Thursday, 31st October 2024

Shocking: 17 ವರ್ಷದ ಹುಡುಗಿಯೊಂದಿಗಿನ ದೈಹಿಕ ಸಂಬಂಧ ತಂದ ಆಪತ್ತು; 19 ಮಂದಿಗೆ ಎಚ್‌ಐವಿ ಸೋಂಕು

ಡೆಹ್ರಾಡೂನ್‌:‍ ಔಷಧವೇ ಕಂಡು ಹಿಡಿಯಲಾಗದ ಮಾರಣಾಂತಿಕ ಸೋಂಕು ಎಚ್‌ಐವಿ (HIV). ಎಚ್ಐವಿ ಸೋಂಕು ಮುಖ್ಯವಾಗಿ ರಕ್ತ ಮತ್ತು ದೇಹದ ದ್ರವ, ವೀರ್ಯ ಮತ್ತು ಯೋನಿ ದ್ರವ, ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಸಂಭೋಗದಿಂದ ಹರಡುತ್ತದೆ. ಇದೀಗ ಹದಿಹರೆಯದ ಯುವತಿಯೊಬ್ಬಳ ಹುಚ್ಚಾಟಕ್ಕೆ ಬರೋಬ್ಬರಿ 19 ಮಂದಿಗೆ ಈ ಮಾರಣಾಂತಿಕ ಸೋಂಕು ತಗುಲಿದೆ. ಹೌದು, ಇಂತಹ ಆಘಾತಕಾರಿ ಘಟನೆ ಉತ್ತರಾಖಂಡದ ನೈನಿತಾಲ್‌ ಜಿಲ್ಲೆಯಲ್ಲಿ ನಡೆದಿದೆ (Shocking). ಎಚ್‌ಐವಿ ಪಾಸಿಟಿವ್ ಬಾಧಿತ 17 ವರ್ಷದ ಯುವತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ 19ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೇವಲ 5 ತಿಂಗಳಲ್ಲಿ 19 ಮಂದಿಯಲ್ಲಿ ಎಚ್‌ಐವಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸಂಶಯಗೊಂಡು ತನಿಖೆ ನಡೆಸಿದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಮೂಲಕ 17 ವರ್ಷದ ಹುಡುಗಿಯ ಹುಚ್ಚಾಟ ಅನಾವರಣಗೊಂಡಿದೆ. ಈ ಹುಡುಗಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಎಚ್‌ಐವಿ ಸೋಂಕು ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಯುವಕರು ಮಾತ್ರವಲ್ಲ ವಿವಾಹಿತರೂ ಸೇರಿದ್ದಾರೆ. ಜತೆಗೆ ವಿವಾಹಿತರ ಪತ್ನಿಯರಲ್ಲಿಯೂ ಎಚ್‌ಐವಿ ಪಾಸಿಟಿವ್‌ ಕಂಡು ಬಂದಿದೆ ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಆಕೆಯ ಸಂಪರ್ಕಕ್ಕೆ ಬಂದಿದ್ದ ಅನೇಕರು ಬೆಚ್ಚಿ ಬಿದ್ದಿದ್ದಾರೆ.

ಡ್ರಗ್ಸ್‌ ಚಟಕ್ಕೆ ಬಲಿಯಾಗಿದ್ದಳು

ಡ್ರಗ್ಸ್‌ ಚಟಕ್ಕೆ ಬಲಿಯಾಗಿದ್ದ ಅಪ್ರಾಪ್ತೆ ಬಡ ಕುಟುಂಬದ ಹಿನ್ನೆಲೆಯವಳು. ಡ್ರಗ್ಸ್‌ಗೆ ಹಣ ಹೊಂದಿಸಲು ಆಕೆ ಪರ ಪುರುಷರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಹೀಗೆ ಸೋಂಕು ಹರಡಿದೆ. ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಹೆಚ್ಚಾಗಿದೆ. ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದು, ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ನೈನಿತಾಲ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಹರೀಶ್ ಚಂದ್ರ ಪಂತ್ ಈ ಬಗ್ಗೆ ಮಾತನಾಡಿ, “ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಹುಡುಗಿಯ ಡ್ರಗ್ಸ್‌ ವ್ಯಸನವು ಈ ದುರದೃಷ್ಟಕರ ಪರಿಸ್ಥಿತಿಗೆ ಕಾರಣವಾಗಿದ್ದು, ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಮತ್ತು ಅವರಿಗೆ ಎಲ್ಲ ರೀತಿಯ ಸಹಾಯ ನೀಡುತ್ತೇವೆʼʼ ಎಂದು ತಿಳಿಸಿದ್ದಾರೆ. ನೈನಿತಾಲ್ ಜಿಲ್ಲೆಯಲ್ಲಿ ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದೆ. ಈ ಪೈಕಿ ರಾಮನಗರವೊಂದರಲ್ಲೇ 17 ತಿಂಗಳಲ್ಲಿ 45 ಮಂದಿಗೆ ಎಚ್‌ಐವಿ ಸೋಂಕು ತಗುಲಿದ್ದು ಅತಂಕಕ್ಕೆ ಕಾರಣವಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಯುವ ಜನತೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದಾಗ ಸಂಶಯಗೊಂಡು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಈ ಆಘಾತಕಾರಿ ಬೆಳವಣಿಗೆ ಗೊತ್ತಾಗಿದೆ. ʼʼಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಯುವಕರು ರಾಮದತ್ ಜೋಶಿ ಜಂಟಿ ಆಸ್ಪತ್ರೆಯ ಸಮಗ್ರ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಕ್ಕೆ (ICTC) ಭೇಟಿ ನೀಡಲು ಪ್ರಾರಂಭಿಸಿದರು. ಅನೇಕರ ಪರೀಕ್ಷಾ ವರದಿಯು ಎಚ್ಐವಿ ಪಾಸಿಟಿವ್ ಎಂದು ತೋರಿಸಿತು. ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿದಾಗ ಸಂತ್ರಸ್ತೆಯ ರಹಸ್ಯ ಹೊರಬಿದ್ದಿದೆʼʼ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Onion Bomb: ಪಟಾಕಿ ಸಿಡಿದು ದುರಂತ; ಓರ್ವ ಸಾವು, 6 ಮಂದಿಗೆ ಗಾಯ