Friday, 1st November 2024

Ravi Hunz Column: ಇದು ಕಲ್ಯಾಣ ಕ್ರಾಂತಿಯ ಸತ್ಯದರ್ಶನ !

ಬಸವ ಮಂಟಪ

ರವಿ ಹಂಜ್

ಇಸ್ಲಾಂ ದಾಳಿಯಿಂದುಂಟಾದ ಧಾರ್ಮಿಕ ನಿರ್ವಾತವನ್ನು ತುಂಬಲು 11ನೇ ಶತಮಾನದ ಅಂತ್ಯದಿಂದ ಉತ್ತರ ಭಾರತದಲ್ಲಿ ಆರಂಭವಾದ ‘ಹುಟ್ಟಿನಿಂದ ಜಾತಿ’ ನೀತಿಯು 12ನೇ ಶತಮಾನದ ಮಧ್ಯದಲ್ಲಿ ದಕ್ಷಿಣಕ್ಕೆ ಬಂದಿತು. ‘ವೃತ್ತಿಯಿಂದ ಜಾತಿ’ ಹೋಗಿ ‘ಹುಟ್ಟಿನಿಂದ ಜಾತಿ’ಯನ್ನು ಕಟ್ಟುನಿಟ್ಟಿನ ನಿಯಮವಾಗಿಸುವ ಕಟ್ಟಳೆಯೊಂದಿಗೆ ಗೋಮಾಂಸ ಭಕ್ಷಣೆ ನಿಷೇಧ, ಅಂತರ್ಜಾತಿ ವಿವಾಹ ನಿಷೇಧ ಮುಂತಾದ ಹೊಸ ಧರ್ಮಸೂತ್ರಗಳನ್ನು
ಅನುಷ್ಠಾನಕ್ಕೆ ತರಲಾಯಿತು. ಮಾಂಸೋದ್ಯಮದ ಕಾರಣ ಊರಿನ ಹೊರಗಿರುತ್ತಿದ್ದ ಚಾಂಡಾಲ, ಬೆಸ್ತ ಮುಂತಾ
ದವರನ್ನು ಹುಟ್ಟಿನ ಕಾರಣ ಶಾಶ್ವತವಾಗಿ ಕೆಳಸ್ತರದ ಉದ್ಯೋಗಗಳಿಗೆ ಸೀಮಿತಗೊಳಿಸಿ ಅವರನ್ನು ಅಲ್ಲಿಯೇ ಇರುವಂತೆ ಶಾಶ್ವತಗೊಳಿಸಲಾಯಿತು.

ಇದೇ ಸೂತ್ರವನ್ನು ವೀರಶೈವ ಪಂಥ ಕೂಡಾ ಅಳವಡಿಸಿಕೊಳ್ಳಲು ಮೊದಲ್ಗೊಂಡಿತು. ಇದಕ್ಕೆ ತೀವ್ರವಾದ ವಿರೋಧ ಕೂಡಾ ತಕ್ಷಣಕ್ಕೆ ಸೃಷ್ಟಿಯಾಯಿತು. ಅದನ್ನು ವಿರೋಧಿಸಿ ಸಂಘಟನೆಗೊಂಡು ನಡೆದ ಕ್ರಾಂತಿಯೇ ಕಲ್ಯಾಣಕ್ರಾಂತಿ!

ಆದರೆ ಈ ಕ್ಷಿಪ್ರಕ್ರಾಂತಿ ನಡೆಯುವ ಮುನ್ನ ಸಾಕಷ್ಟು ಪರ, ವಿರೋಧ, ಭಿನ್ನಮತಗಳೆ ನಡೆದು ವೀರಶೈವವು ‘ಜಾತಿ
ವೀರಶೈವ’ ಮತ್ತು ‘ವಿಜಾತಿ ವೀರಶೈವ’ ಎಂದು ಎರಡಾದುದರ ಸ್ಪಷ್ಟ ಚಿತ್ರಣ ವಚನಸಾಹಿತ್ಯದಲ್ಲಿದೆ. ‘ಹುಟ್ಟಿನಿಂದ ಜಾತಿ’ ನೀತಿಯನ್ನು ಸಾತ್ವಿಕವಾಗಿ ಪ್ರಶ್ನಿಸುತ್ತ ಕ್ರಮೇಣ ಅತ್ಯುಗ್ರರಾಗಿ ಖಂಡಿಸುವ ಪುರಾವೆಗಳನ್ನು ಸಹ ವಚನ ಸಾಹಿತ್ಯವು ಸಮಗ್ರವಾಗಿ ಕಟ್ಟಿಕೊಡುತ್ತದೆ. ಈ ಕಾರಣವಾಗಿಯೇ ವಚನಗಳನ್ನು ಸಮಗ್ರವಾಗಿ ಗಮನಿಸಿದಾಗ
ಅವುಗಳ ಸಾಕಷ್ಟು ದ್ವಂದ್ವಗಳಿವೆ ಎನಿಸುತ್ತದೆ.

ಒಮ್ಮೆ ಆದ್ಯ ವಚನಕಾರರನ್ನು ಹೊಗಳಿದರೆ ಇನ್ನೊಮ್ಮೆ ಅವಹೇಳನ ಮಾಡುತ್ತಾರೆ. ಒಮ್ಮೆ ಅದ್ವೈತವನ್ನು ಪುರಸ್ಕರಿಸಿ ಮಗದೊಮ್ಮೆ ನಿರಾಕರಿಸುತ್ತಾರೆ. ಒಮ್ಮೆ ಮಾಂಸ, ಮದ್ಯ ಸೇವಿಸುವವರನ್ನು ಖಂಡಿಸಿದರೆ ಇನ್ನೊಮ್ಮೆ ಒಳಗೊಳ್ಳುತ್ತೇವೆ ಎನ್ನುತ್ತಾರೆ. ಇಂಥ ದ್ವಂದ್ವಗಳು ಬದಲಾದ ಸಾಮಾಜಿಕ ಮತ್ತು ಪಂಥದ ನಿಲುವಿಗೆ ತಕ್ಕಂತೆ ಇವೆಯೇ ಹೊರತು ವಿಕ್ಷಿಪ್ತ ಮನಸ್ಥಿತಿಯಿಂದಲ್ಲ. ಕೇವಲ ಓರ್ವ ವಚನಕಾರ/ಕಾರ್ತಿಯಲ್ಲದೆ ಸಾಮೂಹಿಕವಾಗಿ ಎಲ್ಲರಲ್ಲೂ ಈ ಇಬ್ಬಗೆಯ ವಚನಗಳನ್ನು ಕಾಣಬಹುದು. ಪೂರ್ವಾರ್ಧ ಕಲ್ಯಾಣ ಪರ್ವದಲ್ಲಿ ಆದ್ಯರನ್ನು
ಹಾಡಿ ಹೊಗಳುತ್ತ ಜೈನರ ವಿರುದ್ಧ ಯುದ್ಧ ಸಾರಿದ್ದ ಈ ಪಂಥ ತಮ್ಮ ಉಂಟಾದ ಈ ಭಿನ್ನಾಭಿಪ್ರಾಯಕ್ಕೆ ತೀವ್ರವಾಗಿ ಬಲಿಯಾಗಿ ಪರಸ್ಪರ ತಮ್ಮತಮ್ಮ ಹೋರಾಡತೊಡಗಿತು.

ಹಾಗಾಗಿಯೇ ಶರಣರ ಉತ್ತರಾರ್ಧದ ಎಲ್ಲಾ ವಚನಗಳಲ್ಲಿ ಗೋಮಾಂಸ ನಿಷೇಧ, ಹುಟ್ಟಿನಿಂದ ಜಾತಿ, ಕೀಳುಜಾತಿ
ಯವರು ಮೋಕ್ಷಕ್ಕೆ ಅನರ್ಹರೆಂಬ, ಅಂತರ್ಜಾತಿ ವಿವಾಹ ನಿಷೇಧ ಇವುಗಳ ವಿರುದ್ಧದ ವಚನಗಳ ಜತೆಗೆ ತಮ್ಮ ಪಂಥದವರನ್ನೇ ಹೀಯಾಳಿಸುವ ವಚನಗಳಿವೆ. ಹಿಂದಿನ ಅಧ್ಯಾಯದಲ್ಲಿನ ಪೂರ್ವಾರ್ಧದ ವಚನಗಳ ವೈರುಧ್ಯ ವನ್ನು ಕಲ್ಯಾಣ ಪರ್ವದ ಉತ್ತರಾರ್ಧ ಕಾಲದಲ್ಲಿ ಕಾಣುತ್ತೇವೆ. ನವನೂತನ ನಿಯಮವಾದ ‘ಹುಟ್ಟಿನಿಂದ ಜಾತಿ’ ಯನ್ನು ವಿರೋಧಿಸಿ ಸನಾತನವಾಗಿ ರೂಢಿಯಲ್ಲಿದ್ದ ‘ವೃತ್ತಿಯಿಂದ ಜಾತಿ’ಯನ್ನು ಎತ್ತಿ ಹಿಡಿಯಲೆಂದೇ ‘ಕಾಯವೇ ಕೈಲಾಸ’ ಎಂದಿದ್ದ ಬಸವಣ್ಣನು ಆಯ್ದಕ್ಕಿ ಮಾರಯ್ಯನ ‘ಕಾಯಕವೇ ಕೈಲಾಸ’ ಎಂಬ ಉದ್ಘೋಷವನ್ನು ತನ್ನ ಮುಂದಿನ ಹೋರಾಟದ ಧ್ಯೇಯೋದ್ದೇಶವಾಗಿಸಿಕೊಂಡನು.

ವಚನಚಳವಳಿಯ ಕಾಯಕದ ಕಾಯಕಲ್ಪಕ್ಕೆ ಈ ಜಾತಿಪಲ್ಲಟವೇ ಪ್ರಮುಖ ಕಾರಣ. ಈ ಪಲ್ಲಟದಿಂದ ವೃತ್ತಿಪರತೆ ಯನ್ನು ಮೆರೆಯುವ ಮತ್ತು ವೃತ್ತಿಯಿಂದಲೇ ಸಾಕ್ಷಾತ್ಕಾರವನ್ನು ಹೊಂದುವ ಚಿಂತನೆಯನ್ನು ಎತ್ತಿ ಹಿಡಿಯುವ ವಚನಗಳು ರಚಿಸಲ್ಪಟ್ಟವು ಎಂಬುದು ಗಮನಾರ್ಹ ಸಂಗತಿ. ಈ ಕುರಿತು ಜನರನ್ನು ಜಾಗೃತಗೊಳಿಸಲು ಶರಣ ರೆಲ್ಲರೂ ಆಯ್ದಕ್ಕಿ ಮಾರಯ್ಯನ ‘ಕಾಯಕವೇ ಕೈಲಾಸ’ ಉದ್ಘೋಷಕ್ಕೆ ಅನುವಾಗಿ ಸಾಕಷ್ಟು ವಚನಗಳನ್ನು ರಚಿಸಿದರು. ಅಲ್ಲಿಯವರೆಗೆ ಪಂಥ ಶ್ರೇಷ್ಠತೆ, ಪರಪಂಥ ದ್ವೇಷಗಳ ಕುರಿತು ವಚನ ರಚಿಸುತ್ತಿದ್ದ ವಚನಕಾರರು ಈ ಬದಲಾವಣೆಯ ವಿರುದ್ಧ ಕಾಯಕ ಮಹತ್ವದ ವಚನಗಳನ್ನು ರಚಿಸಲು ಮೊದಲ್ಗೊಂಡರು.

ಆಯ್ದಕ್ಕಿ ಮಾರಯ್ಯನ ‘ಕಾಯಕವೇ ಕೈಲಾಸ’ದ ವಚನವು ‘ವೃತ್ತಿಯಿಂದ ಜಾತಿ’ಯು ‘ಹುಟ್ಟಿನಿಂದ ಜಾತಿ’ಯಾದ
ಸ್ಥಿತ್ಯಂತರವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಕಾಯಕದ ಮುಂದೆ ಇನ್ನೆಲ್ಲವೂ ಕಾಯಲೇಬೇಕು ಎಂಬ ಅವನ ವಚನ ಹೀಗಿದೆ: ‘ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯ ಬೇಕು ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು, ಕಾಯಕವೆ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕ ದೊಳಗು (ಸಮಗ್ರ ವಚನ ಸಂಪುಟ: 6, ವಚನದ ಸಂಖ್ಯೆ:
1170).

ಅದೇ ಬಸವಣ್ಣನು ಸ್ಥಿತ್ಯಂತರ ಪೂರ್ವದಲ್ಲಿ ಕಾಯವನ್ನು ಕೈಲಾಸವೆಂದಿರುವ ವಚನವು ಹೀಗಿದೆ: “ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ” (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 873).

ಆಯ್ದಕ್ಕಿ ಮಾರಯ್ಯನದು ಕಲ್ಯಾಣಕ್ರಾಂತಿಯ ಉತ್ತರಾರ್ಧದಲ್ಲಿ ರಚಿತಗೊಂಡಿದ್ದರೆ, ಬಸವಣ್ಣನ ವಚನ ಪೂರ್ವಾ ರ್ಧದ್ದು ಎಂದು ಸ್ಪಷ್ಟವಾಗಿ ಹೇಳಬಹುದು. ಏಕೆಂದರೆ ಮಾರಯ್ಯನು ಕಾಯಕದ ಮುಂದೆ ತನ್ನ ಆದ್ಯದೈವ ಅಮರಲಿಂಗವೂ ಸೇರಿದಂತೆ ಎಲ್ಲವೂ ತಿರಸ್ಕೃತ ಎಂದರೆ, ಬಸವಣ್ಣನು ತನ್ನ ಆರಾಧ್ಯದೈವಿ ಶರಣರು ಎಲ್ಲಕ್ಕಿಂತ ಪುರಸ್ಕೃತ ಎಂದಿದ್ದಾನೆ.

ಇದು ವಚನಗಳಲ್ಲಿನ ಸ್ಥಿತ್ಯಂತರ ಪಲ್ಲಟದ ಮತ್ತೊಂದು ಸ್ಪಷ್ಟ ನಿದರ್ಶನ. ಕಾಯಕ್ಕೂ ಮತ್ತು ಕಾಯಕಕ್ಕೂ ಇರುವ ಒಂದಕ್ಷರದ ವ್ಯತ್ಯಾಸವೇ ಕಲ್ಯಾಣ ಕ್ರಾಂತಿಯ ಮೂಲ! ಹೀಗೆ ವಚನಗಳಲ್ಲುಂಟಾದ ಈ ಸ್ಥಿತ್ಯಂತರ ಬದಲಾವಣೆ ಗಳನ್ನು (Paradigm Shif) ಸ್ಪಷ್ಟವಾಗಿ ಗುರುತಿಸಬಹುದು. ಅದಕ್ಕೆ ನಿದರ್ಶನವಾಗಿ ಈ ಕೆಳಗಿನ ವಚನಗಳಾ ಧರಿತ ಸಂಕಥನವು ಮತ್ತಷ್ಟು ಸ್ಪಷ್ಟತೆಯನ್ನು ತೋರುತ್ತದೆ. ‘ಹುಟ್ಟಿನಿಂದ ಜಾತಿ’ಯಲ್ಲದೆ ‘ಅಂತರ್ಜಾತೀಯ ವಿವಾಹ ಬಹಿಷ್ಕಾರ’, ‘ಗೋಮಾಂಸಭಕ್ಷಣೆ ನಿಷೇಧ’ ಮುಂತಾದ ನವ ನಿಯಮಗಳನ್ನು ಆಗಷ್ಟೇ ಜಾರಿಗೊಳಿಸಿದ್ದನ್ನು ಕೇಳಿದಾಕ್ಷಣ ಬಸವಣ್ಣನು ಹೇಗೆ ಪ್ರತಿಕ್ರಿಯಿಸಿರಬಹುದೆಂದು ಅವನ ವಚನಗಳ ಧಾಟಿಯಿಂದಲೇ ತಿಳಿದುಬರುತ್ತದೆ: “ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸಿದಿರಯ್ಯ!

ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯ, ದಾಸಯ್ಯ ಶಿವದಾನವನೆರೆಯ ನೋಡಯ್ಯ. ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ. ಉನ್ನತಮಹಿಮ ಕೂಡಲಸಂಗಮದೇವಾ ಶಿವಧೋ! ಶಿವಧೋ!!” (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 344). ಈ ವಚನದಲ್ಲಿ ನನಗೆ ಉತ್ತಮ ಜಾತಿಯಲ್ಲಿ ಹುಟ್ಟಿದೆನೆಂಬ ಭಾರವ ಹೊರಿಸಿದಿರಿ ಎಂದು ತಮ್ಮ ಪಂಥದ ಹಿರಿಯರನ್ನು ದೂರುತ್ತಾನೆ. ಇಲ್ಲಿ ಗಮನಿಸಬೇಕಾದ ಸಂಗತಿ ಹೊರಿಸಿದಿರಯ್ಯ ಎಂಬ ವರ್ತಮಾನಕಾಲ ಸೂಚಕ. ಅಂದರೆ ಈ ಹೊಸ ನೀತಿ ನಿಯಮಾವಳಿಗಳನ್ನು ತನ್ನ ಹಿರಿಯರಿಂದ ಆಗಷ್ಟೇ ಕೇಳಿ ಬಸವಣ್ಣನು ತಣ್ಣಗೆ ಪ್ರತಿಕ್ರಿಯಿಸಿದ್ದಾನೆ ಎನ್ನಬಹುದು.

ಅದಲ್ಲದೆ ಬಸವಣ್ಣನು ಹಿರಿಯ ಆದ್ಯ ವಚನಕಾರರಾಗಿದ್ದ ಮಾಚಯ್ಯ, ಕಕ್ಕಯ್ಯ, ಚೆನ್ನಯ್ಯರನ್ನು ಈ ಹೊಸ
ಹುಟ್ಟುಜಾತಿಯ ಕಾರಣ ಹೀನಜಾತಿಯವರೆನ್ನಬೇಕೆ ಎಂದೂ ತನ್ನ ಇನ್ನೊಂದು ವಚನದಲ್ಲಿ- “ಮಡಿವಾಳನೆಂಬೆನೆ ಮಾಚಯ್ಯನ? ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ? ಆನು ಹಾರುವನೆಂದರೆ, ಕೂಡಲಸಂಗಯ್ಯ ನಗುವನಯ್ಯ“ (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 345) ಎಂದು ಪ್ರಶ್ನಿಸಿದ್ದಾನೆ.

ತರದ ಈ ವಚನದಲ್ಲಿ ಬಸವಣ್ಣನು ತನ್ನ ಸಹ ಶರಣರರೊಟ್ಟಿಗೆ ಈ ಹೊಸ ನಿಯಮಾವಳಿಗಳನ್ನು ಚರ್ಚಿಸುತ್ತಾ- “ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬನಾಗಿ ಒನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ
ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರ ನರಿಯದೆ ಉಳಿದ ಭಂಗಿತರ” (ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 634) ಎಂದು ವಿಷಾದ
ವ್ಯಕ್ತಪಡಿಸಿರುವ ಸ್ಪಷ್ಟ ಚಿತ್ರಣ ವಚನಗಳಲ್ಲಿದೆ.

ಅಲ್ಲಮನು ಸಹ ಅದಕ್ಕೆ ಸ್ಪಂದಿಸುವವನಂತೆ, “ಜಾನುಜಂಘೆಯಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ? ಆಠಾವು
ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಳೊದಗೂ ದನರಿಯರು ಗುಹೇಶ್ವರನೆಂಬುದು ಮೀರಿದ ಘನವ “
(ಅಲ್ಲಮನ ವಚನ ಚಂದ್ರಿಕೆ, ಎಲ.ಬಸವರಾಜು, ವಚನ ಸಂಖ್ಯೆ 470) ಎಂದು ಹೀಗಳೆಯುತ್ತಾ, “ಆದ್ಯರಲ್ಲ, ವೇದ್ಯ ರಲ್ಲ, ಸಾಧ್ಯರಲ್ಲದ ಹಿರಿಯರ ನೋಡಾ! ತನುವಿಕಾರ, ಮನವಿಕಾರ, ಇಂದ್ರಿಯವಿಕಾರದ ಹಿರಿಯರ ನೋಡಾ!
ಶಿವಚಿಂತೆ ಶಿವಜ್ಞಾನಿಗಳ ಆಳವಾಡಿ ನುಡಿವರು ಗುಹೇಶ್ವರನ ನರಿಯದ ಕರ್ಮಿಗಳಯ್ಯ” (ಸಮಗ್ರ ವಚನ ಸಂಪುಟ: 2, ವಚನದ ಸಂಖ್ಯೆ: 129) ಎಂದು ಹುಟ್ಟಿನಿಂದ ಜಾತಿ ಮಾಡಿದ ಶಿವ ಜ್ಞಾನಿ ಹಿರಿಯರನ್ನು ಮೂದಲಿಸಿದ್ದಾನೆ.

ಯುವಕ ಚೆನ್ನಬಸವಣ್ಣ ಉಗ್ರನಾಗಿ, “ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ
ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ? ಜಾತಿವಿಡಿದು
ಕಳೆಯಿತ್ತೆ ಜಾತಿತಮವು? ಅಜಾತಂಗೆ ಆವುದು ಕುಲಳ ಆವಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂ
ದಡೆ; ದೀಯತೇ ಜಾನಸಂಬಂಧಃ ಕ್ಷೀಯತೇ ಚ ಮಲತ್ರ ಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ
ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ
ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ.

ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ- ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ” (ಸಮಗ್ರ ವಚನ ಸಂಪುಟ: 3, ವಚನದ ಸಂಖ್ಯೆ: 1230) ಎಂದಿದ್ದಾನೆ. ಇನ್ನು ಕೆಲವು ವಚನಕಾರರು ತಮ್ಮ ಆದ್ಯರ ನಿರ್ಧಾರವನ್ನು ಬೆಂಬಲಿಸಿಯೂ ಇದ್ದರೇನೋ ಎಂಬಂತೆ ಭಿನ್ನಮತದ ಸುಳಿವು ಸಹ ಅಲ್ಲಲ್ಲಿ ಕೆಲವು ವಚನಗಳಲ್ಲಿ ಕಾಣಸಿಗುತ್ತದೆ.

ಮುಂದೆ ನೀಡಿರುವ ಅಮುಗೆ ರಾಯಮ್ಮನ ವಚನ ಅಂಥ ಭಿನ್ನದನಿಯನ್ನು ತೋರಿದರೂ ಅದು ಕೇವಲ ಹಿರಿಯರ
ಮೇಲಿನ ಗೌರವದಿಂದಲೇ ಹೊರತು ಆಕೆ ಅವರ ನೀತಿಯನ್ನು ಒಪ್ಪಿದ್ದಳೆಂದಲ್ಲ! ಏಕೆಂದರೆ ಆಕೆ ಸಹ ಹುಟ್ಟಿನಿಂದ ಜಾತಿ ನಿಯಮವನ್ನು ವಿರೋಧಿಸಿದ್ದಳು ಎಂಬುದು ಆಕೆಯ ಇನ್ನೊಂದು ವಚನದಲ್ಲಿ ತಿಳಿದು ಬರುತ್ತದೆ: “ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ? ಮಣ್ಣಹರವಿನಲ್ಲಿ ಸುರೆಯ ತುಂಬು ವರಲ್ಲದೆ ರತ್ನವ ತುಂಬುವರೆ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ? ಅನುಭಾವಿಗಳೆಂಬೆನೆ?ನಿಜವನರಿದ ಲಿಂಗೈಕ್ಯರೆಂಬೆನೆ? ಅಮುಗೇಶ್ವರ ಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ?“ (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 648).

ಅದಲ್ಲದೇ ಆಕೆ ತನ್ನ ಸಹಚರರು ಕಾಳಾಮುಖಿ, ಪಾಶುಪತರನ್ನು ಬಹಿಷ್ಕರಿಸಿದ್ದನ್ನು ಕಡುವಾಗಿ ಖಂಡಿಸುತ್ತ ಈ
ವಚನವನ್ನು ರಚಿಸಿದ್ದಾಳೆನಿಸುತ್ತದೆ: “ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ? ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ? ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ?
ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ?ಆರು ಸ್ಥಲವೆಂಬುವ ಷಟ್ಸ್ಥಲeನಿಗಳ ಅರಿವು ಮೀರಿದ ಘನವು
ನಿಮಗೇಕೆ? ಅಮುಗೇಶ್ವರಲಿಂಗವನರಿಯರಣ್ಣಾ“ (ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 603)

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hunz Column: ಯಾರೂ ತಾವು ʼಕಾಳಾಮುಖʼ ರೆಂದು ಹೇಳಿಕೊಂಡಿಲ್ಲ