Friday, 22nd November 2024

Gursimran Kaur: ಕೆನಡಾದಲ್ಲಿ ವಾಲ್‌ಮಾರ್ಟ್‌ ಓವನ್‌ನೊಳಗೆ ಮೃತಪಟ್ಟ ಗುರ್‌ಸಿಮ್ರಾನ್ ಕೌರ್ ಯಾರು? ಏನಿವರ ಹಿನ್ನೆಲೆ?

Gursimran Kaur

ಒಟ್ಟಾವಾ: ಕೆನಡಾದ ಹ್ಯಾಲಿಫ್ಯಾಕ್ಸ್‌ನ (Halifax) ವಾಲ್‌ಮಾರ್ಟ್ (Canada Walmart)ನ ಓವನ್‌ನಲ್ಲಿ ಇತ್ತೀಚೆಗೆ 19 ವರ್ಷದ ಭಾರತೀಯ ಸಿಖ್ ಯುವತಿ ಗುರ್‌ಸಿಮ್ರಾನ್ ಕೌರ್ (Gursimran Kaur) ಶವ ಪತ್ತೆಯಾಗಿರುವ ಪ್ರಕರಣ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದು, ಈ ಘಟನೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಯುವತಿಯ ಶವ ಪತ್ತೆಯಾದ ಬೇಕರಿಯನ್ನು ಮುಚ್ಚಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೇಕರಿಯ ವಾಕ್‌ ಇನ್‌ ಒವನ್‌ನಲ್ಲಿ ಗುರ್‌ಸಿಮ್ರಾನ್ ಕೌರ್ ಶವ ಕಂಡು ಬಂದಿದೆ. ಭಾರತೀಯ ಮೂಲದವರಾದ ಅವರ ಕುಟುಂಬವು ಮೂರು ವರ್ಷಗಳ ಹಿಂದೆಯಷ್ಟೇ ಕೆನಡಾಕ್ಕೆ ಬಂದು ನೆಲೆಸಿತ್ತು. ಅಲ್ಲಿ ಗುರ್‌ಸಿಮ್ರಾನ್ ಕೌರ್ ಮತ್ತು ಆಕೆಯ ತಾಯಿ ವಾಸವಾಗಿದ್ದರು.

ತಾಯಿ ಹೇಳಿದ್ದೇನು?

ಗುರ್‌ಸಿಮ್ರಾನ್ ಕೌರ್ ಅವರ ತಾಯಿ ಈ ಬಗ್ಗೆ ಪ್ರತಿಕ್ರಿಯಿಸಿ, ʼʼಸಾಮಾನ್ಯವಾಗಿ ಗುರ್‌ಸಿಮ್ರಾನ್ ಕೌರ್ ಕೆಲಸದ ವೇಳೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡುವುದಿಲ್ಲ. ಆದರೆ ಘಟನೆ ನಡೆದ ದಿನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದ ಹಿನ್ನೆಲೆಯಲ್ಲಿ ಸಂಶಯ ಮೂಡಿತ್ತು. ಹೀಗಾಗಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಶವ ಪತ್ತೆಯಾಗಿದೆʼʼ ಎಂದು ತಿಳಿಸಿದ್ದಾರೆ. ಗುರ್‌ಸಿಮ್ರಾನ್ ಕೌರ್ ಸಾವಿನ ಬಳಿಕ ಅನೇಕ ಟಿಕ್‌ಟಾಕ್‌ ಬಳಕೆದಾರರು ಪ್ರತಿಕ್ರಿಯಿಸಿ ವಾಲ್‌ಮಾರ್ಟ್‌ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಯಾರಾದರೂ ಒಳಗೆ ತಳ್ಳದ ಹೊರತು ವಾಕ್-ಇನ್ ಓವನ್ ಒಳಗೆ ಸಿಕ್ಕಿಹಾಕಿಕೊಳ್ಳುವುದು ಅಸಾಧ್ಯ ಎಂದು ಕೆಲವರು ಹೇಳಿದ್ದಾರೆ. ಹೀಗಾಗಿ ಇದು ಕೊಲೆಯೇ ಎನ್ನುವ ಸಂದೇಹ ಮೂಡಿದೆ.

ಗುರ್‌ಸಿಮ್ರಾನ್ ಕೌರ್ ಹಿನ್ನೆಲೆ

ಕೆನಡಾಕ್ಕೆ ವಲಸೆ ಹೋಗಿರುವ ಗುರ್‌ಸಿಮ್ರಾನ್ ಕೌರ್ ಕಳೆದ 2 ವರ್ಷಗಳಿಂದ ವಾಲ್‌ಮಾರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ತಾಯಿಯೂ ಇಲ್ಲಿ ಉದ್ಯೋಗಿಯಾಗಿದ್ದರು. ಅವರ ತಂದೆ ಮತ್ತು ಸಹೋದರ ಈಗಲೂ ಭಾರತದಲ್ಲಿದ್ದಾರೆ. ಈ ಕುಟುಂಬದ ಕಥೆಯು ಉತ್ತಮ ಜೀವನಕ್ಕಾಗಿ ವಿದೇಶಕ್ಕೆ ವಲಸೆ ಹೋಗುವ ಅದೇಷ್ಟೋ ಜನ ಸಾಮಾನ್ಯರ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ಸಾವಿನ ತನಿಖೆ ಮುಂದುವರಿದಿದೆ.

ಗುರ್‌ಸಿಮ್ರಾನ್ ಕೌರ್ ದುರಂತ ಸಾವಿನ ನಂತರ ಸಮುದಾಯದ ಸದಸ್ಯರು ಮತ್ತು ಸ್ನೇಹಿತರು ಅವರ ಕುಟುಂಬವನ್ನು ಬೆಂಬಲಿಸಲು ನಿಧಿ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ. ವಾಲ್‌ಮಾರ್ಟ್‌ ಸಂತಾಪ ಸೂಚಿಸಿದ್ದು, ಇದೊಂದು ಹೃದಯ ವಿದ್ರಾವಕ ಘಟನೆ ಎಂದು ಹೇಳಿದೆ.

ಘಟನೆಯ ಹಿನ್ನೆಲೆ

ಅ. 19ರಂದು ಗುರ್‌ಸಿಮ್ರಾನ್ ಕೌರ್ ಓವನ್ ಒಳಗೆ ಶವವಾಗಿ ಪತ್ತೆಯಾಗಿರುವುದನ್ನು ಆಕೆಯ ತಾಯಿ ಪತ್ತೆ ಹಚ್ಚಿದ್ದರು. ವಾಲ್‌ಮಾರ್ಟ್ ಉದ್ಯೋಗಿಯೊಬ್ಬರು ಕೆಲಸದ ಸಮಯದಲ್ಲಿ ಬಳಸಿದ ಓವನ್ ಹೊರಗಿನಿಂದ ಆನ್ ಆಗಿತ್ತು. ಅದರ ಬಾಗಿಲಿನ ಹಿಡಿಕೆ ತೆರೆಯುವುದು ಕಷ್ಟವಾಗಿತ್ತು. ಯಾರಾದರೂ ಅಲ್ಲಿ ತಮ್ಮನ್ನು ತಾವು ಲಾಕ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಕೌರ್ ಸಹೋದ್ಯೋಗಿ ಕ್ರಿಸ್ ಬ್ರೀಜಿ ಹೇಳಿದ್ದಾರೆ. ಇದು ಹದಿಹರೆಯದವರಿಗಂತೂ ಅಸಾಧ್ಯ. ಉದ್ಯೋಗಿಗಳು ಯಾವುದೇ ಕಾರ್ಯಗಳಿಗಾಗಿ ಭೌತಿಕವಾಗಿ ಓವನ್ ಒಳಗೆ ಪ್ರವೇಶಿಸುವ ಅಗತ್ಯವಿಲ್ಲ. ಓವನ್‌ನಲ್ಲಿ ತುರ್ತು ಬೀಗವಿದೆ ಎಂದು ಅವರು ತಿಳಿಸಿದ್ದಾರೆ. ಹೀಗಿದ್ದೂ ಕೌರ್‌ ಮೃತಪಟ್ಟಿರುವುದು ಸಂಶಯ ಹುಟ್ಟು ಹಾಕಿದೆ ಎಂದು ಸ್ನೇಹಿತರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Crime News: ಕೆನಡಾದಲ್ಲಿ ವಾಲ್‌ಮಾರ್ಟ್‌ ಓವನ್‌ನೊಳಗೆ ಭಾರತೀಯ ಯುವತಿ ಶವ ಪತ್ತೆ: ಮುಂದುವರಿದ ತನಿಖೆ