Thursday, 21st November 2024

Actor Darshan: ದರ್ಶನ್‌ ಬೆಂಗಳೂರಲ್ಲೇ ಚಿಕಿತ್ಸೆ ಪಡೆಯಬೇಕು, ಮೈಸೂರಿಗೆ ಹೋಗುವಂತಿಲ್ಲ ಎಂದ ಕೋರ್ಟ್

Actor Darshan

ಬೆಂಗಳೂರು: ನಟ ದರ್ಶನ್‌ಗೆ (Actor Darshan) ಬೆನ್ನು ನೋವಿಗೆ ವಿಚಾರಣಾಧೀನ ಕೋರ್ಟ್ ವ್ಯಾಪ್ತಿಯಾದ ಬೆಂಗಳೂರಿನಲ್ಲಿಯೇ (Bengaluru news) ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಹೈಕೋರ್ಟ್‌ (Karnataka High Court) ಷರತ್ತು ವಿಧಿಸಿದೆ. ಹೀಗಾಗಿ, ಚಿಕಿತ್ಸೆಗಾಗಿ ಮೈಸೂರಿಗೆ ಹೋಗುವ ದರ್ಶನ್‌ ಆಸೆಗೆ ತಣ್ಣೀರೆರಚಿದಂತಾಗಿದೆ.

ನಟ ದರ್ಶನ್, ಮೈಸೂರಿನ ಅಪೋಲೋ ಆಸ್ಪತ್ರೆಗೆ ಹೋಗಬೇಕು ಎಂದು ವಕೀಲರ ಮೂಲಕ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿದ ಕೋರ್ಟ್, ಮೈಸೂರಿಗೆ ಹೋಗುವ ಅವಕಾಶ ನೀಡಿಲ್ಲ.

ನಟ ದರ್ಶನ್‌ಗೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿದೆ. ಎಲ್ 5,ಎಸ್ 1ನಲ್ಲಿ ಬಲ್ಜ್ ಆಗಿದ್ದು ಗಂಭೀರವಾದ ಸಮಸ್ಯೆ ಇದೆ. ಸ್ಪೈನಲ್ ಕಾರ್ಡ್‌ನಲ್ಲಿ ಸಮಸ್ಯೆ ಇದೆ. ಹೀಗಾಗಿ ದರ್ಶನ್‌ಗೆ ಸರ್ಜಿಕಲ್ ಚಿಕಿತ್ಸೆ ಅಗತ್ಯವಿದೆ. ಕನ್ಸರ್ವೇಟಿವ್ ಟ್ರೀಟ್‌ಮೆಂಟ್‌ನಿಂದ ನೋವು ಕಡಿಮೆ ಆಗಬಹುದು. ಆದರೆ ಸಮಸ್ಯೆ ಕ್ಲಿಯರ್ ಆಗಲ್ಲ. ಹೀಗಾಗಿ ಸರ್ಜಿಕಲ್ ಟ್ರೀಟ್‌ಮೆಂಟ್‌ ಅಗತ್ಯ ಇದೆ. ಈ ಸಮಸ್ಯೆ 2022ರಿಂದ ಇತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿದೆ. ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಪ್ಯಾರಲಿಸಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ, ನಟ ದರ್ಶನ್ ಅವರ ಇಚ್ಛೆಯಂತೆ ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದರು.

ಆದರೆ, ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕೋರ್ಟ್‌ ಆದೇಶ ಹೊರಡಿಸಿದೆ. ಈ ಕೆಳಗಿನ ಶರತ್ತುಗಳನ್ನು ವಿಧಿಸಿದೆ:

ದರ್ಶನ್ ಶಸ್ತ್ರಚಿಕಿತ್ಸೆಗೆಂದು ಟ್ರಯಲ್ ಕೋರ್ಟ್ ವ್ಯಾಪ್ತಿ ಬಿಟ್ಟು ಬೇರೆಡೆ ಹೋಗುವಂತಿಲ್ಲ.
ಆಸ್ಪತ್ರೆಗೆ ದಾಖಲಾದ ನಂತರವೇ ಒಂದು ವಾರದೊಳಗೆ ಕೋರ್ಟ್‌ಗೆ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಬೇಕು.
ದರ್ಶನ್ ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವಂತಿಲ್ಲ.
ಮಧ್ಯಂತರ ಜಾಮೀನು ಅವದಿ ಮುಗಿದ ಬಳಿಕ ಸೆಷನ್ಸ್ ಕೋರ್ಟ್ ಮುಂದೆ ದರ್ಶನ್ ಹಾಜರಾಗಬೇಕು.
ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Actor Darshan: ಇಂದಿನಿಂದಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟ ದರ್ಶನ್‌ಗೆ ಚಿಕಿತ್ಸೆ ಆರಂಭ