Friday, 22nd November 2024

Rajendra Bhat Column: ಮುಂಬೈ ಎನ್ನುವ ಕನ್ನಡ ಸಾಹಿತ್ಯದ ಶಕ್ತಿಕೇಂದ್ರ

kannad in mumbai

ಸ್ಫೂರ್ತಿಪಥ ಅಂಕಣ: ಕನ್ನಡದ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬೆಳವಣಿಗೆಯಲ್ಲಿ ಮುಂಬೈ ಕನ್ನಡಿಗರ ಕೊಡುಗೆ ಭಾರೀ ದೊಡ್ಡದು

Rajendra Bhat K
  • ರಾಜೇಂದ್ರ ಭಟ್ ಕೆ.

Rajendra Bhat column : ಕನ್ನಡ ರಾಜ್ಯೋತ್ಸವವು (Kannada Rajyotsava) ನಾಡಿನ ಕದವನ್ನು ತಟ್ಟುತ್ತಿರುವಾಗ ದೇಶದಾದ್ಯಂತ ಹರಡಿರುವ ಮತ್ತು ಕನ್ನಡವನ್ನು ಬೆಳೆಸಿರುವ ಮಹನೀಯರ ಕೊಡುಗೆಗಳನ್ನು ಉಲ್ಲೇಖ ಮಾಡದೇ ಮುಂದೆ ಹೋಗುವ ಹಾಗೆಯೇ ಇಲ್ಲ!

ಅದರಲ್ಲಿಯೂ ಮಹಾರಾಷ್ಟ್ರದ ನಗರಗಳಾದ ಮುಂಬೈ, ಸೊಲ್ಲಾಪುರ, ಪೂನಾ, ನಾಂದೇಡ್, ಸಾಂಗ್ಲಿ, ಕೊಲ್ಲಾಪುರ ಮತ್ತು ಉಸ್ಮಾನಾಬಾದಗಳಲ್ಲಿ ನೆಲೆಸಿರುವ ಅಂದಾಜು ಅರುವತ್ತು ಲಕ್ಷದಷ್ಟಿರುವ ಕನ್ನಡಿಗರು ತಮ್ಮ ಕನ್ನಡದ ಪ್ರೀತಿಯನ್ನು, ಅಸ್ಮಿತೆಯನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವುದನ್ನು ನೋಡಿದಾಗ ಅಭಿಮಾನದಿಂದ ನಮ್ಮ ಎದೆಯು ಉಬ್ಬುತ್ತದೆ.

ಮುಂಬೈ ಎಂಬ ಭಾಗ್ಯನಗರಿ!

ಭಾರತದ ಆರ್ಥಿಕ ರಾಜಧಾನಿ ಆದ ಮುಂಬೈ ನಗರದಲ್ಲಿ 20 ಲಕ್ಷ ಕನ್ನಡಿಗರು ವಾಸವಾಗಿದ್ದು ಅವರು ಕನ್ನಡ ಮತ್ತು ತುಳು ಸಂಸ್ಕೃತಿಯ ಬೇರುಗಳನ್ನು ಜೀವಂತವಾಗಿ ಇಡಲು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ! ನಾನು ಮುಂಬೈ ನಗರದ ಹಲವು ಕನ್ನಡ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅಲ್ಲಿನವರ ಕನ್ನಡ ಪ್ರೇಮ, ತುಳು ಅಭಿಮಾನ, ಸಂಸ್ಕೃತಿ ಅಭಿಮಾನಗಳನ್ನು ನೋಡಿದಾಗ ನಿಜವಾಗಿಯೂ ಬೆರಗು ಪಡೆದಿದ್ದೇನೆ. ಅಲ್ಲಿಯ ಜನರು ಕರಾವಳಿಯ ಕನ್ನಡಿಗರಿಗರಷ್ಟೇ ಆಸ್ತೆಯಿಂದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟನೆ ಮಾಡುತ್ತಾರೆ. ಕನ್ನಡ ಮತ್ತು ತುಳು ಭಾಷೆಯ ಭಾಷಣಗಳನ್ನು ತಾಳ್ಮೆಯಿಂದ ಕುಳಿತು ಕೇಳುತ್ತಾರೆ. ಆಟಿದ ಕೂಟ, ದೀಪಾವಳಿ, ಗೋಪೂಜೆ, ಶ್ರಾವಣದ ಸಂಜೆ, ಬೆಳದಿಂಗಳ ಕೂಟ… ಮೊದಲಾದ ತುಳುವರ ಕೂಟಗಳಲ್ಲಿ ಸಾವಿರಾರು ಮುಂಬೈ ತುಳುವರು ಸಾಂಪ್ರದಾಯಿಕ ದಿರಿಸಿನಲ್ಲಿ ಹೊತ್ತಿಗೆ ಮೊದಲೇ ಬಂದು ಆಸೀನರಾಗಿ ಇಡೀ ಕಾರ್ಯಕ್ರಮದ ಉದ್ದಕ್ಕೂ ಭಾಗವಹಿಸುವುದನ್ನು ನೋಡಿದಾಗ ಅಚ್ಚರಿಯು ಮೂಡುತ್ತದೆ! ಈ ಸಂಸ್ಕೃತಿಯ ಪ್ರೀತಿ ನಿಜಕ್ಕೂ ನಮಗೆಲ್ಲರಿಗೂ ಮಾದರಿ.

ಶ್ರಮ ಸಂಸ್ಕೃತಿಯ ನಗರ – ಮುಂಬೈ

ಇಂದು ಮುಂಬೈಯಲ್ಲಿ ಇರುವ ಹೋಟೆಲುಗಳಲ್ಲಿ 70% ಹೋಟೆಲುಗಳು ಕರಾವಳಿಯ ಕನ್ನಡಿಗರದ್ದು ಅಂದರೆ ನಿಮಗೆ ಆಶ್ಚರ್ಯ ಆಗಬಹುದು! ಆ ಹೋಟೆಲು ನಡೆಸುವವರು ಊರಿನಿಂದ ಬರಿಗೈಯಿಂದ ಬಂದವರು! ಝೀರೋಗಳಿಂದ ಹೀರೋ ಆದವರು! ಅವರಲ್ಲಿ ಹೆಚ್ಚಿನವರು ಬಡತನದ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮೊಟಕು ಮಾಡಿ ಮುಂಬೈಗೆ ಬಂದು ರಾತ್ರಿ ಶಾಲೆಗಳಲ್ಲಿ ಓದಿ ಪದವಿ ಪಡೆದವರು. ಹಗಲು ಹೊತ್ತು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಹೋಟೆಲುಗಳಲ್ಲಿ ವಿಶ್ರಾಂತಿ ಪಡೆಯದೆ ದುಡಿದವರು. ಅವರ ಒಬ್ಬೊಬ್ಬರ ಯಶೋಗಾಥೆಗಳನ್ನು ಕೇಳುವಾಗ ರೋಮಾಂಚನ ಆಗುತ್ತದೆ. ಅವರ ಹೋಟೆಲುಗಳಲ್ಲಿ, ಮನೆಗಳಲ್ಲಿ ಕಟೀಲು ದುರ್ಗಾಪರಮೇಶ್ವರಿ ಮೊದಲಾದ ಎಲ್ಲ ದೇವರುಗಳ ಫೋಟೋಗಳು ಇವೆ. ದೈವಗಳ ಸ್ಮರಣೆ ಮಾಡದೆ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ.

ಮುಂಬಯಿಯ ತುಳುವರು ಶುದ್ಧ ಸಂಸ್ಕೃತಿಯ ಆರಾಧಕರು! ಅಲ್ಲಿನ ಸಂಸ್ಕೃತಿಯು ಇನ್ನೂ ಕಲಬೆರಕೆ ಸಂಸ್ಕೃತಿ ಆಗಿಲ್ಲ ಅನ್ನೋದು ನಿಜಕ್ಕೂ ಹೆಮ್ಮೆಯೇ ಸರಿ.

ಮುಂಬಯಿಯ ಕನ್ನಡಪರ ಸಂಘಟನೆಗಳು

1878ರಲ್ಲಿ ಸ್ಥಾಪನೆಯಾದ ಶ್ರೀಮದ್ಭಾಗವತ ಮಂಡಳಿ ಇಲ್ಲಿನ ಕನ್ನಡಿಗರು ಆರಂಭ ಮಾಡಿದ ಮೊದಲ ಸಂಘಟನೆ ಎಂದು ಇತಿಹಾಸ ಹೇಳುತ್ತದೆ. ಅದು ಇಂದಿಗೂ ಜೀವಂತವಾಗಿ ಕನ್ನಡದ ಕಾರ್ಯಕ್ರಮಗಳನ್ನು ಸಂಘಟನೆ ಮಾಡುತ್ತಾ ಬಂದಿದೆ. ಮುಂದೆ ಮೊಗವೀರ ಮಂಡಳಿಯು ಬಲಾಢ್ಯವಾಗಿ ಬೆಳೆಯಿತು. ಮುಂದೆ ಆರಂಭವಾದ ಬಂಟರ ಸಂಘ, ದೇವಾಡಿಗರ ಸಂಘ, ಬಿಲ್ಲವರ ಸಂಘ, ಬಿ ಎಸ್ ಕೆ ಬಿ ಸಂಘ, ಮೈಸೂರು ಅಸೋಸಿಯೇಷನ್…… ಇವುಗಳೆಲ್ಲವೂ ಕನ್ನಡದ ಬಾವುಟಗಳನ್ನು ಭಾರೀ ಎತ್ತರಕ್ಕೆ ಹಾರಿಸುತ್ತಿವೆ. ಈ ಸಂಸ್ಥೆಗಳು ಈಗ ಶತಮಾನದ ಹಾದಿಯನ್ನು ಕ್ರಮಿಸಿವೆ! ಮಾತುಂಗಾದ ಮತ್ತು ಇತರೆಡೆಯ ಹಲವು ಕನ್ನಡ ಸಂಘಗಳು ಸ್ವಂತ ಭವನವನ್ನು ಹೊಂದಿವೆ ಮತ್ತು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ. ಜಯಂತ್ ಕಾಯ್ಕಿಣಿ, ವ್ಯಾಸರಾವ್ ನಿಂಜೂರು, ಡಾಕ್ಟರ್ ಸುನೀತಾ ಶೆಟ್ಟಿ, ಶಾಂತಿನಾಥ ದೇಸಾಯಿಯಂತಹ ನೂರಾರು ಶ್ರೇಷ್ಟ ಸಾಹಿತಿಗಳು ಮುಂಬೈಯಲ್ಲಿ ದೀರ್ಘಕಾಲ ವಾಸವಾಗಿದ್ದು ಕನ್ನಡದ ಕಂಪನ್ನು ಹರಡಿದ್ದಾರೆ. ಕನ್ನಡ, ತುಳು ಯಕ್ಷಗಾನ, ನಾಟಕಗಳು ಮುಂಬಯಿಯಲ್ಲಿ ಪ್ರದರ್ಶನ ಆದಾಗ ಹೌಸ್ ಫುಲ್ ಆಗಿ ತುಂಬಿ ತುಳುಕುವುದನ್ನು ನಾನು ನೋಡಿದ್ದೇನೆ. ಇದಕ್ಕೆಲ್ಲ ಕಾರಣ ಆಗಿರುವುದು ಮುಂಬಯಿ ಕನ್ನಡಿಗರ ಕನ್ನಡ ಪ್ರೇಮವೇ ಹೊರತು ಬೇರೇನೂ ಅಲ್ಲ!

ಮುಂಬೈ ವಿವಿ ಕನ್ನಡ ವಿಭಾಗದ ಸಾಧನೆ

ಮುಂಬೈ ವಿವಿಯಲ್ಲಿ ಕನ್ನಡ ಪ್ರಸಾರಾಂಗದ ಕಾರ್ಯಕ್ರಮಗಳು ಅತೀ ಹೆಚ್ಚು ನಡೆಯುತ್ತವೆ. ಕಳೆದ 46 ವರ್ಷಗಳಲ್ಲಿ ಮುಂಬೈ ವಿವಿಯ ಕನ್ನಡ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಬಂದಿದೆ. ಮುಂಬೈಯಲ್ಲಿ ಕೆಜಿಯಿಂದ ಪಿಜಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಲು ಅವಕಾಶ ಇದೆ ಅನ್ನುವುದು ಕೂಡ ಅಭಿಮಾನದ ಸಂಗತಿ. ಮುಂಬಯಿಯಲ್ಲಿ ಆಗುವಷ್ಟು ಕನ್ನಡ ಮತ್ತು ತುಳು ಪ್ರೀತಿಯ ಕಾರ್ಯಕ್ರಮಗಳು ದೇಶದ ಬೇರೆಲ್ಲಿಯೂ ಆಗುವುದಿಲ್ಲ ಎನ್ನುವುದು ನಿಜಕ್ಕೂ ಬೆರಗು! ಅವುಗಳಿಗೆಲ್ಲ ಮುಂಬಯಿ ಕನ್ನಡಿಗರು ತಮ್ಮ ಸಂಪಾದನೆಯಲ್ಲಿ ಬಹುದೊಡ್ಡ ಭಾಗವನ್ನು ವಿನಿಯೋಗಕ್ಕೆ ಇಟ್ಟಿರುವುದು ಕೂಡ ಶ್ಲಾಘನೀಯ. ಮುಂಬಯಿಯಲ್ಲಿ ಹೆಚ್ಚು ಜನ ಇನ್ನೂ ಕನ್ನಡ ಪತ್ರಿಕೆಗಳನ್ನು ಓದುತ್ತಾರೆ. ‘ಕರ್ನಾಟಕ ಮಲ್ಲ’ ದಿನ ಪತ್ರಿಕೆಯು ಇಂದಿಗೂ ಕನ್ನಡ ಭಾಷಾ ಪ್ರಸಾರದಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

ಚಿಣ್ಣರ ಬಿಂಬ – ಒಂದು ಮಹೋನ್ನತ ಸಂಸ್ಥೆ

ಮುಂಬಯಿಯಲ್ಲಿ 2003ರಲ್ಲಿ ಹುಟ್ಟಿದ ‘ಚಿಣ್ಣರ ಬಿಂಬ’ ಸಂಸ್ಥೆಯು ತುಳು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಸಾರದಲ್ಲಿ ಒಂದು ವಿವಿಯು ಮಾಡುವಷ್ಟು ಕೆಲಸಗಳನ್ನು ಮಾಡಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ನಗರದ ಈಗಿನ ಜನರೇಶನ್ನಿನ ಸಾವಿರಾರು ಮಕ್ಕಳು ಶುದ್ಧವಾದ ತುಳು ಮತ್ತು ಕನ್ನಡ ಮಾತಾಡುವುದು, ತುಳು ಮತ್ತು ಕನ್ನಡ ನಾಟಕ, ಯಕ್ಷಗಾನ ಮಾಡುವುದನ್ನು ನೋಡಿದಾಗೆಲ್ಲ ಅಭಿಮಾನದಿಂದ ನಮ್ಮ ಎದೆ ಉಬ್ಬುತ್ತದೆ. ಆ ಚಿಣ್ಣರು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೇಷ್ಟವಾದ ಗುಣಮಟ್ಟ ಮತ್ತು ಮೌಲ್ಯಗಳನ್ನು ಹೊಂದಿವೆ. ಆ ಸಂಸ್ಥೆಯ ಸಾಧನೆಗಳ ಬಗ್ಗೆ ಇನ್ನೊಮ್ಮೆ ನಾನು ಬರೆಯಬೇಕು.

ಏನಿದ್ದರೂ ಆ ಸಂಸ್ಥೆಯ ಹಿಂದೆ ದುಡಿಯುತ್ತಿರುವ ಹಿರಿಯರಾದ ಪ್ರಕಾಶ್ ಭಂಡಾರಿ, ಪೂಜಾ ಪ್ರಕಾಶ್ ಭಂಡಾರಿ, ಟಿ. ವಿಜಯಕುಮಾರ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ ಮೊದಲಾದವರಿಗೆ ನನ್ನ ನಮನಗಳು.

ಭರತವಾಕ್ಯ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಪ್ರಸಾರದಲ್ಲಿ ಮುಂಬೈ ಕನ್ನಡಿಗರ ಕೊಡುಗೆಗಳನ್ನು ಬರೆಯುತ್ತಾ ಹೋದರೆ ದೊಡ್ಡ ಗ್ರಂಥವನ್ನು ಬರೆದು ಮುಗಿಸಬಹುದು. ಅವರಿಗೆಲ್ಲ ನಮ್ಮ ಅಭಿನಂದನೆಗಳು. ಅವರ ಬಗ್ಗೆ ಮುಂದೆ ನಾನು ಇನ್ನಷ್ಟು ಬರೆಯಬೇಕು.

ಇದನ್ನೂ ಓದಿ: Rani Rampal: ರಾಜೇಂದ್ರ ಭಟ್‌ ಅಂಕಣ: ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿದ್ದವು!