– ಕೇಶವ ಪ್ರಸಾದ್ ಕೆ.
ಬೆಂಗಳೂರು: ದೀಪಾವಳಿ (Deepavali)ಯ ಸಂದರ್ಭ ಷೇರುಗಳನ್ನು ಖರೀದಿಸಿದರೆ ಅದು ಹೆಚ್ಚು ಸಮೃದ್ಧಿಯನ್ನು, ಸಂಪತ್ತಿನ ಲಾಭವನ್ನು ತರುತ್ತದೆ ಎಂಬ ನಂಬಿಕೆ ಹೂಡಿಕೆದಾರರ ಸಮುದಾಯದಲ್ಲಿದೆ. ಭಾರತೀಯ ಷೇರು ಮಾರುಕಟ್ಟೆಗೂ (Share Market) ಹತ್ತಿರದ ಸಂಬಂಧವಿದೆ. ಏಕೆಂದರೆ ಸ್ಟಾಕ್ ಬ್ರೋಕರ್‌ಗಳು ದೀಪಾವಳಿಯನ್ನು ಹೊಸ ಆರ್ಥಿಕ ವರ್ಷದ ಆರಂಭ ಎಂದು ಪರಿಗಣಿಸುತ್ತಾರೆ. ಈ ವಿಶೇಷ ದಿನದಂದು ಹಲವಾರು ಹೂಡಿಕೆದಾರರು ಷೇರುಗಳನ್ನು ಖರೀದಿಸುತ್ತಾರೆ. ಆದ್ದರಿಂದ ದೀಪಾವಳಿಯ ಸಂದರ್ಭ 1 ಗಂಟೆಯ ಮುಹೂರ್ತ ಟ್ರೇಡಿಂಗ್ ಎಂಬ ವಿಶೇಷ ಟ್ರೇಡಿಂಗ್ ಅವಧಿಯನ್ನೂ ನಡೆಸಲಾಗುತ್ತದೆ (Samvat 2081).
ನವೆಂಬರ್ 1ರಂದು ಶುಕ್ರವಾರ ಸಂಜೆ 6-7 ಗಂಟೆಯ ಅವಧಿಯಲ್ಲಿ ಮುಹೂರ್ತ ಟ್ರೇಡಿಂಗ್ ನಡೆಯಲಿದೆ. ಇದರೊಂದಿಗೆ ಸಂವತ್ 2081 ಕೂಡ ಆರಂಭವಾಗುತ್ತದೆ. ಈ ಮುಹೂರ್ತ ಟ್ರೇಡಿಂಗ್ ಅವಧಿಯಲ್ಲಿ ಈಕ್ವಿಟಿಗಳ ಖರೀದಿ-ಮಾರಾಟ, ಫ್ಯೂಚರ್ ಆಂಡ್ ಆಪ್ಷನ್ ವಹಿವಾಟು ನಡೆಸಬಹುದು. ಟ್ರೇಡರ್ಸ್ ಲಕ್ಷ್ಮೀ ಪೂಜೆಯನ್ನೂ ಈ ದಿನ ಮಾಡುತ್ತಾರೆ.
ಸಮಾವತ್ 2080ರಲ್ಲಿ ಸೆನ್ಸೆಕ್ಸ್ ಹೂಡಿಕೆದಾರರಿಗೆ 22.31% ರಿಟರ್ನ್ ನೀಡಿದೆ. 2023ರ ನವೆಂಬರ್‌ನಿಂದ 2024ರ ಅಕ್ಟೋಬರ್ ತನಕ ನಿಫ್ಟಿ ಸೂಚ್ಯಂಕವು 26 % ರಿಟರ್ನ್ ಕೊಟ್ಟಿದೆ. ಇತ್ತೀಚೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರಿಂದ ಸೂಚ್ಯಂಕ ಕುಸಿದಿದ್ದರೂ, ಈಗಲೂ ಮುನ್ನೋಟ ಆಶಾದಾಯಕವಾಗಿದೆ.
ಹಿಂದೂ ಪಂಚಾಂಗದ ಪ್ರಕಾರ, ಒಂದು ಚಾಂದ್ರಮಾನ ವರ್ಷವನ್ನು ಒಂದು ಸಂವತ್ಸರ ಎನ್ನುತ್ತಾರೆ. ದೀಪಾವಳಿಯ ಸಂದರ್ಭ ಒಂದು ಸಂವತ್ ಮುಗಿದು ಹೊಸ ಸಂವತ್ ಆರಂಭವಾಗುತ್ತದೆ. ಅದೇ ರೀತಿ ಇದೀಗ ಸಂವತ್ 2080 ಮುಕ್ತಾಯವಾಗಿ ಹೊಸ ಸಂವತ್ 2081 ಆರಂಭವಾಗಿದೆ.
2080 ಸಂವತ್‌ನ ಕೊನೆಯ ದಿನ ಸೆನ್ಸೆಕ್ಸ್ 553 ಅಂಕ ಕುಸಿದಿತ್ತು. 79,389 ಅಂಕಗಳಿಗೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತ್ತು. ನಿಫ್ಟಿ 135 ಅಂಕ ಇಳಿದು 24,205 ಅಂಕಗಳಿಗೆ ದಿನದಾಟ ಮುಕ್ತಾಯಗೊಳಿಸಿತ್ತು. ಹೀಗಿದ್ರೂ ಕೂಡ ಬಿಎಸ್‌ಇನಲ್ಲಿ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 9 ಲಕ್ಷ ರೂ. ಏರಿಕೆಯಾಗಿದೆ. 445 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಸಂವತ್ 2080ರಲ್ಲಿ ನಿಫ್ಟಿ ಸೂಚ್ಯಂಕವು 26,000 ಅಂಕಗಳ ಮೈಲುಗಲ್ಲನ್ನು ದಾಟಿತ್ತು. ಕಳೆದ ಸಂವತ್‌ನಲ್ಲಿ ನಿಫ್ಟಿ 500 ಡೈನಾಮಿಕ್ ಪರ್‌ಫಾರಮೆನ್ಸ್ ಕೊಟ್ಟಿತ್ತು. ಜಿಇ ವೆರ್ನೋವಾ ಟಿಆಂಡ್ ಡಿ ಇಂಡಿಯಾ ಕಂಪನಿ ಷೇರು 350% ರಿಟರ್ನ್ ಕೊಟ್ಟಿತ್ತು. ಒಂದು ವರ್ಷದ ಹಿಂದೆ 395 ರೂ. ನಷ್ಟಿದ್ದ ಷೇರಿನ ದರ ಈಗ 1784 ರೂ.ಗೆ ಜಿಗಿದಿದೆ. ಇನೋಕ್ಸ್ ವಿಂಡ್ 312% ಲಾಭ ಕೊಟ್ಟಿತ್ತು. ಮೋತಿಲಾಲ್ ಓಸ್ವಾಲ್ ಫೈನಾನ್ಸ್ 307%, ಟ್ರೆಂಟ್ 276%, ಐಆರ್‌ಇಡಿಎ 233%, ಹಿಟಾಚಿ ಎನರ್ಜಿ 219%, ಜ್ಯುಬಿಲಿಯೆಂಟ್ ಫಾರ್ಮಾ 209%, ಅನಂತ್ ರಾಜ್ 209% ಲಾಭವನ್ನುಹೂಡಿಕೆದಾರರಿಗೆ ನೀಡಿತ್ತು.
ಸಂವತ್ 2081ರಲ್ಲಿ ಎಲ್ಲಿ ಹೂಡಿಕೆ ಬೆಸ್ಟ್?
ಸಂವತ್ 2081ರಲ್ಲಿ ಹೂಡಿಕೆದಾರಿಗೆ ಉತ್ತಮ ಲಾಭ ಸಿಗುವ ನಿರೀಕ್ಷೆಯನ್ನು ಮೋತಿಲಾಲ್ ಓಸ್ವಾಲ್ ವೆಲ್ತ್ ಕಂಪನಿಯ ಸಿಇಒ ಆಶಿಷ್ ಶಂಕರ್ ವ್ಯಕ್ತಪಡಿಸಿದ್ದಾರೆ. ಷೇರು, ಚಿನ್ನ, ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದಿದ್ದಾರೆ. ಡಿಜಿಟಲ್ ತಂತ್ರಜ್ಞಾನ, ಕ್ಯಾಪಿಟಲ್ ಮಾರ್ಕೆಟ್, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು ಎಂದು ತಿಳಿಸಿದ್ದಾರೆ.
- ರೆಲಿಗೇರ್ ಬ್ರೋಕಿಂಗ್ ಪ್ರಕಾರ ಬ್ಯಾಂಕಿಂಗ್ ಕ್ಷೇತ್ರ ಸಂವತ್ 2081ರಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಆರೋಗ್ಯ ಅಥವಾ ಹೆಲ್ತ್ ಕೇರ್ ಕ್ಷೇತ್ರವೂ ಲಾಭದಾಯಕವಾಗಲಿದೆ.
- ಐಸಿಐಸಿಐ ಡೈರೆಕ್ಟ್ ಪ್ರಕಾರ, ಕ್ಯಾಪಿಟಲ್ ಗೂಡ್ಸ್, ಮೂಲಸೌಕರ್ಯ, ಖಾಸಗಿ ಬ್ಯಾಂಕ್, ಆಟೋಮೊಬೈಲ್, ಐಟಿ ಮತ್ತು ಔಷಧ ಕ್ಷೇತ್ರಗಳು ಲಾಭದಾಯಕವಾಗಲಿದೆ.
- ಎಸ್‌ಬಿಐ ಸೆಕ್ಯುರಿಟೀಸ್ ಪ್ರಕಾರ ಆಟೋಮೊಬೈಲ್, ಬಿಎಫ್‌ಎಸ್‌ಐ, ರಿಯಲ್ ಎಸ್ಟೇಟ್, ಟ್ರಾವೆಲ್, ಎಂಜಿನಿಯರಿಂಗ್, ರಿನೆವಬಲ್ ಎನರ್ಜಿ, ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಲಾಭದಾಯಕವಾಗಬಹುದು.
ಈ ಸುದ್ದಿಯನ್ನೂ ಓದಿ: Reliance Jio: ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೊ ವಿಶ್ವದ ನಂಬರ್ ಒನ್! ಚೀನಾಗೆ ಹಿನ್ನಡೆ