Saturday, 23rd November 2024

IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು

ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್‌ ಆಟಗಾರರ ರಿಟೇನ್‌(IPL 2025 Retention) ಪ್ರಕ್ರಿಯೆಗೆ ತೆರೆ ಬಿದ್ದಿದೆ. ಇನ್ನು ಮೆಗಾ ಹರಾಜಿಗೆ ವೇದಿಕೆ ಸಿದ್ಧಗೊಂಡಿದೆ. ಹರಾಜಿಗೆ ಹೋಗುವ ಮುನ್ನ ಸಾಕಷ್ಟು ಲೆಕ್ಕಾಚಾರಗಳನ್ನು ಮಾಡಿ ಪ್ರತಿಯೊಂದು ತಂಡಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿವೆ. ಇದರಲ್ಲಿ ಕೆಲ ಅಚ್ಚರಿಯ ಆಯ್ಕೆ ಕೂಡ ಗಮನಸೆಳೆದಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಕೊಹ್ಲಿ ಸೇರಿ ಕೇವಲ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರರ ಪಟ್ಟಿ ಇಲ್ಲಿದೆ.

ಹೆನ್ರಿಚ್ ಕ್ಲಾಸನ್(ಹೈದರಾಬಾದ್): 23 ಕೋಟಿ

ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಸನ್‌ರೈಸರ್ಸ್ ಹೈದಾರಾಬಾದ್ ತಂಡದ ಆಟಗಾರ ಹೆನ್ರಿಚ್ ಕ್ಲಾಸೆಲ್ ಗರಿಷ್ಠ 23 ಕೋಟಿ ಗಳಿಸಿದ್ದಾರೆ. ಆ ಮೂಲಕ ಕ್ಲಾಸನ್, ಐಪಿಎಲ್ ಇತಿಹಾಸದಲ್ಲೇ ಹರಾಜಿಗೂ ಮುನ್ನ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.

ವಿರಾಟ್ ಕೊಹ್ಲಿ(ಆರ್‌ಸಿಬಿ): 21 ಕೋಟಿ

ಐಪಿಎಲ್‌ ಆರಂಭದಿಂದಲೂ ಆರ್‌ಸಿಬಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್‌ ಕೊಹ್ಲಿ ಅವರನ್ನು ಫ್ರಾಂಚೈಸಿ ಮೊದಲ ಆಯ್ಕೆಯ ಆಟಗಾರನಾಗಿ 21 ಕೋಟಿ ತಂಡದಲ್ಲಿ ಉಳಿಸಿಕೊಂಡಿದೆ. ಕೊಹ್ಲಿ ಮತ್ತೆ ಆರ್‌ಸಿಬಿಗೆ ನಾಯಕನಾಗುತ್ತಾರೆ ಎನ್ನಲಾಗಿದೆ. ಇನ್ನೊಂದೆಡೆ ಲಕ್ನೋ ತಂಡದಿಂದ ಹೊರ ನಡೆದಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಕೂಡ ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಧೋನಿ; ಕೀಪರ್‌ ಯಾರು?

ನಿಕೋಲಸ್ ಪೂರನ್ (ಎಲ್‌ಎಸ್‌ಜಿ): 21 ಕೋಟಿ

ಈ ಹಿಂದೆ ಲಕ್ನೋ ತಂಡದ ನಾಯಕನಾಗಿದ್ದ ಕೆ.ಎಲ್‌ ರಾಹುಲ್‌ ಅವರು ವೈಯಕ್ತಿಕ ಕಾರಣ ನೀಡಿ ತಂಡದಿಂದ ಹೊರ ಬಂದ ಕಾರಣ ಫ್ರಾಂಚೈಸಿ ವೆಸ್ಟ್‌ಇಂಡೀಸ್‌ನ ಆಟಗಾರ ನಿಕೋಲಸ್ ಪೂರನ್ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಿದೆ. ಇದೇ ಕಾರಣಕ್ಕೆ ಅವರಿಗೆ 21 ಕೋಟಿ ನೀಡಿ ರಿಟೇನ್‌ ಮಾಡಿಕೊಂಡಿದೆ.

ಆರು ಮಂದಿಗೆ 18 ಕೋಟಿ

ಆರು ಮಂದಿ ಆಟಗಾರರು 18 ಕೋಟಿ ಪಡೆದಿದ್ದಾರೆ. ಆ ಮೂಲಕ ಟಾಪ್ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಂದರೆ, ಹೈದರಾಬಾದ್‌ ತಂಡದ ನಾಯಕ ಪ್ಯಾಟ್ ಕಮಿನ್ಸ್ , ರಾಜಸ್ಥಾನ್‌ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್, ಗುಜರಾತ್‌ ಟೈಟಾನ್ಸ್‌ನ ರಶೀದ್ ಖಾನ್, ಮುಂಬೈ ಇಂಡಿಯನ್ಸ್‌ ತಂಡದ ಜಸ್‌ಪ್ರೀತ್ ಬೂಮ್ರಾ, ಚೆನ್ನೈ ಸೂಪರ್‌ ಕಿಂಗ್ಸ್‌ನ ಋತುರಾಜ್ ಗಾಯಕ್ವಾಡ್‌.