ನೀಡದೆ, ʼʼನೀವು ಯಾಕೆ ನನ್ನ ಜತೆಗೆ ಜಗಳಕ್ಕಿಳಿಯುತ್ತೀರಿ ಅಂತ ಗೊತ್ತಿಲ್ಲʼʼ ಎಂದು ಹೇಳಿದ್ದಾನೆ. ಆಗ ದೇವರಾಜ್‌, ʼʼನಾನು ಜಗಳ ಮಾಡುತ್ತಿಲ್ಲ. ಮನವಿ ಮಾಡುತ್ತಿದ್ದೇನೆ. ಕಳೆದ 12 ವರ್ಷಗಳಿಂದ ಇಲ್ಲಿದ್ದರೂ ಕನ್ನಡ ಕಲಿಯಲಿಲ್ಲ ಎಂದರೆ ಹೇಗೆ? ಕನ್ನಡ ಕಲಿಯಿರಿʼʼ ಎಂದು ಸಲಹೆ ನೀಡಿದ್ದಾರೆ. ಕೊನೆಗೆ ಪರಭಾಷಿಕ ಮುಖ ಅತ್ತ ತಿರುಗಿಸಿದ್ದಾನೆ. ಸದ್ಯ ಈ ವಿಡಿಯೊ ಕನ್ನಡಿಗರನ್ನು ಕೆರಳಿಸಿದೆ. ಪರಭಾಷಿಕನ ಉತ್ತರ ಕೇಳಿ ಉರಿದುಬಿದ್ದ ಅನೇಕರು ಕಾಮೆಂಟ್‌ ಮೂಲಕ ಆತನಿಗೆ ಝಾಡಿಸಿದ್ದಾರೆ. ಸದ್ಯ ಈ ವಿಡಿಯೊ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಈ ಸುದ್ದಿಯನ್ನೂ ಓದಿ: Viral News: ಕರ್ನಾಟಕವನ್ನು ಮರ್ಮಾಂಗಕ್ಕೆ ಹೋಲಿಸಿದ ಇನ್ಫ್ಲೂಯೆನ್ಸರ್‌ನ ಮರ್ಮಕ್ಕೆ ಬಿಸಿ ಮುಟ್ಟಿಸಿದ ಕನ್ನಡಿಗರು