Sunday, 24th November 2024

Waqf Board: ಮಂಡ್ಯದಲ್ಲಿ ದೇವಸ್ಥಾನದ ಜಾಗವೂ ತನ್ನದು ಎಂದ ವಕ್ಫ್‌! ಭಕ್ತರ ಆಕ್ರೋಶ

waqf board

ಮಂಡ್ಯ: ರಾಜ್ಯದ ಎಲ್ಲೆಡೆ ವಕ್ಫ್‌ ಆಸ್ತಿಗಳೆಂದು (Waqf property) ಸಾವಿರಾರು ಎಕರೆ ಭೂಮಿಯನ್ನು ವಕ್ಫ್‌ ಮಂಡಳಿ (Waqf Board) ಕ್ಲೇಮ್‌ ಮಾಡಿಕೊಳ್ಳುತ್ತಿದ್ದು, ಇದೀಗ ಮಂಡ್ಯದ (Mandya News) ಒಂದು ದೇವಾಲಯದ ಮೇಲೆ ವಕ್ಫ್‌ ಕಣ್ಣು ಬಿದ್ದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್ ಆಗಿದೆ. ಆಕ್ರೋಶಗೊಂಡಿರುವ ಭಕ್ತರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಹೆಸರು ಪಹಣಿಯಲ್ಲಿ ಬರುತ್ತಿತ್ತು. ತಲತಲಾಂತರದಿಂದ ಚಿಕ್ಕಮ್ಮ ಚಿಕ್ಕದೇವಿಗೆ ಗ್ರಾಮದ ಜನರಿಂದ ಪೂಜಾದಿಗಳು ನೆರವೇರುತ್ತಿದೆ. ಹಲವು ದಶಕಗಳ ಹಿಂದೆಯೇ ಗ್ರಾಮಸ್ಥರ ಸಹಾಯದಿಂದ ದೇಗುಲ ನಿರ್ಮಾಣವಾಗಿದೆ. ಭೂ ದಾಖಲೆ ಕೂಡ ಚಿಕ್ಕಮ್ಮ ಚಿಕ್ಕದೇವಿ ಹೆಸರಲ್ಲಿಯೇ ಇತ್ತು ಎನ್ನುತ್ತಿದ್ದಾರೆ ಗ್ರಾಮಸ್ಥರು. ಆದರೆ, ಒಂದು ವರ್ಷದ ಹಿಂದೆ ದಿಢೀರಾಗಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ. ಸರ್ವೆ ನಂಬರ್ 74 ರಲ್ಲಿರುವ ದೇಗುಲ ಹಾಗೂ ದೇಗುಲಕ್ಕೆ ಸೇರಿ 6 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ವಕ್ಫ್ ಒಡೆತನದಲ್ಲಿ ದೇಗುಲವಿದೆ ಎಂಬ ಆರ್‌ಟಿಸಿ ಹಾಗೂ‌ ಭೂ ದಾಖಲೆ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಉಪವಿಭಾಗಧಿಕಾರಿ ಸೂಚನೆ ಮೇರೆಗೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಿರುವ ಅವರು, ನಮ್ಮೂರಲ್ಲಿ ಮುಸ್ಲಿಂ ಪ್ರಾಬಲ್ಯವೂ ಇಲ್ಲ. ದೇವಾಲಯದ ಹೆಸರಲ್ಲಿದ್ದ ಆಸ್ತಿಯನ್ನು ವಕ್ಫ್​​ಗೆ ಸೇರಿಸುವಂತೆ ಗ್ರಾಮಸ್ಥರು ಪತ್ರ ಬರೆದಿಲ್ಲ. ಆದರೆ ಅದ್ಹೇಗೆ ಗ್ರಾಮಸ್ಥರ ಗಮನಕ್ಕೂ ಬಾರದೇ ವಕ್ಫ್ ಆಸ್ತಿ ಎಂದು ದಾಖಲಾಗಿದೆ? ಇದರ ಹಿಂದೆ ಹಲವು ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ದೇಗುಲವಲ್ಲದೇ ರೈತರ ಜಮೀನಿನ ದಾಖಲೆಯನ್ನೂ ತಿದ್ದಿರುವ ಶಂಕೆ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು, ಕೂಡಲೇ ದೇಗುಲ ಹಾಗೂ ದೇಗುಲದ ಜಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿರುವುದನ್ನು ತಿದ್ದುಪಡಿ ಮಾಡಬೇಕು, ದೇಗುಲದ ಆಸ್ತಿಯೆಂದು ನಮೂದಾಗಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು‌ ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Pralhad Joshi: ಎರಡು ದೇವಸ್ಥಾನಗಳ ಸ್ವಾಧೀನಕ್ಕೆ ವಕ್ಫ್ ಸಮಿತಿಗೆ ಹಾವೇರಿ ಜಿಪಂ ಸಿಇಓ ಆದೇಶ: ಜೋಶಿ ಆಕ್ರೋಶ